ಬಸವ ಜಯಂತಿ ವಿಶೇಷ
ಯೋಗೇಂದ್ರಾಚಾರ್ ಎ ಎನ್
ಯೋಗೇಂದ್ರಾಚಾರ್ ಎ ಎನ್
ಉಳ್ಳವರು ಶಿವಾಲಯವ ಕಟ್ಟುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ
ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲ ಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ನಮಸ್ತೆ ಸ್ನೇಹಿತರೆ ಈ ವಚನ ಕೇಳುತ್ತಲೇ ನಿಮಗೆ ತಿಳಿದಿರಬೇಕು ನಾನು ಇಂದು ಯಾವುದರ ಬಗ್ಗೆ ಮಾತನಾಡಲು ಹೊರಟಿದ್ದೇನೆ ಅಂತ . ಹೌದು ಸ್ನೇಹಿತರೆ ನಿಮ್ಮ ಊಹೆ ಸರಿ ಅದು ಖಂಡಿತವಾಗಲು ಬಸವಣ್ಣನವರ ಬಗ್ಗೆ . ಸಮತೆ, ವಿಶ್ವ ಬಾಂಧವ್ಯ, ವ್ಯಕ್ತಿ ಸ್ವಾತಂತ್ರ್ಯ, ಸತ್ಯ, ಅಹಿಂಸೆ, ದಯಾಪರತೆ ಇತ್ಯಾದಿ ತತ್ವ ಸಿದ್ಧಾಂತಗಳ ಹೊತ್ತು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿಯಾಗಿ ಬೆಳೆದು ನಿಂತ ೧೨ ನೇ ಶತಮಾನದ ಮಹಾ ಪರ್ವತ ಸಮಾಜ ಸುಧಾರಕ, ಸಮಾನತೆಯ ಪ್ರವರ್ತಕ , ಒಬ್ಬ ಶ್ರೇಷ್ಠ ತತ್ವ ಜ್ಞಾನಿ ಎಂದರೆ ತಪ್ಪಾಗಲಾರದು.
ಬಸವಣ್ಣನವರು ಕ್ರಿ ಶ 1134 ಮೇ 3 ರಂದು ಬಸವನ ಬಾಗೇವಾಡಿ ಈಗಿನ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದುಬರುತ್ತದೆ. ಇವರ ಹುಟ್ಟು ಹಾಗೂ ಬಾಲ್ಯ ಸಂಪ್ರದಾಯಸ್ಥ ಮೇಲ್ವರ್ಗದ ಜಾತಿಯಲ್ಲಿದ್ದರೂ ಇವರು ತಮ್ಮ 8 ನೇ ವರ್ಷದಲ್ಲೇ ಗೊಡ್ಡು ನಂಬಿಕೆಗಳ ವಿರುದ್ಧ ಪ್ರಶ್ನಿಸುವ ಹಾಗೂ ಅವುಗಳನ್ನು ತೊಳೆದು ಹಾಕುವ ಮನಸ್ಥಿತಿ ಹೊಂದಿದ್ದರು ಎಂಬುದಕ್ಕೆ ನನಗೆ ಉಪನಯನ ಮಾಡಿ ಜನಿವಾರ ಹಾಕುವಂತೆ ಅಕ್ಕ ನಾಗಮ್ಮನಿಗೂ ಹಾಕಿ ಎಂದು ತಂದೆ ತಾಯಿಗಳಾದ ಮಾದರಸ ಮತ್ತು ಮಾದಲಾಂಬಿಕೆಯನ್ನು ಪ್ರಶ್ನಿಸಿದ್ದೇ ಸಾಕ್ಷಿಯಾಗಿದೆ. ಹೌದಲ್ವಾ ಸ್ನೇಹಿತರೆ ನಾವು ಎಷ್ಟು ಜನ ಹೀಗೆ ಯೋಚಿಸ್ತೀವಿ ಹೇಳಿ ನನ್ನ ಪ್ರಕಾರ ನಿಜವಾದ ಅಕ್ಷಯ ತೃತೀಯ ಅಥವಾ ಬಸವ ಜಯಂತಿಯ ಆಚರಣೆ ಎಂದರೆ ಬಂಗಾರ ಖರೀದಿ ಮಾಡುವುದು ಅಥವಾ ಮಣ್ಣಿನ ಬಸವನ ಮಾಡಿ ಪೂಜೆಗೈಯುವುದು ಅಲ್ಲ ಬಸವನ ಜಯಂತಿಯ ದಿನ ಅವರ ಆಚಾರ ವಿಚಾರಗಳನ್ನು ಅರ್ಥಮಾಡಿಕೊಂಡು ಅವುಗಳಲ್ಲಿ ಕನಿಷ್ಠ ಎರಡನ್ನಾದರೂ ಅನುಸರಿಸುವುದು ಹಾಗೂ ನಮ್ಮ ಆತ್ಮದಲ್ಲಿದ್ದ ಅಂಧಕಾರವನ್ನು ಅಳಿಸಿ ಬೆಳಕು ತರುವುದು ಆ ಬೆಳಕನ್ನು ಇತರರಿಗೂ ಬೀರುವುದು. ಆದರೆ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ದೇವರಿಲ್ಲ ಎಂದವನನ್ನೇ ದೇವರನ್ನಾಗಿಸಿದ್ದೇವೆ, ವ್ಯಕ್ತಿ ಪೂಜೆ ಬೇಡ ಎಂದವನಿಗೇ ಹಾರ ಹಾಕಿದ್ದೇವೆ, ಜಾತಿ ಮತಗಳನ್ನು ಕಿತ್ತೊಗೆಯ ಬಂದವನನ್ನೇ ಒಂದು ಜಾತಿಗೆ ಕಟ್ಟಿ ಹಾಕಿದ್ದೇವೆ. ಸ್ನೇಹಿತರೆ ಮನಃಸಾಕ್ಷಿಯನ್ನು ಪ್ರಶ್ನಿಸಿ ನೋಡಿಕೊಳ್ಳಿ ನಿಮ್ಮಂತರಂಗದಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳು ಜ್ವಾಲ ಮುಖಿಯನ್ನು ಎಬ್ಬಿಸಿ ಒಂದು ಕ್ಷಣ ಈ ಪ್ರಪಂಚದಲ್ಲಿ ಮನುಕುಲ ಯಾವ ಪ್ರಪಾತದಲ್ಲಿದೆ ಎಂದು ಕಣ್ಣಂಚು ಸಾಗರವಾಗುದು ಸುಳ್ಳಲ್ಲ.
ಸ್ನೇಹಿತರೇ ಬಸವಣ್ಣನವರು ಕಲಚೂರಿನ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದವರು, ಅವರ ಕಾಯಕವೇ ಕೈಲಾಸ ಎಂಬ ತತ್ವ ಸಿದ್ಧಾಂತ ಕೇವಲ ಹೇಳಿಕೆಯಲ್ಲಿರದೆ ಅನುಷ್ಠಾನದಲ್ಲಿದ್ದುದ್ದನ್ನು ಕಂಡು ಬಸವಣ್ಣನವರನ್ನು ಅರ್ಥ ಮಂತ್ರಿಯನ್ನಾಗಿಸಿದ್ದೂ ಉಂಟು. ಇದು ಅಂದಿನ ಕಾಲದಲ್ಲೇ ಕೆಲವರ ಹೊಟ್ಟೆಗೆ ಕಿಚ್ಚು ಹಚ್ಚಿದಂತಿತ್ತು. ಇವರು ಮಂತ್ರಿಯಾಗಿ ಕೇವಲ ವೈಭೋಗ ಮತ್ತರಾಗಿರಲಿಲ್ಲ ಗೆಳೆಯರೆ ಅವರು ಜನರನುರಾಗಿಯಾಗಿದ್ದರು, ಸಮಾಜ ಸುಧಾರಕರಾಗಿದ್ದರು ಇದು ಅಂದಿನ ಮೆಲ್ಪಕ್ತಿ ಜನರ ಕೆಂಗಣ್ಣಿಗೆ ಮೆಣಸಿನ ಪುಡಿ ಹಚ್ಚಿದಂತಾಗಿ ಅನೇಕ ಕತ್ತಲ ಕೈಗಳಗೆ ಸೂಪಾರಿಗಳನ್ನೂ ನೀಡಲಾಗಿತ್ತೆನ್ನಲಾಗಿದೆ. ಸ್ನೇಹಿತರೆ ಹೀಗೆ ಬಸವಣ್ಣನವರು ಸಾವಿನ ದಡದಲ್ಲೇ ನಿಂತು ನದಿಯ ಹೊಲಸನ್ನು ತಗೆಯುವ ಹಾಗೂ ನದಿಗೆ ಮಲಿನ ಸೇರದಂತೆ ನೋಡಿಕೊಳ್ಳುವ ಕಾಯಕಕ್ಕೆ ಮುಂದಾಗಿ ಶಿವ ಕೇಂದ್ರೀಕೃತ ಭಕ್ತಿ ಚಳವಳಿಗೆ ಮುಂದಾದರು ಇಷ್ಟಲಿಂಗ ಹಾರವನ್ನು ಪರಿಚಯಿಸಿ ತಾರತಮ್ಯ, ಮೂಢನಂಬಿಕೆಗಳನ್ನು ತೊಡೆದು ಹಾಕುವ ದೃಷ್ಟಿಯಿಂದ ಬಂದ ಬಂದವರಿಗೆ ಲಿಂಗಧಾರಣೆ ಮಾಡುತ್ತಾ ಹೊರಟರು. ಇದು ಸಮಾಜದ ಕೆಳವರ್ಗದವರಿಗೆ ವರ್ಷಧಾರೆಯಾದರೆ ಕೆಲವರಿಗೆ ಸುನಾಮಿಯೇ ಎರಗಿ ನಾವೆಲ್ಲಾ ಕೊಚ್ಚಿ ಹೋಗುತ್ತೇವೋ ಎಂಬ ಭಯ ಹುಟ್ಟು ಹಾಕಿತ್ತು. ಸ್ನೇಹಿತರೆ 12 ನೇ ಶತಮಾನದಲ್ಲೇ ಜಾತಿ ಮತ ಪಂಥಗಳ ಆರ್ಭಟ ರವೆಯಷ್ಟು ಎಂದುಕೊಂಡರೆ ಅದು ಈಗ ರವಿಯಷ್ಟಾಗಿದೆ ಎನ್ನಬಹುದು .
ಸ್ನೇಹಿತರೆ ಬಸವಣ್ಣನವರು ಇಷ್ಟಕ್ಕೇ ಸುಮ್ಮನಾಗಲಿಲ್ಲ ಆಧ್ಯಾತ್ಮಿಕ ಅನುಭವದ ಭವನವಾದ ಅನುಭವ ಮಂಟಪವನ್ನು ಸ್ಥಾಪಿಸಿದರು ಅದಕ್ಕೆ ತಾನು ಅಧ್ಯಕ್ಷನಾಗದೇ ಶೂನ್ಯ ಸಿಂಹಾಸನಾಧ್ಯಕ್ಷರಾಗಿ ಅಲ್ಲಮ ಪ್ರಭುಗಳನ್ನು ಸೂಚಿಸಿದರು. ಇದರರ್ಥ ಇಷ್ಟೇ ಸ್ನೇಹಿತರೆ ನಾನು ಸಮಾಜದಲ್ಲಿ ವರ್ಣ ಭೇದ ನೀತಿಯನ್ನು ಕಿತ್ತೊಗೆಯಲು ಕೇವಲ ಪ್ರತಿಪಾದಿಸುವುದಿಲ್ಲ ಅದನ್ನು ಕಾರ್ಯದಲ್ಲೂ ಮಾಡಿ ತೋರಿಸುವ ಹಾಗೂ ಸಮಸಮಾಜವನ್ನು ರೂಪಿಸುವುದೂ ಹೀಗೆ ಎಂದು. ಆದರೆ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಪೀಠವೇರಲು ಜಾತಿ ಬೇಕು , ಹಿತ ವಚನ ಕೇಳಲು ಜಾತಿ ಬೇಕು , ಜಾತಿ ಜಾತಿ ಜಾತಿ ಎಂದು ಜಾತಿ ಆಲದ ಮರದ ಬಿಳಲಿಗೆ ಜೋತು ಬಿದ್ದವರೇ ಎಲ್ಲರೂ .
ಅನುಭವ ಮಂಟಪ ಅದೊಂದು ಸುಂದರ ಆಲಯವಾಗಿತ್ತು ಯಾವುದೇ ಸಾಮಾಜಿಕ, ಆರ್ಥಿಕ, ಧಾರ್ಮಿಕ, ಲಿಂಗ ತಾರತಮ್ಯಗಳಿಲ್ಲದೇ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಅನುಭಾವಿಗಳ ತಾಣವಾಗಿತ್ತು. ಒಂದೆಡೆ ಚತುರ್ ವರ್ಣಗಳ ಗತಿ ವಿಕೇಂದ್ರೀಕೃವಾಗಿ ಚಲಿಸುತ್ತಿದ್ದರೆ ಬಸವಣ್ಣನವರು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಶಿವ ಶಿರಣರನ್ನು ಒಗ್ಗೂಡಿಸಿ ವಚನ ಸಾಹಿತ್ಯಾದಿ ಭಕ್ತಿ ಚಳವಳಿಯ ಮೂಲಕ ಕೇಂದ್ರೀಕರಿಸುವ ಹರ ಸಾಹಸಕ್ಕೆ ಟೊಂಕ ಕಟ್ಟಿ ನಿಂತಂತಿತ್ತು. ಇವರ ಅನೇಕ ವಚನಗಳು ಧ್ವಂಸಗೊಂಡವು ಅವುಗಳಲ್ಲಿ ಉಳಿದವು ಸುಮಾರು 1500 ವಚನಗಳು ಮಾತ್ರ. ಈ ಸಮಾಜ ಸುಧಾರಕ ಶ್ರೇಷ್ಠ ಆಧ್ಯಾತ್ಮಿಕ ತತ್ವ ಜ್ಞಾನಿಯನ್ನು ಅಧ್ಯಯನ ಮಾಡಿದ ಸರ್ ಅರ್ಥರ್ ಮೈಲರ್ ರವರು ಬಸವಣ್ಣನವರನ್ನು ಕರ್ನಾಟಕದ ಮಾರ್ಟಿನ್ ಲೂಥರ್ ಎಂದು ಕರೆದಿರುವುದು ಅತಿಶಯೋಕ್ತಿಯಲ್ಲ ಸ್ನೇಹಿತರೆ.
ನಮ್ಮ ಸೇವೆ ಮಾಡುವ ಬದಲು ನಮ್ಮನ್ನಾಳುವ ರಾಜಕಾರಣಿಗಳು ಅಕ್ಷಯ ತೃತೀಯ ಅಥವಾ ಬಸವನ ಜಯಂತಿ ಬಂತೆಂದರೆ ಒಂದೆಲ್ಲಾ ಒಂದು ಕಾರಣಕ್ಕೆ ಬೆಳಕಿಗೆ ಬರುತ್ತಾರೆ ಅಂಚೆ ಚೀಟಿ ತಯಾರಿಸುವುದು, ನಾಣ್ಯಗಳ ಬಿಡುಗಡೆ, ಪ್ರತಿಮೆಗಳ ಅನಾವರಣ ಎಂಬಿತ್ಯಾದಿಯಾಗಿ.
ಆದರೆ ಸ್ನೇಹಿತರೆ ನಿಜವಾದ ಬಸವನ ಜಯಂತಿ ಎಂದರೆ ಬಸವಣ್ಣನವರ ಈ ಏಳು ಅಂಶಗಳ ಕಡೆ ಗಮನ ಹರಿಸಿ ಅನುಷ್ಠಾನಗೊಳಿಸುವುದಾಗಿದೆ.
- ದೇವರು ಎಂಬುವನು ಜೀವಾತ್ಮದಲ್ಲಿದ್ದಾನೆಯೇ ಹೊರತು ಗುಡಿ ಗುಂಡಾರಗಳಲ್ಲಿಲ್ಲ.
- ಕಾಯಕವೇ ಕೈಲಾಸ , ಕೆಲಸ ಮಾಡಿಯೇ ಜೀವನ ನಡೆಸಬೇಕು.
- ಸುಳ್ಳು ಹೇಳುವುದನ್ನು , ವಂಚಿಸುವುದನ್ನು ಬಿಡಬೇಕು.
- ಪ್ರಾಣಿ ಬಲಿಯನ್ನು ನಿಷೇಧಿಸಬೇಕು.
- ಪರ ಧನ, ಪರ ಸ್ತ್ರೀ ವ್ಯಾಮೋಹದಿಂದ ದೂರವಿರಬೇಕು.
- ಜಾತಿ, ಮತ, ಲಿಂಗ ಭೇದಗಳನ್ನು ತಿರಸ್ಕರಿಸಬೇಕು.
- ದಯಯೇ ಧರ್ಮದ ಮೂಲ.
ಹೌದಲ್ವಾ ಸ್ನೇಹಿತರೆ ಈ ಜಂಜಾಟದ ಬಿಡುವಿಲ್ಲದ ಆಧುನಿಕ ಜೀವನದಲ್ಲಿ ನಮಗಾಗಿ ಸ್ವಲ್ಪ ಸಮಯ ಕೊಟ್ಟು ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣ ಹನ್ನೆರಡನೇ ಶತಮಾನದಲ್ಲಿ ಕೊಸರಾಡಿದ ಈ ಅಂಶಗಳೇ ಇಪ್ಪತ್ತೊಂದನೇ ಶತಮಾನದಲ್ಲಿ ಕೊಚ್ಚೆ ಗುಂಡಿಯ ರಚ್ಚೆಗಳಾಗಿವೆ ಎಂದರೆ ನಾವು ಎಂತಹಾ ಸಮಾಜದಲ್ಲಿದ್ದೇವೆ . ಸಮಸಮಾಜದ ಕನಸು ಕಾಣುವುದಷ್ಟೇ ಅಲ್ಲ ಸ್ನೇಹಿತರೆ ಅದಕ್ಕಾಗಿ ನಾವೆಷ್ಟು ನಮ್ಮ ಕೈಗಳನ್ನು ಚಾಚಿದ್ದೇವೆ ಅಥವಾ ಕೈಗಳನ್ನು ಜೇಬಿನಲ್ಲಿರಿಸಿ ಚುಕ್ಕಿ ಚಂದ್ರರನ್ನು ನಮ್ಮನೆ ಅಂಗಳಕ್ಕಷ್ಟೇ ಬಂದರೆ ಸಾಕೆಂದು ಬಸವಣ್ಣನ ಫೋಟೋಗೊಂದು ಹಾರ ಹಾಕಿ ಕೈ ಮುಗಿದು ವಿಭೂತಿ ಬಳಿದು ವಾಟ್ಸ್ ಆಪ್ ಫೇಸ್ ಬುಕ್ ಗಳಲ್ಲಿ ಪ್ರೊಫೈಲ್ ಪಿಕ್ ಹಾಕಿಕೊಳ್ಳುತ್ತಿದ್ದೇವೋ ಎಂಬುದು ಮುಖ್ಯ.