ಅಂಕಣ ಸಂಗಾತಿ

ಸಕಾಲ

ಈಗೆಲ್ಲ ಬರಿ ನೆನಪು

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ

ಮಳೆ ಸುರಿಸಿ ಹಗುರಾದ ಮುಗಿಲಿನಂತೆ….ಕವಿ ಎಚ್. ಎಸ್.ವಿ ರ ಕವಿತೆಯ ಸಾಲುಗಳು

 ಪದೇ ಪದೇ ನೆನಪಾಗಿ  ಇರೋದಾದ್ರು ಹ್ಯಾಂಗ ಅನ್ನುವ ಚಿಂತಿ ಕಾಡ್ತದ.ಭೂಮಿ ಮ್ಯಾಲೆ ಹುಟ್ಟಿದ ಪ್ರತಿಯೊಂದು ವ್ಯಕ್ತಿಗೂ ತನ್ನದೇ ಆದ ಪ್ರಪಂಚವನ್ನು ಸೃಷ್ಟಿಸಿ ಪ್ರಕೃತಿಯ ಮಡಿಲಲಿ ಕಟ್ಟಿಕೊಟ್ಟದಂತಹ ಅಮೂಲ್ಯ ಜನ್ಮವಿದು.ಇದರ ಬಗ್ಗೆ ಅಸಡ್ಡೆ ಬ್ಯಾಡ. ಇದ್ದಷ್ಟ ದಿನ ಪಂಚಭೂತಗಳಿಗೆ ಋಣಿಯಾಗಿ ಬದಕಬೇಕು.ಕೊನೆಗೆ ಈ ದೇಹ ಇದರಾಗ ಲೀನಾಗೋದು ಮರಿಬ್ಯಾಡ ಕೋತಿ ಎಂದು ಗಲ್ಲ ಹಿಂಡಕೋತ ಅಜ್ಜಿ ಯಾವಾಗಲೂ ಹೇಳತಿರತಾಳ.ಅಜ್ಜಿ ಮಾತಿಗೆ ಹು ಹು ಅಂತ ತಲಿ ಅಲ್ಲಾಡಿಸಿಕೊಂಡು ನೀ ಹೇಳೊದ ಖರ ಐತಿ ಅಂತ ಅಜ್ಜಿನ ಪುಸಲಾಯಿಸಿ ಅಲ್ಲಿಂದ ಓಡೋದೊಂದೆ ನನ್ನ ಗುರಿ.ಅಷ್ಟ ದೊಡ್ಡ ದೊಡ್ಡ ಮಾತು ಅರ್ಥ ಆಗಬೇಕಲ್ಲ ನನಗ ಕಾಲಿಗೆ ಬುದ್ದಿ ಹೇಳಿದ್ರ,ಅಜ್ಜಿಯೇನು ಮಬ್ಬಾ? ಕಾಲೊಡಿದ್ರೆ, ಕೈಗೆ ನೀಳಕೇಶರಾಶಿಯ ಜುಟ್ಟು ಅವಳ ಕೈಯಲಿ,ಅದ ಹಿಡಿದೆಳೆದು ಕಾಲಸಂದಿಯಲ್ಲಿ ಹೆರಳ ಮ್ಯಾಲೆ ಕಟ್ಟಿಸಿಕೊಳ್ಳೊದು ಬಿಟ್ಟು ಹಾಂಗೆ ಓಡತಿಯಲ್ಲ ಅನ್ನುವಾಗ ತಪ್ಪಗಾಗುವ ಸರದಿ ನನ್ನದು. ಏನೇ ಟಾಪಿಕ್ ಇದ್ದರೂ ಮೂಲ ವಿಷಯಕ್ಕ ಬರದೆ ಹೋಗೊಳಲ್ಲ.ವಯಸ್ಸಾದವರೆಂದು ಕಡೆಗಣಿಸುವಂತಿ ಲ್ಲ ನಮ್ಮಜ್ಜಿ ಗಟ್ಟಿಗಿತ್ತಿ ಅಜ್ಜ ಸತ್ತ ಮೇಲೆ ಐದು ಮಕ್ಕಳ ಹೊಟ್ಟೆ,ಬಟ್ಟೆಗಾಗಿ ಹಗಲಿರುಳು ದುಡಿದವಳು.ಹೊಲ ಮನಿ ಕೆಲಸ ಮಾಡಕೋತ ಎಲ್ಲರ ಬದುಕಿಗೆ ದಾರಿ ತೋರಿದವಳು.ಇನ್ನು ಕಣ್ಣಿಗೆ ಚಸಮಾ ಧರಿಸದೆ ನಮ್ಮ ಕೀಟಲೆಗಳನ್ನು ಬಡದ ಬಾಯಿಗೆ ಹಾಕೊಂಡು ಹೆದರಿಸುವ ಅಜ್ಜಿಯೆಂದರೆ ಗನ್ ಮ್ಯಾನ್ ಥರ.ಪಾಪ‌ ನಮ್ಮಜ್ಜ ಈ ಅಜ್ಜಿಗೆ ಹೆದರೆ ಗೊಟಕ್ ಅಂದಿರಬೇಕು ತಮಾಷೆ ಮಾಡಿದಾಗೆಲ್ಲ ಹಿರಿಜೀವ ಕಣ್ಣೀರು ತುಂಬಿ ಮೌನವಾಗತಿತ್ತು.ಹೌದ ನೋಡು ನನಗಿಂತ ಅವರಿದ್ದರೆ ಚೆಂದಿತ್ತು ಅನ್ನುವಾಗ ಯಾಕಾದರೂ ಕಾಡಿದೆನೋ ಎಂಬ ಮರುಕಬೇರೆ.

ಮನೆಯಲ್ಲಿ ಅವರಿದ್ದರೆ ಮನೆಗೊಂದು ಕಳೆಯೆಂಬುದು ನನಗರಿವಾಗಿದ್ದು,ಅಜ್ಜಿ ಖಾಲಿ ಕುಂದ್ರಂಗಿಲ್ಲ.ಈಚಲ ಮರದ ಎಲೆಗಳಿಂದ ಚಾಪೆಹೆಣೆಯುವುದನ್ನು ಕಂಡಾಗ ಎಷ್ಟೋ ಸಲ ಅಜ್ಜಿ ನಿನಗ ಕ್ಯಾಮೆ ಇಲ್ಲೇನು? ಇದ್ಯಾಕ ಮಾಡತಿಬಿಡು ಅಂದಾಗ ಕಿವಿಹಿಂಡಿ ಕುಂದ್ರಿಸಿಕೊಂಡು, ಹಳೆ ಬಟ್ಟೆಗಳಿಂದ ಕೌದಿ ಹೊಲಿಯುವ ವಿಧಾನ ಕಲಿಸುತ್ತಿದ್ದಳು.ದೇವರ ಪೂಜೆ,ಲಿಂಗ ಪೂಜೆ,ಹಬ್ಬ ಹರಿದಿನಗಳ ಮಹತ್ವ,ಉಪವಾಸ, ಒಂದೊಪ್ಪತ್ತು ಹೀಗೆ ಎಲ್ಲರಿಗೂ ಒಂದೊಂದು ಹವ್ಯಾಸ ಇರತದ ನನಗ ಓದಾಕ, ಬರಿಯಾಕ ಬರಂಗಿಲ್ಲ ಆದ್ರ ಜೀವನ ನಡಸಾಕ ಏನಬೇಕು ಏನ್ ಬ್ಯಾಡ ಅನ್ನೊದು ಕಲತಿನಿ.ಹಸಿವು ಕಲಸ್ತದ ಮೊದಲ ಅದನ್ನು ಕಲಿಬೇಕು‌. ನಿಮ್ಮಪ್ಪ, ನಿಮ್ಮವ್ವ ಪಟ್ಟ ಕಷ್ಟ ನಿನಗ ಗೊತ್ತಿಲ್ಲ.ಒಂದೊಂದು ತುತ್ತಿಗೂ ನೆತ್ತಿ ಸುಟ್ಟ ವ್ಯಾಳೆ ಯಾರಿಗೂ ಬೇಡ. ಜೀತದಾಳಿಗಿಂತ ಕಡೆಯದಾಗಿ ದುಡಿದವರು.

ನಿಮ್ಮ ಬದುಕು ಹಿಂಗಾಗದಿರಲಿ ಅಂತ.ಅದಕ ಕಸದಿಂದ ರಸ ಮಾಡಿದ್ರ ಅಲ್ಪಸ್ವಲ್ಪ ಆಧಾರ ಆದಿತು. ಬದುಕಿರುವವರೆಗೂ ಇನ್ನೊಬ್ಬರಿಗೆ ಹೊರೆಯಾಗದ ರೀತಿಯಲ್ಲಿ ಬದುಕಬೇಕು ಕಲಿಬಾಯಿಲ್ಲೆಯೆನ್ನುತ್ತ ಕವಡಿಮಟ್ಟಿ ಕಾಶಿಬಾಯಿಯ ವೃತ್ತಾಂತದ ಜನಪದ ಗೀತೆಗಳನ್ನು ಹೇಳುವಾಗ ಅಬ್ಬಾ ಅನಿಸಿತ್ತು.

ಸೋಬಾನೆ ಪದ,ಬಿಸುಕಲ್ಲಿನ ಪದ,ಆಸರಕಿ ಬ್ಯಾಸರಕಿ ಹಾಡುಗಳನ್ನು ಹೇಳುವಾಗ ಅರೇ ನಮ್ಮಜ್ಜಿ ಬಾಳ ಶ್ಯಾಣೆ ಅದಾಳ‌.ನಾನು ಧ್ವನಿಗೂಡಿಸುವಾಗ, ಖುಷಿಯೋ ಖುಷಿ. ನವಧ್ಯಾನ್ಯಗಳ ಬಳಕೆ, ಬುತ್ತಿಯೂಟದ ಮಹತ್ವ.ನಾನು ಇನ್ನು ಕಲಿಯುವುದು ಬಾಕಿ ಇದೆ ಅನ್ನಿಸಿದ್ದು ಆಗಲೇ.ಅಜ್ಜಿ ಅನುಭವದ ಮೂಟೆಯೆಂದರೆ ತಪ್ಪಾಗದು.

ಹೊರಗಡೆಯಿಂದ ಮನಿಗೆ ಬಂದ ಕೂಡಲೆ ಒಮ್ಮೆಲೆ ಒಳ ಬರೋ ಹಾಗಿಲ್ಲ, ಕೈಕಾಲ ತೋಳಕೊಂಡೆ ಬರಬೇಕು.ಬಾಗಲದಾಗ ಗುರಖಾ ಕುಂತಂಗ ಕುಂತಿರತಿದ್ದ ಅಜ್ಜಿಗಾದ್ರೂ ಹೆದರುವ ಪ್ರಸಂಗ.ಅವ್ವ ಯಾವಾಗಲೂ ಅಜ್ಜಿಪರ‌ ಯಾಕಂದ್ರ‌ ಅವಳ ಮಗಳು.ಕೂಲಿ ಕೆಲಸ ಆದ್ರೂ,ವರ್ಷಕ್ಕ ಮೂರಜೊತೆ ಅಂಗಿ ಇದ್ರೂ ನಾನ ರಾಜಕುಮಾರಿಯಂತ ತಗಡಿನ ಮನಿಯಾಗ ಮೆರಿತಿದ್ದವಳು.ಆಡಂಬರದ ಬದುಕು ಗೊತ್ತಿಲ್ಲ.ರವಿವಾರ ಬಂತಂದ್ರ ತಲಿಮ್ಯಾಲೆ ಒಂದ ಪುಟ್ಟಿ ಇಟಗೊಂಡು ಓಣಿ ಓಣಿ ಸಗಣಿ ತರೋದು ಕಡ್ಡಾಯ. ತಂದ ಸರಣಿಯಲ್ಲಿ ‌ಕುಳ್ಳು ಬಡಿಯೋದು ಅಜ್ಜಿ,ಅವ್ವನ ಕಾಯಕ.ಗೋಡೆ ತುಂಬ ಅಂಗೈಯಗಲ ಭರಣಿ ತಟ್ಟಿ ಅವು ಒಣಗಿದ ಮೇಲೆ ಕೂಡಿಟ್ಟು ಒಲಿ ಹಚ್ಚಾಕ ಸುಲಭ ಸಾಧನವಾಗಿ ಬಳಸುವುದು ರೂಢಿ.ಇದರಿಂದ ಮನಿಯಾಗ ಹುಳಾ ಹುಪ್ಪಡಿ,ಸೊಳ್ಳೆಗಳ ಕಾಟ  ಇರತಿರಲಿಲ್ಲ ಅನ್ನೊದು ನನಗಾಗ ಗೊತ್ತಿರಲಿಲ್ಲ.ನನಗ ಮುಜುಗರವಾದರೂ ಒಂದು ರೂಪಾಯಿ ಆಸೆಗೆ ಸಗಣಿ ಆಯುವ ಕೆಲಸ ಒಪ್ಪಿದ್ದೆ.ನಮ್ಮ ಮನಿಗೆ ಒಳಿತಾಗುವ ಕೆಲಸ ನ್ಯಾಯಯುತವಾಗಿ ಇದ್ದಾಗ ಹೆದರಬಾರದೆಂದು ಅವ್ವ ಆಗಾಗ ಹೇಳೋದು ದಿಟವೆನಿಸಿತ್ತು.

ಅಜ್ಜಿ ಊರಿಗೆ ಹೊಂಟ ನಿಂತರೆ ಬ್ಯಾಸರ ಆಗೋದು. ಅವಳಿಗೂ ಬೇಸರ ಸ್ಪಲ್ಪ ಬದಲಾವಣೆ ಬೇಕೆಲ್ಲ ಅನಿಸಿತ್ತು.ಪಾಪ ಅದ್ಯಾವ ಗಳಿಗೆಗೆ ಊರಿಗೆ ಹೋದವಳು ಮರಳಿ ಊರಿಗೆ ಬರಲಿಲ್ಲ.ಅವಳು ತನ್ನ ಕೊನೆಯುಸಿರು ಇರೋತನಕ ಅನಾರೋಗ್ಯಕ್ಕೆ ಒಳಗಾಗದವಳು.ಯಾರ ದೃಷ್ಟಿ ತಾಗಿತೋ ಹೃದಯ ಮಿಡಿತ ಒಮ್ಮೆಲೆ ನಿಂತು ಪ್ರಾಣ ಪಕ್ಷಿ ಹಾರಿಹೋಯಿತೆಂಬ ಸುದ್ದಿ ಬರಸಿಡಿಲಿಗೂ ಹೆಚ್ಚು ಅಬ್ಬರಿಸಿದಂತಾಗಿತ್ತು.ತೊಂಬತ್ತು ವಯೋಮಾನದ ವ್ಯಕ್ತಿ ಅಸಹಜ ಸಾವಿಗೆ ತುತ್ತಾದಾಗ ನೋವೆನಿಸಿತು.

ಅಭೂತಪೂರ್ವ ಮಹಿಳೆ,ಅವಳನ್ನು ಕಂಡರೆ ನಮ್ಮಪ್ಪ ಕೂಡ ಹೆದರತ್ತಿದ್ದ.ಯಾಕಂದ್ರ ಖಡಕ್ ಉತ್ತರದವಳು. ತಲೆತಗ್ಗಿಸಿ ನಡದು ಗೊತ್ತಿಲ್ಲ.ಶಾಲೆ ಗುಡಿಗೆ ಗಂಡ ಮಕ್ಕಳನ್ನು ಕಳಿಸಿದ್ದಳು,ಹೆಣ್ಣ ಮಕ್ಕಳಿಗೆ ಮಾತ್ರ ಮನಿ ಕೆಲಸ ಕಡ್ಡಾಯ,ಶಾಲಿ ಅಷ್ಟರಲ್ಲೇ ಕಾರಣ ಗಂಡನ ಮನಿಗೆ ಹೋಗೋರು ಪಾಪ ದುಡಿಯವಳು ಒಬ್ಬಳೇ ಆಗಿದ್ದರಿಂದ ಇದ್ದುದರಲ್ಲೆ ಸಂಭಾಳಿಸುವುದಕ್ಕೆ ಫೇಮಸ್.ದುಡಿದಷ್ಟು ಗಟ್ಟಿ ಮುಟ್ಟಾಗಿ ರೊಟ್ಟಿಯಂತೆ ಹಗುರಾಗಿದ್ದವಳು ಅಚಾನಕ್ಕಾಗಿ ಸತ್ತಳೆಂಬುದು ಯಾರಿಗೂ ಕರಗಿಸಿಕೊಳ್ಳಲಾಗದ ವಿಷಯ.

ಬದುಕ ಕಟ್ಟಲು ಏನು ಬೇಕು? ನುಚ್ಚಿನುಂಡೆಯ ತಿಂದು ಕಟ್ಟಿನ ಸಾರ ಕುಡಿದು,ಒಣರೊಟ್ಟಿಯ ನೀರಲ್ಲಿ‌ನೆನೆಸಿ ತಿನ್ನುವುದು, ಒಣಖಾರ ಉದುರಿಸಿ ನವಣೆಯಕ್ಕಿಯನ್ನ ತಿನ್ನುವ ಕಾಯ,ಹಾಕರಕಿ ಸೊಪ್ಪು,ಹುಂಚಿಹಿಂಡಿ, ಪುಂಡಿಪಲ್ಯ,ಅಗಸಿಚಟ್ನಿ,ಗುರೆಳ್ಳಖಾರ,ಶೇಂಗಾ ಚಟ್ನಿ ಎಳ್ಳಯುಂಡಿ,ಬಾಣ,ರೊಟ್ಟಿ, ಯಪ್ಪಾ ಹಿಂದಿನವರ ಊಟದ ಸಿರಿ ಖರ್ಚು ಹೆಚ್ಚಿಲ್ಲದಿಲ್ಲದಿದ್ದರೂ ಆರೋಗ್ಯ ಪರಿಪೂರ್ಣ. ಅಜ್ಜಿಯೆಂದು ಕನ್ನಡಕ ಧರಿಸಿಲ್ಲ, ಅಕ್ಕಿಯೊಳಗಿನ ನೆಲ್ಲ ಆರಿಸುವಾಗ ತೀಕ್ಷ್ಣ ದೃಷ್ಟಿ.

ಈಗೆಲ್ಲ ಬರಿ ನೆನಪು ಅವರಂತೆ ನಾವಿಲ್ಲ.ಆಗಾಗ ಅಜ್ಜಿ ಮೇಲೆ ಸಿಟ್ಟು ಬರುತ್ತಿದ್ದರೂ,ಕೇಳದೆ ವಿಧಿ ಇರಲಿಲ್ಲ. ಆದ್ರೆ ಅವಳು ಹೇಳುತ್ತಿದ್ದ ಮಾತುಗಳು ಆಗ ಗಂಭೀರವಾಗಿ ಪರಿಗಣಿಸಿರಲಿಲ್ಲ.ಆದ್ರೆ ಈಗ ಅವು ವಾಸ್ತವವಾಗಿ ನೆನಪು ಮಾತ್ರ. ಧೈರ್ಯದಿಂದ ಮುನ್ನಡೆವ ಕಾಯಕ ಯಾವುದಾರೇನು ಸರಳಜೀವನೋಪಾಯಕ್ಕೆ ಏನೆಲ್ಲ ಬೇಕು. ಗೇಣುಹೊಟ್ಟೆಗೆ,ಮೈ ಮುಚ್ಚಲು ಬಟ್ಟೆಗೆ,ಸೂರೊಂದು ಬೆಚ್ಚಗೆ ಎನ್ನುವ ಸಿದ್ದಾಂತ ಸರ್ವ ಕಾಲಕ್ಕೂ ಸತ್ಯ.ಈಗ ಒಂದೊಬ್ಬಿ ರೊಟ್ಟಿಮಾಡುವ ಹೆಣ್ಣುಮಕ್ಕಳು ಸಿಗುವುದು ಬಹಳ ದುರ್ಲಭ.ಅವಳಿಗೆ ಗಂಡುಮಕ್ಕಳು ಎಡಗಾಲಲ್ಲಿ ಮುಟ್ಟಿದರೂ ಸ್ವರ್ಗ ಪ್ರಾಪ್ತಿಯಂತ ಯಾರೋ ಸ್ವಾಮಿಜಿ ಹೇಳಿದನ್ನು ಶಿರಸಾವಹಿಸಿ ಪಾಲಿಸಿದ ಮಹಾನಭಾವೆ.ಅಜ್ಜಿದು ತಪ್ಪೆಂದು ಅನ್ನಿಸಿದರೂ ಆಗಿನ ಸಮಯ ಸಂದರ್ಭ.ಇಬ್ಬರೂ ‌ಸಮಾನ ಅನ್ನುವ ಮಾತಿಲ್ಲ ಅವಳಲ್ಲಿ.ಇದೊಂದು ವಿಚಾರಕ್ಕೆ ಜಗಳವಾಡಿದ್ದುಂಟು.ಯಾವಾಗ ಗಂಡುಮಕ್ಕಳ ಮನೆಯ ಬಾಗಿಲು ಮುಚ್ಚಿದ ಮೇಲೆ ಅಜ್ಜಿಯನ್ನು ಹೆಣ್ಣು ಮಕ್ಕಳು ನೋಡಿಕೊಳ್ಳುವಾಗ ಅನ್ನಿಸಿತ್ತು ಅವಳಿಗೆ ಐದು ಹೆಣ್ಣೆ ಆಗಿದ್ದರೆ ಚೆಂದಿತ್ತು.ಕೊನೆಯ ಗಳಿಗೆಯಲ್ಲಿ ಹೆಣ್ಣು ಗಂಡೆಂದು ಬೇಧ ಭಾವ ಮಾಡದೆ ಮಕ್ಕಳನ್ನು ಬೆಳೆಸಬೇಕೆಂದು ಅವ್ವಗ‌ ಹೇಳಿದ್ದನ್ನು ಕೇಳಿದಾಗ.ನನ್ನ ಬಗ್ಗೆ ಕಾಳಜಿ ಮಾಡುವಾಗ ಅದು ಸತ್ಯವೆನ್ನಲು ಕನ್ನಡಿ ಬೇಡವೆನಿಸಿತ್ತು.

ಬದಲಾಗುವ ಸತ್ಯಗಳು‌ ಕಾಲಚಕ್ರದ ಅಡಿಯಲ್ಲಿ‌ ಎಲ್ಲವೂ ಶೂನ್ಯ.ಒಂದು ವಸ್ತುವಿನ ಬೆಲೆ ಇದ್ದಾಗ ಗೊತ್ತಾಗದು.ಅದು ಇಲ್ಲವಾದಾಗಲೇ ಅದರ ಬೆಲೆ ತಿಳಿಯುವುದು ಎಂಬ ಮಾತು ಸರ್ವಕಾಲಿಕ ಶ್ರೇಷ್ಠ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

11 thoughts on “

  1. ಉತ್ತರ ಕರ್ನಾಟಕದ ಭಾಷೆಯಲ್ಲಿ ಉತ್ತಮವಾಗಿ ಮೂಡಿಬಂದಿದೆ.ಅಭಿನಂದನೆಗಳು

    Sreeram Hegde

  2. ಅಜ್ಜಿಯೆಂಬ ಅಮೂಲ್ಯ ಆಸ್ತಿ ಯ ವರ್ಣನೆ ಅಪೂರ್ವವಾಗಿದೆ. ಅಭಿನಂದನೆಗಳು.

    ಶ್ರೀಮತಿ ಭಾಗೀರಥಿ ಹೆಗಡೆ ಸಾಹಿತಿಗಳು

  3. ಚಂದವಿದೆ ಅಂಕಣ ಬರೆಹ ಮೇಡಂ.
    ಅಜ್ಜಿಯ ಅನುಭವದ ಮೂಟೆಯಲ್ಲಿ ನೆನಪುಗಳ ಚೈತನ್ಯದ ಚೈತ್ರವು ಸೊಗಸಾಗಿ ಮೂಡಿಬಂದಿದೆ.

  4. ಸುಂದರ ಭಾವನೆಗಳು ಬರವಣಿಗೆಯ ಸಾಲಿನಲ್ಲಿ

  5. ಅಲಭ್ಯ ಲಭ್ಯ ಎಂದು ನನ್ನ ಭಾವನೆ… ಎಷ್ಟೊಂದು ಭಾವಗಳು ಎಷ್ಟು ಜೀವದೊಂದಿಗೆ ಬೆಸೆದು ಬೆರೆತು ಕೊಂಡಿದೆ ಎಂದು ತುಂಬಾ ಸುಂದರವಾಗಿ ಮೂಡಿ ಬಂದಿದೆ ರೀ ಮೇಡಂ

  6. ಹಿರಿಯ ತಲೆಗಳು ಬದುಕಿಗೆ ನೀಡುವ ಪಾಠಗಳು ಅಭೂತ ಪೂವ೯ವಾದುದು ಎಂಬುದನ್ನು ಲೇಖನದ ಮೂಲಕ ಚೆಂದದ ಬರಹದೊಂದಿಗೆ ತೆರೆದಿಟ್ಟಿದ್ದಾರೆ.ಅಭಿನಂದನೆಗಳು ಮೇಡಂ

  7. ಅಜ್ಜಿ , …ಬೆಲೆ ಕಟ್ಟಲಾರದ ಮಾಣಿಕ್ಯಾ

    ಅವರ ಇರುವಿಕೆಯೇ ಸೊಗಸು.

Leave a Reply

Back To Top