ಕಾವ್ಯ ಸಂಗಾತಿ
ಶಿವರಾಜ ಅರಳಿ
ಸೆರಗು


೧
ಕಪ್ಪುಗಟ್ಟಿದ ಮೋಡದ ಎದೆ
ಬಹುವಾಗಿ ಬಿಗಿದಿದೆ;ಕಳೆಯ ಕಳೆದು.
ಸಹಜ ಸ್ಥಿತಿಗೆ ಮರಳದ
ಸವಿತೃವಿನ ಗಂಟಲಲಿ
ಉಸಿರು ಸಿಕ್ಕು ರೋಧಿಸುತಿದೆ
ಹೆಜ್ಜೆ ಮೂಡದ ಕಾಡಲ್ಲಿ
ಆಕ್ರಂದನ;ಆತ೯ನಾದ
ಬೆಂದು ಬಾಡಿದ ಆತ್ಮ
ನಿವಾ೯ತಕ್ಕೆ ನೇಣು ಬಿಗಿದುಕೊಂಡಿದೆ
ಅಂತೆ-ಕಂತೆಗಳ ಕಟ್ಟಲ್ಲ ಇದು
ನುರಿತು ಪಾಕವಾದ ಎಸಳನ್ನು ಕೇಳಿ
ಬಾಗಿ ದಾಟಿದ ಕಥೆಯ
ನೂಲು ಬಿಡಿಸುತ್ತದೆ ಎಳೆಯಾಗಿ
೨
ಆತ್ಮಕ್ಕೂ ಗೊತ್ತಿದೆ;ಅಂಚಿನ ಅಲೌಕಿಕತೆ
ನಾಲಿಗೆಯ ತುಂಡು ದೇಹಕೆ ಕಣ್ಣಿಲ್ಲ
ತುದಿಯಲಿ ಸಿಕ್ಕು
ಮಾಯವಾಗುವ ನೆರಳಿಗೆ
ಬೆಳಕಿನ ಮೊರೆತ ಎಂದೂ ಕೇಳಿಸದು
ಬಹುಶಃ ಹುದುಗಿರಬಹುದು
ಅನುಭೂತಿ, ಅನುಭಾವದ ಕನ್ನಡಿ.
ಅನುಗಾಲದ ತುಂತುರು ಹನಿಗಳಲಿ
ಮೊಳೆತ ಚಿಗುರುಗಳು
ಮಾಯೆಯ ಸರಳಿನ ಉಸಿರುಗಳು.
ನಿತ್ಯ ನೆಗೆವ ಜೀವತಂತುವಿನ
ತೆವಲನು ಕಟ್ಟಿ ಹಾಕಲು ಸಾಧ್ಯವೇ.?
ಆಳದ ಕೂಪದಲಿ ಸಿಲುಕಿ
ವಿಹಗನಂತೆ ಕಾಣುವುದು ವಿರಳ..!!
ಶಿವರಾಜ ಅರಳಿ




Meaningful poem