ಭಾರತಿ ಅಶೋಕ್-ಮತ್ತೆ ಬರುವಳು…????

ಕಾವ್ಯ ಸಂಗಾತಿ

ಭಾರತಿ ಅಶೋಕ್

ಮತ್ತೆ ಬರುವಳು…????

ಮಳೆ ನಿಂತ ಘಳಿಗೆಯಲಿ
ತಂಗಾಳಿ, ಭುವಿ ಘಮಲಿನಲಿ
ಸುಂದರ ಹಕ್ಕಿಗಳ ಯುವ
ಜೋಡಿಯೊಂದು ಪ್ರಣಯದಲಿ
ಹಾರಿ ಹಾರಿ ಹಾಡಿ ಮೈ ಮರೆತಿರಲು…

ಆ ಬದಿಯಿಂದೀಬದಿಗೆ
ಈ ಬದಿಯಿಂದಾಬದಿಗೆ ಮೈ ಕೈ
ಸೋಂಕಿಸಿ ರಮಿಸಿ ಮೈ ಮರೆತು ನಲಿಯುತ

ಸ್ವಚ್ಛಂದ ಗರಿ ಬಿಚ್ಚಿ
ಪ್ರಣಯದಾ(ದೂ)ಟಕೆ ಕಣ್ಸನ್ನೆಯಲೇ ಕರೆಯುತಿವೆ
ಕುಣಿದು ಕುಪ್ಪಳಿಸಿ ಅಂದ ಆನಂದ ತೋರುತ ಬಾರೆನ್ನಲು
ಪ್ರಣಯದಾಟಕೆ
ಹಿಂಬಾಲಿಸಿ ಮತ್ತೆ ಹಿಂದಿರುಗಿ
ಕಾಡಿಸಿ ಪೀಡಿಸುತ ನಲಿಯುತಿಹ ಪ್ರೇಮ ಸಲ್ಲಾಪದಿ ಮೈ ಮರೆತಿಹ ನಯನ ಮನೋಹರ ಘಳಿಗೆಯಲಿ …‌

ಎಲ್ಲಿಂದಲೋ ಬಂದ ಆಗಂತುಕ
ನಾಯೊಂದು ಜೊಡಿಯಲೊಂದು ಎತ್ತೊಯ್ಯಲು
ಏಕಾಂಗಿ ಪ್ರೇಮಿಯ ಆಕ್ರಂದನ
ನೆಲಮುಗಿಲ ಒಂದಾಗಿಸಿದೆ.

ರೆಕ್ಕೆ ಬಡಿದು ಬೇಟೆಗಾರನ
ಹಿಂಬಾಲಿಸಿ ಮೇಲೇರಿ
ಕೆಳಗಿಳಿದು ಮುಂದೆ ಹಿಂದೆ
ಅಸಹಾಯಕ ಕೂಗ ಕೂಗುತ್ತಾ

ಕಾಡಿ ಬೇಡಿ ಸೋತು ಸೊರಗಿ
ಘೀಳಿಡುತಿಹ ವಿರಹಿಯ
ಆಲಾಪ ಹೃದಯಕೆ ಬೆಂಕಿ
ಇಟ್ಟಂತಿದೆ,

ಕಾಯುತಿದೆ
ಮತ್ತೆ ನಲ್ಲೆ ಬರುವಳೆಂದು
ಕಳೆದುಕೊಂಡ ಅದೇ ಜಾಗದಲಿ

(ಕೊರೋನ ಸಮಯದಲ್ಲಿ ಕಣ್ಣಾರೆ ಕಂಡ ದೃಶ್ಯಕ್ಕೆ ಅಕ್ಷರ ರೂಪ ಕೊಟ್ಟದ್ದು)


ಭಾರತಿ ಅಶೋಕ್

2 thoughts on “ಭಾರತಿ ಅಶೋಕ್-ಮತ್ತೆ ಬರುವಳು…????

  1. ಕರೋನಾ ರೂಪದಲ್ಲಿ ಮೃತ್ಯು ಮಾನವ ಜೋಡಿಗಳಲ್ಲಿ ಒಂದನ್ನು ಹೊತ್ತೊಯ್ಯುವುದನ್ನು ಇಲ್ಲಿನ ಹಕ್ಕಿ ಜೋಡಿಯಲ್ಲಿ ಒಂದನ್ನು ನಾಯಿ ಹೊತ್ತೊಯ್ಯುವುದಕ್ಕೆ ಸಮೀಕರಿಸಿದ್ದರೆ ಕನೆಕ್ಟ್ ಮಾಡಿದ್ದರೆ ಈ ಕವನಕ್ಕೆ ಇನ್ನೂ ಹೆಚ್ಚಿನ ವ್ಯಾಪ್ತಿ ಒದಗುತ್ತಿತ್ತು.

    1. ಇಲ್ಲಿರುವ ವಾಚ್ಯ ಪ್ರಾತ್ಯಕ್ಷಿಕೆಯೇ(ಕಣ್ಮುಂದೆ ಕಂಡ ದೃಶ್ಯ) ಕರೋನಾ ದುರಿತ ಕಾಲದ ದುರಂತವನ್ನು ಕಟ್ಟಿಕೊಟ್ಟಿದ್ದೇನೆ ಸರ್

      ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

Back To Top