ಕಾವ್ಯ ಸಂಗಾತಿ
ಶ್ಯಾಮಿಲಿ ಪ್ರವೀಣ್
“ಭಾವಚಿತ್ರಗಳು”

ಕೈಲೆರಡು ಭಾವಚಿತ್ರಗಳು|
ಒಂದು ಬಣ್ಣದ್ದು; ಮತ್ತೊಂದು ಕಪ್ಪು-ಬಿಳುಪು;
ಎರಡರಲ್ಲೂ ಒಂದೊಂದು ಭಾವಗಳು|
ನಗು-ಅಳು; ಸುಖ-ದುಃಖ ಮಸುಕು-ಹೊಳಪು||
ಕೆದಕಲು ಸಮಯವೂ ಬೇಕು;
ನೋಡುತ್ತಾ-ನೋಡುತ್ತಾ ತಾಳೆಹಾಕುತ್ತಾ ಕೂರಲು!!
ಕಪ್ಪು-ಬಿಳುಪಿನಂತಲ್ಲ ಬಣ್ಣದ್ದು;
ನೋಡಿದರೆ ನೇರ-ಹಸಿರು; ದೂರ ದೃಷ್ಠಿಯ ಹಂಗಿಲ್ಲದ್ದು!
ಇದ್ದವರು ಇದ್ದಾರೆ; ಇಲ್ಲದವರು ಇಲ್ಲ!
ಮಾಸಿದವಲ್ಲ; ಪಕ್ಕನೆ ಗುರುತು ನೆನಪು ಎಲ್ಲಾ!!
ಆದರೆ…
ಬಣ್ಣದಂತಲ್ಲ ಕಪ್ಪು-ಬಿಳುಪಿನವು;
ಅವು ನಿನ್ನೆಗಳು ಆಳ ಕಾಣದ ತಳದವು|
ನೆನಪಾಗಲು ಗುರುತಿರಬೇಕು;
ಗುರುತಾಗಲು ನೆನಪಿರಬೇಕು|
ಬಣ್ಣದವು ಬದಲಾದರೂ-ಸುಣ್ಣದವು ಬದಲಾಗದು|
ನಾಳೆಗಳು ಬರುತ್ತಾದರೂ; ನಿನ್ನೆಗಳು ಬರಲಾಗದು|
ಹೊಸತರ ಬೇರಿನ್ನೂ ಹಳತರಲ್ಲೇ ಇದೆ|
ಬಣ್ಣಕ್ಕೆ ಕಪ್ಪು-ಬಿಳುಪೇ ಮೂಲವೆಂಬಂತೆ!!
ಶ್ಯಾಮಿಲಿ ಪ್ರವೀಣ್



