“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ

ಹಳ್ಳಿಯೊಳಗಿನ ಬಸ್ಟ್ಯಾಂಡಿನಲ್ಲಿ ಬಸ್ಸು ಇಳಿದೊಡನೆ..

 ಹಳ್ಳಿಯ ಸುತ್ತಮುತ್ತಲು ಕಾಣುವ ವಿವಿಧ ಬೋರ್ಡ್ ಗಳನ್ನು ನೋಡಿದಾಗ,  ಒಂದು ಕ್ಷಣ ತಬ್ಬಿಬ್ಬನಾದೆ.

 ಆ ಬೋರ್ಡಗಳು ಇಡೀ ಗ್ರಾಮ ಸಮುದಾಯದ ಜಾತಿ ವರ್ಗಗಳನ್ನು ಪ್ರತಿಬಿಂಬಿಸುವಂತಿದ್ದವು. ಒಂದಕ್ಕಿಂತ ಒಂದು ಬೋರ್ಡ್ ಗಳು ಎತ್ತರ…!!  ಅತ್ಯಂತ ವಿವಿಧ ಬಣ್ಣಗಳಿಂದ ತಮ್ಮ ತಮ್ಮ ಸಮುದಾಯದ ನಾಯಕರೆಂದು ಗುರುತಿಸುವ ಮಹಾನ್ ಚೇತನ ವ್ಯಕ್ತಿಗಳ, ಅವರ ಭಾವಚಿತ್ರಗಳನ್ನು ಬರೆಯಿಸಿ….  ಅಖಿಲ ಕರ್ನಾಟಕ, ಅಥವಾ  ಅಖಿಲ ಭಾರತ —- ಜಾತಿ ಸಂಘವೆಂದು, ಮುಂದೆ ತಮ್ಮ ಹಳ್ಳಿಯ ಹೆಸರನ್ನು ಹಾಕಿ ಎಲ್ಲರ ಕಣ್ಮನ ಸೆಳೆಯುವಂತೆ ಶೃಂಗರಿಸಿರುವುದು ಕಾಣುತ್ತದೆ.

 ಒಂದು ಕಾಲದಲ್ಲಿ ಹಳ್ಳಿಗಳೆಂದರೆ ಸುತ್ತಮುತ್ತಲಿನ ಗುಡ್ಡ ಬೆಟ್ಟಗಳು, ಸಸ್ಯಗಳು, ಹಚ್ಚಹಸಿರಾದ ಹೊಲ ಗದ್ದೆಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದೆವು. ಅಂದು  ಜಾತಿ, ಮತ ಧರ್ಮಗಳ ಸೋಂಕು ಇಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಕಾಲವದು. ಅಂದು ಬಸ್ಸಿನಿಂದ ಹಳ್ಳಿಯಲ್ಲಿ ಇಳಿದೊಡನೆ ನಮಗೆ ಕಾಣುತ್ತಿದ್ದದ್ದು ಕೇವಲ ಒಂದೇ ಒಂದು ಬೋರ್ಡ್…!!  ಅದು ಆ ಊರಿನ ಹೆಸರನ್ನು ಸೂಚಿಸುವ ಬೋರ್ಡು..!!  ಅದನ್ನು ಬಿಟ್ಟರೆ ಯಾವುದೇ ರೀತಿಯ ಸಂಘ, ಸಂಘಟನೆಗಳ,  ಯುವಕ ಸಂಘಗಳ,  ರೈತಾಪಿ ಸಂಘಗಳ, ಜಾತಿ, ಧರ್ಮದ  ಸಂಘಗಳ ನಾಮ ಫಲಕಗಳು ಇರುತ್ತಿರಲಿಲ್ಲ.  

ಆ ಊರಿನ ಸಾಂಸ್ಕೃತಿಕ ಪರಂಪರೆಯನ್ನು  ನೋಡಬೇಕೆಂದರೇ, ಆ ಊರಿನೊಳಗೆ ಹೋಗಿಯೇ ನೋಡಬೇಕಾಗಿತ್ತು. ಆದರೆ ಇಂದು ಎಲ್ಲವೂ ಅಯ್ಯೋಮಯ…!!  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಣ್ಣ ಸಣ್ಣ ಜಾತಿಗಳು ಸಂಘಟನೆಯಾಗುವುದು ತಪ್ಪಲ್ಲ…!!  ಆದರೆ ಪ್ರಜಾಪ್ರಭುತ್ವ, ಜಾತ್ಯತೀತ, ಸಮಾಜವಾದಿ ಗಣರಾಜ್ಯವೆಂದು ನಮ್ಮ ದೇಶವನ್ನು ಕರೆಯುತ್ತಲೇ, ಜಾತಿವಿಮುಕ್ತಿ ಮಾಡೋಣವೆಂದು  ಹೇಳಿಕೊಳ್ಳುತ್ತಲೇ ಮತ್ತೆ ಮತ್ತೆ ಜಾತಿ ಸಂಘಟನೆ ಮಾಡುತ್ತಿರುವುದು ಈ ಕಾಲದ ಅತ್ಯಂತ ದುರಂತ ಎಂದು ಹೇಳಬಹುದು.

 ಯಾವುದೇ ಒಬ್ಬ ವ್ಯಕ್ತಿ ನಾನು ಪ್ರಗತಿಪರ, ಜಾತ್ಯತೀತವಾದಿ, ಸಮಾಜವಾದಿ, ಸೈದ್ಧಾಂತಿಕ ಬದ್ಧತೆಯುಳ್ಳವನು ಎಂದುಕೊಂಡರೂ…. ಮನದ ಮೂಲೆಯಲ್ಲಿ ಜಾತಿಯ ತೆಳುವಾದ ಎಳೆಯೊಂದು ಕವಲೊಡೆಯದೆ ಇರಲಿಕ್ಕೆ ಸಾಧ್ಯವಿಲ್ಲ….!! ಎಂಬ ಸತ್ಯ ನಾವು ಒಪ್ಪಿಕೊಳ್ಳಲೇಬೇಕು.

 ಹಾಗಾಗಿ ಈ ಸ್ಥಿತಿಯನ್ನು ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ತುಂಬಾ ಸೊಗಸಾಗಿ ಈ ರೀತಿ ಹೇಳಿದ್ದಾರೆ,  “ಒಂದೇ ಜಾತಿಯುಳ್ಳ ವ್ಯಕ್ತಿಗಳು ಪರಸ್ಪರ ಸಂವಾದ ಮಾಡುವಾಗ ಮನಬಿಚ್ಚಿ ಮಾತನಾಡುವ ಆಪ್ತತೆಯು ಬೇರೆ ಬೇರೆ  ಇತರೆ ಜಾತಿಯವರೊಡನೆ ಮಾತನಾಡುವಾಗ ಅಂತಹ ಆಪ್ತ ಸಂವಾದ ಇರಲಿಕ್ಕೆ ಸಾಧ್ಯವಿಲ್ಲ”ವೆಂದು ಖಡಾಖಂಡಿತವಾಗಿ  ಹೇಳುತ್ತಾರೆ.  ಸಂಪೂರ್ಣವಾಗಿ ವಿಮರ್ಶೆ ಮಾಡಿ ನೋಡಿದಾಗ ಈ ಮಾತು ನೂರಕ್ಕೆ ನೂರು ಸತ್ಯವೆನಿಸುತ್ತದೆ.

ಗ್ರಾಮದಲ್ಲಿ ಅಂದು ಯಾವುದೇ ದೇವರ ಜಾತ್ರೆ, ಉತ್ಸವ, ಕಾರ್ತಿಕೋತ್ಸವ ಮುಂತಾದ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವಾಗ ಎಲ್ಲಾ ಜಾತಿ ವರ್ಗಗಳ ಸಮುದಾಯದವರು ಅನೋನ್ಯವಾಗಿ ಬೆರೆತು ಮುನ್ನಡೆಸುತ್ತಿದ್ದರು. ಇಂದು ಕೂಡ ಕೆಲವು ಹಳ್ಳಿಗಳಲ್ಲಿ ಈ ರೀತಿ ಜಾತ್ಯತೀತವಾಗಿ ಎಲ್ಲಾ ಸಮುದಾಯಗಳ ಸಹಭಾಗಿತ್ವದಲ್ಲಿ ಉತ್ಸವಗಳನ್ನು, ಜಾತ್ರೆಗಳನ್ನು, ಹಬ್ಬ ಹರಿದಿನಗಳನ್ನು ಆಚರಿಸುವುದನ್ನು ನಾವು ಕಾಣುತ್ತೇವೆ.

 ಆದರೆ ಜಾತಿ ಸಂಘಗಳು ಸಂಘಟನೆಗೊಳ್ಳುತ್ತಾ  ತಮ್ಮ ಹಕ್ಕೋತ್ತಾಯಗಳನ್ನು ಕೇಳುವುದರ ಜೊತೆ ಜೊತೆಗೆ ಕೆಲವು ಸಾಮಾಜಿಕ ವಿಘಟನಾ ಶಕ್ತಿಗಳಿಂದ ಸಮಾಜ ಒಡೆಯುವುದನ್ನು ನಾವು ಕಾಣುತ್ತೇವೆ.  ಹೀಗಾಗಿ ಹಳ್ಳಿಗಳಲ್ಲಿ ಸಂಘಗಳು ತಮ್ಮ ಜಾತಿಯೇ ಬಲಿಷ್ಠದ ಸಂಕೇತವೆಂದು ಭಾವಿಸಿಕೊಂಡು ಬೋರ್ಡ್ ಗಳನ್ನು ಹಾಕುತ್ತಾ, ಎಲ್ಲರಿಗೂ ಬೇಕಾದ ಮಹಾನ್ ರಾಷ್ಟ್ರ ನಾಯಕರನ್ನು ತಮ್ಮ ಜಾತಿಗೆ ಸೀಮಿತಗೊಳಿಸುತ್ತಾ, ಅವರನ್ನು   ಜಾತಿಯ ಹೆಸರಿನಲ್ಲಿ ಕಟ್ಟಿಹಾಕಿಬಿಡುತ್ತಾರೆ.  ಇದು ಅತ್ಯಂತ ವಿಷಾದೀಯ. ಮಹಾನ್ ವ್ಯಕ್ತಿಗಳು ಯಾವ ಜಾತಿಯ ಸ್ವ:ತ್ತಲ್ಲ.  ಯಾವ ಧರ್ಮದ ಸ್ವ:ತ್ತಲ್ಲ. ಅವರು ಈ ನಾಡಿಗೆ ಕೊಟ್ಟ ಮಹಾನ್ ಕಾಣಿಕೆಗಳು ಎಲ್ಲರಿಗೂ ಸಲ್ಲುತ್ತವೆ. ಅವರ ಚಿಂತನೆಗಳು, ಅವರ ತತ್ವಗಳು, ಆದರ್ಶಗಳು, ಮಾರ್ಗದರ್ಶನದ ಮಾತುಗಳು…. ಎಲ್ಲರಿಗೂ ಪೂರಕವಾಗಬಲ್ಲವು. ಅಂತಹ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಸೀಮಿತಗೊಳಿಸಿ, ನಾಮ ಫಲಕದೊಳಗೆ ತುರಿಕಿ, ಅವರನ್ನು ಮತ್ತಷ್ಟು ಕುಬ್ಜಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಆದರೆ ಇಂದು ಇದಕ್ಕೆ ಪೂರಕವೆಂಬಂತೆ ಹತ್ತು ಹಲವಾರು ಸಂಗತಿಗಳು ನಡೆಯುತ್ತಿರುವುದು ನಮ್ಮನ್ನು ಇನ್ನಷ್ಟು ಬೆಚ್ಚುವಂತೆ ಮಾಡಿದೆ. ಶಾಲೆಗಳಲ್ಲಿ ಆಚರಿಸುವ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಪೂಜಿಸುವ ಸಂದರ್ಭದಲ್ಲಿ ಅವರ ತತ್ವ ಆದರ್ಶಗಳನ್ನು ಮಕ್ಕಳಿಗೆ ತಿಳಿ ಹೇಳಬೇಕೆ ಹೊರತು ಅವರ ವೈಯಕ್ತಿಕವಾದ ಸಾಮೂದಾಯಿಕ ಹಿನ್ನೆಲೆಯನ್ನು ತಿಳಿಸಬಾರದು. ಅದು ಒಳಿತು ಅಲ್ಲ. ಆ ಮಹಾನ್ ವ್ಯಕ್ತಿಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಸಲ್ಲುವವರು.

ಗ್ರಾಮಗಳು ನಮ್ಮ ದೇಶದ ಭವ್ಯ ಪರಂಪರೆಯ ಸಾಂಸ್ಕೃತಿಕ ಬುನಾದಿಗಳು. ಅವುಗಳು ಜಾತಿಯ ಹೆಸರಿನಲ್ಲಿ ನಲುಗಿ ಹೋಗಬಾರದು.  ಬಹುತ್ವ ಭಾರತವು ಧರ್ಮ, ಜಾತಿ, ಮತ ಪಂಥಗಳನ್ನು ಮೀರಿ ಭಾವೈಕ್ಯತೆಯಿಂದ ಕೂಡಿದ ದೇಶವಾಗಿದೆ.  ಇಲ್ಲಿ ರಕ್ತ ಸಂಬಂಧಕ್ಕಿಂತಲೂ ಸಾಂಸ್ಕೃತಿಕ ಸಂಬಂಧ ಅತ್ಯಂತ ಮಹತ್ವವಾದುದು. ಇಂದಿಗೂ ಗ್ರಾಮೀಣ ಭಾಗದಲ್ಲಿ ಸಂಬಂಧ ಸೂಚಕ ಪದಗಳನ್ನು ಬಳಸಿಕೊಳ್ಳುತ್ತಲೇ, ಕರುಳು ಬಳ್ಳಿಯಂತಹ ಸಂಬಂಧವನ್ನು ಗಟ್ಟಿಗೊಳಿಸುತ್ತಿದೆ. ಇದನ್ನು ಒಡೆದು ಹಾಕುವ, ಬಾಂಧವ್ಯಕ್ಕೆ ಹುಳಿ ಹಿಂಡುವ  ಯಾವುದೇ ದುಷ್ಟ ಶಕ್ತಿಗಳಿಗೆ ಅವಕಾಶ ಕೊಡಬಾರದು. ಗ್ರಾಮದ ಹೊರಗೆ ಜಾತಿ ಫಲಕಗಳು ಕೇವಲ ಫಲಕಗಳಿಗೆ ಮಾತ್ರ ಸೀಮಿತವಾಗಲಿ ಎಂದು ಬಯಸೋಣ.  ಗ್ರಾಮೀಣ ಭಾಗದ ಮನುಷ್ಯ ಸಂಬಂಧಗಳು ಇಂದಿಗೂ ಜೀವಂತವಾಗಿವೆ. ಅಂತಹ ಕೊಡುಕೊಳ್ಳುವ, ಕಷ್ಟ ಸುಖಗಳಿಗೆ ಆಗುವ, ಮಾನವೀಯ ಮೌಲ್ಯಗಳು, ಸಂಬಂಧಗಳು ಇನ್ನೂ ಜೀವಂತವಾಗಿರಲೆಂದು ಆಶಿಸುವೆ.


One thought on ““ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ

  1. ನಮ್ಮದು ಜಾತ್ಯಾತೀತ ರಾಜ್ಯ, ರಾಷ್ಟ್ರ ಎಂದು ಫಲಕ, ಘೋಷಣೆಗಳಲ್ಲಿ ಬಿಂಬಿಸುತ್ತಾ ನಮ್ಮನ್ನಾಳುವ ಪ್ರಭುಗಳು ಜಾತಿ, ಧರ್ಮಗಳ ಹೆಸರಿನಲ್ಲಿ ಪ್ರಜೆಗಳ ಮನಸ್ಸುಗಳನ್ನು ಒಡೆದು ಆಳುತ್ತಿರುವುದು ವಿಷಾದನೀಯ.
    ವಾಸ್ತವತೆಯನ್ನು ತುಂಬಾ ಮಾರ್ಮಿಕವಾಗಿ ಬಿಂಬಿಸಿದ್ದೀರಿ. ನಿಮ್ಮ ಮನದ ಮಾತುಗಳನ್ನು ಕೇಳಿಸಿಕೊಳ್ಳಲು, ಓದಲು ಮೈ ಉಬ್ಬುತ್ತದೆ.
    ಮನದುಂಬಿದ ಅಭಿನಂದನೆಗಳು.

Leave a Reply

Back To Top