ಬಸವ ಜಯಂತಿ ವಿಶೇಷ

ಸ್ಮಿತಾ ಪಾವಟೆ

ಶರಣ ಚರಿತಾಮೃತ

: ಕನ್ನಡಕ್ಕೆ ವಿಶಿಷ್ಟವಾದ ಸಾಹಿತ್ಯ, ವಚನ ಸಾಹಿತ್ಯ ಇದು ವಿಶ್ವಸಾಹಿತ್ಯಕ್ಕೆ ಮಹಾನ್ ಕೊಡುಗೆಯಾಗಿದೆ. ಕನ್ನಡ ಸಾಹಿತ್ಯವನ್ನು ಹೊರತುಪಡಿಸಿ ಬೇರೆ ಯಾವ ಸಾಹಿತ್ಯದಲ್ಲಿಯೂ ದೊರೆಯದ, ಕರುನಾಡಿನ ಹೆಮ್ಮೆಯ ವಚನವೆಂಬ ಸಾಹಿತ್ಯ. ವಚನಗಳು ಕನ್ನಡದ ‘ಉಪನಿಷತ್ತುಗಳೆಂದು ಹೆಮ್ಮೆಯಿಂದ ಹೇಳಬಹುದು. ‘ವಚನ’ ಎಂಬ ಹೆಸರು ಸೂಚಿಸುವಂತೆ, ಇದು ೧೨ನೇ ಶತಮಾನದಲ್ಲಿ ನಡೆ-ನುಡಿ ಒಂದಾದ ಶಿವಶರಣರ ಅನುಭಾವದ ಅಭಿವ್ಯಕ್ತಿಯಾಗಿದೆ.
ಶಿವಶರಣರಿಂದ ರಚಿತವಾದ ವಚನಗಳು ಸಾಹಿತ್ಯ ಕೃತಿಗಳಾಗಬೇಕೆಂಬುದು ಆಗಿರಲಿಲ್ಲ. ತಮ್ಮ ದಿನನಿತ್ಯದ ಜನಜೀವನವನ್ನು ಹಸನುಗೊಳಿಸುವದರ ಅನುಭವದಿಂದಾದ ವಿಶಿಷ್ಟ ಅಭಿವ್ಯಕ್ತಿ ಮಾಧ್ಯಮವಾಗಿವೆ. ಬಸವಣ್ಣನವರ ನೇತೃತ್ವದಲ್ಲಿ ನವ ಸಮಾಜಕ್ಕಾಗಿ ಮಾಡಿದ ಕ್ರಾಂತಿಯು ಅಭಿವ್ಯಕ್ತಿಯನ್ನು ಮುಖ್ಯವಾಗಿಸಿಕೊಂಡು ನುಡಿದಂತೆ ನಡೆದು ತೋರಿಸಿದರು. ಅದಕ್ಕಾಗಿ ಈ ಸರಳ ಮಾಧ್ಯಮ ಪ್ರಕಾರವಾಗಿ ವಚನ ಪ್ರಕಾರವನ್ನು ಬಳಸಿಕೊಂಡರು. ನಮ್ಮ ಶಿವಶರಣರ ವಚನಗಳು ಓದಲು ಗದ್ಯಕ್ಕೂ ಸೈ, ಹಾಡಲು ಪದ್ಯಕ್ಕೂ ಸೈ ಎನ್ನುವಂತಿವೆ. ಆಡುಮಾತನ್ನು ಸಮರ್ಥವಾಗಿ ಬಳಸಿ, ಬೆಳಸಿದವರು ನಮ್ಮ ವಚನಕಾರರು. ಹಾಗಾಗಿ ವಚನಗಳು ಕೇವಲ ಸಾಹಿತ್ಯವಾಗದೆ ಚಳುವಳಿಯ ಮುಖವಾಣಿಯಾಯಿತು.
ಎಂಟರಿಂದ ಒಂಬೈನೂರು ವರ್ಷಗಳು ಕಳೆದರೂ ನಮ್ಮ ಬಸವಾದಿ ಶಿವಶರಣರ ವಚನಸಾಹಿತ್ಯದ ಪ್ರಭಾವ ಸಮಾಜದ ಮೇಲೆ ದಟ್ಟವಾಗಿ ಈಗಲೂ ಪ್ರಸ್ತುತವಾಗಿದೆ ಮತ್ತು ಸಾರ್ವಕಾಲಿಕವಾಗಿವೆ.

    ‌ಕ್ರಾಂತಿಕಾರಿ ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ಅಂತರಂಗ ಸಾಧನೆ ಮತ್ತು ಸುತ್ತಲಿರುವ ಸಮಾಜ ಎರಡನ್ನು ನಡೆಸುವ ನಿಷ್ಠೆ ಇದ್ದವರು. ಅವರ ವಚನಗಳಲ್ಲಿ ಕಾಯಕ ನಿಷ್ಠೆ, ಆರ್ತಭಕ್ತಿ, ಆಧ್ಯಾತ್ಮಿಕ ಚಿಂತನೆ, ವೈಚಾರಿಕ ಪ್ರಖರತೆ, ಆತ್ಮಶೋಧನೆ, ಭಾವತೀವ್ರತೆ ಮತ್ತು ದೋಷ ಖಂಡನೆ ಮನೋವೃತ್ತಿಗಳನ್ನು ಕಾಣಬಹುದು. ವ್ಯಕ್ತಿಕಲ್ಯಾಣ ಮತ್ತು ಸಮಾಜಕಲ್ಯಾಣ ರೂಪಿಸಿಕೊಂಡಿರುವ ಗುರಿಯಾಗಿತ್ತು. ಸಮಾಜದ ಏಕತೆ ಮತ್ತು ಭದ್ರತೆಗೆ ಮಾರಕವಾಗಿರುವ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಕುರಿತ ತಾರತಮ್ಯ ವೃತ್ತಿ ತಾರತಮ್ಯ ಇವುಗಳನ್ನು ನಿರ್ಮೂಲನೆ ಮಾಡದೆ, ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲವೆಂದು ಅರಿತಿದ್ದರು. ಹಾಗಾಗಿ ಸಮಾಜದ ಹಿತ ಮತ್ತು ವ್ಯಕ್ತಿ ಹಿತ ಸಾಧ್ಯವಾಗಬೇಕಾದರೆ ಈ ಎಲ್ಲ ತಾರತಮ್ಯ, ಸಾಮಾಜಿಕ ಅನಿಷ್ಟಗಳನ್ನು ಬುಡಸಮೇತ ಕಿತ್ತುಹಾಕಬೇಕು. ಈ ಅಸಮಾನತೆಗೆ ಕಾರಣವಾದ ಎಲ್ಲ ಗ್ರಂಥಗಳನ್ನು ವಿಧಿನಿಷಧ ಆಚಾರಗಳನ್ನು, ಶಾಸ್ತ್ರಗಳನ್ನು ತಿರಸ್ಕರಿಸುತ್ತಾರೆ. ಈ ಕುರಿತಾದ ಒಂದು ವಚನ 

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ
ತರ್ಕದ ಬೆನ್ನ ಬಾರನ್ನೆತ್ತುವೆ, ಆಗಮದ ಮೂಗ ಕೊಯ್ಯುವೆ
ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ

 ಹೀಗೆ ತಮ್ಮ  ಶ್ರೇಷ್ಠ ಜಾತಿಯನ್ನು ಹೇಳಿಕೊಳ್ಳದೆ, ಮಾದಾರ ಚೆನ್ನಯ್ಯನ ಮಗನೆಂದು ಹೇಳುತ್ತಾ ಅಸಮಾನತೆಯನ್ನು ತಿರಸ್ಕರಿಸಿದ್ದಾರೆ. ಜಾತಿ ಎಂಬುದು ಅವರವರು ಮಾಡುವ ಕೆಲಸಗಳ ಆಧಾರದ ಮೇಲೆ ಸಂಬಂಧಿಸಿದ್ದು, ಮೇಲು-ಕೀಳು ಭಾವನೆಗಳೇ ಜಾತಿ ವರ್ಗೀಕರಣಕ್ಕೆ ಕಾರಣವೆಂದರು. ಹಾಗಾಗಿ ಅದಕ್ಕೆ ಪೂರಕವಾದ ಇನ್ನೊಂದು ವಚನ 

ಕಾಸಿ ಕಮ್ಮಾರನಾದ ಬಿಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವ
ಲಿಂಗಸ್ಥಲವನರಿಯದವನೇ ಕುಲಜನು

ಕರ್ಣದಲ್ಲಿ ಜನಿಸಿದವರು ಉಂಟೇನು ಎಂದು ಪ್ರಶ್ನೆಯನ್ನು ಕೇಳುತ್ತಾ, ಉತ್ತರವನ್ನು ತಾವೇ ಹೇಳಿದ್ದಾರೆ. ಘನವಾದ ಲಿಂಗವನ್ನು ಅರಿಯದವನೇ ಕುಲಜನೆಂದು ಹೇಳುತ್ತಾ, ಹೀಗೆ ವಚನದ ಮೂಲಕ ಜಾತಿ ಬಂದಿರುವ ಮೂಲವನ್ನು ವಿವರಿಸಿದ್ದಾರೆ. ಲಿಂಗಪೂಜೆ, ಕಾಯಕದ ಮಹತ್ವವನ್ನು ಎತ್ತಿ ಹಿಡಿದು, ಕಾಯಕದಲ್ಲಿ ನಿರತರಾಗಿರುವ ಭಕ್ತರೆಲ್ಲರೂ ಸಮಾನರೆಂದರು.
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಪ್ರಮುಖ ಮತ್ತು ಸರಳವಾದ ವಚನ

ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ
ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮನೋಲಿಸುವ ಪರಿ

 ಮಾನವನ ಉನ್ನತಿಗೆ ಕಾರಣವಾದ ಅತ್ಯಂತ ಸಮಂಜಸವಾದ ಈ ಸಪ್ತಸೂತ್ರಗಳನ್ನು ವಚನ ರೂಪದಿ ಬುದ್ಧಿ ಹೇಳುವ ರೀತಿಯಲ್ಲಿ ಅರ್ಥೈಸಿದ್ದಾರೆ. ಹಾಗೆ ಅದರ ಜೊತೆ ಧರ್ಮಕ್ಕೆ ಹೊಸ ವ್ಯಾಖ್ಯ ನೀಡಿದ್ದಾರೆ. ಧರ್ಮವೆಂಬುದು ರಹಸ್ಯದಿಂದ ಕೂಡಿದ ಕಗ್ಗಂಟಲ್ಲ, ಅತ್ಯಂತ ಸರಳವಾಗಿ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.

ದಯವಿಲ್ಲದ ಧರ್ಮವಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ
ದಯವೇ ಧರ್ಮದ ಮೂಲವಯ್ಯ ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ

    ಧರ್ಮದ ಮೂಲ ದಯವೆಂಬುದನ್ನು ಅತ್ಯಂತ ಸಂಕ್ಷಿಪ್ತವಾಗಿ ಎಲ್ಲರಿಗೂ ಅರ್ಥವಾಗುವಂತೆ ಈ ಒಂದು ಸೂತ್ರದಲ್ಲಿ ಪ್ರತಿಪಾದಿಸಿದ್ದಾರೆ. 
  ದೇವಲೋಕ, ಮರ್ತ್ಯಲೋಕ, ಪಾಪ-ಪುಣ್ಯ ಇವುಗಳು ಬೇರೆಲ್ಲೂ ಇಲ್ಲ. ನಮ್ಮ ಆಚಾರ-ವಿಚಾರಳಿಂದ ನಮ್ಮ ಸುತ್ತಲ ಸಮಾಜದಲ್ಲಿ ಸೃಷ್ಟಿಯಾಗಬೇಕೆಂದು ವಚನದ ಮೂಲಕ ಅರ್ಥೈಸಿದ್ದಾರೆ.

ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ!
ಸತ್ಯವ ನುಡಿಯುವುದೇ ದೇವಲೋಕ
ಮಿತ್ಯವ ನುಡಿಯುವುದೇ ಮರ್ತ್ಯಲೋಕ

ಆಚಾರವೇ ಸ್ವರ್ಗ, ಅನಾಚಾರವೇ ನರಕ ಕೂಡಲಸಂಗಮದೇವಾ ನೀವೇ ಪ್ರಮಾಣ

ಸ್ವರ್ಗ ಮತ್ತು ನರಕಗಳ ಕಲ್ಪನೆಯಿಂದ ಜನಸಾಮಾನ್ಯರಲ್ಲಿದ್ದ ಭಯವನ್ನು ತೊಡೆದುಹಾಕಿ, ಆಚಾರ ಮತ್ತು ಅನಾಚಾರಗಳೆ ಸ್ವರ್ಗ ನರಕಗಳಾಗಿವೆ ಎಂದು ಹೇಳಿದ್ದಾರೆ. ಹತಾಶನಾಗಿ ವಿಧಿಗೆ ತಮ್ಮನ್ನು ಅರ್ಪಿಸಿಕೊಂಡು ದು:ಖಿಯಾದವರಿಗೆ ಅನುಭವದ ನುಡಿಗಳಿಂದ ವಚನದ ಮೂಲಕ ಸಂತೈಸಿದರು.

ಪುಣ್ಯ -ಪಾಪವೆಂಬ ಉಭಯ ಕರ್ಮವನಾರು ಬಲ್ಲರಯ್ಯಾ ಇವನಾರುಂಬರು?
ಕಾಯ ತಾನುಂಬಡೆ ಕಾಯ ತಾ ಮಣ್ಣು
ಜೀವ ತಾ ಬಯಲು ಈ ಉಭಯ ನಿರ್ಣಯವ ಕೂಡಲಸಂಗಮದೇವ ನಿಮ್ಮ ಶರಣ ಬಲ್ಲ

   ಪಾಪ-ಪುಣ್ಯವೆಂಬುದನ್ನು ಯಾರು ತಿಳಿದವರು, ಅದು ದೇಹಕ್ಕೆ ಸಂಬಂಧಿಸಿದರೆ  ದೇಹ ಮಣ್ಣಾಗಿ ಹೋಗುವದು. ಇನ್ನು ಜೀವ ಬಯಲೊಳಗೆ ಬಯಲಾಗುವುದು. ಈ ಎರಡು ನಿರ್ಣಯಗಳನ್ನು ಕೂಡಲಸಂಗಮದೇವನ  ಶರಣರು ಬಲ್ಲರು ಎಂದು ಹೇಳುತ್ತಾ, ಕಾಯ ಮತ್ತು ಜೀವಕ್ಕೆ ಪಾಪ-ಪುಣ್ಯವೆಂಬುದು ತಟ್ಟುವುದಂತದಲ್ಲ ಅದನ್ನು ಮೀರಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಕಡೆಗೆ ನಾವು ಸಾಗಬೇಕೆಂದು ಹೇಳುತ್ತಾರೆ.
     ಜಗತ್ತಿನ ಸಮಸ್ಯೆಗಳಾದ ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಧರ್ಮಬಾಹಿರ ಪುರೋಹಿತಶಾಹಿ ವ್ಯವಸ್ಥೆಯೆ ಕಾರಣ ಎಂಬ ಸತ್ಯವನ್ನು ಬಸವಣ್ಣನವರು ಮನಗಂಡಿದ್ದರು. ಹಾಗಂದೇ ಅವರು ಇಷ್ಟಲಿಂಗ ಪೂಜೆ, ದೇಹವೇ ದೇಗುಲ ಮತ್ತು ಕಾಯಕವೇ ಕೈಲಾಸವೆಂಬುದಕ್ಕೆ ಮಹತ್ವ ನೀಡಿದರು.

ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೆ ಹೊನ್ನಕಳಸವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಆರ್ಥಿಕವಾಗಿ ಸಬಲರಿದ್ದವರು ಗುಡಿಗೊಪುರಗಳ ನಿರ್ಮಾಣ ಮಾಡುತ್ತಾರೆ. ಇಂಥ ಸಂಸ್ಕೃತಿಯಿಂದಾದ ಸ್ಥಾವರಲಿಂಗ ಪೂಜೆಗೆ ಬಸವಣ್ಣನವರಿಗೆ ಸಮ್ಮತಿ ಇಲ್ಲ.

ನಮ್ಮ ದೇಹದೊಳಗಿರುವ ಚೈತನ್ಯಸ್ವರೂಪಿ ಜಂಗಮರೂಪದ ಅಂತರಾತ್ಮವೇ ಸ್ಥಿರವೆಂಬುದು ಅವರ ನಿಲುವಾಗಿತ್ತು.
ಸಮಾಜದಲ್ಲಿನ ವರ್ಗ-ವರ್ಣ-ಲಿಂಗ ಬೇಧಗಳನ್ನು ಖಂಡಿಸುತ್ತಾ , ಎಲ್ಲ ಮೌಢ್ಯ ಕಂದಾಚಾರಗಳನ್ನು ವಿರೋಧಿಸಿದರು. ಸಮಾಜದ ಎಲ್ಲ ಕಟ್ಟುಪಾಡುಗಳಿಂದ ಮಹಿಳೆಯನ್ನು ನಾಲ್ಕು ಗೋಡೆ ಮಧ್ಯೆ ಉಳಿಸಿತ್ತು. ಯಾವ ಕ್ಷೇತ್ರದಲ್ಲಿಯೂ ಸ್ಥಾನಮಾನ ನೀಡದೆ ಆಕೆಗೆ ‘ಅಬಲೆ’ ಎಂಬ ಹಣೆ ಪಟ್ಟಿಯೊಂದಿಗೆ, ‘ಶೂದ್ರ’ ಪಟ್ಟವನ್ನು ಕಟ್ಟಿದ್ದರು. ಹೆಣ್ಣನ್ನು ಮನೆಯ ಒಳಗೆಲಸಕ್ಕೆ ಮಾತ್ರ ಸೀಮಿತಗೊಳಿಸಿ, ‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಆಕೆಗೆ ಸ್ವಾತಂತ್ರ್ಯವನ್ನು ನಿರಾಕರಿಸಿ ಬಂಧನದಲ್ಲಿಡಲಾಗಿತ್ತು. ಇಂಥ ಸಂದರ್ಭದಲ್ಲಿ ೧೨ನೇ ಶತಮಾನದ ಬಸವಾದಿಶರಣರ ಚಳವಳಿಯಿಂದಾಗಿ ಸ್ತ್ರೀಗೆ ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿಯೂ ಸಮಾನ ಸ್ಥಾನಮಾನ, ಬಲ-ಬೆಂಬಲ ನೀಡಿದರು. ಇದರಿಂದ ಅನೇಕ ಮಹಿಳೆಯರು ಪುರುಷರಂತೆ ವಚನ ರಚನೆಯಲ್ಲಿ ತೊಡಗಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದರು. ಸುಮಾರು ೩೫ಕ್ಕೂ ಹೆಚ್ಚು ವಚನಕಾರ್ತಿಯರು ನಮಗೆ ಕಾಣ ಸಿಗುತ್ತಾರೆ. ಹೀಗೆ ವಚನ ಸಾಹಿತ್ಯ ಮಹಿಳೆಯರಿಗೆ ಒಳ್ಳೆಯ ವೇದಿಕೆ ಕಲ್ಪಿಸಿ ಕೊಟ್ಟಿತ್ತು. ಆಗ ಪುರುಷರು ಸ್ತ್ರೀ ಪರವಾಗಿ ನಿಂತು ಮಾತನಾಡಿ, ಅವರಿಗೆ ಗೌರವ ಸಮರ್ಪಿಸಿ ವಚನಗಳನ್ನು ರಚಿಸಿದ್ದಾರೆ.
ಆದ್ಯವಚನಕಾರ ‘ಜೇಡರ ದಾಸಿಮಯ್ಯ’ನವರ ಒಂದು ವಚನ

ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವ ಆತ್ಮವು ಹೆಣ್ಣು ಅಲ್ಲ ಗಂಡು ಅಲ್ಲ
ಕಾಣಾ ರಾಮನಾಥ

 ಹೆಣ್ಣು-ಗಂಡು ಎಂಬ ಭೇದವು ದೈಹಿಕ ಲಕ್ಷಣಗಳಿಂದ ಹೊರತು ಆತ್ಮದಿಂದಲ್ಲ. ಮನಸ್ಸು, ಚಿಂತನೆ, ವಿಚಾರ ಎಲ್ಲರಿಗೂ ಒಂದೇ ಇವೆ. ಅಂತರಂಗದಿಂದ ಇಬ್ಬರು ಒಂದೇ ಎಂದು ದಾಸಿಮಯ್ಯನವರು ಹೇಳುತ್ತಾರೆ.
ಅದೇ ರೀತಿ ಶೂನ್ಯ ಪೀಠಾಧೀಶ್ವರ ಅಲ್ಲಮಪ್ರಭುಗಳು ಹೆಣ್ಣನ್ನು ಭೋಗದ ವಸ್ತುವಿಗಿಂತ ಭಿನ್ನವಾಗಿ ನೋಡುವ ಮತ್ತು ಆಕೆಯೂ ಮನುಷ್ಯಳು ಎಂಬ ದೃಷ್ಟಿಕೋನದ ವಚನ

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆ ಎಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ

ಆಧ್ಯಾತ್ಮಿಕ ಸಾಧನೆಗೆ ಹೆಣ್ಣು-ಹೊನ್ನು-ಮಣ್ಣು ಮಾಯೆಯಾಗಿ ಅಡ್ಡಿಯಾಗಿವೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಅಲ್ಲಮಪ್ರಭುದೇವರು ಮಾಯೆ ಅವುಗಳಲ್ಲಿಲ್ಲ ನಾವು ನೋಡುವ ದೃಷ್ಟಿಯಲ್ಲಿದೆ ಎನ್ನುತ್ತಾ ಮನುಷ್ಯರ ಮನದಲ್ಲಿರುವ ಆಸೆಯೇ ಮಾಯೆ, ಉಳಿದವುಗಳು ಯಾವುದು ಮಾಯೆಯಲ್ಲ ಎಂಬುದು ಅವರ ನಿಲುವು.
  ಕಾಯಕಯೋಗಿ ಶಿವಯೋಗಿ ಸಿದ್ದರಾಮರ ಒಂದು ವಚನ

ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ

ತ್ರಿಮೂರ್ತಿಗಳೆನಿಸಿದ ಶಿವ-ಬ್ರಹ್ಮ-ವಿಷ್ಣು  ತಾವೆ ಸೃಷ್ಟಿಸಿರುವ ಹೆಣ್ಣು ಶಿವನ ತಲೆಯಲ್ಲಿ ಗಂಗಾದೇವಿಯಾಗಿ ಮತ್ತು ತೊಡೆಯಲ್ಲಿ ಪಾರ್ವತಿಯಾಗಿ, ಬ್ರಹ್ಮನ ನಾಲಿಗೆಯಲ್ಲಿ ಸರಸ್ವತಿಯಾಗಿ ಮತ್ತು ವಿಷ್ಣುವಿನ ವೃಕ್ಷಸ್ಥಳದಲ್ಲಿ ಲಕ್ಷ್ಮಿಯಾಗಿ ನೆಲೆಸಿರುವರು. ಹಾಗಾಗಿ ಹೆಣ್ಣು ರಾಕ್ಷಸಿಯೂ ಅಲ್ಲ, ಬರೀ ಹೆಣ್ಣೂ ಅಲ್ಲ, ಹೆಣ್ಣು ಸಾಕ್ಷಾತ್ ಶಿವಸ್ವರೂಪಗಳು ಎಂದಿದ್ದಾರೆ ಸಿದ್ದರಾಮರು. ಹೆಣ್ಣು ಮಾಯೆಯಲ್ಲ ದೇವತಾ ಸ್ವರೂಪಿ ಎಂಬ ಭಾವ ಎಲ್ಲ ಶರಣರದ್ದು.
ವೈದಿಕ ವ್ಯವಸ್ಥೆಯು ಧಾರ್ಮಿಕ ಹಕ್ಕುಗಳಾದ ಜನಿವಾರಧಾರಣೆ ಸ್ತ್ರೀಗೆ ಮಲಿನವೆಂದು ತಿರಸ್ಕರಿಸಿತ್ತು. ಅದನ್ನು ಖಂಡಿಸಿದ ಬಸವಣ್ಣನವರು ಮಹಿಳೆಯರಿಗೆ ಇಷ್ಟ ಲಿಂಗಧಾರಣೆಯನ್ನು ಮಾಡುತ್ತಾರೆ. ಹೀಗಾಗಿ ೧೨ನೇ ಶತಮಾನದ ಎಲ್ಲ ಮಹಿಳೆಯರು ಗೌರವ, ಸ್ಥಾನಮಾನದಿಂದ ಗುರುತಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಸ್ವತಃ ವಚನಗಳ ಮೂಲಕ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ ಮತ್ತು ಸ್ತ್ರೀ ಪರವಾಗಿ ವಚನಕಾರ್ತಿಯರು ವಚನಗಳನ್ನು ರಚಿಸಿದ್ದಾರೆ. ಅವರಲ್ಲಿ ಅಕ್ಕಮಹಾದೇವಿ, ಮೋಳಿಗೆ ಮಾರಮ್ಮ, ಕಾಳವ್ವೆ, ಸಂಕವ್ವೆ, ರೇವಮ್ಮ, ನೀಲಮ್ಮ ಮತ್ತು ಅಮುಗೆ ರಾಯಮ್ಮ ಹೀಗೆ ಅನೇಕರು ಶರಣ ಚಳುವಳಿಯಲ್ಲಿ ಭಾಗವಹಿಸಿ ವಚನ ರಚಿಸಿ ತಮ್ಮ ನಿಲುವು ಅಭಿವ್ಯಕ್ತಿಸಿದ್ದಾರೆ.

     ನಮ್ಮ ಸಮಾಜಕ್ಕೆ ಅಂಟಿದ ಮತ್ತೊಂದು ಅತಿ ದೊಡ್ಡ ಶಾಪವೆಂದರೆ ಜಾತಿ ವ್ಯವಸ್ಥೆ. ಅನೇಕರು ಈ ಜಾತಿ ವ್ಯವಸ್ಥೆ ಹೋಗಲಾಡಿಸಲು ಹೋರಾಟ ಮಾಡಿ ವ್ಯರ್ಥ ಪ್ರಯತ್ನವಾಗಿದೆ. ಆ ವಿಷಯದಲ್ಲಿ ಕ್ರಾಂತಿಕಾರಿಯಾಗಿ ಹೆಜ್ಜೆ ಇಟ್ಟವರು ಬಸವಣ್ಣನವರು ಮತ್ತು ಎಲ್ಲ ಶರಣರು. ಆ ಕಾರಣದಿಂದ ಮಾದರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮೊದಲಾದವರು ಸಮಾಜದಲ್ಲಿ ಮುಖ್ಯವಾಗಿ ಗುರುತಿಸಿಕೊಳ್ಳುವಂತಾಯಿತು. ಇವರೆಲ್ಲರೂ ತಮ್ಮ ವಚನಗಳ ಮೂಲಕ ಈ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ಖಂಡಿಸಿ ವಿರೋಧಿಸಿದ್ದಾರೆ. ಬಸವಣ್ಣನವರ ಒಂದು ವಚನದಲ್ಲಿ 'ವ್ಯಕ್ತಿ ಮುಖ್ಯವೇ ಹೊರತು ಜಾತಿ ಅಲ್ಲ ಯಾರಲ್ಲಿಯೂ ಜಾತಿಯನ್ನು ಹುಡುಕಬೇಡಿ' ಎಂದು ಕೇಳಿಕೊಳ್ಳುತ್ತಾರೆ. ಹಾಗೆ ಅವರ ಇನ್ನೊಂದು ವಚನ

ವ್ಯಾಸ ಬೋವಿತೀಯ ಮಗ
ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು
ಕುಲವನರಸಿದಿರಿಂಭೋ ಕುಲದಿಂದ ಮುನ್ನೇನಾದಿರಿಂಭೋ
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ,
ಕಶ್ಯಪ ಕುಂಬಾರ, ಕೌಂಡಿನೆಂಬ ಋಷಿ
ಮೂರು ಭುವನರಿಯದೆ ನಾವಿದ ಕಾಣಭೋ
ನಮ್ಮ ಕೂಡಲಸಂಗನ ವಚನವಿಂತೆಂದುದು
ಶಿವಭಕ್ತನೆ ಕುಲಜಂಭೋ!

ಮಹಾನ್ ಋಷಿಗಳೆಲ್ಲ ಮೂಲತಃ ಬೇರೆ ಬೇರೆ ನೆಲೆಗಳಿಂದ ಬಂದಿದ್ದಾರೆ ಮುಂದೆ ಜ್ಞಾನದಿಂದ ಶ್ರೇಷ್ಠ ಮುನಿಗಳಾಗಿದ್ದಾರೆ. ಆದರಿಂದ ಕುಲದಿಂದ ಅಳತೆ ಮಾಡಬೇಡಿ ಎಂದು ಹೇಳುತ್ತಾ ಬಸವಣ್ಣನಾದಿಯಾಗಿ ಶರಣರು ಮಹಾಮಾನವತವಾದಿಗಳಾಗಿ ತೋರಿಬರುತ್ತಾರೆ ಮತ್ತು ನುಡಿದಂತೆ ನಡೆದುಕೊಂಡಿದ್ದಾರೆ. ಬಸವಣ್ಣನವರು ತಮ್ಮ ಸ್ಥಾನದಿಂದ ಬೋಧಿಸದೆ ಜನಸಾಮಾನ್ಯರ ಹಂತಕ್ಕೆ ಇಳಿದು ತಾವು ಕೆಲವರ್ಗದಲ್ಲಿ ಹುಟ್ಟಿದೆ ಎಂದು ಒಂದು ವಚನದಲ್ಲಿ ಹೇಳಿಕೊಳ್ಳುತ್ತಾರೆ.

ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ
ಸಂಗವ ಮಾಡಿದರು,
ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವನ ಸಾಕ್ಷಿಯಾಗಿ

 ಹೀಗೆ ಜಾತಿಯ ವಿಷಯದಲ್ಲಿ ವಿನಮ್ರ ಭಾವ ಬಸವಣ್ಣನವರದು. ತಾನು ಕಕ್ಕಯ್ಯ ಮತ್ತು ಚೆನ್ನಯ್ಯನ ದಾಸದಾಸಿ ಸಂಬಂಧಿತ ಕುಲದವನು ಎಂದು ಹೇಳುತ್ತಾ ಜಾತಿಪರ ಚಿಂತನೆಯ ನಿಲುವನ್ನು ಮನಗಾಣಬಹುದು. "ಕುಲಮದ, ಛಲಮದ ವಿದ್ಯಾಮದದವರ ತೋರದಿರಾ ಗುಹೇಶ್ವರಾ" ಎಂದು ಅಲ್ಲಮಪ್ರಭುಗಳು ಹೇಳಿದರೆ, "ಕುಲದಲ್ಲಿ ಶೂದ್ರನಾದಡೇನು? ಮನದಲ್ಲಿ ಮಹಾದೇವ ನೆಲೆಗೊಂಡವನೇ ಶರಣ ನೋಡಾ"ಎಂದು ಅಕ್ಕಮಹಾದೇವಿ ಹೇಳುತ್ತಾಳೆ. 
"ಹೊಲೆಯ ಹೊಲಯರೆಂದರೆ ಹೊಲೆಯರೆಂತಪ್ಪರಯ್ಯ, ಹೊಲೆಯ ಹೊರಕೇರಿಯಲ್ಲಿರುವವ, ಊರೊಳಗಿಲ್ಲವಯ್ಯ ಹೊಲೆಯ" ಎಂದು ಅಂಬಿಗರ ಚೌಡಯ್ಯ ಪ್ರಶ್ನಿಸುತ್ತಾರೆ.            

ಮನದಲ್ಲಿ ಕೆಟ್ಟ ವಿಚಾರವಿದ್ದರೆ ಅವರೇ ಹೊಲೆಯರೆಂಬುದು ಅವರ ಅಭಿಮತವಾಗಿದೆ.
ಹಾಗೆ ಬಸವಣ್ಣನವರ ಒಂದು ವಚನದಲ್ಲಿ

ಕೊಲ್ಲುವವನೇ ಮಾದಿಗ
ಹೊಲಸು ತಿಂಬುವವನೇ ಹೊಲೆಯ
ಕುಲವೇನೋ ಅವಂದಿರ ಕುಲವೇನೋ
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು

ಹೀಗೆ ಅವರು ಮಾಡುವ ಕಾರ್ಯದ ಮೇಲೆ ಅವರ ಅವರ ಕುಲ ನಿರ್ಣಯಿಸುತ್ತಾರೆ.

ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ?
ಕುಲವುಂಟೆ ಜಂಗಮವಿದ್ದಡೆಯಲ್ಲಿ?
ಎಂಜಲುವುಂಟೆ ಪ್ರಸಾದವಿದ್ದಡೆಯಲ್ಲಿ?
ಅಪವಿತ್ರ ನುಡಿಯ ನುಡಿವ ಸೂತಕವೇ ಪಾತಕ
ನಿಷ್ಕಳ, ನಿಜೈಕ್ಯ ತ್ರಿವಿಧ ನಿರ್ಣಯ
ಕೂಡಲಸಂಗಮದೇವಾ ನಿಮ್ಮ ಶರಣರಿಗಲ್ಲದಿಲ್ಲಾ

ಲಿಂಗ ಧರಿಸಿದ ಲಿಂಗಾಯತರಿಗೆ ಯಾವ ಜಾತಿಯು ಇಲ್ಲ ನಿರತನಾಗಿರುವ ಜಂಗಮನಿಗೆ ಯಾವ ಕುಲವೂ ಇಲ್ಲ ಕಾಯಕ ಮಾಡಿ ತಂದ ಪ್ರಸಾದದಿಂದ ಯಾವ ಎಂಜಲಿಲ್ಲ ಈ ಆಚರಣೆಗಳನ್ನು ಆಚರಿಸುವ ನಮ್ಮ ಶರನರಿ ಗೆ ಯಾವ ಕುಲ ಜಾತಿಗಳಿಲ್ಲ, ಕೆಟ್ಟ ಮಾತುಗಳ ಆಡುವವರೇ ಪಾಪಿಗಳು, ಪಾತಕರು ಎಂದು ಹೇಳಿದ್ದಾರೆ.
ಈ ರೀತಿ ೧೨ನೆಯ ಶತಮಾನದಲ್ಲಿ ನಮ್ಮ ಬಸವಾದಿ ಶರಣರಿಂದ ರಚನೆಯಾದ ವಚನಗಳು, ಸಮಾಜದಲ್ಲಿ ದಾಖಲಿಸಿಕೊಂಡು ಇಂದಿಗೂ ಪ್ರಸ್ತುತ ಮತ್ತು ಎಂದೆಂದಿಗೂ ಪ್ರಸ್ತುತವೆನಿಸುತ್ತವೆ.


Leave a Reply

Back To Top