ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಾರನೇ ದಿನ ಚೆಲುವ, ಸಾಲಾರ ಓಣಿ ಕಡೆಗೆ ತನ್ನ ಹೆಜ್ಜೆಗಳನ್ನು ಹಾಕಿದ.  ಹಾಗೋ ಹೀಗೋ  ಹೆಜ್ಜೆ ಹೆಜ್ಜೆಗೂ ವಿಚಾರಿಸಿ ಅಲ್ಲಿ ಸಾಗುತ್ತಿದ್ದ. ಆದರೇ, ಆತನ ಕುರುಹು ಕೂಡಾ ಸಿಗಲಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಚೆಲುವ ಅರ್ಧ ದಿನ ಕಳೆದಿಲ್ಲ ಅದಾಗಲೇ ಡಾಕ್ಟರನ ಹೆಸರನ್ನು ಮರೆತು ಬಿಟ್ಟಿದ್ದ ಮತ್ತು ಅದೀಗ  ನೆನಪಿಗೆ ಬರುತ್ತಿರಲಿಲ್ಲ. ಆಗ ಏನೋ ಅಲ್ಪ ಸ್ವಲ್ಪ ಬುದ್ಧಿ ಉಪಯೋಗಿಸಿ ಅಲ್ಲಿ  ‘ಎಣ್ಣೆ ಡಾಕ್ಟರ್’  ಎಂದು ವಿಚಾರಿಸಿದಾಗ,
ಆ ಹೆಸರಿನವರು ‘ಯಾರಿಲ್ಲ’ ಎಂತಲೇ ಹೇಳುತ್ತಿದ್ದರು.    
ಚೆಲುವ ಹಾಗೆಯೇ ತೆವಳುತ್ತಾ ಸಾಗುತ್ತಲೇ ಇದ್ದಾಗ,  ಅಲ್ಲೊಂದು ‘ಏಣ್ಣೆ ಬಾರ್‘ ತಲುಪಿದಾಗ, ಅದರ ಮುಂದೆ ಗಕ್ಕನೆ ನಿಂತ !. ಆತನ ಮನಸ್ಸೀಗ ಹೊಯ್ದಾಡುತ್ತಲೇ  ಇತ್ತು ಮತ್ತು ಆತನಿಗೆ ಹೆಜ್ಜೆ ಸಾಗದಾದವು. ಅದಕ್ಕೆ ಕಾರಣ, ಮನಸ್ಸು ವಿಚಲಿತವಾಗಿ ಕೊಂಚ ಏಣ್ಣೆ ಹಾಕುವ ಆಸೆಯು ಆತನಲ್ಲಿ ಜನಿತವಾಯಿತು.  ಏನೋ ಅಲ್ಪ ಸ್ವಲ್ಪ ಹಾಕಿದರೆ ನಡೀತದೆ ಎಂಬ ಮೊಂಡು ಧೈರ್ಯ ಕೂಡಾ ಮೂಡಿತು.  ಆದರೆ, ಮರು ಕ್ಷಣವೇ, ತಾನು ಡಾಕ್ಟರ್ ಬಳಿ ಹೋಗ್ತಿದ್ದೇನೆ, ನನ್ನ ಪರಿಸ್ಥಿತಿ ನೋಡಿ, ನನ್ನ ಮಂಡಿಗಳನ್ನು ನೋಡದೆ ಆತ ಎರಡು ಬಾರಿಸಿ ಕಳಿಸಿದರೆ ಕಷ್ಟ’ ಎಂದು ತನ್ನಷ್ಟಕ್ಕೆ ತಾನೇ ಎಚ್ಚರಗೊಂಡು ನಿರ್ಧಾರ ಬದಲಿಸಿಕೊಂಡ.  
ಅದೇ ಸಮಯದಲ್ಲಿ, ಆತನಿಗೆ ತೀರಾ ಪರಿಚಯವಿದ್ದ ಧರ್ಮಣ್ಣ ಬಾರಿನೊಳಕ್ಕೆ ನುಗ್ಗುತ್ತಿರುವುದು ಕಂಡುಕೊಂಡ. ಬಹುಶಃ ಆತನಿಗೆ   ‘ಎಣ್ಣೆ ಡಾಕ್ಟರ್’ ಬಗ್ಗೆ ತಿಳಿದಿರಬಹುದು ಎಂದುಕೊಂಡು ಅವಸರವಸರದಿಂದ ಆತನನ್ನು ತಡೆಯಲೆತ್ನಿಸಿ ಸಫಲನಾದ;
‘ಅಣ್ಣಾ..ಏನಿಲ್ಲೀ ?’ ಎಂದು ಆತನನ್ನು ಕೇಳಿದಾಗ;
‘ಅರೆ ! ಚೆಲುವಣ್ಣ..ಅದೇನು ನೀನಿಲ್ಲಿ ?’
ಹಾಗೆ ಪರಸ್ಪರ ಒಬ್ಬರಿಗೊಬ್ಬರು ಕೇಳಿಕೊಂಡಾದ ಮೇಲೆ, ಇಬ್ಬರೂ ತಲೆ ಕೆಳಗೆ ಮಾಡಿ, ನಾಚಿಕೆ ಗೊಂಡವರಂತೆ ತಲೆ ಕೆರೆದುಕೊಂಡರು. ಆಗ ಚೆಲುವನೇ ಕೇಳಿದ;
‘ಏನ್ ಬೆಳ ಬೆಳಗ್ಗೆ ಬಂದೀಯ.. ಎಣ್ಣೆ ನೆನ್ಪು ಕಾಡಿತಾ ಹೇಗೆ ?’
‘ಇಲ್ಲ ಚೆಲುವಣ್ಣ,  ಮನೇಲಿ ಯಾವುದೋ ಕಿರಿ ಕಿರಿ..ಅಲ್ಲಿ ಕಾಲ್ಗಳು ನಿಲ್ಲಿಲ್ಲ . ಹಾಗಾಗಿ, ಇಲ್ಲಿಗೆ ದೌಡಾಯಿಸಿ ಬಂದೆ.  ಇಲ್ಲಿ ನೆಮ್ಮದಿ ಸಿಗ್ತದೆ ಕಣಣ್ಣ’ ಎಂದು  ಧರ್ಮಣ್ಣ ಸಮಜಾಯಿಷಿ ನೀಡಿದ.  
‘ಆಯ್ತು ಬುಡು.. ಈಗ ಇಸ್ಯಕ್ಕೆ ಬರ್ತೀನಿ, ನೀನು ನಂಗೆ ಸಹಾಯ ಮಾಡ್ಬೇಕು ಕಣಣ್ಣ’ ಎಂದು ಚೆಲುವ ಪೀಠಿಕೆ ಹಾಕಿದ.
‘ಅದೇನ್ಲಾ ?’
‘ಈ ಏರಿಯಾನಾಗೆ ಎಣ್ಣೆ ಡಾಕ್ಟ್ರು ಇದ್ದಾರಂತೆ.  ನಿಂಗೇನಾದ್ರೂ ಗೊತ್ತಾ ?’
‘ಅದ್ಯಾವ ಎಣ್ಣೆ ಕಣ್ಲಾ ?’  ಎಣ್ಣೆ ಅಂಗಡಿ ಮುಂದೆ ನಿಂತು ಅದೇನ್ಲಾ ಎಣ್ಣೆ ಬಗ್ಗೆ
ಕೇಳ್ತೀಯಾ ?
‘ಏಯ್..ಬುಡು..ಹಾಸ್ಯ ಮಾಡ್ಬೇಡ. ನನಗೆ ಮಂಡಿ ನೋವು ಶಾನೆ ಇದೆ. ಹಾಗಂತಾ, ಆತನ್ನ ಹುಡ್ಕೊಂಡು ಬಂದಿವ್ನಿ’
‘ಅದ್ಯಾಕೆ ತಿರುಗಾಡಿ ಮತ್ತೇ ಮಂಡಿ ನೋವು ಹೆಚ್ಚಿಗೆ ಮಾಡ್ಕೊಳ್ತೀಯಾ. ಇಲ್ಲೇ ಬಾರಿನಲ್ಲಿ ಎಣ್ಣೆ ಹೊಡೆದು, ರೆಸ್ಟ್ ಮಾಡಿಬಿಡು, ಎಲ್ಲಾ ಹೊಂಟೋಯ್ತದೆ.’ ಎಂದು ಸಲಹೆ ಮಾಡಿದ.
‘ಅದೇನು ಹೇಳ್ತೀ  ಧರ್ಮಣ್ಣ, ನಾನೀಗ ಎಣ್ಣೆ  ಹಾಕ್ತಿಲ್ಲ.  ಯಾಕೆಂದ್ರೆ ಡಾಕ್ಟರ್ ತಾವ ಹೋಗ್ತೇನೆ.  ನಾನು ಎಣ್ಣೆ ಹಾಕ್ಕೊಂಡು  ಅಲ್ಲಿಗ ಹೋದ್ರೆ, ಆತ ಬಾರಿಸಿಬಿಡ್ತಾನೆ.’
‘ನಿನಗೆ ಎಣ್ಣೆ ಬೇಡಾಂದ್ರೆ ಬೇಡ.  ನನಗಾದರೂ ಸ್ವಲ್ಪ ಅನುಕೂಲ ಮಾಡಿ ಕೊಡು.  ಆಮೇಲೆ ನಿಂಗೆ ಡಾಕ್ಟರ್ ವಿವರ ತಿಳಿಸ್ತೇನೆ’ ಎಂದ ಧರ್ಮಣ್ಣ.
ಸ್ನೇಹಿತ ಹೀಗೆ ಹೇಳಿದ ಕೂಡಲೇ, ಚೆಲುವ ಸಂತೋಷಗೊಂಡು ಒಂದು ಕ್ವಾರ್ಟರ್ ಬಾಟಲಿ ಆತಂಗೆ ಕೊಡಿಸಿಯೇ ಬಿಟ್ಟ. ಅದು ಧರ್ಮಣ್ಣನ ಕೈ ಸೇರುತ್ತಲೇ, ಗಟ ಗಟಾಂತ ಕುಡಿದು ಬರಗೆಟ್ಟವನಂತೆ  ಖಾಲಿ ಮಾಡಿ ಬಿಟ್ಟ. !  ಚೆಲುವನಿಗೆ ದಿಗಿಲಾಯಿತು.  ಇವನು ಬರೀ ಎಣ್ಣೆ ಹಾಕಿದ, ಆದ್ರೆ ಆ ಡಾಕ್ಟರ್ ಬಗ್ಗೆ ಏನೂ ಹೇಳುತ್ತಿಲ್ಲವಲ್ಲ ?  ಚೆಲುವ ಆತನನ್ನು ವಿವರ  ನೀಡಲು  ಪೀಡಿಸಿದಾಗ;
‘ಚೆಲುವಣ್ಣ ನೀನು ತುಂಬಾ ಒಳ್ಳೆಯವನು ಕಣ್ಲಾ, ಇನ್ನೊಂದು ಕ್ವಾರ್ಟರ್  ಕೊಡಿಸು,                     ನಾನು ಆಣೆ ಮಾಡಿ ಹೇಳ್ತೇನೆ, ನಿನ್ನನ್ನು ಆ ಎಣ್ಣೆ ಡಾಕ್ಟರ್ ಬಳಿಗೆ ನಾನೇ ಕರ್ಕೊಂಡು ಹೋಗ್ತೇನೆ’ ಎಂದ.
‘ಬೇಡ..ಇಷ್ಟೇ ಸಾಕು’
‘ಅದೇನು, ನಿಂಗೆ ವಿವರಗಳು ಬೇಕೋ ಬೇಡ್ವೊ ?’
‘ಅದ್ಕೆ ಅಂತ್ಲೆ ನಿಂಗೆ ಒಂದು ಕ್ವಾರ್ಟರ್ ಕೊಡಿಸಿದೆ. ನೀನಲ್ಲಿಗೆ ಹೋಗೋದೆನ್ಬೇಡ, ನಂಗೆ ವಿವರ ಕೊಟ್ಬಿಡು.  ನಾನೇ ಅವರನ್ನು ಹುಡ್ಕೊಂಡು ಹೋಗ್ತೇನೆ. ?’
‘ಅದ್ಹೇಗೆ  ಸಾಧ್ಯ ?  ನೀನು ನಂಗೆ ಎಣ್ಣೆ ಕೊಡಿಸಲೇ ಬೇಕು ಅಷ್ಟೇ’ ಎಂದ.
ಥೂ.!. ಇವನನ್ನು ನಾನೇ ಮೈ ಮೇಲೆ ಎಳೆದುಕೊಂಡ ಹಾಗಾಯ್ತಲ್ಲಾ ಎಂದು ಚೆಲುವ ಪರಿತಪಿಸಿದ. ಈಗ ಚೆಲುವನಿಗೆ ಹೋಗಲೂ ಬಿಡುತ್ತಿಲ್ಲ, ವಿಳಾಸಾನೂ ಕೊಡ್ತಿಲ್ಲ.  
ಈಗ ಅನಿವಾರ್ಯತೆ ಮೂಡಿ, ಆತನಿಗೆ ಮತ್ತೊಂದು ಬಾಟಲಿ ಕೊಡಿಸಿದ.  ಅದನ್ನೂ ಕೂಡಾ ತಡ ಮಾಡದೆ ಖಾಲಿ ಮಾಡಿದ ಭೂಪ !. ಅದೇನೋ ಒಮ್ಮೆಲೇ ಅಷ್ಟೆಲ್ಲಾ ಗುಟುಕು ಹಾಕಿದ್ದರಿಂದ ಆತನಿಗೆ ಮಂಪರು ಮೂಡಿದ ಹಾಗೆ ಆಗಿ, ನಿಂತಲ್ಲಿಯೇ  ಕುಸಿದು ಬಿದ್ದು ಅರೆ ಪ್ರಜ್ಞೆಯವನಾದ.  ಚೆಲುವ ಗಾಭರಿಗೊಂಡು, ಆತನನ್ನು ಎತ್ತಿ ಒಂದು ಮೂಲೆಯಲ್ಲಿ ಕುಕ್ಕರಿಸಿ, ತಾನು ಅಲ್ಲಿಂದ ಹೊರಡಲು ಸಿದ್ಧನಾದ.  ಆದರೆ,  ತತ್ ಕ್ಷಣಕ್ಕೆ ಬಹುಶಃ ಕೃತಜ್ಞತೆಯ ಫಲವೋ ಏನೋ ಧರ್ಮಣ್ಣಅಲ್ಪ ಸ್ವಲ್ಪ ಎಚ್ಚರಗೊಂಡು ಚೆಲುವನನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಉಸುರಿದ;
‘ಚೆಲುವ  ಥ್ಯಾಂಕ್ಸ್ ಕಣ್ಲಾ.  ನನ್ನಲ್ಲಿ ದುಡ್ಡೇ ಇರಲಿಲ್ಲ. ನಿನ್ನಿಂದ ಹೇಗೋ ಎಣ್ಣೆ ಪಡೆಯುವುದಕ್ಕೆ ಸುಳ್ಳು ಹೇಳಿದೆ.  ನನಗೆ ನಿಜವಾಗಿಯೂ ಯಾವ ಡಾಕ್ಟರ್ ತಿಳಿದಿಲ್ಲ. ನೀನೆ ಪ್ರಯತ್ನ ಮಾಡಿ ತಿಳಿದುಕೋ.  ದೇವ್ರು ನಿಂಗೆ ಒಳ್ಳೇದು ಮಾಡ್ಲಿ’ ಎಂದು ಹೇಳಿ ಧರ್ಮಣ್ಣ ಕೈತೊಳೆದುಕೊಂಡ !  
ಚೆಲುವ ಆ ಕ್ಷಣದಲ್ಲಿ ಕೋಪಗೊಂಡರೂ, ತನ್ನ ಖೊಟ್ಟಿ ನಸೀಬಕ್ಕೆ ಶಪಿಸಿದ. ಅಲ್ಲಿಂದ ಹೊರಟು ಬೀದಿಗೆ ಇಳಿದು, ಅತ್ತ ಇತ್ತ ರಸ್ತೆಯಲ್ಲಿ ಗಂಭೀರವಾಗಿ ನೋಡಿದ. ತನಗೆ ಪರಿಚಯದವರ್ಯಾರೂ ಅಲ್ಲಿ ಕಾಣಲಿಲ್ಲ.  ಹಾಗೆಯೇ, ತನ್ನ ಹೆಜ್ಜೆಗಳನ್ನು ಮುಂದುವರೆಸಿ, ಯಾರಲ್ಲಿ ವಿಚಾರಿಸಿದರೆ ತಿಳಿಯಬಹುದು ಎಂದು ಲೆಖ್ಖಚಾರ ಹಾಕಿದ. ಆಗ ಆತನಿಗೊಂದು ವಿಚಾರ ಹೊಳೆಯಿತು. ಆ ಡಾಕ್ಟರ್ ವಿವರ  ಸಾಬ್ರುಗೇನೇ ತಿಳಿದಿರುತ್ತದೆ. ಅವರಲ್ಲಿಯೇ ವಿಚಾರ ಮಾಡಬೇಕು ಎಂದು ಸಿದ್ಧನಾದ. ಆ ನಿಟ್ಟಿನಲ್ಲಿ ಮುಂದಕ್ಕೆ ಸಾಗಿದಾಗ,  ಅದೃಷ್ಠವಾತ್ ಒಬ್ರು  ಸಾಹೇಬರು ರಸ್ತೆಯಲ್ಲಿ ಸಿಕ್ಕಾಗ ಸಂತೋಷಗೊಂಡ.  ಅದೇ ಸಮಯದಲ್ಲಿ ಡಾಕ್ಟರ್ ಹೆಸರು ಅರ್ಧಂಬರ್ಧ ನೆನಪಿಗೆ ಬಂತು. ಅದನ್ನು ನೆನಪಿನಲ್ಲಿ ಇಟ್ಟುಕೊಂಡ. ಅಷ್ಟರಲ್ಲಿ ಸಾಬ್ರು ಎದೆಯ ಮೇಲೆಯೇ ಬಂದಂತಾದಾಗ;  
‘ಅಣ್ಣಾ..ಸಾಹೇಬಣ್ಣ ನಂಗೆ ಸ್ವಲ್ಪ ಸಹಾಯ ಮಾಡು ?’
‘ಏನ್ ಭೈ..ಏನ್ ಮದದ್ ಬೇಕಿತ್ತು ?’
‘ನಂಗೆ ಮಂಡಿ ನೋವು ಶಾನೆ ಇದೆ.  ಇಲ್ಲೊಬ್ರು  ‘ಎಣ್ಣೆ ಡಾಕ್ಟ್ರು’ ಇದ್ದಾರಂತೆ, ನಿಮಗೆ
ಗೊತ್ತಾ ?’
‘ಅರೆ ಭೈ,  ಅಲ್ಲೆ ಇಲ್ಲೆ ಯಾಕೆ ಹೋಗ್ತೀ, ಬೆಹತರ್ ದವಾಖಾನಿಗೆ ಹೋಗ್ಬಿಡು, ಅಲ್ಲಿಯವರು ನಿನ್ನ ನೋವನ್ನು ಸರಿ ಮಾಡ್ತಾರೆ’ ಎಂದ.
‘ಬೇರೆ ಕಡೆ ಬೇಡಣ್ಣ.  ಇಲ್ಲಿಯ ಡಾಕ್ಟರ್ ಅಗಸರ್ ಬಹಳೇ ಪ್ರಸಿದ್ಧಿ ಅಂತ ಕೇಳ್ದೆ ‘ ಎಂದಾಗ;
‘ಅರೆ ಅರೇ ಟಹರೋ ಭೈ….ಅದು ಅಗಸರ್ ಅಲ್ಲಾ.. ಅದು ಅಸಗರ್.. ‘ಡಾಕ್ಟರ್ ಅಸ್ಗರ್ ಅಲಿ’ ಅಂತ’ ಎಂದ.
‘ಒಹ್..ಅದೇ ಕಣಣ್ಣಾ , ನಂಗೆ ಗ್ಯಪ್ತಿ ಬರಲಿಲ್ಲ. ಅವರು ಎಲ್ಲಿರ್ತಾರೆ ?  
‘ಅಸ್ಗರ್ ಅಲಿ ಸಾಹೇಬ್ರು  ಸಾಲಾರಿಯ ಮೊಹಲ್ಲಾದಲ್ಲಿ ಇರ್ತಾರೆ.  ಹೀಗೆಯೇ ನೇರಕ್ಕೆ ಹೋದ್ರೆ, ಅಲ್ಲಿ ಒಂದು ಮಸ್ಜಿದ್ ಸಿಗ್ತದೆ.  ಅದೇ ಸಾಲಾರಿಯ ಮಸ್ಜಿದ್.  ಅದರ ಬಾಜೂನೆ  ಅಸ್ಗರ್ ಅಲಿ ಸಾಹೇಬ್ ಇರ್ತಾರೆ. ಅಲ್ಲಿಗೆ ಹೋಗಿ ವಿಚಾರಿಸಿ’ ಎಂದು ಹೇಳಿದಾಗ;
‘ಸಾಹೇಬಣ್ಣ ಥ್ಯಾಂಕ್ಸ್ ಕಣಣ್ಣ’
‘ಕೋಯೀ ಬಾತ್ ನಹಿ’ ಎಂದು ಹೇಳಿ ಸಾಬ್ರು ಅಲ್ಲಿಂದ ಕದಲಿದರು.  

ಈಗ ಚೆಲುವನಿಗೆ ನಿಧಿ ಸಿಕ್ಕ ಹಾಗೆ ಆಯಿತು.  ಆ ಸಾಬ್ರು  ಹೇಳಿದ ಹಾಗೆ ಮೊದಲು ಮಸೀದಿಯನ್ನು ಹುಡುಕುತ್ತಾ ಹೋದ.  ಸ್ವಲ್ಪ ದೂರದಲ್ಲಿ ಅದು ಕಂಡಾಗ ಈತನಿಗೆ ಖುಷಿ ಮೂಡಿತು.  ಅದರ ಪಕ್ಕದಲ್ಲಿಯೇ ಒಂದು ಚಿಕ್ಕ ರಸ್ತೆ ಇತ್ತು.  ಅಲ್ಲಿ ಯಾವ ವಾಹನಗಳು ತಿರುಗಾಡುತ್ತಿದ್ದಿಲ್ಲ.  ಅಲ್ಲಿ ಎಲ್ಲರೂ ನಡೆದುಕೊಂಡೇ ಸಾಗುತ್ತಿದ್ದರು. ಚೆಲುವ ಅಲ್ಲಿಂದ ಕೆಲವು ಹೆಜ್ಜೆಗಳನ್ನು ಹಾಕಿದ ಮೇಲೆ ಅಲ್ಲಿ ‘ಡಾಕ್ಟರ್ ಅಸ್ಗರ್ ಅಲಿ ಸಾಬ್ರ’ ಬಗ್ಗೆ  ವಿಚಾರಿಸತೊಡಗಿದ.  ಯಾರೋ ಒಬ್ಬರು ಬೆರಳು ಮಾಡಿ, ಬಲಕ್ಕೆ ತಿರುಗಿ ನೇರಕ್ಕೆ  ಹೋಗಬೇಕೆಂದು ತಿಳಿಸಿದರು.  ಈತ ಹಾಗೆಯೇ ಮಾಡಿ ಕೊನೆಗೂ ಸಾಬ್ರು ಮನೆ ತಲುಪಿದ.  ಅವರ ಮನೆಯ ಮುಂದೆ ನಿಂತು ಆಚೆ ಈಚೆ ನೋಡುತ್ತಿರುವ ಈತನನ್ನು ಗಮನಿಸಿದ  ವ್ಯಕ್ತಿಯೊಬ್ಬ ಬಳಿಗೆ ಬಂದು ಪ್ರಶ್ನಿಸಿದ;
‘ಅರೆ ಭೈ ಕ್ಯಾ..ಹೋನಾ …..ಯಾರ್ಗೆ ಬೇಕಾಗಿತ್ತು ?’
‘ಅಣ್ಣಾ..ನಂಗೆ ಮಂಡಿ ನೋವು, ಅಸಗರ್ ಸಾಬ್ರು ಬೇಕಾಗಿತ್ತು’ ಎಂದ.
‘ಹೌದಾ..ಅಲ್ಲಿ ಪಕ್ಕದ ಕೋಣೆಯಲ್ಲಿ ಕೂತುಕೊಳ್ಳಿ, ನಾನು ಅವರನ್ನು ಕಳಿಸುತ್ತೇನೆ ಎಂದು ಆತ ಹಾಗೆ ಹೇಳಿ ಕೋಣೆಯೊಳಕ್ಕೆ ಹೊರಟು ಹೋದ.  ಕೆಲವು ಸಮಯದ ಬಳಿಕ ಮೇಲೆ ಇನ್ನೊಬ್ಬರು  ಬಂದು ವಿಚಾರಿಸಿದರು;
‘ಏನು..ವಿಷ್ಯ ?’
‘ಅಣ್ಣಾ…..ಡಾಕ್ಟರ್ ಸಾಬ್ರುನ ನೋಡ್ಬೇಕಾಗಿತ್ತು’
‘ಅವರನ್ನು ನೋಡಲು ಸಾಧ್ಯವಿಲ್ಲ’
‘ಅದ್ಹೇಗೆ ಸಾಧ್ಯವಿಲ್ಲ ? ನಾನು ದೂರದಿಂದ ಬಂದಿದ್ದೇನೆ. ನನಗೆ ಮಂಡಿ ನೋವು ಶಾನೆ  ಇದೆ.  ಅವ್ರನ್ ತೋರ್ಸಿ, ನನ್ನ ಕಷ್ಟ ಹೇಳ್ಕೊತೀನಿ ?
‘ಸರಿ..ಒಳಗೆ ಬನ್ನಿ. ‘ ಎಂದು ಇನ್ನೊಂದು ಕೋಣೆಗೆ ಚೆಲುವನನ್ನು ಕರೆದುಕೊಂಡು ಹೋದ. ಅಲ್ಲಿ ಒಬ್ಬ ವ್ಯಕ್ತಿ ಆಸೀನನಾಗಿದ್ದ. ಈತನನ್ನು  ಕರೆದುಕೊಂಡು ಹೋದ ವ್ಯಕ್ತಿ ಅವರ
ಕಡೆಗೆ ಬೆರಳು ಮಾಡಿ;
‘ಇವರೇ ಡಾಕ್ಟರ್ ಅಸಗರ್ ಅಲಿ ಸಾಹೇಬ್, ಮಂಡಿ ವೈದ್ಯರು’ ಎಂದ. ಆಗ ಚೆಲುವ ಕುಳಿತಿದ್ದ ವ್ಯಕ್ತಿಗೆ ;
‘ಡಾಕ್ಟರಣ್ಣ ನಮಸ್ಕಾರ..’ ಎಂದು ಎರಡೂ ಕೈಗಳನ್ನು ಜೋಡಿಸಿದ.  ಆದರೆ, ಆ ವ್ಯಕ್ತಿ ಸ್ಪಂದಿಸಲಿಲ್ಲ.  ಅವರಿಗೆ ತಾನು ಹೇಳಿದ್ದು ಕೇಳಿಸಿತೋ ಇಲ್ಲವೋ ಎಂದು ಇನ್ನೊಮ್ಮೆ ಹಾಗೆಯೇ ಹೇಳಿದ.  ಆಗಲೂ, ಅವರು ಈತನ ಕಡೆಗೆ ನೋಡಲೇ ಇಲ್ಲ. ಆ ಸಾಹೇಬ್ರು ತಾವು ಕುಳಿತಲ್ಲಿಂದ ಮೇಲೆಯೇ ನೋಡುತ್ತಿದ್ದರು.  ಅದೇನು ನೋಡುತ್ತಿದ್ದರೋ ತಿಳಿಯಲಿಲ್ಲ. ಚೆಲುವ ಗಾಬರಿಯಾಗಿ ಈ ವ್ಯಕ್ತಿ ನನಗೆ ಹೇಗೆ ಔಷಧಿ ಕೊಡಬಲ್ಲ ಎಂದು ತನಗೆ ತಾನೇ ಪ್ರಶ್ನಿಸಿಕೊಂಡ. ಅದನ್ನು ಅರ್ಥ ಮಾಡಿಕೊಂಡ ಅಲ್ಲಿದ್ದಾತ ಚೆಲುವನನ್ನು ಎಚ್ಚರಿಸಿ;
‘ಅವರು ಹಾಗೇನೇ..ನಡೆಯಿರಿ ಹೊರಗೆ’ ಎಂದ.
ಚೆಲುವನಿಗೆ ಏನೂ ಅರ್ಥವಾಗಲಿಲ್ಲವಾದರೂ,  ಅಸ್ಗರ್ ಸಾಬ್ರಿಗೆ ಬಾಗಿ ನಮಸ್ಕರಿಸಿದ. ಆಗ ಆತ ಹೇಳಿದ;
‘ನಿಮ್ದುಕೆ ಸಲಾಂ ಅವ್ರೀಗೆ ತಲುಪಲ್ಲ… ಚಲೋ’ ಎಂದ. ಆಮೇಲೆ ಚೆಲುವ ಮೊಗಸಾಲೆಗೆ ಹೋಗಿ ಕುಳಿತುಕೊಂಡ.  ಆಮೇಲೆ ಅಲ್ಲಿದ್ದ ವ್ಯಕ್ತಿ ಈತನನ್ನು ಪ್ರಶ್ನಿಸಲು ಪ್ರಾರಂಭಿಸಿದ;
‘ನಿಮ್ದು ಕಾ ಎಸ್ರು ?’
‘ಚೆಲುವ’
‘ಸಮಸ್ಯೆ ಏನು ಭೈ ?’
‘ಅಣ್ಣಾ ನಂಗೆ ಮಂಡಿ ನೋವು ಶಾನೇ ಕಾಡ್ತದೆ.  ಆ ಸಾಬ್ರ ಎಸ್ರು ಕೇಳ್ಕೊಂಡು ಇಲ್ಲಿಯವರೆಗೆ ಬಂದೀವ್ನಿ.  ಆದರೆ, ಅವ್ರು ಮಾತಾಡ್ತಿಲ್ಲ ? ಅವರು ಅದ್ಹೇಗ್  ಔಷಧಿ ಕೊಡ್ತಾರೆ ?
‘ಅವರು ಹದಿನೈದು ವರ್ಷಗಳಿಂದ ಹೀಗೆಯೇ ಇದ್ದಾರೆ.  ಅವರ ಜೊತೆಗೆ ಕೆಲಸ ಮಾಡಿ,  ಅನುಭವ ಪಡೆದ ನಾನೇ ಈಗ ಔಷದ ಕೊಡುತ್ತಿದ್ದೇನೆ. ನನ್ನನ್ನು ನಂಬಿ, ನಿಮಗೆ ಮಂಡಿ ನೋವು ತಕ್ಕ ಮಟ್ಟಿಗೆ ಕಡಿಮೆ ಆಗುವಂತೆ ಮಾಡ್ತೇನೆ’ ಎಂದರು.
‘ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಿ ಸಾಹೇಬ್ರ.’ ಎಂದು ತನ್ನ ಎರಡೂ ಮಂಡಿಗಳನ್ನು ಅವರಿಗೆ ತೋರಿಸಿದ. ಅಲ್ಲದೆ, ವಿಪರೀತ ನೋವು ಇರುವ ಕಡೆಗೆ ಬೆರಳು ಮಾಡಿ ಕೂಡಾ ತೋರಿಸಿದ.
ಆ ಸಾಬ್ರು ಆತನ ಮಂಡಿಗಳ ಮೇಲೆ ಕೈಯಾಡಿಸಿ, ಒತ್ತಿ ಹಿಡಿದು ಪರೀಕ್ಷಿಸಿದರು. ಆತನ ಕಾಲುಗಳನ್ನು ಮೇಲೆ, ಕೆಳಗೆ ಎತ್ತಿ ಕೆಳಗಿಳಿಸಿ ನೋಡಿದರು.  ಹಾಗೆ ತಮ್ಮ ಪರೀಕ್ಷೆ ಮುಗಿಸಿ, ಕಾಲು ಲೀಟರ್ ಎಣ್ಣೆಯ ಬಾಟಲಿಯನ್ನು ಚೆಲುವನಿಗೆ ಕೊಟ್ಟು,  ಒಂದು ಸಾವಿರ ರೂಪಾಯಿ ಕೊಡಲು ಹೇಳಿದರು. ಆಗ ಚೆಲುವ ಗಾಭರಿಯಾಗಿ ಕೇಳಿದ;
‘ಅಣ್ಣಾ, ಇಷ್ಟು ಚಿಕ್ಕ ಬಾಟಲಿಗೆ ಒಂದು ಸಾವಿರ ಅಂದ್ರೆ ಹೇಗೆ ? ಎಂದ.
‘ಅರೆ..ಭೈ ನಿಮ್ಗೆ ನೋವು ಕಡಿಮೆ ಆಗ್ಬೇಕೋ , ಬೇಡ್ವೋ’ ಎಂದ.  
‘ಡಾಕ್ಟರಣ್ಣ ಕೋಪ ಮಾಡ್ಕೋ ಬೇಡ.  ಏನೋ ದುಡ್ಡು ಜಾಸ್ತಿ ಅನ್ಸಿತು ಅದ್ಕೆ ಹಾಗೆ ಹೇಳ್ದೆ. ಆಯ್ತಣ್ಣ  ನೀವು ಹೇಳಿದಷ್ಟು ಕೊಡ್ತೇನೆ.  ನಂಗೆ ಮಂಡಿ ನೋವು ಕಡಿಮೆ ಆಗ್ಬೇಕು ಅಷ್ಟೇ ‘ ಎಂದು ಮತ್ತೆ ಕೈ ಜೋಡಿಸಿದ.  
‘ಠೀಕ್ ಹೈ. ಈ ದವಾ ತಯಾರ್ ಮಾಡೋದ್ರಲ್ಲಿ ನಮ್ಮ ಮೆಹನತ್ ಬಹಳಾ ಇದೆ.  ಅಲ್ಲದೆ, ನಾವು ಇದರ ಗ್ಯಾರಂಟೀ ಕೊಡ್ತೇನೆ. ದಿನಾಲೂ ತಪ್ಪದೆ ಮಂಡಿ ನೋವು ಇರುವಲ್ಲಿ ಹಚ್ಚಿಕೊಳ್ಳಿ.  ಒಂದು ತಿಂಗಳ ನಂತರ ಬಂದು ತಿಳಿಸಿ’ ಎಂದ.
ಚೆಲುವಣ್ಣ ಆತನಿಗೆ ಒಂದು ಸಾವಿರ ರೂಪಾಯಿ ಎಣಿಸಿ ಕೊಟ್ಟು, ನಮಸ್ಕರಿಸಿ  ಅಲ್ಲಿಂದ ಹೊರಡಲು ತಯಾರಾದಾಗ, ಸಣ್ಣ ಸಾಬ್ರು ಒಂದು ಸಲಹೆ ನೀಡಿದ;
‘ನಿಮ್ಮ ಕಾಲ್ಗಳ ಮೇಲೆ ಅತೀಯಾದ ಭಾರ ಹಾಕಬೇಡಿ. ಅಲ್ಲದೆ, ಕೆಳಗೆ ಕೂಡ್ರುವುದು, ಮೇಲೇಳುವುದು ಮಾಡಿದರೆ, ಮಂಡಿ ನೋವು ಜಾಸ್ತಿಯಾಗ್ತದೆ. ಸಾಧ್ಯವಾದಷ್ಟು                            ಕಾಲುಗಳನ್ನು ಮಡಿಚಿಕೊಂಡು ಕೆಳಗೆ ಕೂಡ್ರೋದು ಬೇಡ’ ಎಂದು ಹೇಳಿ ಈತನನ್ನು ಬೀಳ್ಕೊಟ್ಟ !.  

About The Author

Leave a Reply

You cannot copy content of this page

Scroll to Top