ಕಾವ್ಯ ಸಂಗಾತಿ
ಶಿವರಾಜ ಅರಳಿ
“ಮಾಸದ ಹೊಸ್ತಿಲು”


ಎದೆಯ ತಿದಿಯೊತ್ತಿ ಗಿರಕಿಸುವ
ಸಂಕಟದ ಆಂತಯು೯ದ್ಧಕ್ಕೆ
ವಿರಾಮದ ಮುಲಾಮು
ಕೇವಲ ನೆಪ ಮಾತ್ರ
ಆಗಾಗ ಬೆನ್ನಹುರಿಯಿಂದಿಳಿದು
ಹೊಕ್ಕಳು ಬಳ್ಳಿ ಸುತ್ತುವ
ಋತುವಿನ ಆಟಕ್ಕೇನು ಗೊತ್ತು
ಹಸಿ ಕಣ್ಣ ಹೆಂಗಳೆಯರ
ಚೀತ್ಕಾರದ ಆತ೯ನಾದ.
ಮಾಸದ ಹೊಸ್ತಿಲಲಿ
ಕಾದು ಕೆಂಡವಾದ ಬೇನೆ
ಕನಸುಗಳನ್ನು ಜೀವಂತ ಸುಡುತ್ತದೆ
ಎದೆಯ ಭಾವಗಳು
ಸ್ರಾವದ ಹರಿವಿನ ತೀವ್ರತೆಗೆ
ಕೊಚ್ಚಿ ಹೋಗುವುದೊಂದೇ ಬಾಕಿ
ಇಲ್ಲಿ ಹೃದಯದ ಭಾಷೆ
ಒಮ್ಮೊಮ್ಮೆ ತಣ್ಣಗೆ ಮಲಗುತ್ತದೆ
ವಿಧಿಯಿಲ್ಲದೆ…
ಬಂಧಿಸಿಟ್ಟ ಗೂಡು ಹಕ್ಕಿಗೆ
ಬೇಲಿಯ ದದಿ೯ಲ್ಲ
ನಿಷಿದ್ಧ ನೆತ್ತಿಗೆ
ನೆರಳ ಚಾಚುವ ಕೈಗಳಿಲ್ಲ
ಹಳತು ಹೊಸತಾಗುವ ಜೀವ ಭಾವ
ಹಗಲು ದಾಟಿದರೂ
ಇರುಳು ಸರಿದರೂ
ಮಾಸಕ್ಕೊಮ್ಮೆ ಮೊಳೆತು
ನೋವ ಹೊರಬೇಕು ಆವತ೯ದಲ್ಲಿ
ಶಿವರಾಜ ಅರಳಿ



