ಕಥಾ ಸಂಗಾತಿ
ಸುನೀತ ಕುಶಾಲನಗರ ಅವರ ಹೊಸ ಕಥೆ
ಇಂಜಿಲಗೆರೆ ಪೋಸ್ಟ್
ಸೊರಗಿ ನಡುನೀರಷ್ಟೇ ಉಳಿದು ಬಂಡೆಗಳನ್ನು ಅಮರಿಕೊಂಡು ಮಲಗಿದ್ದ ತೋಡು ತುಂಬಿ, ತುಳುಕಿ ಈಗ ಹಾಲ್ನೊರೆಯುಕ್ಕಿಸುವ ಹರಿವು. ತೋಡಿನ ದಡದ ಎತ್ತರದ ಬಂಡೆಯಲ್ಲಿ ಉದ್ದನೆಯ ಕೋಲನ್ನು ಹಿಡಿದು ಯಾವಾಗಲೂ ಒಬ್ಬರೇ ಕೂರುವ ಶಂಕ್ರಜ್ಜನನ್ನು ದಾರಿಹೋಕರೆಲ್ಲರೂ ಕೂಗಿ ಮಾತನಾಡಿಸಿಯೇ ಮುಂದಕ್ಕೆ ಹೆಜ್ಜೆ ಇಡೋರು. ಚುಟುಕಾಗಿ ಉತ್ತರಿಸುವ ಶಂಕರಜ್ಜ ಸ್ವಲ್ಪ ಮೌನಿ. ಮಾತೇ ಇಲ್ಲವೆಂದಲ್ಲ, ಸ್ವಲ್ಪ ಏರಿಸಿದರೆ ಸಾಕು, ದೇಶದ ಪ್ರಧಾನಮಂತ್ರಿಯಿಂದ ಹಿಡಿದು ಬದಲಾಗುವ ಮಂತ್ರಿಗಳ ಮಾಹಿತಿ, ಮುಂದಿನ ಚುಣಾವಣೆ ಹೀಗೆ ಭೂತ, ವರ್ತಮಾನ ಎಂದು ಬೇಕಾದಷ್ಟು ಸಮಾಚಾರಗಳನ್ನು ತುಂಬಾ ಓದಿ ತಿಳಿದುಕೊಂಡತೆ ಅನಿಸಿಬಿಡುತ್ತದೆ. ಗುಬ್ಬಿ, ಗಿಣಿ, ಪ್ರಾಣಿ, ದೇವರು, ದೆವ್ವ, ಕಾಡು ಹೀಗೆ ಅಜ್ಜನ ಬಾಯಲ್ಲಿ ಲೆಕ್ಕವಿಲ್ಲದಷ್ಟು ಕಥೆಗಳು! ಯಾವ ಮರದಲ್ಲಿ ಯಾವ ಜಾತಿಯ ಹಲಸು ಮತ್ತು ಅವು ಯಾವ ಖಾದ್ಯಕ್ಕೆ ಸೂಕ್ತ ಎಂಬುದನ್ನು ಕರಗತವಾಗಿಸಿಕೊಂಡವನೆಂದು ಎಲ್ಲರ ಮನೆಮಾತು.
ತೋಡಿನಿಂದ ನಾಲ್ಕು ಗದ್ದೆ ದಾಟಿ ಹತ್ತಿಪ್ಪತ್ತು ಮೆಟ್ಟಿಲೇರಿದರೆ ಪುಷ್ಪಾಳ ಮನೆ. ಇವಳು ಆರು ತಿಂಗಳ ಹಿಂದೆಯಷ್ಟೇ ಆ ಊರಿಗೆ ಸೊಸೆಯಾಗಿ ಬಂದವಳು. ಶಂಕ್ರಜ್ಜನನ್ನು ಕಂಡರೆ ಅವಳಿಗೆ ಅದೇನೋ ಆಪ್ತತೆ. ತಲೆ ಕಂಡರೆ ಸಾಕು, “ಎಲ್ಲಿಗೆ ಹೊರಟಿರಿ?” ಎಂದು ವಿಚಾರಿಸಿ ಚಹಾ ಕೊಟ್ಟು ಸತ್ಕರಿಸುತ್ತಾಳೆ. ಈ ಅಜ್ಜನೋ ಚಹಾ ಒಂದು ಹಂಡೆ ಸಿಕ್ಕರೂ ಕುಡಿಯುವಷ್ಟು ವ್ಯಸನಿ. ಪ್ರತಿ ದಿನ ತೋಡಿನಲ್ಲಿ ಬಟ್ಟೆ ತೊಳೆಯಲು ಬರುತಿದ್ದ ಪುಷ್ಪ ಅಜ್ಜನ ಬಾಯಲ್ಲಿ ಇರುವ ಕಥೆಗಳಿಗೆ ಕಿವಿಯಾಗುತ್ತಿದ್ದಳು. ಹಾಗಾಗಿ ಅವಳನ್ನು ಕಂಡರೆ ಅಜ್ಜನಿಗೂ ಅಕ್ಕರೆ.
ಆ ದಿನ ಸಂಜೆ ಮೆಟ್ಟಿಲು ಹತ್ತಿ ಬಂದಿದ್ದರಿಂದಲೋ, ಸ್ವಲ್ಪ ಅಮಲು ಏರಿಸಿದ್ದರಿಂದಲೋ ಮುಖ ಕೆಂಪು ಕೆಂಪಾಗಿ ‘ಪುಷ್ಪಾ,’ ಎಂದು ಕೂಗುತ್ತಾ ಅಜ್ಜ ಜಗಲಿಯಲ್ಲಿ ಕುಳಿತರು. ‘ಏನಜ್ಜಾ?’ ಎಂದು ಹೊರ ಬಂದಾಗ ಮೂಗಿನ ಕೆಳಗಿನ ಬೆವರನ್ನು ಒರೆಸಿ ಎಲೆ ಅಡಿಕೆ ಜಗಿಯುತ್ತಾ “ಎಲ್ಲಿಗೆ ಹೋಗಿದ್ರೀ? ಗೌಜು ಗದ್ದಲಮಾಡಿ ಬರುವುದನ್ನು ನೋಡಿದೆ.” ಅಜ್ಜನ ಕೆಂಪು ಕಣ್ಣಲ್ಲಿ ಕುತೂಹಲ! “ಓ ಅದಾ….?” ನೀಲ ಕುರಂಜಿ ನೋಡಲು ಹೋಗಿದ್ವಿ.
“ಮಡಿಕೇರಿಗಾ?”
“ಓಹೋ! ಇಡೀ ದೇಶದ ಕಥೆ ಹೇಳುತ್ತೀರಿ ನೀಲ ಕುರಂಜಿಯ ಬಗ್ಗೆ ಗೊತ್ತಿಲ್ವ?” ಎಂದು ಹಾಸ್ಯಮಾಡುತ್ತಾ ಹೂ ಕುಂಡದಲ್ಲಿ ಇರಿಸಿದ್ದ ನೇರಳೆ ಬಣ್ಣದ ಹೂಗಳ ಗೊಂಚಲನ್ನು ತೋರಿಸಿ, “ಇಲ್ಲಿ ನೋಡಿ ಇದೇ ನೀಲ ಕುರಂಜಿ. ಮಾಂದಲ್‌ಪಟ್ಟಿ ಮತ್ತು ಕೋಟೆಬೆಟ್ಟಕ್ಕೆ ಹೋಗಿದ್ವಿ. ಅಬ್ಬಾ! ಎಲ್ಲಿ ನೋಡಿದರೂ ನೇರಳೆ ಬಣ್ಣ ದೇವಲೋಕದಂತೆ! ಆರೇಳು ವರ್ಷಕ್ಕೊಮ್ಮೆ ಅರಳುವ ಈ ಹೂಗಳನ್ನು ನೋಡಬೇಕಾದರೆ ಇನ್ನು ಆರೇಳು ವರ್ಷ ಕಾಯಬೇಕು. ನಿಜಕ್ಕೂ ಸ್ವರ್ಗ!.” ಎಂದು ಕಣ್ಣರಳಿಸಿದಾಗ, ಹೂವನ್ನು ಕೈಯಲ್ಲಿ ಮುಟ್ಟುತ್ತಾ ಅಜ್ಜ ಕಣ್ಣು ಕಿರಿದು ಮಾಡಿ “ಓ ಇದು ಕಾರ್ವಿ ಹೂ ಅಲ್ವಾ? ಬೆಟ್ಟದಲ್ಲೇ ಹುಟ್ಟಿ ಬೆಟ್ಟದಲ್ಲೇ ಮಣ್ಣಾಗೋದು. ಮಣ್ಣು ವಾಸನೆ ಬರುವ ಹೊತ್ತಲ್ಲಿ ಇವೆಲ್ಲ ನನಗೆಲ್ಲಿ ನೆನಪು?”
“ಅಜ್ಜಾ, ಅಲ್ಲಿ ನನ್ನ ಕಾಲಿಗೆ ಜಿಗಣೆ ಕಚ್ಚಿ ರಕ್ತ ಕುಡಿದು ಡುಮ್ಮಣ್ಣ ಆಗಿಬಿಟ್ಟಿತು. ಕಿತ್ತರೂ ಬೀಳುತ್ತಿರಲಿಲ್ಲ. ಕೊನೆಗೆ ಹೇಗೋ ಉದುರಿದರೂ ರಕ್ತ ನಿಲ್ಲುತ್ತಲೇ ಇರಲಿಲ್ಲ.”
“ಅಯ್ಯೋ, ಸ್ವಲ್ಪ ಸುಣ್ಣ ಹಾಕಿದರೆ ಫಟ್ ಅಂತ ಬೀಳುತಿತ್ತಲ್ವಾ?” ಎಂದು ಹೇಳಿ ಅಜ್ಜ ಹೊರಟಾಗ, “ಅಲ್ಲಿ ಎಲ್ಲಿಂದ ಸುಣ್ಣ?” ಎಂದು ಕೇಳುತ್ತಾ ದೀಪ ಹಚ್ಚಲು ಹೊತ್ತಾಯಿತೆಂದು ಅವಳೂ ಒಳನಡೆದಳು.
ಬೆಳಗ್ಗೆ ಹನ್ನೊಂದಾದರು ಬಿಸಿಲಿನ್ನೂ ಕಾಣುತ್ತಿಲ್ಲ. ಹಾಗಂತ ಮಳೆಯೂ ಇಲ್ಲ. ತೊಳೆಯುವ ಬಟ್ಟೆಯ ಗಂಟನ್ನು ಹುಲ್ಲಿನ ಮೇಲೆ ಇಡುವಾಗ ನೆಲಕ್ಕೆ ಅಂಟಿಕೊಂಡಂತಿದ್ದ ಹಸಿರು ಹುಲ್ಲಿನ ಮೇಲೆ ಪುಟ್ಟ ಹನಿಗಳು ಚಪ್ಪರ ಕಟ್ಟಿದಂತೆ ಒತ್ತೊತ್ತಾಗಿ ಒಂದಕ್ಕೊಂದು ತಾಗಿ ನಿಲ್ಲುವಂತೆ ಆಧಾರವಾದ ಬಲೆಯಂತಹ ಪುಟ್ಟ ಪರದೆಗಳು! ಅದನ್ನು ಮೆಲ್ಲನೆ ಬೆರಳ ತುದಿಯಿಂದ ಮುಟ್ಟಿದಳು. ಅಷ್ಟರಲ್ಲಿ ಶಂಕ್ರಜ್ಜ ನೆತ್ತಿ ಮೇಲೆ ಕೈ ಇಟ್ಟು ಆಕಾಶ ನೋಡುತ್ತಾ ‘ಇವತ್ತು ಮಳೆ ಇದೆ’ ಎಂದು ಜೋರಾಗಿ ಲೆಕ್ಕಾಚಾರ ಹಾಕಿದನು.
ಇವಳು ಬಟ್ಟೆಯನ್ನು ನೀರಿಗೆ ಅದ್ದಿ ಸೋಪು ತಿಕ್ಕಿ ಉಜ್ಜುತ್ತಾ “ಅಜ್ಜಾ, ಈ ಊರು ಎಷ್ಟು ಚೆಂದ ಅಲ್ವಾ?” ಎಂದು ಕೇಳಿದ್ದೇ ತಡ ಅಜ್ಜ ಎದ್ದು ಬಂದು ಅವಳ ಹತ್ತಿರದ ಬಂಡೆಯಲ್ಲಿ ಕುಳಿತು “ಅಯ್ಯೋ, ಈಗ ಹೇಳೋದು ಏನಿದೆ? ನಮ್ಮ ಕಾಲದಲ್ಲಿ ನೋಡಬೇಕಿತ್ತು.” ಈ ಊರಿನ ಬಗ್ಗೆ ಹೇಳುವುದೆಂದರೆ ಅಜ್ಜನಿಗೆ ಹತ್ತು ನಾಲಗೆ ಎಂದು ಮನದಲ್ಲೇ ನಕ್ಕಳು. “ಹಿಂದೆ ಇಂಜಿಲಗೆರೆ ಜಂಕ್ಷನ್ ಹೇಗಿತ್ತೆಂದರೆ ಮಣ್ಣಿನ ಗೋಡೆಯ ಒಂದು ದಿನಸಿ ಅಂಗಡಿ, ಅದಕ್ಕೆ ಅಂಟಿಕೊಂಡೇ ಎರಡು ಬೆಂಚುಗಳಿದ್ದ ಒಂದು ಹೋಟೆಲ್. ಟಾರ್ ರಸ್ತೆಯಿಂದ ಕವಲೊಡೆದ ಮೂರು ನಾಲ್ಕು ಮಣ್ಣಿನ ರಸ್ತೆಗಳೂ, ರಸ್ತೆಗಳಿಗೆ ತಾಗಿಕೊಂಡೇ ಇರುವ ಬೇಲಿಯಿಂದ ಶುರುವಾಗುವ ರೋಬೆಸ್ಟಾ, ಅರೇಬಿಕಾ ಕಾಫಿತೋಟಗಳೊಳಗೆ ದಷ್ಟಪುಷ್ಟವಾಗಿ ಬೆಳೆದಿರುವ ಮರಗಳು, ಅವುಗಳಲ್ಲಿ ಹಬ್ಬಿರುವ ಕಡುಹಸಿರು ಕಾಳುಮೆಣಸು ಬಳ್ಳಿಗಳು, ಗದ್ದೆಗಳ ಮಧ್ಯದಿಂದ ಹರಿದು ಬರುವ ಈ ತೋಡು, ಹಲಸು, ಮಾವು, ಸೊಪುö್ಪ ಹಾಗೂ ಕಾಡಹಣ್ಣುಗಳಿಂದ ಕಾಲ ಕಾಲಕ್ಕೆ ಬಡವರ ಹಸಿವನ್ನು ನಮ್ಮೂರು ನೀಗಿಸುತ್ತಿತ್ತು. ದಿನಸಿ ಅಂಗಡಿಯನ್ನು ನಡೆಸುವ ಹಾಜಿಕಾಕ ಬಿಳಿಪಂಚೆ, ಬಿಳಿ ಶರ್ಟು, ಬಿಳಿಯದೇ ಟವೆಲ್ ತಲೆಗೆ ಸುತ್ತಿ ದೊಡ್ಡ ಫ್ರೇಮಿನ ಕಪ್ಪು ಕನ್ನಡಕ ಹಾಕಿ ‘ಆಜಿಕಾ’ ಎಂದೇ ಗೊತ್ತು. ಮನೆಗಳಿಗೆ ಬೇಕಾದ ವಸ್ತುಗಳ ಜೊತೆಗೆ ಬೀಡಿ, ಬೆಂಕಿಪೊಟ್ಟಣ, ಎಲೆ, ಅಡಿಕೆಯನ್ನು ಸಾಲವಾಗಿ ಕೊಡುವ ಕಾಕನಿಗೆ ವಾರಕ್ಕೊಮ್ಮೆ ಸಾಲ ತೀರಿಸಿದರೆ ಸಾಕಿತ್ತು.
ಇಂಜಿಲಗೆರೆಯ ಕೆಲವು ಶ್ರೀಮಂತ ಮನೆಗಳಿಗಷ್ಟೇ ಬರುತಿದ್ದ ಪತ್ರಿಕೆಗಳು ಹಾಜಿಕಾಕನ ಅಂಗಡಿಗೆ ಬಂದು ಅಲ್ಲಿಂದ ಪಡೆದುಕೊಂಡು ಹೋಗಬೇಕಿತ್ತು. ಅಂಗಡಿಗೆ ಮರದ ಕಂಬವೊAದಿದ್ದು ಅದಕ್ಕೆ ಕೈ ಎಟುಕುವಷ್ಟು ಮೇಲೆ ಸೀಮೆಸುಣ್ಣದ ಪೆಟ್ಟಿಗೆಯಂತಹ ಸಣ್ಣ ಪೆಟ್ಟಿಗೆಯನ್ನು ಮೊಳೆ ಹೊಡೆದು ಕೂರಿಸಿದ್ದರು. ಸಿದ್ಧಾಪುರದಿಂದ ಖಾಕಿ ಸಮವಸ್ತçದಲ್ಲಿ ಖಾಕಿ ಜೋಳಿಗೆಯ ತುಂಬಾ ಪತ್ರಗಳನ್ನು ಹೊತ್ತು ತರುವ ಅಂಚೆಯಣ್ಣ ಟೆಲಿಗ್ರಾಂ, ಮನಿಯಾರ್ಡರ್‌ನಂತಹ ತುರ್ತುಸೇವೆ ಮನೆಬಾಗಿಲಿಗೆ ತಲುಪಿಸಿ ಉಳಿದ ಕಾಗದಗಳನ್ನು ಆ ಪೆಟ್ಟಿಗೆಗೆ ಹಾಕಿ “ನೋಡಿಕೊಳ್ಳಿ” ಎಂದು ಹಾಜಿಕಾಕನಿಗೆ ಒಪ್ಪಿಸಿ ಪಕ್ಕದ ಹೋಟೆಲಿನಿಂದ ಚಹ ಕುಡಿದು ತೆರಳುತ್ತಿದ್ದ. ಅಂಗಡಿಗೆ ಬಂದವರೆಲ್ಲಾ ಆ ಪೆಟ್ಟಿಗೆಗೆ ಒಮ್ಮೆ ಕೈಹಾಕಿ ತಮಗೆ ಪತ್ರ ಉಂಟಾ ಎಂದು ಖಾತರಿಮಾಡಿಕೊಂಡು ಭದ್ರವಾಗಿ ವಾಪಾಸಿಟ್ಟು ತೆರಳಬೇಕೆಂಬುದಕ್ಕೆ ಹಾಜಿಕಾಕನ ಹದ್ದಿನ ಕಣ್ಣೇ ಸಾಕಿತ್ತು. ಯಾರಿಗೆ ಪತ್ರ ಬಂದರೂ ಪತ್ರ ಅವರ ಕೈ ಸೇರುವ ಮೊದಲೇ ಪತ್ರ ಬಂದಿರುವ ಸುದ್ದಿ ಮಾತ್ರ ಜಗಜ್ಜಾಹೀರಾಗುತಿತ್ತು.
ಪುಷ್ಪಾಳ ಕಣ್ಣುಗಳಲ್ಲಿ ಇಂಜಿಲಗೆರೆಯ ಬಗ್ಗೆ ತಿಳಿಯುವ ಉತ್ಸಾಹ ಕಂಡು ಅಜ್ಜ ಮೆಟ್ರೋ ರೈಲಿನಂತೆ ಮಾತು ಮುಂದುವರಿಸಿದ. “ಬೆಳಗ್ಗೆ ಎಂಟು ಗಂಟೆಗೆ ವಿರಾಜಪೇಟೆಯಿಂದ ಮಡಿಕೇರಿಗೆ ಹೋಗುವ ಬಿಳಿ ನೀಲಿ ಬಣ್ಣದ ಅಶೋಕ ಬಸ್ಸು ಇಂಜಿಲಗೆರೆಯ ಮೂಲಕ ಸಾಗಿ ಶಾಲೆಗೆ ಹೋಗುವ ಮಕ್ಕಳನ್ನು ತುಂಬಿ ಸಿದ್ಧಾಪುರ ಬಿಟ್ಟು ಮತ್ತೆ ಸಂಜೆ ಐದರ ವೇಳೆಗೆ ಇಂಜಿಲಗೆರೆ ಜಂಕ್ಷನಲ್ಲಿ ಇಳಿಸುವಾಗ ಗಾಳಿಯಾಡಲೂ ಜಾಗವಿರುವುದಿಲ್ಲ. ಚಿಕ್ಕ, ದೊಡ್ಡ ಮಕ್ಕಳನ್ನು ಹೊತ್ತು ಬರುವ ಬಸ್ಸಿನಿಂದ ದಡದಡನೆ ಇಳಿದು ತೋಟ, ಗದ್ದೆ, ತೋಡು ದಾಟಿ ಮನೆ ಸೇರುವಷ್ಟರಲ್ಲಿ ಸೂರ್ಯ ಮುಳುಗುತ್ತಿದ್ದ.
ಕೂಲಿ ಮುಗಿಸಿದ ಗಂಡಸರೋ, ಅಂಗಡಿಗೆ ಬಂದು ಊರಿನ ಬಿಸಿ ಬಿಸಿ ವಾರ್ತೆ ಹಂಚಿಕೊಳ್ಳುತ್ತಾ ಬೀಡಿ ಸೇದಿಯೇ ಮನೆ ಕಾಣೋರು. ಅಲ್ಲಿ ಜಮೀಲ ಕೇಶವನೊಂದಿಗೆ ಓಡಿಹೋಗಿದ್ದು, ಜ್ಯೋತಿ ಮೈ ನೆರೆದದ್ದು, ಗೋಪಾಲ ಪರೀಕ್ಷೆಯಲ್ಲಿ ಸೋತು ಅಪ್ಪನಿಗೆ ಹೆದರಿ ಯಾರಿಗೂ ಹೇಳದೆ ಊರುಬಿಟ್ಟು ಹೋಟೆಲ್ ಕೆಲಸಕ್ಕೆ ಸೇರಿದ್ದು, ಮಾಧವಣ್ಣನ ಎತ್ತು ಕೆಸರೊಳಗೆ ಹೂತು ಹೋಗಿದ್ದು, ಒಂದು ರಾತ್ರಿ ಇದ್ದಕಿದ್ದಂತೆಯೇ ಕಾಳ ಕಾಣೆಯಾಗಿದ್ದು, ರಂಗ ಕೋಳಿ ಕದ್ದಿದ್ದು ಹೀಗೆ ಕಂತೆ ಕಂತೆ ಕಥೆಗಳು.
ವರ್ಷಗಳು ಕಳೆಯುತ್ತಿದ್ದಂತೆಯೇ ಇಂಜಿಲಗೆರೆಗೊAದು ತಂಗುದಾಣವಾಗಿ ಅದರಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳಾದುವು. ಹದಿಹರೆಯದ ಹೆಣ್ಣುಮಕ್ಕಳು ಬಸ್ ಕಾಯಲು ಅನುಕೂಲವಾಯಿತು. ಹೀಗಿರುವಾಗ ಎಲ್ಲಿಂದಲೋ ಬಂದ ಭಾಷೆ ಗೊತ್ತಿಲ್ಲದ ಮಾನಸಿಕ ರೋಗಿಯೊಬ್ಬಳು ತಂಗುದಾಣದೊಳಗೆ ಸೇರಿಕೊಂಡಳು. ಏನೇನೋ ಹೇಳಿಕೊಂಡಿರುತ್ತಿದ್ದ ಆಕೆಯ ಪಕ್ಕವೇ ಸಣಕಲು ಬೆಕ್ಕಿನ ಮರಿಯೊಂದು ಮಲಗಿರುತ್ತಿತ್ತು. ದಿನಗಳು ಕಳೆಯುತ್ತಾ ಅವಳ ಮೇಲೆ ಕನಿಕರ ಬಂದು ಹೋಟೆಲಿನಲ್ಲಿ ಉಳಿದದ್ದನ್ನು ಕೊಡುತ್ತಿದ್ದರು. ಕೈ ಒಡ್ಡಿದಾಗ ಹಾಜಿಕಾಕನೂ ತಿಂಡಿ ಏನಾದರೂ ಕೊಡುತ್ತಿದ್ದುದರಿಂದ ಅವಳ ಪಾಡಿಗೆ ಅವಳು ತಂಗುದಾಣದೊಳಗೆ ಖಾಯಂ ಆದಳು. ಹುಚ್ಚಿ ಎಂದು ಕರೆಯುವ ಮಕ್ಕಳು ಅವಳನ್ನು ಹೆದರಿ ಓಡಿಹೋಗುತ್ತಿದ್ದರೂ ನಿರುಪದ್ರವಿಯಾದ ಆಕೆ ತನ್ನ ಪಾಡಿಗೆ ಇರುತ್ತಿದ್ದಳು.
“ಮತ್ತೆ ಏನಾಯಿತು?” ಅವಳಿಗೆ ಆತುರ.
“ಆ ಅಮಾವಾಸ್ಯೆಯ ರಾತ್ರಿ ಸುಮಾರು ಹತ್ತು ಗಂಟೆಯಾಗಿರಬಹುದು. ಶೌಚಕ್ಕೆ ಹೋಗಲು ಹೊರಬಂದ ಹಾಜಿಕಾಕ ಗುಳ್ಳೆನರಿಗಳ ಜೋರು ಸಿಳ್ಳೆಯ ಜೊತೆ ತಂಗುದಾಣದಿAದ ಜೋರಾಗಿ ಕಿರುಚುವ ಸದ್ದು ಕೇಳಿ ಅತ್ತ ಕಡೆ ಟಾರ್ಚ್ ಹಿಡಿದು, “ಯಾರದು?” ಎಂದು ಎತ್ತರದ ದನಿಯಲ್ಲಿ ಕೇಳಿದ್ದೇ ತಡ, ಅಲ್ಲಿಂದ ಒಬ್ಬಾತ ಓಡಿಬಿಟ್ಟ. ಬದುಕಿದೆ ಬಡಜೀವ ಎಂದು ಹೆದರಿ ಕಾಕನೆಡೆಗೆ ಓಡಿಬಂದ ಇವಳು ಪಕ್ಕದ ಹೋಟೆಲ್‌ನ ಜಗುಲಿಯ ಮೂಲೆಯಲ್ಲಿ ಕುಳಿತು ನಡುಗುತ್ತಾ ಅಳುತ್ತಿದ್ದಳು. ಮೊದಲೇ ಅವಳದು ಹರಕಲು ಬಟ್ಟೆ, ಅದೀಗ ಮತ್ತಷ್ಟು ಹರಿದು ಹೊಟೇಲಮ್ಮ ಮೈ ಮುಚ್ಚಲು ಬಟ್ಟೆಕೊಟ್ಟು ಜಗುಲಿಯಲ್ಲೆ ಮಲಗುವಂತೆ ಹೇಳಿದರು. ಮಾರನೆಯ ದಿನ ಎಲ್ಲರಿಗೂ ವಿಷಯ ತಿಳಿದು ಗುಲ್ಲೋ ಗುಲ್ಲು. ಅವಳ ಬಳಿ ಬಂದವರು ಯಾರಿರಬಹುದು? ಎಂಬ ಊಹಾಪೋಹಗಳು ಒಬ್ಬೊಬ್ಬರ ಬಾಯಲ್ಲಿ ಒಂದೊAದು ರೀತಿ. ಸಾಹುಕಾರರ ತೋಟಕ್ಕೆ ಪರ ಊರಿಂದ ಬಂದಿರುವ ಕಿತ್ತಳೆ ಹಣ್ಣು ಕಾವಲುಗಾರ ಚಂದುನೇ ಇರಬಹುದೆಂದು ಹೆಂಗಸರು ಮಾತನಾಡಿಕೊಂಡರೆ, ಬನ್ನಿ.. ಬನ್ನಿ.. ಎಂದು ಕಳ್ಳನೋಟ ಬೀರುತ್ತಾ ಎಳನೀರು ಮಾರುವ ಆ ಕುಳ್ಳನೇ ಇರಬೇಕೆಂದು ಹೆಣ್ಣುಮಕ್ಕಳು ಗುಸು ಗುಸು ಹೇಳಿಕೊಂಡರು.
ಮಾರನೆಯ ದಿನವೇ ಹಾಜಿಕಾಕ ಕೇರಳದಲ್ಲಿರುವ ಇರಿಟ್ಟಿಯ ಅನಾಥಾಶ್ರಮಕ್ಕೆ ಅವಳನ್ನು ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಕಾಕನ ನೇತೃತ್ವದಲ್ಲೇ ನಡೆದರೂ ಊರಿನವರೂ ಸಹಕರಿಸಿದರು. ಅಲ್ಲಿಗೆ ಆಕೆಯ ಕಥೆಗೆ ಸುಖಾಂತ್ಯವಾದರೂ ತುಂಬಾ ದಿನಗಳು ಎಲ್ಲರ ಬಾಯಲ್ಲೂ ಮಾತಾಗಿ, ನೆನಪಾಗಿಯೂ ಆಕೆ ಉಳಿದಳು. ಪಾಪ ಮತ್ತೆ ಏನಾದಳೋ? ಅಜ್ಜನಿಂದ ನೆನಪಿನ ನಿಟ್ಟುಸಿರು.
ಮತ್ತೆರಡು ವರ್ಷದಲ್ಲಿ ಇನ್ನೆರಡು ದಿನಸಿ ಅಂಗಡಿ, ಜೊತೆಗೊಂದು ಹೊಟೇಲ್, ಪೋಸ್ಟಾಫೀಸು, ಸೊಸೈಟಿ, ಎಸ್.ಟಿ.ಡಿ ಬೂತ್ ಸೇರಿ ಇಂಜಿಲಗೆರೆ ಪುಟ್ಟದೊಂದು ಪೇಟೆಯಾಯಿತು. ಅಲ್ಲೊಂದು ಬೋರ್‌ವೆಲ್ ಕೊರೆದದ್ದೇ ತಡ, ಇದ್ದಬದ್ದ ಗಾಡಿಗಳೆಲ್ಲಾ ನಿಲ್ಲಿಸಿ ನೀರು ಕುಡಿದು, ಜೋರಾಗಿ ಮಾತನಾಡುತ್ತಾ ಗಾಡಿಗಳಿಗೂ ನೀರು ಕುಡಿಸಿಯೇ ಹೋಗ್ತಾರೆ. ಬೋರ್‌ವೆಲ್ ಪಕ್ಕ ಒಂದು ನೀರಿನ ಟ್ಯಾಂಕು ಇದೆಯಲ್ವಾ? ಅದು ಇತ್ತೀಚಿಗೆ ಆದದ್ದು. ಆಟೋರಿಕ್ಷಗಳೆಲ್ಲಾ ಒಂದೈದು ವರ್ಷದಿಂದೀಚೆಯಷ್ಟೇ ಇಲ್ಲಿಗೆ ಬಂದದ್ದು.
ಹಾಜಿಕಾಕನ ಅಂಗಡಿಯಿAದ ಕಡ್ಲೆಮಿಠಾಯಿ, ಹುಳಿಮಿಠಾಯಿ, ಬೆಲ್ಲದ ಮಿಠಾಯಿ ತಿಂದ ಮಕ್ಕಳಲ್ಲಿ ಹಲವರು ಬೇರೆ ಬೇರೆ ಕೆಲಸಗಳಿಗೆ ಸೇರಿ ದೂರದ ಊರುಗಳಿಗೆ ಸೇರಿಕೊಂಡರು. ಕೆಲವರು ಮದುವೆಯಾಗಿ ಹೋದರು. ಗದ್ದೆಗಳೆಲ್ಲಾ ತೋಟಗಳಾದವು. ಕಾಡು ಕೂಡಾ ಸೈಟುಗಳಾಗಿ ಕಾಡಾನೆಗಳು ನಾಡಿಗೆ ನುಗ್ಗಿ ಬಂದವು. ನಮ್ಮೂರಲ್ಲೂ ಈಗ ನಮಗೆ ಜೀವದ ಭಯ! ‘ಕಾಡಾನೆ ತುಳಿದು ಸಾವು’ ಎಂಬ ವಾರ್ತೆಯಿಂದ ಜೀವ ಕೈಯಲ್ಲಿ ಹಿಡ್ಕೊಂಡೇ ಇರಬೇಕು. ಇನ್ನೂ ಎಂತೆAತಾ ಮರಗಳಿದ್ವು ಅಂತಿಯಾ? ಫಲಕೊಡುವ ಹಲಸು, ಮಾವು, ಬಾಳೆ ಎಲ್ಲವನ್ನು ಕಡಿದು ಕೆಡವಿದರು. ಉಳಿಯಲು ಕಾಡಾನೆ ಬಿಟ್ರಲ್ವಾ? ಅದೆಷ್ಟೋ ಮಕ್ಕಳು ಕದ್ದು ತಿನ್ನುತ್ತಿದ್ದ ಮತ್ತು ಊರವರೆಲ್ಲಾ ಇಷ್ಟಪಟ್ಟು ಹಂಚಿ ತಿನ್ನುತಿದ್ದ ದೊಡ್ಡ ಮಾಮರ ಒಂದಿತ್ತು. ಎಷ್ಟು ಸಿಹಿಯಾಗಿತ್ತೆಂದರೆ ನೆನದರೆ ಬಾಯಲ್ಲಿ ಈಗಲೂ ನೀರುಬರುತ್ತೆ!. ಊರಿನ ಎಷ್ಟೆಷ್ಟೋ ಸತ್ಯಕಥೆಗಳನ್ನು ಒಡಲಲ್ಲಿ ಅಡಗಿಸಿಟ್ಟಿದ್ದ ಆ ಮಾವಿನ ಮರವನ್ನು ಕೂಡ ಬಿಡಲಿಲ್ಲ ಅಂದ್ರೆ? ಎಂದಿಗೂ ಕಾಡುವ ನೋವೇ ಬಿಡು”. ಅಜ್ಜನ ಕಣ್ಣಲ್ಲಿ ನೀರು.!
“ಅಶೋಕಬಸ್ಸು ಈಗಲೂ ಇದೆ. ಆದರೆ ಶಾಲೆಯ ಮಕ್ಕಳು ಹತ್ತೋ, ಹದಿನೈದೋ ಅದರಲ್ಲಿ ಹೋಗ್ತಾರಷ್ಟೆ. ಉಳಿದವರೆಲ್ಲರೂ ಹಳದಿ ಬಣ್ಣದ ಶಾಲಾ ಬಸ್‌ನಲ್ಲಿ ಬಂದು ಇಂಜಿಲಗೆರೆ ಇಳಿಯುತಿದ್ದಂತೆಯೇ ಅವರವರ ಗಾಡಿಹತ್ತಿ ಮನೆಮುಟ್ಟುತ್ತಾರೆ. ಆದರೇನು? ದಾರಿಯಲ್ಲಿ ಸಿಗೋ ಸೀತೆ ಹೂಗಳನ್ನು ಎಣಿಸಕ್ಕಾಗುತ್ತಾ? ಕಾಡುಹಣ್ಣುಗಳು ತಿನ್ನೋಕೆಲ್ಲಿ ಸಿಗುತ್ತೆ? ಚಕೋರಗಳು ಸಿಗೋದಂತು ಕನಸೇ ಬಿಡು. ಮುಂದೆ ನಿನ್ನ ಮಗುವಿಗೂ ಕೂಡಾ ಹೀಗೆಯೇ.” ಎನ್ನುತ್ತಾ ಅಜ್ಜ ಹಾಸ್ಯಮಾಡಿ ನಕ್ಕು ಎದ್ದು ನಿಂತ.
ಪುಷ್ಪ ಹಿಂಡಿದ ಬಟ್ಟೆಗಳನ್ನು ಬಕೇಟಿಗೆ ತುಂಬುತ್ತಾ, “ಈಗ ಹಾಜಿಕಾಕ ಎಲ್ಲಿದ್ದಾರೆ?”
“ಮೈಗೆ ಹುಷಾರಿಲ್ಲ ಎಂದು ತಮ್ಮ ಊರಿಗೆ ಹೋದವರು ಮತ್ತೆ ಬಂದೇ ಇಲ್ಲ. ನಮ್ಮೂರಿಗೆ ಲಕ್ಷಣವಾಗಿದ್ದ ಅವರು ಬಾರದ ಲೋಕಕ್ಕೆ ಹೋದರೆಂದು ತಿಳಿದಾಗ ಇಡೀ ಊರೇ ಕಣ್ಣೀರಿಟ್ಟಿತು. ಏನ್ ಮಾಡೋಕಾಗುತ್ತೆ? ದೇವರು ಕರೆದಾಗ ಹೋಗಲೇಬೇಕಲ್ವಾ? ಅಂಗಡಿಯೇನೋ ಈಗ ಬದಲಾಗಿದೆ. ಆದರೇ ಹಾಜಿಕಾಕನನ್ನು ಮರೆಯಕಾಗುತ್ತಾ? “ಹಾ…! ಆದೊಂದು ಕಾಲ” ಎಂದು ಎದ್ದು ಮಾಮೂಲಿ ಕೂರುವ ಕಲ್ಲಿನೆಡೆಗೆ ನಡೆದ.
ಪುಷ್ಪ ಎಂದಿನAತೆ ಕಾಲುಜ್ಜುವ ಕಲ್ಲಿನಿಂದ ತನ್ನ ಪಾದ, ಹಿಮ್ಮಡಿಗಳನ್ನು ತಿಕ್ಕಿ ತೊಳೆದಳು. ನೀರಿನಲ್ಲಿ ತನ್ನ ಪ್ರತಿಬಿಂಬ ನೋಡುತ್ತಾ ಕುರುಂಜಿ ಹೂಗಳ ರಾಶಿ, ವರ್ಷಗಳ ಹಿಂದಿನ ಇಂಜಿಲಗೆರೆ ಒಂದರ ಹಿಂದೆ ಒಂದರಂತೆ ಕಣ್ಣ ಮುಂದೆ ಬಂದು ಮತ್ತೆ ಮತ್ತೆ ಕಾಣಲಾರಂಭಿಸಿತು. ಪೋಸ್ಟ್ ಬಾಕ್ಸ್, ಹಾಜಿಕಾಕ, ಎಲ್ಲಕ್ಕಿಂತ ಈ ಅಜ್ಜ ಕಣ್ಣಿಗೆ ಕಟ್ಟುವ ಹಾಗೆ ಹೇಳುವ ರೀತಿಯೇ ಎಲ್ಲವನ್ನು
ಕಣ್ಣಾರೆ ಕಂಡAತೆ ಮಾಡುತ್ತದೆ. ಅಜ್ಜ ನಮ್ಮತ್ತೆಗೆ ದೂರದ ಸಂಬಂಧದಲ್ಲಿ ಅಣ್ಣನಾಗಬೇಕಂತೆ. ತನ್ನ ಗಂಡನನ್ನು ಕಂಡರೇ ಇವರಿಗೆ ವಿಶೇಷ ಪ್ರೀತಿ. ತನ್ನ ಗಂಡನೂ ಆಗಾಗ್ಗೆ ಸಣ್ಣ ಬ್ರಾಂದಿ ಬಾಟಲ್ ತಂದುಕೊಡ್ತಾರೆ. ಅದಕ್ಕೆ ಇರಬೇಕು, ತನ್ನೊಂದಿಗೂ ಇಷ್ಟು ವಿಶ್ವಾಸ. ಅಜ್ಜನ ಹೆಂಡತಿಗೆ ಕೀಲುನೋವಿನಿಂದ ತಿರುಗಾಡಲು ಕಷ್ಟವಂತೆ. ಮನೆಯಲ್ಲಿ ಎಲ್ಲಾ ಕೆಲಸ ಇವರೇ ಮಾಡೋದಂತೆ. ‘ಸ್ನೇಹಮಯೀ ಅಜ್ಜ’ ಎಂದು ಅವರತ್ತ ಕಣ್ಣಾಯಿಸಿದಾಗ ಶಂಕ್ರಜ್ಜ ಮಳೆ ಬರುವ ಸಾಧ್ಯತೆಯನ್ನು ಗಮನಿಸುವಂತೆ ಆಕಾಶ ನೋಡುತ್ತಿದ್ದ.
ಸುನೀತ ಕುಶಾಲನಗರ
ಧನ್ಯವಾದಗಳು ಸಂಗಾತಿ.
ದಯವಿಟ್ಟು ಸುನೀತಾ ಕುಶಾಲನಗರ ಅವರ ಸಂಪರ್ಕ ಸಂಖ್ಯೆ ನೀಡಿ.
ಚಂದದ ಕಥೆ ಸುನೀತ
ಸಮತಾ
ತುಂಬಾ ಚೆನ್ನಾಗಿದೆ ಸುನಿತಾ
ತುಂಬಾ ಚೆನ್ನಾಗಿದೆ ಅಕ್ಕ
ಇಂಜೀಲ ಗೆರೆಯನ್ನು ನೋಡಿ.ಬಂದಂತಾಯಿತು ಅಷ್ಟು ಚೆನ್ನಾಗಿ ಬರೆದಿದ್ದೀರ ಸುನೀತ madam
ತುಂಬಾ ಚೆನ್ನಾಗಿದೆ,ಅದಕ್ಕಿಂತ ನಮ್ಮೂರು ಇಂಜಲಗೆರೆಯ ಕಥೆ.❤️
ಅಜ್ಜನ ಮಾತಿನಲ್ಲಿ ಇಂಜಿಲಗೆರೆಯ ಇತಿಹಾಸವನ್ನು ಚೆನ್ನಾಗಿಯೇ ಹೇಳಿಸಿ ಸ್ಥಳಪರಿಚಯ ನೀಡಿದ್ದಾರೆ. ಶುಭಾಶಯಗಳು.