ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸಂಜೆ ಮುಗಿಲ ಬಣ್ಣದಿಂದ  ಬಿರಿದ ಇಂದ್ರ ಚಾಪದಂತೆ,
ಮೌನರಾಗ ತಂತಿಯಲ್ಲಿ ಮಿಡಿವ ಭಾವ ಶ್ರಾವ್ಯ ನೀನು.
ನಾ ಮರೆಯ ಹೊರಟರೂ ಮನಸು ನಿನ್ನೇ ಕರೆದಂತೆ,
ಮರೆತ ಕ್ಷಣ ರಾಗವಾಗಿ ಮಿಡಿವೆ ನನ್ನ ಮನದಿ ನೀನು.

ಪ್ರತಿ ರಾತ್ರಿ ಕನಸಲಿ ಮನದ ಕದವ ತೆರೆದವನೇ,
ನನ್ನ ಪ್ರೇಮ ದೇಗುಲದಿ ಬೆಳಗೋ ದಿವ್ಯ ದೀಪ್ತಿ ನೀ.
ಉಸಿರ ಪ್ರತಿ ಸ್ಪಂದನದಲಿ ಮಧುರ ಗೀತೆಯಾದವನೇ,
ನನ್ನ ಶೂನ್ಯದಾಗಸದಿ ಮಿನುಗೋ ಚೈತ್ರದ ಚುಕ್ಕಿ ನೀ.

ಮಾತು ಮರೆತ ಹೃದಯಕೆ ನಿನ್ನ ಹೆಸರೇ ಪಲ್ಲವಿ,
ಕನಸ  ಕಣ್ಣ ನೈದಿಲೆಗೆ ನಿನ್ನ ರೂಪವೇ ಚಂದಿರ.
ನನ್ನ ಭಾವ ನಂದನಕೆ ನೀನೆ ಒಲವ ಭೈರವಿ,
ನನ್ನ ಉಸಿರ ತಾಳಕೆ ನೀನೇ ಮಧುರ ಸಪ್ತಸ್ವರ.

ಬರಿದಾದ ಮನದೊಳಗೆ  ನಿಂತೆ ನೀ ವಸಂತವಾಗಿ,
ಹೂವಿನ ದಳದಲಿ ಉಳಿದ ಮಂಜಿನ ಹನಿಯಂತೆ.
ಕಳೆದುಹೋದ ಕ್ಷಣಗಳೆಲ್ಲ  ಮರಳಿವೆ ಕಾವ್ಯವಾಗಿ,
ಕಣ್ಣಂಚಿನ ಹನಿಯೊಂದು ನಿನ್ನ ಕಥೆಯ ಹೇಳಿದಂತೆ.


About The Author

Leave a Reply

You cannot copy content of this page

Scroll to Top