ತಯಾರಿ

ಕಾವ್ಯ ಸಂಗಾತಿ

ತಯಾರಿ

ಮಮತಾ ಶಂಕರ್

ಗಟ್ಟಿ ಬೀಜಗಳು ಮಣ್ಣು ಸೇರಿ ಮಣ್ಣೊಳಗೆ ಮುಖ ಹುದುಗಿಸಿ ಬೇರು ಬಿಟ್ಟು
ಬಿಟ್ಟವೆರಡು ಪುಟ್ಟ ಹಸಿರು ಕಣ್ಣು.

ಆಕಾಶ ಕಾಣುವ ಹಂಬಲ ಅರಳಿನಿಂತು ತೆನೆ ತೂಗಿ ಗಾಳಿಯ ಲಾಲಿತ್ಯದಲಿ ಬಳುಕಿ ತೂಗಾಡುವ ತೊಯ್ದಾಡುವ ಖುಷಿ ತೆನೆಗೆ ಯಾರೋ ಬೀಸಿದರು ಕಟಾವಿನ ಕತ್ತಿ…
ಬೇರ್ಪಟ್ಟು ತೆನೆಯಿಂದ ಭತ್ತ….
ಬಿಸಿಲಿಗೆ ಒಣಗಿ
ಯಂತ್ರದ ಹಲ್ಲುಗಳಿಂದ ಹಸನಾಗಿ ಅಕ್ಕಿ
ತನ್ನ ಮೇಲಿನ ತವುಡು ತೆಗೆದು ಬಿಸಾಕಿ
ತೀರಾ ಪಾಲೀಶಾಗಿ ಹೊಳೆಯುತ್ತಾ….
ಕೊಳ್ಳುವರ ಕಾಯುತ್ತಾ ನಾಜೂಕು ಪಾಕೀಟಿನಲಿ ನಲುಗಿತ್ತು….

ಹಸನಾದ ಅಕ್ಕಿ ಹೊಸಮನೆಯ ಪಾಕಕ್ಕೆ ಅಣಿಯಾಗಿ ನೀರಿನಲ್ಲಿ ತೊಯ್ದು ತಿಕ್ಕಿಸಿಕೊಂಡು ಬೇಳೆ ತರಕಾರಿ ಸಾಂಬಾರಗಳ ಬೆಸೆದುಕೊಂಡು
ಕುಕ್ಕರಿನಲ್ಲಿ ಹೊರಬರಲಾಗದಂತೆ ಕೂತುಕೊಂಡು
ಸಮಾಧಿಯಾಗುವ ಕಟ್ಟ ಕಡೆಯ ಇಟ್ಟಿಗೆಯಂತ ಮುಚ್ಚುಳ ಮುಚ್ಚಿ
ಅಡಿಗೆ ಉರಿ ತಾಗಿಸಿದಾಗ ಒಳಗೇ ಕುದಿ ಶುರುವಾಗಿ ಬೇಯುತ್ತಾ ತೊಯ್ದಾಡಿದ ಭತ್ತ ಅನ್ನವಾಗಿ ಹದಗೊಳ್ಳುತಿತ್ತು……

ಹೆಣ್ಣೊಬ್ಬಳ ಕೈಲಿ ಭತ್ತ ಪಕ್ವಾನ್ನವಾಗಿ ಉಣ್ಣುವವರ ತಾಟಲ್ಲಿ ಕುಳಿತಿದ್ದು ಹೀಗೇ ಎಂಬುದೆಂತಹಾ ಸೋಜಿಗ….


ಮಮತಾ ಶಂಕರ್

4 thoughts on “ತಯಾರಿ

  1. ಸೊಜಿಗದ ಪರಿ…..
    ನೆಲ್ಲೊಂದು ನೆಲಸೇರಿ
    ತೆನೆತೂಗಿ ತೆನೆಬಾಗಿ
    ನೊಂದ ಬೆಂದು
    ಸಾರ್ಥಕವಾಯಿತು ಹುಟ್ಟು
    ಅವ್ವನ ಕೈಯಲ್ಲಿ ಅಮೃತವಾಗಿ

Leave a Reply

Back To Top