ಹೂವಂತ ಮನಸನ್ನು ಹಿಂಡುವಿರೇಕೆ ? ವಿಶೇಷ ಲೇಖನ-ಸುಜಾತಾ ರವೀಶ್

ನನ್ನ ಸಹೋದ್ಯೋಗಿ ಅಮಿತಾ…..ಕೆಲಸಕ್ಕೆ ಒಟ್ಟಿಗೆ ಒಂದೇ ಬ್ಯಾಚ್ನಲ್ಲಿ  ಒಂದೇ ಶಾಖೆಗೆ ಸೇರಿದವರು. ಆಗ ತಾನೇ ಕಾಲೇಜಿನಿಂದ ಹೊರ ಬಂದವರು ಹುಮ್ಮಸ್ಸು ಎಲ್ಲದರಲ್ಲೂ ಆಸಕ್ತಿ . ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲದರಲ್ಲೂ ಅವಳೇ ಮುಂದಾಳು . ಚೈತನ್ಯ ಲವಲವಿಕೆಗೆ ಇನ್ನೊಂದು ಹೆಸರು. ಯಾವುದೇ ಕಾರ್ಯಕ್ರಮವನ್ನಾಗಲಿ ಲೀಲಾಜಾಲವಾಗಿ ನಿಭಾಯಿಸಿ ಅವಳಿದ್ದರೆ ಹತ್ತಾನೆಯ ಬಲ ಎನ್ನುವಂತೆ ಆಗಿತ್ತು . ನಂತರ ನಾನು ಮದುವೆಯಾಗಿ ಬೇರೆ ಊರಿಗೆ ಹೋಗಿ ಮಧ್ಯೆ ಸಂಪರ್ಕವೇ ಇರದೆ ೧೨ ವರ್ಷಗಳ ನಂತರ ಮತ್ತೆ ಒಂದೇ ಶಾಖೆಗೆ ವರ್ಗಾವಣೆ ಹೊಂದಿದ್ದೆವು. ಆದರೆ ಅಮಿತಾ ಮೊದಲಿನ ಅಮಿತಾ ಆಗಿ ಉಳಿದಿರಲಿಲ್ಲ.  ೨  ಗಂಡು ಮಕ್ಕಳ ತಾಯಿ. ಎಲ್ಲದರಲ್ಲೂ ನಿರುತ್ಸಾಹ.  ಕಛೇರಿ ಮುಗಿಯುತ್ತಿದ್ದಂತೆಯೇ ಮನೆಯ ಕಡೆ ಓಟ. ಸಾಂಸ್ಕ್ರತಿಕ ಕಾರ್ಯಕ್ರಮವಿರಲಿ, ಕಚೇರಿಯ ಕೆಲಸಕ್ಕೂ ಉಳಿಯುತ್ತಿರಲಿಲ್ಲ.  ಯಾವೊಂದು ಸಮಾರಂಭಕ್ಕೂ ಬಾರದ ಬದಲಾದ ಅವಳ ವ್ಯಕ್ತಿತ್ವದ ಕಾರಣ ಕೇಳಿದಾಗ……ಎಲ್ಲದಕ್ಕೂ ಅಂಕೆ, ಕಾರಣ ಕೇಳುವ ಪತಿ ಅತ್ತೆ ಮಾವ. ತಾಯಿಯ ಮನೆಯದಕ್ಕಿಂತ ತುಂಬಾ ವ್ಯತಿರಿಕ್ತ ವಾತಾವರಣ ಸಂಕುಚಿತ ಮನೋಭಾವ. ಕೇಳಿದರೆ, ಎದುರು ವಾದಿಸಿದರೆ ದೈಹಿಕ ಹಿಂಸೆ. ಚುಚ್ಚುಮಾತಾಡ ದೇ ಇರದ ದಿನವೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇವಳು ನಗುನಗುತ್ತಿದ್ದರೇ ಅವರಿಗೆ ಆಗದು.
ಮಾತೆತ್ತಿದರೆ ಹಂಗಣೆ, ಕೇಳೀ ಕೇಳಿ ಅದೇ ನಿಜವೆನಿಸತೊಡಗಿತ್ತು. ಕೈ ತುಂಬಾ ಸಂಬಳ ಇದ್ದುದರಿಂದ ಕೆಲಸಕ್ಕೆ ಕಳಿಸುತ್ತಿದ್ದುದು. ಅಲ್ಲಿಯೂ ಯಾರೊಡನೆಯಾದರೂ ಸಲಿಗೆಯಿಂದ ನಗುನಗುತ್ತಾ ಮಾತಾಡಿದ್ದು ತಿಳಿದರೆ ಹಗರಣ. ರೋಸಿದ ಅವಳಿಗೆ ೨ನೇ ಬಾಣಂತನದಲ್ಲಿ ಖಿನ್ನತೆ …..ಅದಕ್ಕೂ ಹುಚ್ಚಿ ಪಟ್ಟ…ಒಟ್ಟಿನಲ್ಲಿ ಅಂದೂ ಆಡಿ ಅವಹೇಳನ ಮಾಡಿ ಆತ್ಮಸ್ಥೈರ್ಯವೇ ಮಾಯವಾಗಿತ್ತು ಬರೀ ಅವರಾಡಿಸುವ ಕೀಲುಗೊಂಬೆಯಂತಾಗಿದ್ದಳು. ತವರಲ್ಲೂ ಅಪ್ಪ ಇರದೆ ಅಮ್ಮನೂ ಅಣ್ಣನ ಕೈ ಕೆಳಗೆ.
“ಧೈರ್ಯವಾಗಿ ಬಿಟ್ಟು ಬಾ  ಏಕೆ ಸುಮ್ಮನೆ ಹೀಗೆಲ್ಲಾ ಸಹಿಸುತ್ತೀಯ” ಎಂದರೆ ಅಮ್ಮನ ಕಣ್ಣೀರು  “ಸ್ವಲ್ಪ ದಿನ ಸಹನೆಯಿಂದ ಇರು ಎಲ್ಲಾ ಸರಿಹೋಗುತ್ತದೆ” ಎನ್ನುವ ಅವಳ ಬೇಡಿಕೆ. ಅಲ್ಲದೆ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಅತ್ತೆ ಮಾವ ಗಂಡ. “ಮಕ್ಕಳಿಗೆ ತಂದೆ ಇರದಂತೆ ಏಕೆ ಮಾಡಲಿ ನನ್ನ  ಹಣೆಬರಹ. ಹೀಗೇ ಇದ್ದು ದಿನ ದೂಡ್ತೀನಿ” ಯಾಕೋ ಅವಳಲ್ಲಿ ಎದುರಾಡುವ ಹೋರಾಡುವ ಶಕ್ತಿಯೇ ಇಲ್ಲದ  ನಿಸ್ಸಹಾಯಕಳಾಗಿದ್ದಾಳೆ ಎಂದೆನಿಸಿತ್ತು.  ಪುರುಷನೆಂಬ ಅಹಂ, ಅತ್ತೆಯ  ದಬ್ಬಾಳಿಕೆ ಹೂವಿನಂತಹ ಮನ ಮುದುಡಿಸಿ ಬಾಳನ್ನೇ ನಲುಗಿಸಿತ್ತು.  ಜೀತದಾಳಿಗಿಂತ ಕಡೆಯಾದ ಬದುಕು. ಅಮಿತಾಳಂತ ಅದೆಷ್ಟೋ ಜನ ಸಮಾಜಕ್ಕೆ ಹೆದರಿ ಹೀಗೆ ಹಿಂಡಿ ಹಿಪ್ಪೆಯಾಗ್ತಿದಾರೆ. ಮದುವೆ ಎಂದರೆ ಹೊಂದಾಣಿಕೆ ಬೇಕು ನಿಜ.ಆದರೆ ವ್ಯಕ್ತಿತ್ವವೇ  ಇರದಂತಾಗಬೇಕಾ? ಕೆಲಸಕ್ಕೆ ಹೋಗುವವರದೇ ಈ ಪಾಡಾದ್ರೆ ಇನ್ನು ಪೂರಾ ಅವಲಂಬಿತರ ಕಥೆ ಏನು? ಈ ಸುಖಕ್ಕೆ ಮದುವೆ ಏಕೆ ಬೇಕು ಅನ್ನೋ ಪ್ರಶ್ನೇನು ಹುಟ್ಟಿತು.

ಆದರೂ ತನ್ನ ಕಾಲ ಮೇಲೆ ನಿಂತ ಉದ್ಯೋಗಸ್ಥ ಹೆಣ್ಣೂ ಸಹ ಈ ರೀತಿಯ ಕಷ್ಟಪಟ್ಟು ವಿವಾಹದ ವ್ಯವಸ್ಥೆಯೊಳಗೆ ಉಳಿಯುತ್ತಾಳೆ ಎಂದರೆ ಡೈವೋರ್ಸ್ ಪಡೆದ ಹೆಣ್ಣಿನ ಬಗೆಗಿನ ಸಮಾಜದ ವರ್ತನೆ ದೃಷ್ಟಿಕೋನವೇ ಕಾರಣ ತಾನೇ? ಇತ್ತೀಚೆಗೆ ಈ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಅದಕ್ಕೆ ಪೋಷಕರ ಬೆಂಬಲ ಇದ್ದರೆ ಮಾತ್ರ ಸಾಧ್ಯ . ಇಲ್ಲವೆಂದರೆ ಅಪರಿಮಿತ ಧೈರ್ಯ ಬೇಕು ಹೊರಬಂದು ತನ್ನ ಮತ್ತು ಮಕ್ಕಳ ಬದುಕು ಕಟ್ಟಿಕೊಳ್ಳಲು.
ಹೆಣ್ನಿನ ಈ ತರಹದ ಶೋಷಣೆ ನಿಲ್ಲುವುದು ಯಾವಾಗ?

“ಅನುಮಾನಂ ಪೆದ್ದ ರೋಗಂ” ಎಂಬುದೊಂದು ತೆಲುಗು ಗಾದೆ. ಆದರೆ ಈ ರೋಗ ತಗುಲಿಕೊಂಡವರಿಗೆ ಏನೂ ಕೇಡು ಮಾಡದು.  ಗುರಿಯಾದವರ ಮಾನಸಿಕ ಸ್ವಾಸ್ಥ್ಯ ಕೆಡಿಸಿ ಮನೋಬಲ ಕುಗ್ಗಿಸುವಂತಹುದು. ನೆಮ್ಮದಿ, ಶಾಂತಿ ದೂರ ಮಾಡುವಂತದ್ದು.

ಅತ್ತೂ ಅತ್ತೂ ಕೆಂಪಾದ ಕಣ್ಣು, ದದ್ದರಿಸಿದಮುಖದೊಂದಿಗೆ ರಮಾ ಸೀಟಿನಲ್ಲಿ ಧೊಪ್ಪೆಂದು ಕುಕ್ಕರಿಸಿದಳು. ಮಾತನಾಡಿಸಲು ಆಗದಷ್ಟು ರಶ್ ಆವತ್ತು. ಆದರೂ ಆಫೀಸ್ ಬಾಯ್ಗೆ ಹೇಳಿ ಟೀ ತರಿಸಿ ಬಿಸ್ಕೆಟ್ ಪೊಟ್ಟಣ ಪೇನ್ ಕಿಲ್ಲರ್ ಕೊಟ್ಟು ಮತ್ತೆ ಕೆಲಸದಲ್ಲಿ ಮುಳುಗಿದೆ. ಅವಳೂ ತಿಂದು ಟೀ ಕುಡಿದು ಕೆಲಸಕ್ಕೆ ತೊಡಗಿದಳು. ಲಂಚ್ ಟೈಮಲ್ಲಿ ಅಳುತ್ತಾ ನುಡಿದದ್ದು. ಹಿಂದಿನ ದಿನ ಹೆಡ್ ಆಫೀಸಿಗೆ ಅರ್ಜೆಂಟಾಗಿ ವಿವರ ಕಳಿಸಬೇಕಿತ್ತು.ರಾತ್ರಿ ಎಂಟಾಗಿತ್ತು ನಾವು ಆಫೀಸ್ ಬಿಡುವ ವೇಳೆಗೆ. ಮಳೆ ಬರುತ್ತಿದ್ದರಿಂದ ಮಾನೇಜರ್ ನಮ್ಮನ್ನು ನಮ್ಮ ದ್ವಿಚಕ್ರ ವಾಹನದಲ್ಲಿ ಹೋಗಲು ಬಿಡದೆ ತಮ್ಮ ಮನೆಯ ಬಳಿಯಿದ್ದ ಅವಳಿಗೆ ತಾವೇ ಡ್ರಾಪ್ ಕೊಟ್ಟರು. ಮತ್ತೊಂದು ದಿಕ್ಕಿನಲ್ಲಿದ್ದ ನಮ್ಮ ಮನೆಗೆ ಬೇರೊಬ್ಬ ಆಫೀಸರ್ ಬಂದು ಬಿಟ್ಟರು. ಅಷ್ಟಕ್ಕೇ ಅವಳ ಗಂಡನ ರಂಪಾಟ. ಬರೀ ಅನುಮಾನದ ಪಿಶಾಚಿಯಾದ ಅವನಿಗೆ ರಮಾ ತನ್ನ ಬಾಸ್ ನೊಡನೆ ಎಲ್ಲೋ ಸುತ್ತಿಕೊಂಡು ಬಂದಿದ್ದಾಳೆ ಅನ್ನೋ ಶಂಕೆ. ತಡವಾಗಿ ನಿನ್ನನ್ನೇ ಏಕೆ ಇರಿಸಿಕೊಳ್ಳೋದು? ನೀನೇ ಕುಣಿದುಕೊಂಡು ಕುಣಿದುಕೊಂಡು ಹೋಗಿರ್ತೀಯ  ಅನ್ನೋ ಆರೋಪ. ಹೋಗಿ ಪಾಪ ಅಡಿಗೆ ರೆಡಿ ಮಾಡಿ ಬಡಿಸುವಷ್ಟರಲ್ಲಿ
ಏನೆಲ್ಲಾ ಮಾತನಾಡಿದ್ದಕ್ಕೂ ಸುಮ್ಮನಿದ್ದಾಳೆ.
ಮಕ್ಕಳು ಮಲಗಿದ ಮೇಲೆ ಕಸಮುಸುರೆ ಮುಗಿಸಿ ಬಂದವಳು ಸುಸ್ತಾಗಿದ್ದಕ್ಕೆ ಮಲಗಿ ದಾಂಪತ್ಯ ಸುಖಕ್ಕೆ ಸಹಕರಿಸದಾಗ ” ಎಲ್ಲಾ ಅಲ್ಲೇ ಮುಗಿಸಿಕೊಂಡು ಬಂದಿರಬೇಕು” ಎಂದು ಚುಚ್ಚಿದಾಗ ಸಹಿಸಲಾಗದೆ ಕೋಪದಿಂದ ಎದುರಾಡಿದಾಗ ಪೌರುಷ ತೋರಿಸಲು ಚೆನ್ನಾಗಿ ಹೊಡೆದಿದ್ದಾನೆ. ಮಕ್ಕಳಿಗೆ ಗೊತ್ತಾಗಬಾರದೆಂದು ಮೌನವಾಗಿ ಅತ್ತೂ ಅತ್ತೂ ರಾತ್ರಿ ಕಳೆದಿದ್ದಾಳೆ.  ಯಾವ ತಪ್ಪೂ ಮಾಡದಿದ್ದರೂ ನಿರಾಧಾರವಾಗಿ ಶಂಕಿಸುವ ಇಂತಹ ಪತಿ ಇದ್ದರೆ ಗತಿಯೇನು? ಮನೆಗೆ ಬಂದ ಪತಿಯ ಗೆಳೆಯರಿಗೆ ಅವನು ಹೇಳದಿದ್ದರೂ ಟೀ ಸ್ನ್ಯಾಕ್ಸ್  ತಂದು ಕೊಟ್ಟರೆ
“ಅವನಿಗೂ ನಿನಗೂ ಏನು ಸಂಬಂಧ” ಎಂದು ಕೇಳುವ ನೀಚ ಮನಸ್ಸು.  ಇಂತಹವರಿಗೆ ಪತ್ನಿ ರೂಪವಂತೆಯಾಗಿರುವುದೇ ದೊಡ್ಡ ತಪ್ಪು.
“ಭಾರ್ಯಾ ರೂಪವತೀ ಶತ್ರುಃ” ಎಂಬಂತೆ ನೋಡುತ್ತಾರೆ.  ಕುರೂಪಿಯನ್ನೇ ಕಟ್ಟಿಕೊಳ್ಳಬೇಕಿತ್ತು ತಾನೇ?

ಏನೇ ಸಮಝಾಯಿಷಿಯೂ ಅವನ ತಲೆಗೆ ಹೋಗಲ್ಲ. ಕೆಲಸ ಬಿಡಿಸಲೂ ತಯಾರಿಲ್ಲ. ಅದರಿಂದ ಸಿಗುವ ಸೌಲಭ್ಯ ಬೇಕು.
ಕೆಲವೊಮ್ಮೆ ಅವಳಿಗೆ ಕಾಣದ ಹಾಗೆ ಕುಳಿತು ಯಾರೊಂದಿಗೆ ಮಾತಾಡ್ತಾಳೆ ಯಾಕೆ ನಗುತ್ತಿದ್ದಳು ಎಂದೆಲ್ಲಾ ಗಮನಿಸಿಕೊಂಡು ಹೋಗಿ  ಮನೆಯಲ್ಲಿ ಕೋರ್ಟ್ಮಾರ್ಷಲ್. ಮೊಬೈಲನ್ನಂತೂ ಆಗಾಗ ಚೆಕ್ ಮಾಡ್ತಿರೋದೇ.  ಅಲಂಕರಿಸಿಕೊಂಡು ಹೋದರೆ ಒಂಥರಾ ನೋಟ ನಗೆ ಚುಚ್ಚುಮಾತು…ಕೊಂಕುನುಡಿ.
ಅವಳ ಹಲಬುವಿಕೆಗೆ ಚಿಂತೆಗೆ ಪರಿಹಾರ ಕೊಡಲಂತೂ ಆಗಲಿಲ್ಲ. ಇದು ಸಾಮಾನ್ಯ ಕೀಳರಿಮೆ, ಅಭದ್ರತೆಯಿಂದ ಉಂಟಾಗುವ ಒಂದು ಮಾನಸಿಕ ಕಾಯಿಲೆ.

ನಂಬಿಕೆ ಎಂದರೆ ದಾಂಪತ್ಯದ ತಳಹದಿ. ಅದೇ ಗಟ್ಟಿಯಿಲ್ಲದಿದ್ದಾಗ ದಾಂಪತ್ಯದ ಕಟ್ಟಡ ನಿಲ್ಲಲು ಸಾಧ್ಯವೇ? ಪತಿಯ ನಂಬಿಕೆಯ ಪ್ರಶ್ನೆ ಬಂದಾಗ ಧುರ್ಯೋಧನ ನೆನಪಾಗುತ್ತಾನೆ.  ಪಗಡೆಯಾಡುವ ಸಮಯದಲ್ಲಿ ಪತ್ನಿ ಭಾನುಮತಿಯ ಮುತ್ತಿನ ಸರವನ್ನು ಗೆಳೆಯ ಕರ್ಣ ಹಿಡಿದೆಳೆದಾಗ ಅದು ಕಿತ್ತುಹೋಗಿ ಮುತ್ತುಗಳು ಚೆಲ್ಲಾಪಿಲ್ಲಿಯಾಗುತ್ತವೆ. ಆಗ ಅಲ್ಲಿಗೆ ಬಂದ ಧುರ್ಯೋಧನ ಕಿಂಚಿತ್ತೂ ತಪ್ಪು ತಿಳಿಯದೆ ಮುತ್ತು ಆರಿಸಲು ಮುಂದಾಗುತ್ತಾನೆ. ಮಿತ್ರ ಹಾಗೂ ಪತ್ನಿಯ ಮೇಲಿನ ನಂಬಿಕೆಯ ಪರಾಕಾಷ್ಠೆ. ಈ ತೆರನ ಪರಸ್ಪರ ನಂಬಿಕೆ
 ಪತಿಪತ್ನಿಯರಲ್ಲಿದ್ದರೆ ಬಾಳು ಅದೆಷ್ಟು ಸೊಗಸು ಅಲ್ಲವೇ?











ಖನಖಖ

10 thoughts on “ಹೂವಂತ ಮನಸನ್ನು ಹಿಂಡುವಿರೇಕೆ ? ವಿಶೇಷ ಲೇಖನ-ಸುಜಾತಾ ರವೀಶ್

  1. ಹೌದು! ನಂಬಿಕೆ ತುಂಬಾ ಅತ್ಯಗತ್ಯ… ಈ ಲೇಖನವನ್ನು ಓದುತ್ತಾ ಹೋದಂತೆ ಯಾಕೋ ಮನಸು ತುಂಬಾ ಭಾರವೆನಿಸುತು. ತುಂಬಾ ಚಂದವಾಗಿ ಮೂಡಿ ಬಂದಿದೆ.

    1. ಮಹಿಳಾ ದೌರ್ಜನ್ಯ ಮನೆಯಿಂದಲೇ ಶುರುವಾಗುವದು. ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ.

    2. ಮುಸುಕಿನೊಳಗಿನ ಗುದ್ದು ಅಂತಾರಲ್ಲ ಹಾಗೆ ಇವು. ಓದಿ ಮೆಚ್ಚಿದ ನಿಮಗೆ ಹೃತ್ಪೂರ್ವಕ ವಂದನೆಗಳು.

  2. ಕಥಾವಸ್ತು ಚನ್ನಾಗಿದೆ… ಕಥೆ ಓದಿಸಿಕೊಂಡು ಹೋಗುತ್ತೆ, ಎಲ್ಲಾ ಸರಿ, ಆದರೆ ಕಥೆಯಲ್ಲಿ ಕಥೆಗಾರ್ಥಿಯಾಗಿ ತಾವು ನೇರವಾಗಿ ಸಂದೇಶಗಳ ರವಾನಿಸಿದ್ದೀರಿ, ಹಾಗೆಲ್ಲಿಯೂ ಮಾಡಬಾರದು, ಪಾತ್ರಗಳ ಮೂಲಕ
    ಆ ಕೆಲಸವಾಗಬೇಕು..!
    ನಿರೂಪಣೆ ಚನ್ನಾಗಿದೆ… ತಮ್ಮ ಜೀವನಾನುಭವವನ್ನು ಕಲಾತ್ಮಕವಾಗಿ ಅಭಿವ್ಯಕ್ತಗೊಳಿಸಿದ್ದೀರಿ… ಜೊತೆಗೆ ಭಾಷೆಯ ಮೇಲೆ ಹಿಡಿತವೂ ಇದೆ, ಇವೆಲ್ಲವೂ ಮೆಚ್ಚಿಗೆಯಾದವು, ಕೊನೆಯಂತೂ ಅನಿರೀಕ್ಷಿತವಾಗಿದೆ, ಅದು ನಾಯಕಿಯ ಅಸಹಾಯಕಿಯಾಗಿಯೇ ಉಳಿಸುವ ಅವಸರದ ತೀರ್ಮಾನದಂತೆ ಭಾಸವಾಯಿತು… ನೋವು ಅವಮಾನ ಅಪಮಾನಗಳನ್ನು ಸಹಿಸುವುದು ಅನಿವಾರ್ಯ ಹೊರಗಡೆ ದುಡಿವ ಹೆಣ್ಣಾದವಳಿಗೆ ಎಂದಾಗಬಾರದಲ್ಲವೇ..!?
    ಪರಿಹಾರ ಹುಡುಕುವ ಪ್ರಾಮಾಣಿಕ ಪ್ರಯತ್ನ ನಾಯಕಿಯಿಂದ ಆಗಿದ್ದರೆ ಚೆನ್ನಿತ್ತು..!
    ಒಟ್ಟಾರೆ ಕಥೆ ಚನ್ನಾಗಿದೆ… ಆತ್ಮಪೂರ್ವಕ ಅಭಿನಂದನೆಗಳು ಕಥೆಗಾರ್ಥಿ..!
    ಹೃನ್ಮನಪೂರ್ವಕ ವಂದನೆಗಳು… ಸವಿಸಂಜೆ..!

    1. ತಮ್ಮ ಅನ್ನಿಸಿಕೆಗಳಿಗೆ ಧನ್ಯವಾದಗಳು. ಸಲಹೆಗಳನ್ನು ಮುಂದೆ ಖಂಡಿತಾ ಅನುಸರಿಸುವೆ.

  3. ಕಾಲ್ಕಪನಿಕ ಕಥೆ ಸತ್ಯಾಂಶವನ್ನು ಎತ್ತಿ ತೋರುತ್ತಿದೆ. ದಾಂಪತ್ಯದಲ್ಲಿ ನಂಬಿಕೆಯೇ ಬುನಾದಿ. ಗಂಡು ಹೆಣ್ಣು ಎಂಬ ತಾರತಮ್ಯ ಮೊದಲು ನಶಿಸಬೇಕು. ಸರಿಸಮಾನರು ಎಂಬುದು ಮನಕ್ಕೆ ನಾಟಬೇಕು. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ತಂದೆ ತಾಯಿ ನಿರಾತಂಕದಿಂದ ಇರಬೇಕು. ಇಂತಹ ಪರಿಸ್ಥಿತಿಯಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಇದ್ದಾರೆ. ಕಟು ವಾಸ್ತವ. ಈ ಕಥೆಗೆ ಕೊನೆಯದಾಗಿ ಸಕಾರಾತ್ಮಕ ತಿರುವು ಕೊಟ್ಟು ನೀತಿಯುತ ಮಾತಾಗಬೇಕು.

Leave a Reply

Back To Top