ಕಾವ್ಯ ಸಂಗಾತಿ
ಮಂಜುಳಾ ಪ್ರಸಾದ್-
ಹೆಣ್ಣೆಂದರೆ ಪರಿಹಾರ ಯಾರು??
ಹೆಣ್ಣೆಂದರೆ, ಕ್ಷಮಯಾ ಧರಿತ್ರಿಯಂತೆ,
ಕ್ಷಮಿಸಿ ಸುಸ್ತಾಗಿ ಸೋತು ಹೋದ ಅವಳ ತಪ್ಪಿಗೆ ಕ್ಷಮೆ ನೀಡುವವರಾರು?
ಹೆಣ್ಣೆಂದರೆ ಸಹನೆಯ ಮೂರ್ತಿಯಂತೆ
ಸಹಿಸಲಸಾಧ್ಯವಾದರೂ ಸಹಿಸುವ ಇವಳ ಮನಸ್ಥಿತಿಯ ಅರಿತವರಾರು?
ಹೆಣ್ಣೆಂದರೆ ಶಕ್ತಿಯಂತೆ.
ಭೌತಿಕವಾಗಿ ಮಾನಸಿಕವಾಗಿ ನೊಂದು ಬಸವಳಿದ ಮಹಿಳೆಗೆ ಶಕ್ತಿ ತುಂಬುವವರಾರು?
ಹೆಣ್ಣೆಂದರೆ ಮನೆಯ ನಗುವಿನ ಮೂಲವಂತೆ
ಅವಳ ನಗುವಿನ ಹಿಂದಿನ ನೋವ ಅಳೆಯುವವರಾರು?ಅಳಿಸುವವರಾರು?
ಹೆಣ್ಣೆಂದರೆ ಹೊಳೆವ ಚಂದಿರನ ಮೊಗವಂತೆ.
ಚಂದಿರನ ಸಾವಿರ ಕಂದಕಗಳಂತೆ ಇವಳ ಗೆಲುವಿನ ಹಾದಿಗೆ ಅಡ್ಡವಾಗಿರುವ ಕಂದಕಗಳ ತೊಲಗಿಸುವವರಾರು?
ಹೆಣ್ಣೆಂದರೆ ಬಣ್ಣಿಸುವರು ನಿಸರ್ಗದ ಚೆಲುವಿಗೆ ಹೋಲುವಂತೆ.
ಇವಳ ಸೊಬಗಿನ ಖನಿಯ ಶೋಷಣೆಯ ಕೇಳುವವರಾರು?
ಹೆಣ್ಣೆಂದರೆ ಸಂಸಾರದ ಕಣ್ಣಂತೆ
ಇವಳ ಕಣ್ಣಿನ ಕೊನೆಯಲ್ಲಿ ಜಾರಿದ ಕಂಬನಿಯ ಒರೆಸುವವರಾರು?
ಹೆಣ್ಣೆಂದರೆ ಒಲವಿನ ಮೂಲವಂತೆ.
ಇವಳ ಒಲವಿನ ರಾಗಕೆ ಶೃತಿ ಸೇರಿಸಿ ಒಲಿದು ಹಾಡುವವರಾರು?
ಹೆಣ್ಣೆಂದರೆ ಈ ದಿನಕೆ ಶುಭಾಶಯಗಳೇ ಹರಿದು ಬರುವುದಂತೆ.
ಉಳಿದ ದಿನಗಳಲ್ಲಿ ಅವಳ ಕೇಳುವವರಾರು?
ಅವಳ ಬಾಳಿಗೆ ನಲಿವು ತುಂಬುವವರಾರು?
ಹೆಣ್ಣೆಂದರೆ ಎಲ್ಲರ ಉಸಿರು
ಅವಳ ಉಸಿರಿಗೆ ಹಸಿರು ಬೆರೆಸುವವರಾರು?
ಅವಳ ದಣಿವಿಗೆ ಮಣಿದು ಸಹಕರಿಸುವವರಾರು?
ಅವಳ ಬಾಳಿಗೆ ಬೆಳಕಾಗುವವರಾರು?
ಹೆಣ್ಣು ಜಗದ ಕಣ್ಣು,ಕಣ್ಣಂತೆ ಕಾಪಿಟ್ಟು ಅವಳ ನೋವು ನಲಿವಿಗೆ ಜೊತೆಯಾಗಿ.
ಆಗ…ಈ ದಿನಕ್ಕೊಂದು ಶೋಭೆ ಬಂದೀತು ತಾನೇ ತಾನಾಗಿ !
- ಮಂಜುಳಾ ಪ್ರಸಾದ್ ದಾವಣಗೆರೆ
Superb…
Super
Chanagedhe kavithe
Very nice
ಆಕೆಯೂ ಮನುಷ್ಯಳು…. ಬೊಂಬೆಯಲ್ಲ ಎಂದರಿತರೆ ಪರಿಹಾರ ಒದಗಿದಂತೆ. ಕವನ
ತುಂಬಾ ಚೆನ್ನಾಗಿದೆ ಹೆಣ್ಣು ಪ್ರಕೃತಿ ಯಂತೆ ಎಷ್ಟೇ ನೋವಾದರೂ ಕಳಕಳಿಸುವಳು ಜೀವಜಗತ್ತನ್ನು ಸಲಹುವಳು
ಖುಷಿಯಾಯಿತು…… ಮಹಿಳಾ ದಿನಾಚರಣೆಯ ಶುಭಾಶಯಗಳು