ತಂತಿ ತಂತಿಗೆ ತಾಗಿ

ಪುಸ್ತಕ ಸಂಗಾತಿ

ತಂತಿ ತಂತಿಗೆ ತಾಗಿ

ಕೌದಿ ಹೊಕ್ಕ ಸೂಜಿ ಹಾಂಗ

ಎದಿ ಚುಚ್ಚಿ ನೆಕ್ತದ ಅವನ ಪ್ರೇಮ

 ಎಂಥಾ ಚೂಪು ನೆನಪ ನಾಲಿಗೆ

ಹಿಂಗ್ ಎದೆಯ ಮಿಡಿತವ ಅಕ್ಷರರೂಪಕ್ಕೆ ತಂದ ಕವಯತ್ರಿ ನನ್ನ ನೆಚ್ಚಿನ ಸ್ನೇಹಿತೆ ದೀಪಾಗೋನಾಳ.. ಹೆಚ್ಚೇನು ಹೇಳಲಿ ಕಾವ್ಯವನ್ನು ಇಷ್ಟಿಷ್ಟೇ ಉಸಿರಾಡಿದ್ದಾರೆ ಆಪ್ತವಾಗುವಷ್ಟಷ್ಟೇ..

ದೀಪಾಜಿ ಇದು ನಿಮ್ಮ ಕವನ ಸಂಕಲನ ಓದಿನಿಂದ ನಂಗೆ ಅನಿಸಿದ್ದು    

ಇದೊಂದು ತೀರಾ ಅಪರೂಪದ  “ಭಾವದೊಡವೆ”…. ಕವಿತೆಗೆ ಶಬ್ದಎಷ್ಟು  ಮುಖ್ಯವೊ ನಿಶ್ ಬ್ದವ  ಕೇಳಿಸಿಕೊಳ್ಳುವ ಅದನ್ನು ಶಬ್ದಕ್ಕೆ ತರುವ  ಸಂವೇದನೇ ಕವಿಗೆ ಅಷ್ಟೇ ಮುಖ್ಯ ಅನ್ನೋ ನನ್ನ ನಂಬಿಗೆಗೆ ದೋಷವಿಲ್ಲದ ಸಂಕಲನ ನಿಮ್ಮದು .. ನಿಮ್ಮ ಕವಿತೆಗೆ ಹಿರಿಯ ಸಾಹಿತಿ ಸತೀಶ  ಕುಲಕರ್ಣಿ ಸರ್ ಮುನ್ನುಡಿಯಲ್ಲಿ ಅತ್ಯಂತ ಸೂಕ್ಷ್ಮ ಭಾವದ ಸಾಲುಗಳ ಹೆಕ್ಕಿ ಒಟ್ಟಾರೆ ಆಶೆಯ ನುಡಿದಿದ್ದಾರೆ. ಅದನ್ನ ಮೀರಿ ಏನೂ ಹೇಳಲಾಗದು ಎನ್ನುವ ಹಾಗೆ.ನನಗೆ ನಿಮ್ಮ ಕವಿತೆಗಳ ಓದುತ್ತಾ ಹೋದ ಹಾಗೆ ಕೆಲವು ಕವಿತೆಗಳು ನೇರ, ದಿಟ್ಟ ನಿರಂತರ ಅನ್ನೋ ಹಾಗೆ ಗೋಚರಿಸಿದವು ಅಂದರೆ ಸಂತೆಯಲ್ಲಿ ಕುಳಿತು  ಗದ್ದಲದ ಮಧ್ಯೆ ಕೂಡ ಓದಿದರೂ ನನ್ನದೇ ಅನುಭವ ಅನ್ನೋ ಅಂತಾ ಸಾರ್ವತ್ರಿಕ ಭಾವ ಸ್ಫರಿಸೋ ಕವಿತೆಗಳು ಅವು.

ನನ್ನೈದು ವಸಂತಗಳ ನುಂಗಿ ಹಾಕಿದ

ಅಮಾನವೀಯ ಮೌನಕ್ಕೆ ನನ್ನ ದಿಕ್ಕಾರ

ಮೌನಕ್ಕೆ ನನ್ನ ದಿಕ್ಕಾರಕವಿತೆಯ

ಈ ಸಾಲುಗಳನ್ನೇ ತೆಗೆದು ಕೊಳ್ಳಿ ಒಂದ್ ಸಣ್ಣ ಮುನಿಸು ಯಾವ್ ಯಾವ್ದೋ ಕಾರಣ ಹುಡುಕಿ ಮೈ ಮನ ಅಡರಿದರೆ ಮುಗಿತು ಮೌನ ಗೋಡೆ ಕಟ್ಟಿ ನಿಂತು ಬಿಡುತ್ತೆ ಅದು ಯಾವುದೇ ಆಪ್ತ ಸಂಬಂಧವಾದರೂ ಸರಿ…..ಹೀಗೆ ಹಲವಾರು ಕವಿತೆಗಳಿವೆ

ಉದಾಹರಣೆಗೆ “,ತಿಳಿದು ಬಿಡು ” ಆ ,ನಿನ್ನ ಪಾಂಡಿತ್ಯಕ್ಕೆ, ” ಇಷ್ಟದ ಕಾರಣ,ಗೊಡವೆ ಮತ್ತು ಅರಿವು.. ಇತ್ಯಾದಿ…

ನನ್ನೆಡೆಗಿನ ನಿನ್ನ ಒಲವು ಬರಿದಾಗಿ

ವರುಷಗಳೇ ಉರುಳಿದವು

ಬೊಗಸೆ ಒಡ್ಡಿ ನಿಂತಿದ್ದೇನೆ

ಅಳುದಿಳಿದ ಪ್ರೇಮ ಭಿಕ್ಷೆಯ ಬೇಡಿ

ಮತ್ತೆ ಮತ್ತೆ ನಿರೀಕ್ಷಿಸುತ್ತಾ

ನಿರೀಕ್ಷೆಯ ತೊಟ್ಟಿಲು ಕೀಲು ಮುರಿದು ಬಿದ್ದು, ಒಲವ ಬಟ್ಟಲು ಬರಿದಾಗಿ ಬಿಕ್ಕಳಿಕೆ ಉಳಿದಾಗ ಇನ್ನೂ ಒಲವ  ನಿರೀಕ್ಷೆಯ ಭಾರ ಹೊತ್ತವಳ ಧ್ವನಿ ಅದೆಷ್ಟು ಮಿಡಿಯುವಂತೆ ಬರೆದಿದ್ದೀರಿ …ಓದಿ ಮೌನ ತಬ್ಬುವ ಹಾಗೆ…..

ಅದೆಷ್ಟು ವಾಸ್ತವ ಬದುಕು ನೋವ ಹೇಗೆಲ್ಲ ಹೆಣೆದು ನಿಲ್ಲುತ್ತೆ ಅನ್ನೋದ್ ಸೂಚಿಸೋ ಸಾಲುಗಳು ಇವು….

ಇಡೀ ಸಂಕಲನದ ತುಂಬಾ ಅವನು- (ಪ್ರತಿ ಹೆಣ್ಣಿನ ಬದುಕಿನ ಅವನು – ಹೆಸರು ರೂಪ ಬೇರೆ ಬೇರೆ ಇರಬಹುದು ಅಷ್ಟೇ ) ಹರಡಿ ಆವರಿಸಿದ್ದಾನೆ ಪ್ರೀತಿ, ವಿರಹ, ಮೋಹ, ನಿರಾಸೆ, ತುಂಟತನ, ಹಿಂಗ್ ಹಡೆದ ಭಾವ ಕವಿತೆಗಳು ತುಂಬಿ ಓದುಗನಿಗೆ ಹೆಣ್ಣ್ ಮನೋಸ್ಥಿತಿಯ ಕಟ್ಟಿ ಕೊಡಲು ಉತ್ತಮ ಎನ್ನಬಹುದಾದ ಕವಿತೆಗಳು ಅವು…ಉದಾಹರಣೆಗೆ

ಮಾತಿಗೊಮ್ಮೆ ತುಟಿ ಕಚ್ಚಿ

ಹಿಗೆಂದರೆ ಎಲ್ಲಿ ಬಿಟ್ಟು ಹೋದಾನೋ

ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೋ….

ಎಂಬ ದುಗುಡದಲ್ಲೇ ಕಳೆದೆ ಅಷ್ಟು ದಿನಗಳನ್ನ……

ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು

ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾಗೆಲ್ಲ

ಹುಸಿ ನಗುವನ್ನೇ ಹೊರಚೆಲ್ಲಿ

ನೋವೆಲ್ಲ ಪಕ್ಕಡಿಗೆ ಸರಿಸುತ್ತಲೇ ಕಳೆದೆ ಅಷ್ಟು ದಿನಗಳನ್ನು…..”

ಹೀಗೆ…

ಎಷ್ಟು ಆಳದ ಆಲದಂತಾ ನೋವ್ ಹರಡಿ ನಿಂತು ಬಿಡುತ್ತೀರಿ ನಿಬ್ಬೆರಗಾಗುವಂತೆ…..ಇನ್ನು

ಒಡ್ಡಿ ನಿಂತಿದ್ದೇನೆ, ಎದ್ದು ಹೋಗಿದ್ದಕ್ಕೆ, ಷರಾ ಹೀಗಿತ್ತು, ಈ ಸುಖ, ಅವಸರಕ್ಕೆ ಬಿದ್ದು, ಎಷ್ಟು ಬರೆದರೂ, ನಿನ್ನ ಹೊರೆತು, ಏನರ್ಥ, ಮೈ ಕೊಡವಿ ಹೋಗದಿರು, ನನಗೆ ತಿಳಿಯದು, ಭಯಕ್ಕೆ ಬಿದ್ದಗಿನಿಂದ “ಮತ್ತಷ್ಟು ಇಷ್ಟ ವಾಗುವುದು. ಮತ್ತೆ ಮತ್ತೆ ಓದಿದರೂ  ಓದಿಸಿ ಕೊಳ್ಳುವ ಕವಿತೆಗಳು ಕೂಡ ಅವು..

ಬಿಟ್ಟಿರಲಾರದ್ದು ಕವಿತೆಯ ಸಾಲುಗಳನ್ನೇ ತೆಗೆದುಕೊಳ್ಳಿ

ಆದರೀಗ….

ಎಂಥದೀದು ಅಮಾವಾಸ್ಯೆ ಹುಣ್ಣಿಮೆ

ಪಾಡ್ಯ ಎಲ್ಲದಕ್ಕೂ ತವರೇ..?

ಪ್ರೇಮವಾದರೂ

ಅವಳು ತವರು ಸೇರಿದಾಗಲೇ ಉತ್ಕಟ..

ಬಿಟ್ಟಿರಲಾರದಷ್ಟು

ಹೀಗೆ ಇನ್ನೂ ಹಲವು ಕವಿತೆಗಳಿವೆ

ಇವುಗಳದ್ದೆ ಒಂದ್ ದಾಟಿ ಓದಿ ಮೀಟಿ ಬರಬೇಕು ಈ ಕವಿತೆಗಳ ಮುಖಾಮುಖಿ ಆದಷ್ಟು ಒಂದೊಂದ್ ಅನನ್ಯ ಸಂಚಲನ ಮೂಡಿಸಿ ಎದೆಯೊಳಗೆ ಇಳಿದು ಬಿಡುವ ಕವಿತೆಗಳು.

ಇನ್ನೂ ಕೆಲವು ತೀರಾ ಹೆಣ್ಣಿನ ನೋವ್ ಭಿನ್ನ ಭಿನ್ನ ಸಂಧರ್ಭಗಳಲ್ಲಿ ಸ್ಫೂರಿಸಿದ್ದಿರಿ  ಇವುಗಳ ಓದುತ್ತಾ ಹೋದರೆ ಗಾಢ ವಿಷಾದ ಆವರಿಸದೆ ಇರದು.. ಉದಾಹರಣೆಗೆ ಕೂಗುತ್ತಲೇ ಇದ್ದೆ, “ಏನೆಂದು ನಾ ಅರ್ಥೈಸಲಿ?”ಹೀಗೆ.. ಇನ್ನೂ ಕೆಲವು ತೀರಾ ತುಂಟ ತನದ್ದವು.

ಓದಿ ಸಾಮಾನ್ಯ ಓದುಗ ಕೂಡ ಕಿರು ನಗೆ ಬೀರಿ, ಬೀಯರ್ ಕುಡಿದ ಅನುಭವ ಕೊಡುವಂತವು ಉದಾಹರಣೆಗೆ  ನಡುವೆ,”ಹಳೆಯ ಹೆಸರು,”ಕಣ್ಣ್ ರೆಪ್ಪೆ,”ಬೇಷರಮ್ಮ್,” ಕೋಡಿ ನಾ.. ಇನ್ನೂ ಒಟ್ಟಾರೆ ಜಗದ ಜಾಗತಿಕರಣದ  ಓಟಕೆ ಆದ ರಸ್ತೆ, ಮಾಯವಾದ ಹಸಿರು ಹಕ್ಕಿ ಇನ್ನೂ ಏನೇನೋ ಎಲ್ಲ ಹೇಳುವ ತಂತಿ ತಂತಿಗೆ ತಾಗಿ ಎದೆಯ ವೀಣೆ ಮೀಟೊ ಕವಿತೆ ಹೀಗೆ ಓದುತ್ತಾ ಹೋದಂತೆ ಮೊಗೆದು ಕೊಟ್ಟಿದ್ದೀರಿ.

 ಭಾವಾಮೃತ ಒಂದೊಂದರದೂ ಒಂದೊಂದು ರುಚಿ ಯಾವುದು ಹೆಚ್ಚು ಯಾವುದು ಕಡಿಮೆ ಅನ್ನೋ ಹಾಗೆ ಇಲ್ಲಾ..

ಒಂದಿಷ್ಟು ತಾಳ್ಮೆಯ ಓದುಗನಿಗೆ ಖಂಡಿತ ಬೇಡೋ ಕವಿತೆಗಳು ಇವೆ ಅವು ತೀರಾ ವೈಯಕ್ತಿಕ ಭಾವದ್ದವು… ಗದ್ಯ ಪದ್ಯ ನಾಟಕ ಹೀಗೆ ಕಾವ್ಯವನ್ನೇ ವ್ಯಾಖ್ಯಾನಿಸೋ ಕವಿತೆ ಮನಸೆಳೆಯುತ್ತೆ… ತೀರಾ ಸಹಜ ಭಾಷೆಯಲ್ಲಿ ಅತ್ಯುತ್ತಮ ಆಪ್ತ ಹೆಣಿಕೆಯ ಬಿಗಿಯಲ್ಲಿ ಬರೆದಿದ್ದೀರಿ…ಭಾಷೆಯ ಲಯಕ್ಕಾಗಲಿ ಅರ್ಥಕ್ಕಾಗಲಿ ಮುಕ್ಕಾಗದಂತೆ ಮುತುವರ್ಜಿ ವಹಿಸಿದ್ದೀರಿ ಒಟ್ಟಾರೆಯಾಗಿ  ಗೆದ್ದಿದ್ದೀರಿ, ಅತ್ತು ಬರೆದಿದ್ದೀರಿ, ನಕ್ಕು ಬರೆದಿದ್ದೀರಿ, ಏಕಾಂತ ಒಂಟಿತನ ಕ್ಕೆ ಕೂಡ ಕವಿತೆ ಹುಟ್ಟಿಸಿದ್ದೀರಿ ಸುಂದರದ ತೋರಣ ಮಾಲೆ ಹೆಣೆದು ಓದುಗನ ಮುಂದೆ ಇಟ್ಟಿದ್ದೀರಿ… ಇನ್ನೂ ಈ ಕವನ ಸಂಕಲನಕ್ಕೂ ಒಂದಿಷ್ಟು ಮಿತಿ ಇವೆ.ಕೆಲವು ಕಡೆ ಪದ್ಯಗಳು ಭಾವದ ಓಗಕ್ಕೆ ಸಿಕ್ಕಿ ಗದ್ಯಕ್ಕೆ ಜಾರಿದಂತೆ ಭಾಸವಾಗಿದ್ದು ಇದೆ.ಅವೆಲ್ಲ ನನ್ನ ಅವರ ಆಪ್ತ ಮಾತುಕತೆಗೆ ಅವಕಾಶ ಒದಗಿಸೋ ಅವಕಾಶಗಳು.ಇದು ಒಂದು ಮಗ್ಗಲು ಮಾತ್ರ ನನ್ನ ನೋಟ.. ಇನ್ನೂ ಪ್ರತಿ ಕವಿತೆಗೆ ಒಂದೊಮ್ಮೆ ನ್ಯಾಯಯುತ ಪ್ರತಿ ನುಡಿಯುವ ಹೆಬ್ಬoಡೆ ಅಂತಾ ಬಯಕೆ ಇನ್ನೂ ಚಿತ್ತದಲ್ಲಿ ಗಿರಿಕಿ ಹೊಡಿತಿದೆ ಅದೊಂದು ಸಾಧ್ಯತೆ ಬಾಕಿ ಇದೆ…..

ದೇವರಾಜ್ ಹುಣಸಕಟ್ಟಿ.

One thought on “ತಂತಿ ತಂತಿಗೆ ತಾಗಿ

Leave a Reply

Back To Top