ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಾಯಕಲ್ಪ..!

ಕೋಲಾರದಲ್ಲಿ ನೆಲ ಅಗಿದರಷ್ಟೆ ದಕ್ಕುವುದು ಚಿನ್ನ
ಕಾರವಾರದಿ ಭೂಮಿ ಬಗೆದರೇನು ಪ್ರಯೋಜನ?
ಕಡಲಿಗೆ ಗಾಳ ಹಾಕಿದರಷ್ಟೆ ಸಿಗಬಲ್ಲುದು ಮೀನು
ತೊಟ್ಟಿಗೆ ಗಾಳ ಹಾಕಿ ಕುಳಿತರೆ ಸಿಕ್ಕಿತಾದರು ಏನು?

ಮಾಮರಕೆ ಕಲ್ಲೆಸೆದರೆ ಬಿದ್ದೀತು ಒಂದೆರಡು ಫಲ
ಮುಗಿಲಿಗೆ ದಿನವೆಲ್ಲ ಕಲ್ಲೆಸೆದು ನಿಂತರೇನು ಫಲ.?
ಕತ್ತಲಹಾದಿಗೆ ದೀಪವಿಟ್ಟರೆ ನೆನೆದಾನು ಪಯಣಿಗ
ಸೂರ್ಯನೆದುರು ದೀಪಹಚ್ಚಿಟ್ಟೇನು ಉಪಯೋಗ?

ಸಾರಿಗೆ ಹುಳಿ ಉಪ್ಪು ಹಾಕಿದರೆ ರುಚಿಯಾದೀತು
ಸಾಗರಕೆ ಹುಣಸೆ ಉಪ್ಪು ಸುರಿದರೆ ಏನಾದೀತು.?
ಕಲ್ಲಿಗೆ ಶ್ರೀಗಂಧ ತಿಕ್ಕಿದರೆ ಸೌರಭ ಘಮಘಮಿಸೀತು
ಕಲ್ಲ ಮೇಲೆ ಕಲ್ಲು ತಿಕ್ಕಿದರೆ ಕಿಡಿಯಷ್ಟೆ ಬಂದೀತು.!

ನಾಲ್ಕು ದಿನದ ಬದುಕಿದು ಪ್ರತಿಕ್ಷಣಕಿದೆ ಮೌಲ್ಯ
ನಿತ್ಯ ಇಡುವ ಪ್ರತಿ ಹೆಜ್ಜೆ ಹೆಜ್ಜೆಯೂ ಅಮೂಲ್ಯ
ಬೇಡಿದರೂ ಮತ್ತೆ ಸಿಗದು ವ್ಯರ್ಥಕಳೆದ ಸಮಯ
ಉಸಿರಳಿವ ಮುನ್ನವೇ ಬೆಳಗಿ ಬಿಡಬೇಕು ಇಳೆಯ.!

ಮಾಡುವ ದುಡಿಮೆಗಿರಲೇಬೇಕೊಂದು ನಿಚ್ಚಳಗುರಿ
ದುಡಿವ ದುಮೆಯೊಳಗಿರಬೇಕು ಸದಾ ಚೈತನ್ಯಝರಿ
ಕಾಯಕದಲಿರಬೇಕು ಕಾಯ ಚಿತ್ತಗಳ ಐಕ್ಯದ ನೆಲೆ
ಪಟ್ಟ ಶ್ರಮ ಪರಿಶ್ರಮಗಳಿಗೆ ಸಿಗುವಂತಿರಬೇಕು ಬೆಲೆ.!

ವಿವೇಕ ವಿವೇಚನೆಯಿರದೆ ಮಾಡುವುದಲ್ಲ ಕಾಯಕ
ಗೆಳೆಯಾ ವ್ಯರ್ಥ ಅನರ್ಥ ದುಡಿಮೆಗಳಲಿಲ್ಲ ನಾಕ
ಮಾಡಿದೆನೆಂಬುದಕಿಂತ ಮಾಡಿದ್ದೇನೆಂಬುದು ಮುಖ್ಯ
ಮಾಡಿದ ಕೆಲಸಕ್ಕಿರಬೇಕು ಸಾರ್ಥ ಕೃತಾರ್ಥತೆ ಸಖ್ಯ.!

ಬದುಕಿನ ನೀತಿಗಿಂತಲು ಇಲ್ಲಿ ಬದುಕುವ ರೀತಿ ವೇದ್ಯ
ಪ್ರದರ್ಶನವಾದವರಿಗಿಂತ ನಿದರ್ಶನವಾದವರೇ ಮಾನ್ಯ
ಗಳಿಸಿದ ಯಶಸ್ಸು ಪಡೆದ ಶ್ರೇಯಸ್ಸಿನಿಂದ ಜೀವ ಧನ್ಯ
ನೀಡಿದ ಪ್ರೀತಿ ಪಡೆದ ಶಾಂತಿಗಳಿಂದಲೇ ಜೀವನ ಮಾನ್ಯ.!


Leave a Reply

Back To Top