ಕಾವ್ಯ ಸಂಗಾತಿ
ಬಾಗೇಪಲ್ಲಿ ಅವರ
ಗಜಲ್
ಜುಲ್ ಖಾಫಿಯಾ ರದೀಫ್ ಸಹಿತ


ನಿನ್ನಂದವ ನೋಡುವ ಭಾಗ್ಯ ಸಾಕೆನಗೆ ಅಪ್ಪುಗೆ ಬೇಕಿಲ್ಲ
ತುಟಿ ಹೊರಡಿಸುವ ಸುಹಾಸ ಬೇಕೆನಗೆ ಸಲಿಗೆ ಬೇಕಿಲ್ಲ
ಹೃದಯಾಂತರಾಳದಿ ಚೂರು ಸ್ಥಾನವ ನನಗೆ ಕಾಯ್ದಿರಿಸು
ನಿನ್ನ ಸನಿಹ ಇರುವ ಸುಖ ಮಾತ್ರ ನೀಡೆನಗೆ ಹೆಚ್ಚಿಗೆ ಬೇಕಿಲ್ಲ
“ನಾನಿನ್ನ ಪ್ರೀತಿಸುವೆ” ಎಂಬ ಉಲಿ ಕೇಳಲು ಕಾತುರ ನಾನು
ಬಿಗಿ ಬಾಹು ಬಂಧನದ ಸಖ ಬೇಡೆನಗೆ ಹುಸಿನಗೆ ಬೇಕಿಲ್ಲ
ನಿನ್ನೂಂದಿಗೆ ಸಹ ಬಾಳ್ವೆ ಎಂದಿಗೂ ಊಹಿಸಿ ಆಸೆ ಪಟ್ಟಿಲ್ಲ
ಸಣ್ಣೊಂದು ಪ್ರೀತಿಯ ಕುಡಿನೋಟ ಬೀರೆನಗೆ ಕಾಡಿಗೆ ಬೇಕಿಲ್ಲ
ಕೃಷ್ಣಾ! ಗರತಿ ರಾಧೆ ಸದಾ ರಮಿಸಿದಳು ಮಧುರೆಯಲಿ ನಿನ್ನ
ಅಯ್ಯೋ ಪಾಪವೆ ಎನುತ ದಯೆ ತೋರೆನಗೆ ಮೈಲಿಗೆ ಬೇಕಿಲ್ಲ.
ಬಾಗೇಪಲ್ಲಿ



