ಬೆಳಗಾವಿಯ ರಾಜ್ಯೋತ್ಸವ-ಡಾ ಅನ್ನಪೂರ್ಣಾ ಹಿರೇಮಠ

ಕನ್ನಡ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ಬೆಳಗಾವಿಯ ರಾಜ್ಯೋತ್ಸವ

ನುಡಿ ಹಬ್ಬ, ನಾಡ ಜಾತ್ರೆ, ಕನ್ನಡ ತೇರಿನ ವೈಭವ ಕರುನಾಡಿಗರ ಹೆಮ್ಮೆಯ ಉತ್ಸವ ,ಪ್ರತಿಯೊಬ್ಬ ಕನ್ನಡಿಗನ ಮನ ಮಿಡಿಸುವ ರೋಮಾಂಚನಗೊಳಿಸುವ ಆಚರಣೆಯಾದ ಕರ್ನಾಟಕ ರಾಜ್ಯೋತ್ಸವ,  ಕನ್ನಡಿಗರಿಗಾಗಿ, ಕನ್ನಡಿಗರಿಂದಲೇ ಕನ್ನಡಕ್ಕಾಗಿಯೇ, ಕರುನಾಡ ಹಿರಿಮೆ, ಹೆಮ್ಮೆ ,ಗರಿಮೆ ,ಇತಿಹಾಸ ,ವೈಭವ ತಿಳಿಸಲು ಹಾಡಿ ಹೊಗಳಲು, ಭುವನೇಶ್ವರಿ ತಾಯ ರಥವೆಲ್ಲೆಡೆ ಎಳೆಯುತ್ತೇವೆ. ಅಭಿಮಾನದಿಂದ ಬೀಗುತ್ತೇವೆ.

1905 ರಿಂದಲೇ ಕನ್ನಡ ನಾಡಕಟ್ಟಲು ,ಕನ್ನಡಿಗರನ್ನು ಒಗ್ಗೂಡಿಸಿ ಸಮೃದ್ಧ ನಾಡಾಗಿಸಲು ಹೋರಾಡಿದ ಆಲೂರು ವೆಂಕಟರಾವ್ ರ ಮರೆಯುವಂತಿಲ್ಲ ನಾವಿಂದು. ಅಂದು 1956ರ ಗಣರಾಜ್ಯವಾದ ದಿನದಂದೇ ನಮ್ಮ ನಾಡು ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಒಂದೇ ಸೂರಿನಡಿಯಲ್ಲಿ ತಂದು ಮೈಸೂರು ರಾಜ್ಯವೆಂದು ನಾಮಕರಣ ಮಾಡಲಾಯಿತು. ಕರ್ನಾಟಕ, ಕನ್ನಡ ಎಂಬ ಪದದಿಂದ ಬಂದದ್ದು. ಇದು ಮೂಲ ಸಂಸ್ಕೃತದಿಂದ ಬಂದ ಪದ” ಕನ್ನಾಡು “. ಅದನ್ನೇ ಕರು+ ನಾಡು ಕರುನಾಡು ಕಪ್ಪು ಮಣ್ಣಿನ ನಾಡು ,ಅಂದರೆ ಫಲವತ್ತತೆಯ, ಹಸುರಿಂದ ಕಂಗೊಳಿಸುವ ಸುಂದರ ನಾಡಿದು ಎಂದು ಅರ್ಥ .1972 ರವರೆಗೆ ನಮ್ಮ ಈ ಕರುನಾಡಿಗೆ ಮೈಸೂರು ಎಂದು ಹೆಸರಿನಿಂದ ಕರೆಯುತ್ತಾ ಬಂದೆವು. ಮೈಸೂರು ಸಂಸ್ಥಾನವು ಹಿಂದಿನ ಮೈಸೂರು ಸಂಸ್ಥಾನದ ಬಹುತೇಕ ಪ್ರದೇಶಗಳನ್ನು ಒಳಗೊಂಡಿದ್ದರಿಂದ ಕರ್ನಾಟಕದ ಹಲವಾರು ಜನರು ಆ ಹೆಸರನ್ನು ತೆಗೆದುಹಾಕಲು ಕರ್ನಾಟಕ ಎಂಬ ಹೆಸರಿನಿಂದ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದರು .ಆ ಹೋರಾಟದಲ್ಲಿ ಹಲವಾರು ಮಹನೀಯರು, ಕವಿ ಪುಂಗರವರು ನಟರು ಪಾಲ್ಗೊಂಡಿದ್ದರು ,ಕೆ ಶಿವರಾಂ ಕಾರಂತ್ , ಕೃಷ್ಣಮೂರ್ತಿ ,ಕುವೆಂಪು, ಮಾಸ್ತಿ, ಡಾ ರಾಜಕುಮಾರ ಹೀಗೆ ಹಲವಾರು ಜನ ಸಾಮಾಜಿಕ ಹೋರಾಟಗಾರರ ಹೋರಾಟದ ಫಲವಾಗಿ ನವೆಂಬರ್ 1, 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಿ ರಾಜ್ಯದಾದ್ಯಂತ ಶಾಲಾ, ಕಾಲೇಜು ,ಸಂಘ ಸಂಸ್ಥೆಗಳು, ಕರ್ನಾಟಕದ ಪ್ರತಿಯೊಂದು ಹಳ್ಳಿ ನಗರಗಳಲ್ಲಿ ಅತ್ಯಂತ ಸಡಗರದಿಂದ ಈ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಪ್ರಾರಂಭಿಸಿದರು.

ಕನ್ನಡ ನಾಡು ನುಡಿಯ ಕೀರ್ತಿಯನ್ನು ಬಣ್ಣಿಸದ ಕವಿಗಳಿಲ್ಲ, ಹಾಡದ ಗಾನ ಕೋಗಿಲೆಗಳಿಲ್ಲ ,ಹೆಜ್ಜೆ ಹಾಕದ ನಟರಿಲ್ಲ ಎಂದರೆ ತಪ್ಪಾಗಲಾರದು. ಇಂತಹ ಸಮೃದ್ಧ ನಾಡಿನ ಈ ನಾಡಹಬ್ಬ ರಾಜ್ಯೋತ್ಸವ ನಮ್ಮ ಬೆಳಗಾವಿಯಲ್ಲಿ ಕಂಡು ಹೆಮ್ಮೆ ಎನಿಸಿತು .ಎರಡನೇ ರಾಜಧಾನಿ ನಮ್ಮದು. ಕನ್ನಡದ ಕಲರವ, ಕನ್ನಡದ ಗಾಳಿ ,ಕನ್ನಡದ ಕಂಪು ಎಲ್ಲೆಲ್ಲೂ ಬೀಸಿದಂತೆ ಭಾಸ. ಕನ್ನಡಿಗರನ್ನು ಶರಧಿಯೋಪಾದಿಯಲ್ಲಿ ಕಂಡು ಹೆಮ್ಮೆ. ಒಂದೆಡೆ ನನ್ನ ಜನರೆಲ್ಲ ಸೇರಿದ ಆ ಸಡಗರ, ಆತ್ಮೀಯತೆಯ ಆ ಭಾವ ನಮ್ಮ ಬಲ, ನಮ್ಮ ಶಕ್ತಿ ,ನಮ್ಮ ಛಲ,ನನ್ನೆಲ್ಲಾ ಜನರನ್ನು ನೋಡಿ ನಿಬ್ಬೆರಗಾದೆ! ಮೈಮನ ಪುಳಿಕಿತಗೊಂಡೆ! ಹರ್ಷಗೊಂಡೆ, ತೆರೆದ ಬಾಯಿ ತೆರೆದಂತೆ ಇತ್ತು ಹಾಗೆ ನೋಡುತ್ತಿದ್ದೆ!. ಇನ್ನೊಂದೆಡೆ ಈ ರಾಜ್ಯೋತ್ಸವ ಆಚರಿಸುವ ಪರಿ, ನನಗೆ ಅಚ್ಚರಿ ತರುವುದರೊಂದಿಗೆ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು .ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಿ ಅತ್ಯಂತ ಸದಗರದಿಂದ ವಿದ್ಯಾರ್ಥಿಗಳು ಶಿಕ್ಷಕರೊಳಗೊಂಡು ಹಾಡಿ ನಲಿದು ,ಭಾಷಣಗಳ ಮುಗಿಸಿ ಸುಮಾರು ಮಧ್ಯಾಹ್ನ ಒಂದು ಗಂಟೆಗೆ ತುಂಬಾ ಸಂತಸದಿಂದ ನಮ್ಮ ಬೆಳಗಾವಿಯಲ್ಲಿಯ ನಾಡ ಹಬ್ಬವನ್ನು ನೋಡಲೇಬೇಕು ,ಕಣ್ತುಂಬಿಕೊಳ್ಳಬೇಕೆಂಬ ತವಕದಿಂದ, ಮುಂದಿನ ವರ್ಷ ಇರುವವರಾರು ?ಹೋಗುವವರಾರು? ಆ ವರ್ಷವನ್ನು ಕಂಡವರಾರು? ಇಂದೇ ನೋಡೋಣವೆಂದು ಹೋದೆ .ಎಲ್ಲೆಲ್ಲೂ ಜನಜಂಗುಳಿ ,ಕಿವಿ ಗಡಚಿಕ್ಕುವಂತೆ ಸೌಂಡ್ ಬಾಕ್ಸ್ ಗಳ ಹಾವಳಿ, ದೊಡ್ಡ ದೊಡ್ಡ ಕಟೌಟ್ಗಳು ,ಬ್ಯಾನರ್ಗಳು, ನೂರಾರು ವಾಹನಗಳ ಭರಾಟೆ ,ಎಲ್ಲಿ ನೋಡಿದಲ್ಲಿ ಯುವಕರ ದಂಡು, ಕುಣಿತ ,ಹಾರಾಟ ,ಚೀರಾಟ ,ಬಾವುಟಗಳ ಹಾರಾಟ, ಭರ್ಜರಿ !ಎಲ್ಲ ರಸ್ತೆಗಳಲ್ಲೂ ಕಾಲ್ನಡಿಗೆಯಲ್ಲಿ ಸಾವಿರಾರು ಜನ ,ಮೋಟರ್ ಬೈಕ್ಗಳಿಗಂತೂ ಲೆಕ್ಕವಿಲ್ಲ,ಸರ್ರೊ ಬರ್ರೊ  ಅಂತ ಮೈಮೇಲೆ ಯಮ ಬಂದಂತೆ ಬರುತ್ತಿದ್ದವು. ಮೈ ಜುಮ್ !ಎಂದು ಬೆಚ್ಚಿ ಬೀಳಿಸುತ್ತಿದ್ದವು. ಸಂಚಾರಿ ಪೊಲೀಸರ ಪರದಾಟ, ಹೇಗೆ ಹತೋಟಿಗೆ ತರಬೇಕು ತಿಳಿಯದ ಸ್ಥಿತಿ. ಹದಿಹರೆಯದ ಗಂಡು ಮಕ್ಕಳ ಪುಂಡಾಟಿಕೆ, ಅವರ ಮೋಟಾರ್ ಬೈಕ್ ಗಳ ಹುಚ್ಚು ಸಾಹಸ, ಹೆದರಿಕೆಯನ್ನು ಉಂಟು ಮಾಡುವಂತಿತ್ತು. ಹೆತ್ತ ತಾಯಿಗಳ ಹೃದಯದಲ್ಲಿ ಆ ನೋವು ಹೆದರಿಕೆ, ಎದೆ ಬಡಿತ ನನಗೆ ಅನುಭವವಾದಂತಹಾಯಿತು. ಮೈಮೇಲೆ ದೇವರು ಬಂದಂತೆ ಆಡುತ್ತಿದ್ದರು. ಅದೇನು ಕುಣಿತ!? ಅಬ್ಬರ ಮೈಮೇಲೆ ಪರಿವೇ ಇಲ್ಲ  ಮಕ್ಕಳು, ಮರಿ, ಹಿರಿಯ, ಕಿರಿಯರು ಹೆಂಗಸರು ಏನೋ ಗೊತ್ತಿಲ್ಲ ದೂಡಾಟ ,ನುಗ್ಗಾಟ ಶರದಿಯೋಪಾಯದ ಜನಜಂಗುಳಿ ಬರಗುಡುವ ಸಮುದ್ರದಲೆಗಳಂತೆ ಗೋಚರಿಸಿತು. ರಸ್ತೆ ತುಂಬೆಲ್ಲ ಜನ! ಜನ! ಜನ! ಇರುವೆ ನುಸುಳಲು ಜಾಗವಿಲ್ಲ. ನುಸುಳಿ ನುಸುಳಿ ನೋಡಬೇಕೆಂಬ ಕುತೂಹಲದಿಂದ ಚೆನ್ನಮ್ಮ ವೃತ್ತದ ಮಧ್ಯೆ ಬಂದೆ. ಮಧ್ಯ ವಾಸನೆ ತಾಳಿಕೊಂಡು. ನೋಡಿದರೆ? ಬರಿ ಅರ್ಥವಿಲ್ಲದ ಕುಣಿತ. ಅದೇನೊ ನಮ್ಮ ನಾಡ ವೈಭವ ಏನೂ ತಿಳಿಯಲಿಲ್ಲ. ಏನು ನೋಡಲಿ? ನಡುಕ  ಕಾಲ್ತುಳಿತಕ್ಕೆ ಸಿಗುತ್ತೇನೆನೋ ಎಂಬ ಭಯ, ಏನೂ ತಿಳಿಯಲಿಲ್ಲ. ಪಾರಾಗುವ ದಾರಿ ಕಾಣದಾಗಿ ಕ್ಷಣ ವಿಚಲಿತಳಾದೆ ,ದಂಗಾದೆ!! ಕನ್ನಡ ಪರ ಸಂಘಟನೆಗಳ ಸ್ಟೇಜ್ಗಳು, ಅಲ್ಲಿಯೂ ಕುಣಿಯುವವರ ದಂಡು, ಹಿಂಡು ,ಮುಂದಾಳುಗಳ ಕಟೌಟ್ಗಳು, ಇಕ್ಕೆಲಗಳಲ್ಲಿ ರಾರಾಜಿಸುತ್ತಿದ್ದವು. ಬೆಳಗಾವಿಯ ಜಿಲ್ಲೆಯ ಮೂಲೆ ಮೂಲೆಯಿಂದ ಜನಜಂಗುಳಿ ಹರಿದು ಬರುತ್ತಿತ್ತು. ಎಲ್ಲ ರಸ್ತೆ ಬದಿಗಳಲ್ಲಿ ವಾಹನಗಳದ್ದೇ ಭರಾಟೆ. ಆದರೆ ನನಗೆ ತಿಳಿಯಲಿಲ್ಲ ,ರಾಜ್ಯೋತ್ಸವ ಎಂದರೇನು ?ನಾಡು ನುಡಿಯ ಹಬ್ಬವೆಂದರೆ ಇದೇನಾ? ಕನ್ನಡದ ಅಭಿಮಾನವೆಂದರೆ ಇದೇನಾ? ನಮ್ಮ ಸಂಸ್ಕೃತಿಯ ನೋಟವೇ ಇದು? ಹಳ್ಳಿಗಳ ಸೊಗಡು, ನಗರಗಳ ವಿಜೃಂಭಣೆಯೇ? ನಾಡ ಹಿರಿಮೆಯೇ ?ಇದು ನಮ್ಮ ಅಸ್ಮಿತೆಗೆ ಕೊಡುವ ಗೌರವವೇ? ನಮ್ಮ ಶಕ್ತಿ ಸಾಮರ್ಥ್ಯದ ಪ್ರದರ್ಶನವೇ? ನಾಡಭಕ್ತಿಯ ಪರಾಕಾಷ್ಟೇಯೇ? ಅದ್ದೂರಿಯ ಆಚರಣೆಯೇ? ನುಡಿ ಜ್ಯೋತಿಯ ಬೆಳಕೆ ?ನಮ್ಮ ಭಾಷೆಯ ಬೆಡಗೇ? ನಾಡಿಗಾಗಿ ಹೋರಾಡಿದವರಿಗೆ ಕೃತಜ್ಞತೆಯೇ ?ಜನಪದ ಕಲೆಯ ಪ್ರದರ್ಶನವೇ? ಹಳ್ಳಿಗರ ಆರತಿಯೇ? ತಿಳಿಯದೆ ಮೂಕಳಾದೆ  ದಂಗಾದೆ.ಏನೂ ತಿಳಿಯದೆ ಮನೆಯ ದಾರಿ ಹಿಡಿದಿದ್ದೆ.

ಆದರೆ ಆಚರಣೆ ವೈಶಿಷ್ಟಪೂರ್ಣ, ಸದುದ್ದೇಶವುಳ್ಳ ಸಡಗರದೊಂದಿಗೆ ನಾಡ ಹಿರಿಮೆ, ಗರಿಮೆ ,ಭಾಷೆಯ ಸೊಗಡು ಭಾಷಾ ವಿಭಿನ್ನತೆ ,ಪ್ರದೇಶದಿಂದ ಪ್ರದೇಶಕ್ಕೆ ಆಗುವ ಪದಗಳ ಪ್ರಯೋಗ, ಉಪಯೋಗ ನಾಡಿನ ಬೆಳೆ, ಇಳೆಯ ಬೆಡಗು ನಾಡಿಗೆ ದುಡಿದವರ ಕೀರ್ತಿ ಸಾರುವ ಸ್ತಬ್ಧ ಚಿತ್ರಗಳು, ಪ್ರತಿ ಊರಿಂದ ಆ ಊರಿನ ವೈಶಿಷ್ಟತೆಯ ಕಲೆಗಳ ಪ್ರದರ್ಶನ ,ಜನಪದ ಕಲೆಗಳ ಪ್ರದರ್ಶನ, ಭಾಷಾ ವಿಭಿನ್ನತೆಯ ಸೌಂದರ್ಯ, ವೇಷ ಭೂಷಣ, ಕಲೆ ,ಕೌತುಕದ ಕ್ರೀಡೆಗಳ ಪ್ರದರ್ಶನ, ಮೆರಗು ನೀಡುವ ವಿಶೇಷ ಬಿತ್ತಿ ಚಿತ್ರಗಳ ಪ್ರದರ್ಶನ, ನಾಡು ನುಡಿಯ ಸಾರುವ ಘೋಷಣೆಗಳು, ಎಲ್ಲರೂ ಕಣ್ತುಂಬಿಕೊಳ್ಳುವಂತೆ, ಎದೆಯಲಿ ಅಚ್ಚಾಗುವಂತೆ ಶಿಸ್ತು ಬದ್ಧವಾಗಿ ,ಸಂಯಮ ತಾಳ್ಮೆಯೊಂದಿಗೆ, ಕೇಳುಗರ ಕಿವಿ ತಣಿಯುವಂತೆ ,ನೋಡುಗರು ಆನಂದಿಸುವಂತೆ, ಅಚ್ಚಳಿಯದ ನೆನಪುಗಳು ಹೃದಯದಿ ಅಚ್ಚಾಗುವಂತೆ ,ಹುಟ್ಟಿದರೆ ಇದೇ ನಾಡಲ್ಲಿ ಹುಟ್ಟಬೇಕೆನಿಸುವಂತೆ ,ಆಡಿದರೆ ನನ್ನ ನಾಲಿಗೆ ಕನ್ನಡವನಷ್ಟೇ ಆಡಲಿ ಎಂಬ ಭಾವ ಮೂಡುವಂತೆ, ಮಕ್ಕಳು ,ಮರಿ ,ಹೆಂಗಳೆಯರು ಎಲ್ಲರೂ ನಾಡಹಬ್ಬದಲ್ಲಿ ಪಾಲ್ಗೊಂಡು ಸಂತಸ ಮುಗಿಲೇರುವಂತೆ, ಸಂತಸ ಬಾನಾಡಿಗಳೊ ಮನ ಬಿಚ್ಚಿ ಹಾರುವಂತೆ , ಮಾತಾಡ್ ಮಾತಾಡ್ ಕನ್ನಡ ,ಸವಿನುಡಿಯ ಕನ್ನಡ, ಸಿರಿನುಡಿಯ ಕನ್ನಡ, ಎಂದು ಹಾಡಬೇಕೆಂದು ಮನ ಹಂಬಲಿಸುತ್ತಿತ್ತು.ಇಂತಹ ಅನನ್ಯ ಅನುಭವ ಅನುಭವಿಸುವಂತಾದರೆ ಎಷ್ಟು ಚೆನ್ನ !?ಎಂದೆನಿಸಿತು ನನಗೆ .ಆಚರಣೆಯ ಮಹತ್ವ ತಿಳಿಯಬೇಕು .ತಿಳಿಸಬೇಕು. ಸಾರಬೇಕು.ಅಲ್ಲವೆ? ಮದಗಜಗಳಂತೆ ,ವಯಸ್ಸಿನ ಇರಕಳಿ ದನಗಳಂತೆ ,ಮನಬಂದಂತೆ ಕುಣಿಯುತ ,ಕುಡಿಯುತ, ಮಾತು ವರ್ತನೆಯ ಮೇಲೆ ಹಿಡಿತವಿಲ್ಲದ ಅಟ್ಟಹಾಸ ಬೇಕೇ ,?ಎಂದೆನಿಸಿತು.

ಅಲ್ಲಿಯೇ ನನ್ನ ಆಸೆ ಆಕಾಂಕ್ಷೆ  ಮನದಿಂಗಿತ ನನ್ನ ಮನದ ತುಡಿತದ  ಕೋಪದ ಮಾತುಗಳ ಹೇಳಬೇಕೆಂದುಕೊಂಡೆ,ಆದರೆ ಯಾರಿಗೆ ಹೇಳಲಿ? ಹೇಗೆ ಹೇಳಲಿ? ನನ್ನಂಥ ಬಡಪಾಯಿಯ ಮಾತು ಕೇಳುವವರಿಹರೇ ?ಎಂಬ ಪ್ರಶ್ನೆ ನನ್ನನ್ನು ಪೆಚ್ಚು ಮೋರೆ ಹಾಕಿಕೊಂಡು ಅಲ್ಲಿಂದ ಪಾರಾಗಿ ಮನೆಗೆ ಬಂದು ಚಿಂತಿಸುವಂತೆ ಮಾಡಿತು.
.
ನಮ್ಮ ನಾಡಹಬ್ಬ ಹೇಗಿರಬೇಕು? ನಾಡು ನುಡಿಯ ಕೀರುತಿಯ ಹೇಗೆ ಸಾರಬೇಕು? ನಾವು ಇತರರಿಗೆ ಮಾದರಿಯಾಗುವಂತೆ, ಕನ್ನಡಿಗರೆಂದರೆ ಹೀಗಿರಬೇಕು ಎಂದು ತೋರುವಂತೆ ,ಭಾಷಾ ಬೆಡಗೆಂದ್ದರೆ ಇದು ಎಂದು ತಿಳಿಯುವಂತೆ, ನಾಡು ನುಡಿಯ ಉಳಿಸಲು ಬೆಳೆಸಲು ಯುವಕರು ಹೇಗೆ ಬದುಕಬೇಕು? ಹೇಗೆ ದುಡಿಯಬೇಕು? ನಮ್ಮ ತಾಯಿ ಭುವನೇಶ್ವರಿಯ ಕೀರ್ತಿ ಭುವಿಯ ತುಂಬಾ ಹರಡುವ ವ್ಯಕ್ತಿಗಳಾಗುವಂತೆ ಸಿದ್ದರಾಗಬೇಕು. ನಾಡಭಕ್ತಿ ,ನುಡಿಯ ಶಕ್ತಿ ತೋರುವ ತರುಣರು ಹಸನ್ಮುಖರಾಗಿ ತಾಯಿಯ ತೊಡೆಯ ಕಂಪನರಲ್ಲಿ ಬದುಕುವ ಕಲೆ ಕಲಿಯುವಂತಾಗಬೇಕು. ನಮ್ಮ ಹಳ್ಳಿಯ ಬದುಕು ಹಸನಾಗಬೇಕು. ವ್ಯಸನವಾಗಬಾರದು. ಯುವಕರು ನಾಡ ಶಕ್ತಿಯಾಗುವಂತಾಗಬೇಕು. ವಿವೇಕಾನಂದರು ಹೇಳಿದಂತೆ ಬಲಯುತವಾದ, ಶಕ್ತಿಯುತವಾದ ವಿಚಾರವಂತ ಯುವಕರಿಂದ ಮಾತ್ರ ಸಮೃದ್ಧ ನಾಡು ಕಟ್ಟಬಲ್ಲೆವು. ಎಂಬ ಮಾತು ಸತ್ಯವಾಗುವಂತೆ. ಗಾಂಧಿ ಕಂಡ ಕನಸು ನನಸಾಗುವಂತೆ. ನಾಡು ನುಡಿಗಾಗಿ ಹೋರಾಡಿದವರ ಸ್ತೈರ್ಯ ಧೈರ್ಯ ಮೈಗೂಡುವಂತೆ. ಜನಮನಗಳಲ್ಲಿ ನಾಡ ಶಕ್ತಿಯ ಭಕ್ತಿ ಮೈಗೂಡುವಂತೆ, ಹೆಮ್ಮೆ ಹಿರಿಮೆ ಸಂಸ್ಕೃತಿ ಒಡಗೂಡುವಂತೆ, ನೋಡಿದವರು ನಿಬ್ಬೆರಗಾಗುವಂತೆ, ಕನ್ನಡಿಗರೆಂದರೆ ಕೆಚ್ಚೆದೆಯ ಕಲಿಗಳು, ಸ್ವಚ್ಛ ಮನದ ಹುಲಿಗಳು ಎನ್ನುವಂತಾಗಬೇಕಲ್ಲವೇ? ಸ್ವತಂತ್ರವೆಂದರೆ ಸ್ವೆಚ್ಛೆಯಲ್ಲಾ ಎಂಬುದನ್ನು ಅರಿಯುವಂತಿರಬೇಕು. ಸುಸಂಸ್ಕೃತ , ಸಂಸ್ಕೃತಿಯ ಬಿತ್ತುವ ಆಚರಣೆ ಉತ್ಸವ ನಮ್ಮದಾಗಬೇಕು ಎಂದೆನಿಸಿತು ನನಗೆ.


ಡಾ ಅನ್ನಪೂರ್ಣಾ ಹಿರೇಮಠ

Leave a Reply

Back To Top