ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಾಯಾ ಜಿಂಕೆ ಓಡುತಿರು
ಮೈ ಮಿನುಗಿ ಮಿಂಚಿನಂತೆ;
ಮನದ ಕಾಡು ದಾಟುತಿರು,
ಮೌನದೊಳ ಮಾತಿನoತೆ .

ಹೆಜ್ಜೆಯಲಿ ಗಾಳಿಯ ಗೆಜ್ಜೆ,
ಕಣ್ಣೊಳ ಕಾಡಿನ ಕನ್ನಡಿ;
ಕೊಂಬಲಿ ಚಂದ್ರನ ಬಿಲ್ಲು,
ಮೈಮೇಲೆ ಹೊನ್ನಿನ ಹೊಳಪು.

ಹಸಿರು ಹಾಸಿಗೆ ತುಳಿದು,
ಹೊನ್ನಿನ ನೆರಳು ಸೀಳಿ;
ಎಲೆಗಳ ಗುಟ್ಟು ಆಲಿಸಿ,
ಮಿಂಚಿಗೇ ದಾರಿ ತೋರಿಸು.

ಆ ಹೊಳಪೇ ಕನಸಾಗಿ,
ಸೀತೆಯ ಕಣ್ಣನು ಸೆಳೆಯಿತು;
ಮಾರೀಚನ ಮೈಯಲಿ ಮಾಯೆ,
ಮನದೊಳ ಮೋಹವಾಯಿತು.

ರಾಮನ ಹೆಜ್ಜೆ ತಿರುಗಿ
ಲಕ್ಷ್ಮಣರೇಖೆ ನಡುಗಿತು;
ಕಾಣುವುದೆಲ್ಲ ಸತ್ಯವಲ್ಲ
ಕನಸಿಗೂ ನೆರಳುಂಟು.

ಅಂದೊಂದು ಬಾಣ ಬೆನ್ನಟ್ಟಿತು,
ಇಂದೊಂದು ಗುಂಡು ಬೆನ್ನಟ್ಟುತ್ತದೆ;
ಕಾಲ ಮಾತ್ರ ಬದಲಾಗಿದೆ,
ಬೇಟೆಯ ಕಣ್ಣು ಬದಲಾಗಿಲ್ಲ.

ಗಾಳಿಯ ಗುಟ್ಟು ಅರಿತು,
ಗುಂಡಿಗಿಂತ ಮುಂಚೆ ಚಿಮ್ಮು;
ಹಿಡಿದರೆ ದೂರವಾಗು,
ಬಿಗಿದರೆ ಗಾಳಿಯಾಗು.

ಪ್ರೀತಿ ಹತ್ತಿರ ಬಂದಾಗ,
ನಿಶ್ಶಬ್ದವಾಗಿ ನಿಂತು ನೋಡು;
ಭಯ ನೆರಳಾಗಿ ಬಂದರೆ,
ಬಯಲಿನ ಎದೆ ದಾಟು.

ಬಂಡೆಯ ಅಂಚು ಜಿಗಿದು,
ಭೀತಿಯನ್ನು ಹಿಂದೆ ಬಿಟ್ಟು;
ಭವಿಷ್ಯದ ಕಡೆಗೆ ಓಡು,
ಬದುಕಿನ ಹಠ ಹೊತ್ತು.

ನಿನ್ನ ಓಟ ಕೇವಲ ಓಟವಲ್ಲ
ಮುಕ್ತಿಯ ಜೀವಭಾಷೆ;
ಮಾಯಾ ಜಿಂಕೆ ಓಡುತಿರು,
ಯಾರ ಕೈಗೂ ಸಿಗದಂತೆ…..


About The Author

3 thoughts on “ಡಾ. ಹೆಚ್. ನಟರಾಜ್ ಆರ್ಯ ” ಮಾಯಾ ಜಿಂಕೆಓಡುತಿರು””

  1. ವಾವ್ ಅತ್ಯಂತ ಸುಂದರ ಕವನ. ಹಿಂದೆ ಮತ್ತು ಈಗಿನ ವಾಸ್ತವದ ಸ್ಥಿತಿ ಒಂದೇ ರೀತಿ ಇದೆ.

  2. ನಟರಾಜ್ ಸರ್, ನಿಮ್ಮ “ಮಾಯದ ಜಿಂಕೆ” ಕವನವು ಅತ್ಯುತ್ತಮ ಸಂದೇಶವನ್ನು ಹೊಂದಿದೆ. ರಾಮಾಯಣದ ಸಂದರ್ಭವನ್ನು ಇಂದಿನ ಪ್ರಸ್ತುತ ಪರಿಸ್ಥಿತಿಯೊಂದಿಗೆ ಹೋಲಿಕೆ ಮಾಡಿರುವ ರೀತಿ ತುಂಬಾ ಅದ್ಭುತವಾಗಿದೆ. ಪದಗಳ ಬಳಕೆ, ಭಾವನೆ ಮತ್ತು ಸಂದೇಶವನ್ನು ಅತ್ಯಂತ ಸುಂದರವಾಗಿ ಮೂಡಿಸಿದ್ದೀರಿ. ಕವನವು ಮನಮುಟ್ಟುವಂತಿದ್ದು, ಬಹಳ ಅರ್ಥಪೂರ್ಣವಾಗಿದೆ. ಅಭಿನಂದನೆಗಳು ಸರ್!

Leave a Reply

You cannot copy content of this page

Scroll to Top