ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ನೀ ನನ್ನ ಅಪೂರ್ಣ ಕವಿತೆ!”


ನಿನ್ನನ್ನು ನಿನ್ನನ್ನಷ್ಟೇ ಬರೆಯಲು
ಎಷ್ಟೋ ಕವಿತೆಗಳು ನನ್ನೊಳಗೆ ಕಾಯುತ್ತಿವೆ!
ಪ್ರತಿ ಬಾರಿಯು
ಭಾವನೆಗಳು ಎದೆಯ ತುಂಬಿ
ಕಣ್ಗಳ ಅರಳಿಸಿ ಬೆರಳಿಗೆ ತಾಗಿ
ಅಕ್ಷರಗಳಾಗದೆ ನಿಂತು ಬಿಡುತ್ತವೆ!
ನೀನಿಲ್ಲದ ಪ್ರತಿ ದಿನದ
ಮನೆಯ ಒಳಗಿನ ಮೌನದಂತೆ!
ನೀನು ದೂರವಾದ ಮೇಲೆ
ಚಂದ್ರನಿದ್ದರೂ ಇರುಳಿಗೆ ಬೆಳಕಿಲ್ಲ!
ಮಳೆಯಾದರೂ ಮಣ್ಣಿನ ಪರಿಮಳವಿಲ್ಲ!
ಹೂವು ಅರಳಿದರೂ ಸುಗಂಧವಿಲ್ಲ!
ನನ್ನ ಮನೆಯ ದಾರಿಯಲ್ಲಿ
ಪ್ರತಿಕ್ಷಣವೂ ಹಾದುಹೋಗುವ ಗಾಳಿ
ನಿನ್ನ ಹೆಜ್ಜೆಗಳ ಸುದ್ದಿಯನ್ನೇ ಹೊತ್ತು ತರಬಹುದೆಂದು
ಮನಸ್ಸು ಇನ್ನೂ ಕಾಯುತ್ತಾ ಇಣುಕಿ ನೋಡುತ್ತಿದೆ!
ವಿರಹ
ನೀನು ಇಲ್ಲದಿರುವುದಕ್ಕಿಂತ!
ನೀನು ಇದ್ದ ಮೈಮನ ಈ ಮನೆಯೆಲ್ಲ
ನಿನ್ನ ನೆನಪಿನಿಂದ ತುಂಬಿಹೋಗಿರುವುದು!
ಗಾಢ ಮೌನ
ನನ್ನ ಹಗಲು ರಾತ್ರಿಗಳ ಮೇಲೆ
ಇಳಿಯದ ಮಳೆಯ ಮೋಡದಂತೆ!
ಮಳೆ ಸುರಿಯದೆ ಆಕಾಶವೆಲ್ಲ
ಭಾರವಾಗಿಯೇ ಉಳಿದಂತೆ!
ನಿನ್ನನ್ನು ಮರೆಯಲು ಹೊರಟ
ಪ್ರತಿ ಆಲೋಚನೆಯು ಪ್ರತಿ ನಡೆಯು
ಮತ್ತೆ ನಿನ್ನ ನೆನಪಿನ ಬಳಿಗೇ ಬಂದು ನಿಲ್ಲಿಸುತ್ತದೆ!
ದಾರಿ ತಪ್ಪಿದ ನದಿಯೊಂದು ಹುಚ್ಚು ಕುದುರೆಯಾಗಿ
ಸಮುದ್ರವನ್ನೇ ಹುಡುಕುವಂತೆ!
ಒಮ್ಮೆ ನೀನು
ನನ್ನೆಲ್ಲ ದಿನಗಳ ಬೆಳಗಾಗಿದ್ದೆ!
ಈಗ ಅದೇ ದಿನಗಳು
ಸೂರ್ಯೋದಯವನ್ನೇ ಮರೆತಿರುವ
ದೀರ್ಘ ಸಂಜೆಯಂತಾಗಿ ಸುದೀರ್ಘ ಇರುಳಂತಿವೆ!
ನಿನ್ನ ಹೆಸರನ್ನು ಬರೆದಾಗ
ಪೆನ್ನಿನ ಮಸಿ ಮಾತ್ರ ಕಾಗದದ ಮೇಲೆ ಮೂಡುವುದಿಲ್ಲ!
ನನ್ನೊಳಗೆ ಮೌನವಾಗಿ ಉಳಿದಿರುವ
ವಿರಹದ ಕಣ್ಣೀರು
ಸಾಲುಸಾಲುಗಳಾಗಿ ಜಾರಿ ಮನ ಹಗುರಾಗಬೇಕಿದೆ!
ನಿನ್ನನ್ನು ಒಂದೇ ಕವಿತೆಯಲ್ಲಿ ಬರೆಯಲು ಸಾಧ್ಯವಿಲ್ಲ
ನೀನು ಕೇವಲ ಒಂದು ನೆನಪಲ್ಲ!
ನನ್ನ ಉಸಿರು ಉಸಿರಿನಲ್ಲೂ
ಮತ್ತೆ ಮತ್ತೆ ಹುಟ್ಟುವ
ನನ್ನದೇ ಅಪೂರ್ಣ ಕವಿತೆ!
ಟಿ.ಪಿ.ಉಮೇಶ್




ಸೊಗಸಾಗಿದೆ