ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಒಡೆದ ಕನ್ನಡಿಯೊಳಗಿನ ಬಿಂಬ
ಒಂದಲ್ಲ! ಎರಡಲ್ಲ !
ಹತ್ತಾರು ಬಿಂಬಗಳ ಬಿತ್ತರಿಸುತ್ತವೆ!

ಒಂದೊಂದು ಬಿಂಬದಲ್ಲಿ
ಒಂದೊಂದು ಮುಖ
ಅದೆಷ್ಟು ಮುಖಗಳು!
ಅಲ್ಲ ಅಲ್ಲ ಮುಖವಾಡಗಳು!
ಸಹಜವಲ್ಲದ ಅಸಹಜ ಮುಖಗಳು!
ಆ ಎಲ್ಲ ಬಿಂಬಗಳಲ್ಲಿ
ಮನದ ಬಿರುಕಿನ ಅನಾವರಣ!

ಹೋದರೆ ಹೋಗಲೆಂದು
ಹೊಸದು ಕನ್ನಡಿ ಕೊಟ್ಟರೆ
ಬೇಕೆಂದೆ ಮತ್ತೆ ಮತ್ತೆ ಒಡೆಯಲೆತ್ನಿಸಿದರೆ
ಮತ್ತೆ ಒಂದಾಗಿಸುವುದಾದರೂ ಹೇಗೆ?

ಸೋಜಿಗವೆಂದರೆ;
ಅವರ ಮನದ ಕನ್ನಡಿ
ಒಡೆದು ಹೋಳಾಗಿವೆ ಆಗಲೆ
ಅಲ್ಲಿ ಯಾವ ಬಿಂಬ ಪ್ರತಿಬಿಂಬಗಳು
ಇಡಿಯಾಗಿ ಕಾಣುವುದೇ ಇಲ್ಲ!

ಒಡೆದ ಕನ್ನಡಿ ಒಳಗಿನ ಚಿತ್ರಗಳು
ಚಿತ್ರ ವಿಚಿತ್ರ!

ಒಮ್ಮೆ ಹೋಳಾದ ಮೇಲೆ
ಮತ್ತೆ ಬೆಸೆಯಲಾದೀತೆ
ಮನದ ಕನ್ನಡಿಯನ್ನ?

ಎಷ್ಟು ತೇಪೆ ಹಾಕಿದರೂ ಅಷ್ಟೆ
ನೈಜತೆಯ ಬಿಡದು
ಆ ಒಡೆದ ಚೂರುಗಳ ಸ್ಪರ್ಶ
ಇರಿದು ನೋಯಿಸುವುದೇ!

ಎಲ್ಲಿ ಎಸೆದರೂ ಅಷ್ಟೆ
ಅಪಾಯ ಕಟ್ಟಿಟ್ಟ ಬುತ್ತಿ
ತಿಪ್ಪೆಗೆ ಎಸೆಯಲೂ ಭಯವೆ!
ಗೊಬ್ಬರ ಹೇರುವವರಿಗೆ,
ಹೊಲ ಊಳುವವರಿಗೆ,
ನಟ್ಟರೆ? ಇರಿದರೆ? ಚುಚ್ಚಿದರೆ?
ಗಾಯಗೊಳಿಸಿದರೆ? ರಕ್ತ ಹರಿಸಿದರೆ?

ಒಡೆದ ಕನ್ನಡಿಯ ಚೂರುಗಳು
ಎಲ್ಲಿದ್ದರೂ, ಎಂದಿದ್ದರೂ
ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ!


About The Author

Leave a Reply

You cannot copy content of this page

Scroll to Top