ನಾರಾಯಣಸ್ವಾಮಿ(ನಾನಿ)”ಕೃತಿ ಮತ್ತದೇ ಧ್ಯಾನ” ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ

ಯಾವ ಒಬ್ಬ ಬರಹಗಾರರಿಗಾಗಲಿ ತಮ್ಮ ಅನುಭವಗಳನ್ನು ಪರಿಪೂರ್ಣತೆ ಹಾಗೆಯೇ ವಿಶೇಷತೆಗೊಳಿಸಿಕೊಂಡು ಅದನ್ನು ಕಾವ್ಯಸ್ವರೂಪದಲ್ಲಿ ಅಭಿವ್ಯಕ್ತಗೊಳಿಸಬೇಕಾದರೆ ಅವರೊಳಗೊಂದು ಕಾವ್ಯಸ್ಫುರಿಸುವ ಪ್ರತಿಭೆ ಇರಬೇಕು. ಆಗಿದ್ದಾಗಲೆ ಬರೆಹಗಾರರು ಲೋಕದ ಅನುಭವಗಳನ್ನು ಗ್ರಹಿಸಿಕೊಂಡು ಅದರೊಳಗೆ ಘಟಿಸುವ ನೂರಾರು ವಿಚಾರಗಳನ್ನು ತನ್ನ ಆಲೋಚನೆ ಮತ್ತು ಕ್ರಿಯಾಶೀಲತೆಯಿಂದ ವಾಸ್ತವಿಕತೆಯಿಂದ ಭಾವನಾತ್ಮಕ ಲೋಕಕ್ಕೆ ಕೊಂಡೊಯ್ಯುವರು.

             ಕವಿಗಳು, ಸಾಹಿತಿಗಳು ನೋಡಿದ್ದನ್ನು, ಕೇಳಿದ್ದನ್ನು ಬರಹರೂಪದಲ್ಲಿ  ಭಾವತುಂಬಿಸುವ ಕಲೆಯನ್ನು ಅದ್ಭುತವಾಗಿ ನಿರೂಪಿಸುವರು.ಆ ಶಕ್ತಿ ಸಾಮರ್ಥ್ಯ ಕವಿಗಳಿಗೆ ದೇವರ ಬಳುವಳಿಯಾಗಿದೆ ಎಂದರೆ ತಪ್ಪಾಗಲಾರದು.ಇಂತಹ ಸಾಲಿನಲ್ಲಿ ನಾರಾಯಣಸ್ವಾಮಿ (ನಾನಿ)ಸರ್ ಕೂಡ ಒಬ್ಬರಾಗಿದ್ದಾರೆ.ಇವರು ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುವ ಪ್ರತಿಭಾನ್ವಿತ ಬರಹಗಾರರಾಗಿದ್ದು ಹಲವಾರು ವಸ್ತುವಿಷಯಗಳ ಮೇಲೆ ತಮ್ಮದೆ ಆದ ಆಲೋಚನಭರಿತ ವಿಚಾರಗಳನ್ನು ಅರುಹಿಸುತ್ತ ಕೆಲವೊಂದು ವಸ್ತುವಿಷಯಗಳಿಗೆ ತಮ್ಮದೆ ಆದ ಭಾವವನ್ನು ತುಂಬಿ ಆ ವಸ್ತುವಿಷಯಕ್ಕೆ ಅಥವ ಪದ್ಯದ ಸಾಲುಗಳಿಗೆ ಜೀವ ತುಂಬಿದ್ದಾರೆ.

         ಕವಿಯ ಮನಸು ಬಹಳ ವಿಶೇಷ ಹಾಗು ವಿಶಿಷ್ಟತೆಯಿಂದ ಕೂಡಿದ್ದು ವೈವಿಧ್ಯವಾದದ್ದು, ಅಸಂಖ್ಯಾತ ಸಾಧ್ಯತೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಉಳದ್ದು, ಅನರ್ಘ್ಯ ಚಿಂತನೆ ಮತ್ತು ಮೌಲ್ಯಗಳಿಂದ ತುಂಬಿದೆ ಹಾಗೆ ಇಲ್ಲಿ ಕವಿಗಳು ಪ್ರತಿಯೊಂದು ವಿಷಯ, ಚಿತ್ರಗಳ ಬಗ್ಗೆ ಚಿಂತನ ಮಂಥನದೊಂದಿಗೆ ಸ್ಪಷ್ಟತೆ ಒದಗಿಸಿಕೊಟ್ಟು  ಅರ್ಥಪೂರ್ಣ ಕಾವ್ಯಧಾರೆಯನ್ನು ಹರಿಸುತ್ತ ಓದುಗರಿಗೆ ಅಮೂಲ್ಯವಾದ ಹಾಗು ಅರ್ಥಪೂರ್ಣ ವಿಷಯಗಳ ಕಾವ್ಯವನ್ನು ಉಣಬಡಿಸಿದ್ದಾರೆ...

          ಕವಿಗಳು ತಮ್ಮ ಕವನಗಳಲ್ಲಿ ಕಲ್ಪನೆ, ಭಾವ, ಆಲೋಚನೆ ಎಲ್ಲದರ ಸಮ್ಮಿಳಿತದೊಂದಿಗೆ ರಚಿಸಿರುವುದನ್ನು ಸಹ ಕಾಣಬಹುದಾಗಿದೆ.ಇಲ್ಲಿ ಕೇವಲ ಕಲ್ಪನೆ ಮಾತ್ರವಲ್ಲದೆ ಭಾವವೂ ಕೂಡ ಮಿಳಿತವಾಗಿ ಸಾಗುತಿವೆ. ಆಲೋಚನೆ ಜೊತೆಗೆ ಭಾವನೆಗಳೊಂದಿಗೆ ರಚಿತವಾಗಿರುವ ಕವನಗಳು ಖುಷಿಯನ್ನು ಇಮ್ಮಡಿಗೊಳಿಸುವ ಭಾವವನ್ನೆ ಹೊಂದಿರುವುದು ಇಲ್ಲಿರುವ ಕವನಗಳಿಂದ ಕಾಣಬಹುದಾಗಿದೆ.

ಪರಿಪೂರ್ಣ ಕವನಗಳು ಯಾವಾಗಲು ಆಳವಾದ ಅರ್ಥಪೂರ್ಣತೆ, ಸ್ಪಷ್ಟತೆ ಹಾಗು ವಿಶೇಷ ಪದಪುಂಜಗಳಿಂದ ಕೂಡಿರುವುದು ಅತ್ಯಾವಶ್ಯಕ. ಇಲ್ಲಿ ಪ್ರತಿಭಾನ್ವಿತ ಸಂಪನ್ನನಾದ ಕವಿಮಹಾಶಯರು ಆಳವಾದ ಜ್ಞಾನವನ್ನು ತುಂಬಿಕೊಂಡು ಅತ್ಯುತ್ತಮವಾದ ಭಾವ ತತ್ಪರತೆಯೊಂದಿಗೆ ಬದುಕಿಗೆ ನಿವೇದಿಸಿಕೊಂಡಿರುವರು.ಮೇಲ್ನೋಟಕಷ್ಟೆ ಹೊಳೆಯದಂತೆ ;ಒಳ ಹೋದಂತೆಲ್ಲ ದಿವ್ಯಪ್ರಕಾಶವಾಗಿ ಮಿನುಗುವಂತಿವೆ. ಅವರೊಳಗಿನ ಪ್ರತಿಭೆಯಲ್ಲಿ ಆಲೋಚನೆ, ಕಲ್ಪನೆ, ಭಾವಗಳು ಒಂದಕ್ಕೊಂದು ಮಿಳಿತಗೊಂಡು ಅಖಂಡವಾಗಿವೆ.

ನಾನಿಯವರ ಒಂದೊಂದು ಕವನಗಳು ಕೂಡ ವಿಭಿನ್ನ ,ವಿಶೇಷ ,ವಿಶಿಷ್ಟತೆಗಳಿಂದ ಕೂಡಿವೆ. ಅವರ ಅಂತಃಧ್ಯಾನನಿಂದಲೆ ಮತ್ತದೇ ಧ್ಯಾನದೊಳಗೆ ಅಂತರ್ಗತವಾಗಿರುವಂತಹ ಭಾವನೆಗಳನ್ನೆಲ್ಲ ಬರಹ ರೂಪದಲ್ಲಿ ತೋರಿರುವುದು ನಿಜಕ್ಕೂ ಖುಷಿಯಾಗುತ್ತದೆ.ಓದುಗರ ಮನಸೆಳೆಯುವ ಈ “ಮತ್ತದೇ ಧ್ಯಾನ” ಕವನ ಸಂಕಲನ ಪ್ರತಿಯೊಬ್ಬರು ಓದಬಹುದಾದ ತುಂಬಾ ಅರ್ಥಪೂರ್ಣ ಸಂಕಲನವಾಗಿದೆ.ಇದರೊಂದಿಗೆ ಹಲವು ಚುಟುಕುಗಳನ್ನು ಸಹ ಒಳಗೊಂಡಿರುವ ಈ ಕೃತಿ ಕೈ ಸೇರಿದಾಕ್ಷಣ ಓದುವ ಆಸಕ್ತಿಯನ್ನು ಹೆಚ್ಚಿಸಿದಂತು ಸುಳ್ಳಳ್ಳ.

ಒಂದೊಂದು ಓದುತ್ತಿದ್ದರೂ ಮುಂದೆ ಮತ್ಯಾವ ವಿಷಯಗಳಿಗೆ ಸಂಬಂಧಿಸಿದ ಕವನಗಳಿವೆ ಎನ್ನಿಸಿದಂತು ಸತ್ಯ.

“ಪ್ರಕೃತಿ ಮತ್ತು ಮನುಜ”…..

ಸೂರ್ಯನೂ ಕೂಡ
ಪ್ರತಿ ಮುಂಜಾನೆಯೇ ಮೂಡಿ
ತನ್ನೊಳಗಿನ ಕಿರಣಗಳಿಂದ
ಜಗವನು ಜಗಮಗಿಸುತ್ತಾನೆ…

ತನ್ನೊಳಗಿನ ಶಾಖದಿಂದ
ಜಗದ ಜೀವರಾಶಿಗಳನ್ನ
ಬದುಕಿಸುತ್ತಲೆ ಇದ್ದಾನೆ…

ಈ ಕವನದ ಸಾಲುಗಳು ಮೂಡಣದಲಿ ಮುಂಜಾನೆ ಮೂಡಿದ ಸೂರ್ಯನು ತನ್ನ ಕಿರಣಗಳಿಂದ ಇಡೀ ಪ್ರಪಂಚವನ್ನೆ ಜಗಮಗಿಸುತ ತನ್ನೊಳಗಿನ ಬೆಳಕು ಶಾಖದಿಂದ ಭೂಮಂಡಲದ ಜೀವರಾಶಿಗಳನ್ನು ಬದುಕಿಸುತ ತನ್ನಿರುಕೆಯ ಮಹತ್ವವನ್ನು ಸಾರಿರುವುದನ್ನು ತುಂಬಾ ಸೊಗಸಾಗಿ ವಿವರಿಸಿದ್ದಾರೆ.ಈ ಮೂಲಕ ಪ್ರಕೃತಿ ಮತ್ತು ಮನುಜನಿಗಿರುವ ಅವಿನಾಭಾವ ಸಂಬಂಧಗಳನ್ನು ತುಂಬಾ ಸೊಗಸಾಗಿ ತಿಳಿಸಿದ್ದಾರೆ…

“ಹೆಣ್ಣೆಂದರೆ ಕವಿತೆಯಲ್ಲ”……

ಹೆಣ್ಣೆಂದರೆ ಕವಿತೆಯಲ್ಲ ಅವಳೊಂದು ಮಹಾಕಾವ್ಯ
ಅವಳಿದ್ದರೆ ಕವಿತೆಯಲಿ
ಪದಗಳ ರಸಕಾವ್ಯ ಚೆಲುವು ಒಲವುಗಳ
ವಿನೂತನ ಸಾರುತಿವೆ
ಹೃದಯಗೀತೆ ಅನುದಿನ……

ಈ ಕವಿತೆಯಲ್ಲಿ ಹೆಣ್ಣನ್ನು ಅದ್ಭುತವಾದ ಉಪಮಾನ ಉಪಮೇಯಗಳ ಮೂಲಕ ಸುಂದರವಾಗಿ ವರ್ಣಿಸಿದ ಪರಿ ಚಂದವಾಗಿದೆ.ಹೆಣ್ಣನ್ನ ಒಂದು ಮಹಾಕಾವ್ಯಕ್ಕೆ ಹೋಲಿಸಿದ ರೀತಿ ನಿಜಕ್ಕೂ ಶ್ಲಾಘನೀಯವಾಗಿದೆ.ಮಹಾಕಾವ್ಯದಂತೆ ತೂಕವುಳ್ಳವಳು, ಘನತೆಯುಳ್ಳವರು ಹಾಗೆಯೇ
ಹೆಣ್ಣೆಂದರೆ ತುಂತುರು ಮಳೆ ಹೂ, ಮುತ್ತಿಡುವ ಮೋಡ, ಜುಳು ಜುಳು ಹರಿಯುವ ತೊರೆ, ಹೆಣ್ಣೆಂದರೆ ಕಾವ್ಯದ ಸೆಲೆ, ಕನಸಿನ ಕಾರಂಜಿ ಬಣ್ಣಗಳ ಚಿತ್ತಾರ’ಅವಳೊಂದು ರಸಕಾವ್ಯವೆ ಸರಿ.ಚೆಲುವು ಒಲವುಗಳ ಸಂಗಮವಿದ್ದಂತೆ ಎಂದು ಹೆಣ್ಣನ್ನು ಬಹಳ ಸೊಗಸಾಗಿ ವರ್ಣಿಸಿರುವರು.

“ನಿಲುಕದ ಭಾವನೆಯ ಹೊನಲು”…..

“ಭಾಷೆಯು ಭಾರವಾಗದ ಜಾತಿಯು ತೊಡಕಾಗದ ಮುಕ್ತಮನಸುಗಳ ಸುಂದರ
ಹೃದಯಗಳೆರಡಿವು ಗೆಳತಿ”….

ಈ ಕವನ ಗೆಳತನದ ಶುದ್ಧತೆ ಪವಿತ್ರತೆಯ ಬಗ್ಗೆ ಬಿಂಬಿತವಾಗಿದೆ.ಅದರಲ್ಲೂ ಗೆಳತನಕ್ಕೆ ಯಾವುದೆ ಜಾತಿ, ಮತ ,ಪಂಥಗಳ ಹಂಗಿಲ್ಲ ಹಾಗೆಯೆ ಯಾವುದೆ ಭಾಷೆಯ ತೊಡಕಿಲ್ಲ.ಯಾಕೆಂದರೆ ಮನದ ಭಾವಗಳು ಅಂತಃಸ್ಥವಾಗಿರುವವು.ಮನಸು ಮನಸುಗಳ ಸಮ್ಮಿಲನವೊಂದೆ ಸಾಕು ಎರಡು ಜೀವಗಳನ್ನು ಒಂದುಗೂಡಿಸಿ ಅವರೊಳಗೊಂದು ಸಾಮರಸ್ಯತೆ ,ಮಧುರ ಬಾಂಧವ್ಯವನ್ನು ಸೃಷ್ಟಿಸುವುದು ಎಂದು ಕವಿಗಳು ಇಲ್ಲಿ ಬಿತ್ತರಿಸಿದ್ದಾರೆ..ಹಾಗಾಗಿ ಹೀಗೆ ಇಬ್ಬರ ಗೆಳೆತನದ ನಡುವೆ ನಿಲುಕದ ಭಾವನೆಯ ಹೊನಲನ್ನು ತುಂಬಾ ಚನ್ನಾಗಿ ಹರಿಸಿದ್ದಾರೆ.

“ಶಿಶುಗೀತೆ”

ನಮ್ಮ ನಾಡಿಗೆ ಹಿಂದಿ ಬರಲಿ
ಇಂಗ್ಲೀಷ್ ಬರಲಿ ನೀನು ಯೋಚಿಸದಿರು
ಕನ್ನಡ ಕಲಿತ ಮಕ್ಕಳು ನಾವು
ಮರೆಯಲಾರೆವು ನಿನ್ನ ಕನ್ನಡಮ್ಮ….

ಮಕ್ಕಳಿಗೆ ನಮ್ಮ ನಾಡು ನುಡಿಯ ಬಗ್ಗೆ ಉತ್ತಮವಾದ ಭಾವನೆಯನ್ನು ಹುಟ್ಟಿಸಲು ಅವರೊಳಗೆ ನಾಡು ನುಡಿಯ ಬಗ್ಗೆ ಪ್ರೀತಿ, ಪ್ರೇಮ ಹಾಗು ಉಳಿಸಿ ಬೆಳೆಸುವ ಆಸೆ, ಆಸಕ್ತಿ ,ನನ್ನದೆಂಬ ಭಾವವನ್ನು ಮೂಡಿಸಿರುವ ಪರಿ ಚಂದ.ಹಾಗೆಯೇ ನಮ್ಮ ನಾಡಿಗೆ ಯಾವುದೆ ಭಾಷೆಗಳು ಬಂದು ಹೋಗಲಿ ನೀವು ಮಾತ್ರ ಕನ್ನಡವನ್ನು ಮರೆಯದೆ ಮೆರೆಯುತ್ತಿದ್ದರೆ ನಮ್ಮ ಕನ್ನಡಮ್ಮ ಎಂದಿಗೂ ನಮ್ಮನ್ನು ಮರೆಯಲಾರಳು ಎಂದು ಹಿತನುಡಿಗಳನ್ನು ಹೇಳಿರುವ ಸಾಲುಗಳು ಚನ್ನಾಗಿ ಮೂಡಿಬಂದಿವೆ…

“ಹಳ್ಳಿಯ ಸೊಗಡು”……

“ಮಂಜುಕವಿದ ಮಬ್ಬಿನೊಳಗೆ
ಸೂರ್ಯಕಿರಣ ಹೊರಬಂದಿದೆ
ನೊಗವನ್ಹೊತ್ತು ಮೆರವಣಿಗೆ ಹೊರಟಿದ್ದಾರೆ
ಮಂಜುಹನಿಯು ಕರಗುತಿದೆ
ಬೆವರಹನಿ ಮೂಡುತಲಿದೆ
ಬುತ್ತಿಯ ಚೀಲ ತಲೆ ಮೇಟ್ಟು ಹೊರಬಂದರು”….

ಈ ಒಂದು ಕವಿತೆಯೊಳಗೆ ಹಳ್ಳಿಯ ಸೊಬಗು, ಸೊಗಡನ್ನು ತಮ್ಮದೆ ಮಾತಿನಲ್ಲಿ ವರ್ಣಿಸಿರುವರು.
ಸೂರ್ಯೋದಯದೊಡನೆ ಪ್ರಾರಂಭವಾಗುವ ಹಳ್ಳಿಯ ಬದುಕು.ಮುಂಜಾನೆಯ ಹಕ್ಕಿಗಳಿಂಚರ, ಇಳೆಯ ತಬ್ಬಿದ ಇಬ್ಬನಿಯ ಚಿತ್ತಾರ, ತಮ್ಮ ತಮ್ಮ ಕೈಂಕರ್ಯಕ್ಕೆ ತೆರಳುತ್ತಿರುವ ನೊಗ ಹೊತ್ತ ರೈತರ ಸಾಲು ಸಾಲು ಮೆರವಣಿಗೆ.ಭೂ ತಾಯಿಯ ಒಡಲನು ಹಸನುಗೊಳಿಸಲು ನೊಗ ಹೂಡಿ ಬೆವರರಿಸುತ್ತಿದ್ದಾಗಲೆ ಮನೆಯಿಂದ ಮಧ್ಯಾಹ್ನದ ಬುತ್ತಿಯನ್ನು ತಲೆ ಮೇಲೆ ಹೊತ್ತು ತರುವ ಮಡದಿಯ ಚಿತ್ರಣವನ್ನು ತುಂಬಾ ಸೊಗಸಾಗಿ ವರ್ಣಿಸಿರುವರು.

ಹೀಗೆ ಒಂದೊಂದು ಕವಿತೆಗಳು ಎದೆಯನ್ನು ತಟ್ಟುವಂತೆ ,ಮನವನ್ನು ಮುಟ್ಟುವಂತಿವೆ.ಹೀಗೆ ಸೊಗಸಾದ ಕವನಗಳ ಹೊನಲನ್ನೆ ಹರಿಸಿರುವಿರಿ.ಒಟ್ಟು ೪೩ ಕವನಗಳು ಹಾಗೆ ಚುಟುಕುಗಳನ್ನು ಹೊತ್ತು ತಂದಿರುವ “ಮತ್ತದೇ ಧ್ಯಾನ”ಕೃತಿಯು ನೋವು ,ನಲಿವು ,ಆಸೆ ಹತಾಸೆಗಳೊಂದಿಗೆ ಬೆರೆತು ಹೋಗಿದೆ.ಕತ್ತಲು ಬೆಳಕಿನ ಆಟದೊಂದಿಗೆ ಬಾಳ ಪಯಣ. ಪ್ರೀತಿ, ಪ್ರೇಮ ,ಸ್ನೇಹದ ಮಹತ್ವ, ಪ್ರಕೃತಿ ,ಕಲ್ಪನೆ, ಮೌನದೊಳಗಣ ಸನ್ನಿವೇಶ ಸಂದರ್ಭಗಳನ್ನು ಹೊತ್ತ ಕವನಗಳ ಗಡಣವೆ ತುಂಬಿದೆ. ಹಾಗೆಯೇ ಹೆಣ್ಣು, ಅವ್ವ ,ಅಪ್ಪ ,ಮಹಿಳೆಯ ನೋವು ನಲಿವು ,ಅವಳ ಛಲ,ಸಾಧನೆಯ ಪ್ರತೀಕತೆಯ ಬಗ್ಗೆ ಎತ್ತಿ ತೋರಿರುವ ಒಲವು ಚೆಲುವುಗಳಿವೆ. ಜೀವ ಭಾವಗಳ ಮಿಲನ, ಮಾತು ಮೌನಗಳ ತನನ ,ತಂಪು ಬಿಸುಪುಗಳ ಗಾನ ಬಹಳ ಸೊಗಸಾಗಿದೆ. ಕಾಡುವ ಗೆಳತಿ ಭರವಸೆಯ ಬದುಕು,ಧೈರ್ಯ ನೀಡುವ ಮನಸು ಹಾಗೆಯೇ ಹಕ್ಕಿ ಪಕ್ಷಿಗಳ ಹಾಸ್ಯ ಲಾಸ್ಯ.ಅವುಗಳ ಸುಂದರ ಸೊಗಡಿನ ಪರಿ.ಮುಂಜಾನೆಯ ಅರ್ಕನೋಕುಳಿ.ಮುಸ್ಸಂಜೆಯ ಕೆಂಬಾರನ ಕಂಪು.ನಾಡು ನುಡಿಯ ಬಗ್ಗೆಗಿನ ಆಸ್ಥೆ, ಪ್ರಶ್ನಾವಳಿಗಳ ಸುತ್ತ ನನ್ನ ಚಿತ್ತವೆಂಬಂತೆ ಪ್ರಶ್ನೆಗಳೊಂದಿಗೆ ಉತ್ತರದ ಸಾಲುಗಳ ಸಮಾಗಮ.ಕಾಯುವಿಕೆ ,ಸೆಳೆಯುವಿಕೆ, ಬರೆಹದ ಚಟುವಟಿಕೆ, ಒಲವಿನ ಚೇತರಿಕೆ,ಇದರೊಳಗೆ ಚನ್ನಾಗಿಬಿಂಬಿತವಾಗಿವೆ.ಅವಳ ಕಣ್ಣೋಟ, ಅವನ ಕಾಯುವ ಪರಿ ,ಪ್ರೀತಿಯೆಂಬ ಉಯ್ಯಾಲೆಯಲಿ ಜೀಕುವ ಮನಗಳ ತಳಮಳಗಳನ್ನು ವಿಭಿನ್ನವಾಗಿ ಹರಿಸಿರುವ ಕಾವ್ಯದೊನಲು ರಸವತ್ತಾಗಿ ಮೂಡಿಬಂದಿವೆ.ಕವನಗಳು ಲಯಬದ್ಧವಾಗಿದ್ದರೆ ಮತ್ತಷ್ಟು ಚನ್ನಾಗಿರುತಿತ್ತು.

ಈ ಸಂಕಲನಕ್ಕೆ ತುಂಬಾ ಚಂದದ ಮುನ್ನುಡಿ
ಶ್ರೀಮತಿ ಸಾವಿತ್ರಮ್ಮ ಓಂಕಾರ್ ಮೇಡಮ್ ರವರಿಂದ ಮೂಡಿ ಬಂದಿರೆ, ಬೆನ್ನುಡಿಯು ಸುಮಾಕಿರಣ್ ಮೇಡಮ್ ರವರಿಂದ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.ವೀಣಾ ಶ್ರೀನಿವಾಸರಿಂದ ಆಶಯ ನುಡಿ.ಕವಿ ಪರಿಚಯವನ್ನು ಶ್ರೀಮತಿ ಶೋಭ ರಮೇಶರವರು ತುಂಬಾ ಚನ್ನಾಗಿ ಮಾಡಿರುವರು.ಸರ್ ನಿಮ್ಮ ಲೇಖನಿಯಿಂದ ಮತ್ತಷ್ಟು, ಮಗದಷ್ಟು ಬರೆಹಗಳು ನಿತ್ಯ ಬರುತಿರಲಿ.
ನಿಮ್ಮಿಂದ ಕನ್ನಡ ಸಾಹಿತ್ಯದ ಸೇವೆ ಮತ್ತಷ್ಟು ಆಗುತ್ತಿರಲೆಂದು ಹೃದ್ಯದೊಂದಿಗೆ ಹಾರೈಸುವೆ.


One thought on “ನಾರಾಯಣಸ್ವಾಮಿ(ನಾನಿ)”ಕೃತಿ ಮತ್ತದೇ ಧ್ಯಾನ” ಅವಲೋಕನ ಅಭಿಜ್ಞಾ ಪಿ.ಎಮ್.ಗೌಡ

Leave a Reply

Back To Top