ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಪ್ರೀತಿಯಿಂದ ತಾನೇ
ಪ್ರೀತಿ ಇರುವುದರಿಂದ
ತಾನೇ ಹಸಿರಂಬಿನ
ಎದೆಯಂಗಳದಿ
ಮಲ್ಲಿಗೆ ಮೊಗ್ಗರಳು
ಬಿರಿಯುವುದು
ಪ್ರೀತಿ ಇರುವುದರಿಂದ
ತಾನೇ ನಿತ್ಯ ತೋಟದೀ
ಹೂವರಳುವುದು
ಪರಿಮಳ ಬೀರುವುದು
ದುಂಬಿ ಝೇಂಕರಿಸುವುದು
ಪ್ರೀತಿ ಇರುವುದರಿಂದ
ತಾನೇ ಮಧು ಮಕರಂದ
ಜೇನು ಕಟ್ಟುವುದು…
ಕಂಗಳವು ಬೆಳದಿಂಗಳ
ಅಂಗಳದಿ ಕಂಬನಿ
ಹನಿಸುವುದು….
ಪ್ರೀತಿ ಇರುವುದರಿರಿಂದ
ತಾನೇ ನಿತ್ಯ
ಕವನ ಹೆಣೆಯುವುದು
ದವನ ಅರಳುವುದು
ನಮ್ಮೆದೆ ಮಿಡಿವುದು…
ಪ್ರೀತಿ ಇರುವುದರಿಂದ
ತಾನೇ ಮಾಮರದಿ
ಕೋಗಿಲೆ ಹಾಡುವುದು…
ತಳಿರು ಚಿಗುರುವುದು..
ಕುಹೂ ಕುಹೂ ಇಂಚರದ
ಮಿಂಚು ಸಂಚಾರವು…..
ಪ್ರೀತಿ ಇರುವುದರಿಂದ
ತಾನೇ ಮೋಡ
ಜಡೆ ಬಿಚ್ಚುವುದು
ಕರಗಿ ನೀರಾಗುವುದು
ನವಿಲು ಹುಚ್ಚಾಗುವುದು…
ಪ್ರೀತಿ ಇರುವುದರಿಂದ
ತಾನೇ ಬಿತ್ತಿದ ಭಾವ
ಮೊಳಕೆಯೊಡೆದು
ಚಿಗುರಾಗುವುದು
ನೆಲದ ಪ್ರೀತಿಯಲಿ
ಮೈ ಮರೆಯುವುದು…
ಪ್ರೀತಿ ಇರುವುದರಿಂದ
ತಾನೇ ನೋವು
ನೀಡಿದರೂ ಹೂವು
ನಗುವುದು..,
ಮೌನ ಕವಿತೆಯಾಗಿ
ಮಾತಾಡುವುದು….
ಇಂದಿರಾ ಮೋಟೆಬೆನ್ನೂರ