ಪ್ರಬಂಧ ಸಂಗಾತಿ
ಶೈಲಜಾ ಪ್ರಸಾದ್
“ಕರವಸ್ತ್ರದ ಕರಾಮತ್ತು”


ಇದೇನಿದು, ಶೀರ್ಷಿಕೆ ಹೀಗಿದೆ ಅಂತ ಯೋಚಿಸ್ತಿದ್ದೀರ ?! ಲೇಖನ ಓದಿದ ಮೇಲೆ ನಿಮಗೇ ಗೊತ್ತಾಗುತ್ತೆ ಈ ಮಾತೆಷ್ಟು ಸತ್ಯ ಅಂತ. ಅದರಲ್ಲೂ ಇಂದಿನ ವಿಷಮ ಪರಿಸ್ಥಿತಿಯಲ್ಲಿ (`ಕರೋನ’ ವ್ಯಾಧಿ/ಕಾಯಿಲೆ ಎಂದು ಉದ್ದೇಶ ಪೂರ್ವಕವಾಗಿಯೇ ಹೇಳಿಲ್ಲ. ಎಲ್ಲೆಲ್ಲೂ ಅದರದ್ದೇ ಆವಾಜ್ ಕೇಳಿ…ಕೇಳಿ…. ಎಲ್ಲರಿಗೂ ಖಂಡಿತಾ ಬೇಸರವಾಗಿರುತ್ತೆ ಅಂತ ಗೊತ್ತು)
ಪುಟ್ಟ/ದೊಡ್ಡ ಕರವಸ್ತ್ರವೊಂದು ನಮ್ಮ ದಿನನಿತ್ಯದ ಕೆಲಸ-ಕರ‍್ಯಗಳಲ್ಲಿ ಎಂತಹ ಪ್ರಮುಖ ಪಾತ್ರ ವಹಿಸುತ್ತದೆ ಅಂತ ಗಮನಿಸಿದರೆ ನಿಜಕ್ಕೂ ಆಶ್ಚರ್ಯವೆನಿಸುವುದರಲ್ಲಿ ಅನುಮಾನವೇ ಇಲ್ಲ. `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಅಂತಾರೆ ಬಲ್ಲವರು. ಹಾಗೇ ಇದು ಚಿಕ್ಕ ವಸ್ತುವಾದರೂ ಇದರ ಕಾರ‍್ಯವ್ಯಾಪ್ತಿ ಬಹಳ ವಿಶಾಲವಾದದ್ದು.
ಆದರೆ ಇಂದಿನ ಪೀಳಿಗೆಯ ಮಕ್ಕಳಿಗೆ ಈ ಕರವಸ್ತ್ರದ ಬಗ್ಗೆ , ಅದರ ವ್ಯಾಪಕವಾದ ಬಳಕೆಯ ಬಗ್ಗೆ ತಿಳಿದಿಲ್ಲವೆಂದು ನನ್ನ ಭಾವನೆ. ಜತೆಗೆ ಅವರಿಗೆ ಈ ಬಗ್ಗೆ ಆಸಕ್ತಿಯೂ ಇಲ್ಲವೆನಿಸುತ್ತದೆ. ಅವರಿಗೇನಿದ್ದರೂ `ಯೂಸ್ ಅಂಡ್ ಥ್ರೋ’ ಸಂಸ್ಕೃತಿಯ ಕಾಗದದ ಟಿಷ್ಯೂಗಳಷ್ಟೇ ಪರಿಚಿತ. ಆದರೆ ಇದರಿಂದ ಸುಮ್ಮನೆ ಕಸ, ತ್ಯಾಜ್ಯಗಳು ಹೆಚ್ಚುತ್ತವೆಯೇ ವಿನಃ ಬೇರೇನೂ ಉಪಯೋಗವಿಲ್ಲ. ಒಂದೆಡೆ ಕಾಗದದ ಬಳಕೆಯನ್ನು ಕಡಿಮೆ ಮಾಡುವಂತೆ ಹೇಳುತ್ತ, ಇನ್ನೊಂದಡೆ ಟಿಷ್ಯುಗಳು, ಬಳಸಿ ಬಿಸಾಡುವ ತಟ್ಟೆ-ಲೋಟಗಳು….. ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜೊತೆ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಮತ್ತು ಮಕ್ಕಳ/ ವೃದ್ಧರ ಡಯಾರ‍್ಗಳೂ ಸೇರುತ್ತವೆ. ಇವೆಲ್ಲದ್ದಕ್ಕೂ ಪರ‍್ಯಾಯವಾಗಿ ಬಟ್ಟೆ/ ಬೇರೆ ಏನಾದರೊಂದನ್ನು ಬಳಸಬೇಕಾಗಿರುವುದು ಇಂದಿನ ತುರ್ತುಅಗತ್ಯವಾಗಿದೆ.
ಈಗ ನಮ್ಮ ಕಾಲದ (ಅಂದರೆ ೬೦-೭೦ ರ ದಶಕಗಳ ) ಕರವಸ್ತ್ರವೆಂಬ ಬಹೂಪಯೋಗಿ ವಸ್ತುವಿನ ಬಗ್ಗೆ, ಅದರ ಬಹುರೂಪಿ ಕಾರ‍್ಯಗಳನ್ನು ಅವಲೋಕಿಸಿದರೆ ಅಚ್ಚರಿಯಾಗುತ್ತದೆ.ಈ ಸಂದರ್ಭದಲ್ಲಿ ಕವಿವರ‍್ಯರ ಪದ್ಯವೊಂದು ಅಯಾಚಿತವಾಗಿ ನೆನಪಿಗೆ ಬರುತ್ತದೆ. ಸಾಧಾರಣವಾಗಿ ನಮ್ಮ ಕಾಲದವರಿಗೆಲ್ಲಾ ಇದು ಗೊತ್ತೇ ಇರುತ್ತದೆ.”ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ವಿಭೂತಿಯಾದೆ…..ನೀನಾರಿಗಾದೆಯೋ ಎಲೆ ಮಾನವ…..”
ಅನ್ನೋ ರೀತಿ ಈ ಕರವಸ್ತ್ರವು ಎಲ್ಲಾ ಕಾಲಕ್ಕೂ, ಸಮಯಕ್ಕೂ ಒದಗಿಬರುತ್ತದೆ.
ಮೊದಲಿಗೆ ನಾವು(ಸ್ತ್ರೀ/ಪುರುಷರು) ಆಚೆ ಹೋಗುವಾಗ ಮರೆಯದೆ ಶುಭ್ರವಾಗಿ ಒಗೆದ ಕರವಸ್ತ್ರವನ್ನು ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ.ನಮಗೆ ಆಗ ಇದರಿಂದ ಆಗುವ ಅನುಕೂಲತೆಗಳ ಅರಿವಾಗುತ್ತದೆ.ಹೊರಗಡೆ ಹೋದಾಗ ಮುಖ್ಯವಾಗಿ ಮಾಲ್ ಗಳಲ್ಲಿನ ವಾಷ್ರೂಂಗಳನ್ನು ಬಳಸಿದ ನಂತರ ನಮ್ಮದೇ ಶುಭ್ರವಾದ ಕರ‍್ಚೀಫ್ ಅನ್ನು ಬಳಸಿ ಸಾಮಾಜಿಕ ಪ್ರಜ್ಞೆಯನ್ನು ಮೆರೆಯಬಹುದಾಗಿದೆ. ಇದರಿಂದ ಕೆಲವರಾದರೂ ಉತ್ತೇಜಿತರಾಗಿ ತಂತಮ್ಮ ಕರವಸ್ತ್ರಗಳನ್ನು ಉಪಯೋಗಿಸಿದರೆ ಎಷ್ಟೋ ಟಿಷ್ಯೂಗಳ ಉಳಿತಾಯವಾಗಿ ಪರಿಸರಕ್ಕೆ ಉತ್ತಮ ಕೊಡುಗೆ ನಮ್ಮಿಂದ ಆದಂತಾಗುತ್ತದೆ. ವಿಧಿಯಿಲ್ಲದಾಗ ಟಿಷ್ಯೂಗಳನ್ನು ಬಳಸಲು ಅಡ್ಡಿಯೇನಿಲ್ಲವಲ್ಲ.
ಇನ್ನು ಮಾರ್ಕ್ಕೆಟ್ಟಿಗೆ ಹೋದಾಗ ಚೀಲವನ್ನು ತೆಗೆದುಕೊಂಡು ಹೋಗಲು ಅಕಸ್ಮಾತ್ ಮರೆತುಹೋಗಿದ್ದರೆ, ಇವು ಆಪತ್ಭಾಂದವನಂತೆ ನೆರವಾಗುತ್ತದೆ. ಸಣ್ಣ ಪುಟ್ಟ ಸಾಮಾನುಗಳನ್ನು/ ತರಕಾರಿಯನ್ನು ಇದರಲ್ಲಿ ಕಟ್ಟಿಕೊಳ್ಳಬಹುದು.
ಬೇಸಿಗೆಯ ಕಾಲದಲ್ಲಿ ಈ ಪುಟ್ಟ ಕರವಸ್ತ್ರವು ಬೆವರೊರೆಸಿಕೊಳ್ಳಲು ಅಗತ್ಯವಾಗಿ ಬೇಕೇ ಬೇಕಲ್ಲವೇ? ಈಗಿನ ಪರಿಸ್ಥಿತಿಯಲ್ಲಿ ಕೆಮ್ಮು/ಸೀನು ಬಂದಾಗ ಅವಶ್ಯಕವಾಗಿ ಇರಲೇಬೇಕಾದ ವಸ್ತುವಿದು ಎಂದರೆ ತಪ್ಪಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಎಷ್ಟೋ ಜನರು ಮಾಸ್ಕ್ ಗಳ ಬದಲಿಗೆ ಇದನ್ನೇ ಬಳಸುವುದನ್ನು ಪ್ರತಿನಿತ್ಯ ನಾವು ನೋಡುತ್ತಿದ್ದೇವೆ. ಸ್ವಚ್ಛವಾಗಿ ಒಗೆದ ಕರವಸ್ತ್ರಗಳು ನಿಜಕ್ಕೂ ನಮಗೆ ಅನೇಕ ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ.`ಅವರವರ ಭಾವಕ್ಕೆ ಅವರವರ ಭಕುತಿಗೆ’ ಅನ್ನೋ ಮಾತಿನಂತೆ ಯಾರಿಗೆ ಹೇಗೆ ಬಳಸಲು ಸ್ಫೂರ್ತಿ ಸಿಗುತ್ತದೆಯೋ ಅದರಂತೆ ಬಳಸಲು ಅಡ್ಡಿಯೇನಿಲ್ಲವಲ್ಲ.! ಮಳೆಗಾಲದಲ್ಲಿ ಕೊಡೆ ತೆಗೆದುಕೊಂಡು ಹೋಗಲು ಮರೆತರೆ ಆ ತಕ್ಷಣಕ್ಕೆ ನೆರವಿಗೆ ಬರುವುದೇ ಕರವಸ್ತ್ರಅಲ್ಲವೇ?!
ಹೀಗೆ ಬಹುರೂಪಿಯಾದ , ಎಲ್ಲಾ ಕಾಲಕ್ಕೂ/ಸಂದರ್ಭಕ್ಕೂ ಸಲ್ಲುವ ಮಹಾನ್ ಕರವಸ್ತ್ರಕ್ಕೆ ನಾವು ಕೊಡಬೇಕಾದಷ್ಟು ಮಾನ್ಯತೆಯನ್ನು ನೀಡುತ್ತಿಲ್ಲವೆಂದು ನನ್ನ ಅನಿಸಿಕೆ. ನೀವೇನಂತೀರಾ ?!
ಶೈಲಜಾ ಪ್ರಸಾದ್



