ಕಾವ್ಯ ಸಂಗಾತಿ
ಸವಿತಾ ದೇಶಮುಖ
ಬಿರಿದ ನೆಲ ನಕ್ಕಿತು
ಗ್ರೀಷ್ಮವೇ ನಿನ್ನ ಪಾಶಕ್ಕೆ ಸಿಲುಕಿ
ಕುದಿ ಕುದಿದು ಉರಿಯುವ ತಾಪಿನಲಿ
ನೆಲ ಜಲ ಪ್ರಾಣಿ ತಡೆಯದೆ,
ನೇಸರನು ಬೀಸಿದ ದಾಳಿಯ…..
ಒಣಗಿ ನಿಂತವು ಗಿಡ ಮರ ನೆಲ
ಹೊಲ- ರೈತರು- ಬರಡು….
ಭೂವಿ ಬಿರುಕು ಬಿಟ್ಟು ನುಂಗುವ ಮುನ್ನ ವರುಣನ ಆಗಮನಕ್ಕೆ ಹೊತ್ತಿಸಿ ಅಗ್ನಿ,
ಯಜ್ಞ -ಪೂಜೆ ಆಹುತಿ
ಪಾಠ ಪಠಣ ಜಪತಪಗಳು
ನಿಲ್ಲಿಸಲು ವೈಶ್ಯಮದ ತಾಂಡವ,
ಕೊನೆಗೊಂದು ದಿನ ದೂರದಿಂದ
ಗುಡುಗು ಮಿಂಚಿನ ನಾದವು
ನಭೋಮಂಡಳವ ಸೀಳಿ ಹೊಳೆದ
ಕಾರ್ಮೋಡದ ನಾಟ್ಯವು…
ಹನಿ ಹನಿಯಾಗಿ
ನೆಲವ ಮೈ ತೊಳೆಯಲು
ಮಧ್ಯ ಮಧ್ಯ ಕರ್ಕಶ ಗುಡುಗಿನ ಗಾನವು ಮಧುರ ವೀಣೆಯ ನಾದದಂತೆ ಭಾಸವು
ಸುಧೆಯ ಸೊಬಗ ಸ್ವಾದಿಸುತ …..
ಆಗಸದಿ ತೇಲಿ ಬಂದವು ವರುಣನ
ಭೋರ್ಗರಿಯುವ ಧಾರೆಯು,..
ಉಕ್ಕುವ ಆನಂದ ಲಹರಿಯು
ಚಿಮ್ಮಿತು ಸ್ವರ್ಗಸುಖ….
ನೆನೆಯುತ್ತ ಮಳೆಯಲಿ ಸಂತಸದಿ
ಕುಪ್ಪಳಿಸಿತು ನೆಲದ ಮಣ್ಣು-
ನಭದ ಆನಂದದ
ಕಂಬನಿಯಲ್ಲಿ ನೆನೆಯುತ
ಬಿರಿದ ನೆಲ ಸಂತಸದಿ ನಕ್ಕಿತು….
ಸವಿತಾ ದೇಶಮುಖ