ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಾರನೇ ದಿನ ಸುಮತಿಯ ತಮ್ಮ ಕೆಲಸಕ್ಕೆ ಹೋಗುವ ಮುಂಚೆಯೇ ತನ್ನ ಅಕ್ಕ,ಅಳಿಯ ಮತ್ತು ಮಗಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಕಿಡ್ನಿ ಫೌಂಡೇಶನ್ ಆಸ್ಪತ್ರೆಯ ಬಳಿ ಬಿಟ್ಟನು. ಹೊರಡುವ ಮೊದಲು ಅಳಿಯನನ್ನು ಹತ್ತಿರ ಕರೆದು…. “ನೀನು ಅಕ್ಕನನ್ನು ವೈದ್ಯರಿಗೆ ತೋರಿಸಿ, ಅವರು ಏನು ಹೇಳುತ್ತಾರೆ ಎಂಬುದನ್ನು ನನಗೆ ತಿಳಿಸು…. ಕೆಲಸ ಮುಗಿಸಿಕೊಂಡು ಸಂಜೆ ನಾನು ಇಲ್ಲಿಗೆ ಬರುತ್ತೇನೆ”…. ಎಂದು ಹೇಳಿ, ಅಕ್ಕ ಮತ್ತು ಮಗಳಿಗೆ ಧೈರ್ಯ ಹೇಳಿ ಕೆಲಸಕ್ಕೆ ಹೊರಟನು. 

ಮಾವ ಹೊರಟು ಹೋದ ನಂತರ ಸುಮತಿಯ ಮಗಳು ತಾಯಿಯನ್ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿ… “ಅಮ್ಮಾ… ನೀನು ಇಲ್ಲಿ ಕುಳಿತಿರು…. ನಾನು ಮತ್ತು ಬಾವ ಆಸ್ಪತ್ರೆಯ ರಿಸೆಪ್ಶನ್ ಗೆ ಹೋಗಿ ಇಲ್ಲಿಯ ಚಿಕಿತ್ಸೆಯ ಬಗ್ಗೆ ಎಲ್ಲಾ ವಿವರಗಳನ್ನು ತಿಳಿದುಕೊಂಡು ಬರುವೆವು”…. ಎಂದು ಹೇಳಿ ಬಾವನ ಜೊತೆ ನಾದಿನಿ ರಿಸೆಪ್ಷನಿಸ್ಟ್ ಬಳಿಗೆ ಹೋದಳು. ಅಲ್ಲಿ ರಿಸೆಪ್ಶನ್ ಬಳಿಗೆ ಹೋಗಿ ಸಕಲೇಶಪುರದ ವೈದ್ಯರು ಕೊಟ್ಟ ಶಿಫಾರಸ್ಸು ಪತ್ರವನ್ನು ಹಾಗೂ ಸುಮತಿಯ ಇತರೆ ಚಿಕಿತ್ಸೆಗಳ ವಿವರಗಳು ಇರುವ ಕಡತವನ್ನು ತೋರಿಸಿ ವಿಚಾರಿಸಿದಳು. ರಿಸೆಪ್ಶನ್ ನಲ್ಲಿ ಕುಳಿತಿದ್ದ ಸ್ವಾಗತಗಾರ್ತಿ…. “ಮೊದಲು ನಿಮ್ಮ ತಾಯಿಯನ್ನು ಒಳಗಡೆ ಇರುವ ತುರ್ತು ಚಿಕಿತ್ಸಾ ವಿಭಾಗದ ವಾರ್ಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ವರ್ಗಕ್ಕೆ ನಿಮ್ಮ ತಾಯಿಯನ್ನು ಇಲ್ಲಿ ಅಡ್ಮಿಟ್ ಮಾಡುವ ಬಗ್ಗೆ ತಿಳಿಸಿ ಮತ್ತು ಈ ಚೀಟಿಯನ್ನು ಅವರಿಗೆ ತೋರಿಸಿ…. ನಿಮ್ಮ ತಾಯಿಯನ್ನು ಅಲ್ಲಿ ಅಡ್ಮಿಟ್ ಮಾಡಿದ ಬಳಿಕ ಪುನಃ ಇಲ್ಲಿಗೆ ಬನ್ನಿ…. ನಂತರ ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತೇನೆ”…. ಎಂದರು. 

ಸ್ವಾಗತಗಾರ್ತಿಗೆ ಧನ್ಯವಾದವನ್ನು ತಿಳಿಸಿ ನೂರು ರೂಪಾಯಿಯನ್ನು ಕೊಟ್ಟು ನೋಂದಣಿ ಮಾಡಿಸಿ, ತಾಯಿಯ ಬಳಿಗೆ ಬಂದಳು…. “ಅಮ್ಮಾ…. ನಿನ್ನನ್ನು ಇಲ್ಲಿನ ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲು ಮಾಡಲು ತಿಳಿಸಿದ್ದಾರೆ…. ಬಾ ಹೋಗೋಣ…. ನಿನ್ನನ್ನು ಅಲ್ಲಿ ದಾಖಲಿಸಿದ ನಂತರ ನಾನು ಮತ್ತು ಬಾವ ಹೋಗಿ ಇನ್ನಿತರೆ ಕಾರ್ಯವಿಧಾನಗಳ ಬಗ್ಗೆ ವಿಚಾರಿಸಿಕೊಂಡು ಮತ್ತೆ ಬರುತ್ತೇವೆ”…. ಎಂದಳು. ಸುಮತಿಗೆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವರ್ಗ ಹಾಗೂ ಅವರ ಶಿಸ್ತಿನ ನಡವಳಿಕೆಯನ್ನು ಕಂಡು ಬಹಳ ಮೆಚ್ಚುಗೆಯಾಯಿತು. ವಾರ್ಡಿನ ಹಾಸಿಗೆಯ ಮೇಲೆ ಮಲಗಿದಾಗ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಳು. ಇನ್ನು ಇಲ್ಲಿ ತನಗೆ ಉತ್ತಮ ಚಿಕಿತ್ಸೆ ಖಂಡಿತ ದೊರಕುತ್ತದೆ ಎಂಬುದು ಅವಳಿಗೆ ಖಾತ್ರಿಯಾಯಿತು. ನರ್ಸ್ ಒಬ್ಬರು ಬಳಿ ಬಂದು ಒಂದು ಚೀಟಿಯಲ್ಲಿ ಕೆಲವು ಔಷಧಿಗಳನ್ನು ಬರೆದು ನೀವು ವಾರ್ಡಿಗೆ ಬರುವಾಗ ಇದನ್ನು ಖರೀದಿಸಿಕೊಂಡು ಬನ್ನಿ ಎಂದು ಹೇಳಿದಳು…. “ಅಮ್ಮಾ …ನೀನು ಇಲ್ಲೇ ಮಲಗಿರು… ನಾವು ಈಗಲೇ ಬರುತ್ತೇವೆ”…. ಎಂದು ಸುಮತಿಗೆ ಹೇಳಿ ನರ್ಸ್ ಕೊಟ್ಟ ಚೀಟಿಯನ್ನು ಪಡೆದು ಬಾವನೊಂದಿಗೆ ಪುನಃ ರಿಸೆಪ್ಶನ್ ಬಳಿಗೆ ನಡೆದಳು. ಅಲ್ಲಿ ಹೋದಾಗ ಚಿಕಿತ್ಸೆಯ ಪೂರ್ಣ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರವನ್ನು ಬರೆದಿರುವ ಪ್ರತಿಯೊಂದು ಅವಳ ಕೈಗಿಟ್ಟರು. ನೀವು ಇದರಲ್ಲಿ ನಮೂದಿಸಿರುವ ಪ್ರಕಾರ ಈಗಲೇ ನಮ್ಮ ಕೌನ್ಸಿಲಿಂಗ್ ವಿಭಾಗಕ್ಕೆ ಹೋಗಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತಾಡಿ ಹಣವನ್ನು ಕಟ್ಟಿ ಬನ್ನಿ. ಅದರ ರಸೀದಿಯನ್ನು ತಂದು ಇಲ್ಲಿ ನಮಗೆ ತೋರಿಸಿ. ನಿಮ್ಮ ತಾಯಿಗೆ ಚಿಕಿತ್ಸೆ ಕೊಡಿಸುವ ಎಲ್ಲಾ ಏರ್ಪಾಡುಗಳನ್ನು ನಾವು ಮಾಡುತ್ತೇವೆ ಎಂದರು. 

ಅವರು ಕೊಟ್ಟ ಪ್ರತಿಯನ್ನು ಪಡೆದು ಕೌನ್ಸಿಲಿಂಗ್ ವಿಭಾಗದೆಡೆಗೆ ಇಬ್ಬರೂ ಹೊರಟರು. ಅಲ್ಲಿ ಹೋದಾಗ ಸಿಬ್ಬಂದಿಯು ಇಬ್ಬರನ್ನೂ ಕುಳಿತುಕೊಳ್ಳಲು ಸೂಚಿಸಿ ಇಂತಿಂಥ ಚಿಕಿತ್ಸೆಗೆ ಇಂತಿಷ್ಟು ವೆಚ್ಚವಾಗುತ್ತದೆ ಎಂಬ ವಿವರವನ್ನು ನೀಡಿ, ಅಲ್ಲಿ ನಮೂದಿಸಿದ ಮೊತ್ತದ ಹಣವನ್ನು ಪಾವತಿಸುವಂತೆ ತಿಳಿಸಿದರು. ತಾಯಿಗೆ ಡಯಾಲಿಸಿಸ್ ಚಿಕಿತ್ಸೆ ಕೊಡಿಸಬೇಕಾದರೆ ತಾವು ಭರಿಸಬೇಕಾದ ಹಣದ ಮೊತ್ತವನ್ನು ಕಂಡು ಇಬ್ಬರೂ ದಂಗಾದರು. ಏಕೆಂದರೆ ಅಲ್ಲಿ ನಮೂದಿಸಿದಂತೆ ವೈದ್ಯರ, ದಾದಿಯರ, ವಾರ್ಡಿನ ಮತ್ತು ಇತರೆ ಖರ್ಚುಗಳ ಮೊತ್ತವನ್ನು ಭರಿಸುವಷ್ಟು ಹಣ ಅವರ ಕೈಲಿರಲಿಲ್ಲ. ಗೆಳತಿ ಕೊಟ್ಟಿದ್ದ ಹಣ ಸಾಲುತ್ತಿರಲಿಲ್ಲ. ಬಾವನ ಬಳಿಯೂ ಹೆಚ್ಚು ಹಣವಿಲ್ಲ ಎಂಬುದನ್ನು ಆ ಹುಡುಗಿ ಅರಿತಿದ್ದಳು. ತನಗೆ ಹಾಗೂ ಹಾಗೂ ತಂಗಿಗೆ ಬರುತ್ತಿದ್ದ ಸಂಬಳ ಮನೆಯ ಖರ್ಚು ಮತ್ತು ಆಸ್ಪತ್ರೆಯ ಸಣ್ಣ ಪುಟ್ಟ ಖರ್ಚುಗಳಿಗೆ ಆಗುತ್ತಿತ್ತು. ಮಾವನ ಬಳಿ ಕೇಳೋಣವೆಂದರೆ, ಅವರಿಂದಲೂ ಇದು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಏಕೆಂದರೆ ಮಾವನ ಹಣಕಾಸಿನ ಸ್ಥಿತಿಯನ್ನು ಸುಮತಿಯ ಮಗಳು ಬಲ್ಲವಳಾಗಿದ್ದಳು. ಅದೂ ಅಲ್ಲದೇ ಡಯಾಲಿಸಿಸ್ ಚಿಕಿತ್ಸೆಯನ್ನು ತಿಂಗಳಿಗೆ ನಾಲ್ಕು ಬಾರಿಯಾದರೂ ತಾಯಿಗೆ ಕೊಡಿಸಬೇಕು ಎಂಬ ಸತ್ಯದ ಅರಿವೂ ಆಯಿತು. ಪ್ರತೀ ಬಾರಿಯೂ ಡಯಾಲಿಸಿಸ್ ಮಾಡಿಸುವಾಗಲೂ ಹೆಚ್ಚು ಹಣದ ಅಗತ್ಯ ಇರುತ್ತದೆ. ನಮಗೆ ಆಶ್ರಯ ನೀಡಿದ ಎಷ್ಟೇಟಿನ ಸಾಹುಕಾರರಲ್ಲೂ ಈ ರೀತಿಯ ದುಬಾರಿ ಚಿಕಿತ್ಸೆಗಾಗಿ ಹಣ ಪಡೆಯುವುದು ಕೂಡ ಸರಿಯಲ್ಲ. ಯಾರೂ ದಿಕ್ಕಿಲ್ಲದ ನಮಗೆ ಆಶ್ರಯ ನೀಡಿದ್ದಲ್ಲದೇ ತಾಯಿಯ ಹಲವು ಚಿಕಿತ್ಸೆಗಳಿಗಾಗಿ ಅವರು ಈವರೆಗೂ ಯಥೇಚ್ಛವಾಗಿ ಹಣವನ್ನು ಖರ್ಚು ಮಾಡಿದ್ದಾರೆ. 

ಕೂಲಂಕುಶವಾಗಿ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ತಾಯಿ ಜೀವಂತವಿರುವವರೆಗೂ ಈ ಚಿಕಿತ್ಸೆಯನ್ನು ಆಗಾಗ ಕೊಡಿಸುತ್ತದೆ ಇರಬೇಕು. ಡಯಾಲಿಸಿಸ್ ಮಾಡಿಸುತ್ತಿದ್ದರೆ ತಾಯಿಯು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಬದುಕುಳಿಯುತ್ತಾಳೆ. ಆದರೆ ಅದಕ್ಕಾಗಿ ಹಣವನ್ನು ಎಲ್ಲಿಂದ ಹೊಂದಿಸುವುದು? ಈ ಎಲ್ಲ ಚಿಂತೆಗಳು ಒಮ್ಮೆಲೇ ಆ ಹುಡುಗಿಯ ಆಲೋಚನೆಯಲ್ಲಿ ಮೂಡಿ ಅವಳನ್ನು ಗೊಂದಲಕ್ಕೀಡು ಮಾಡಿತು. ಆಸ್ಪತ್ರೆಯ ಕುರ್ಚಿಯಲ್ಲಿ ಕುಳಿತು ದೀರ್ಘವಾಗಿ ಆಲೋಚನೆಯಲ್ಲಿ ಮಗ್ನಳಾದಳು….”ತುರ್ತು ನಿಗಾ ಘಟಕದ ವಿಭಾಗದಲ್ಲಿ ದಾಖಲಾದಾಗ ತನ್ನ ತಾಯಿಯ ಮುಖದಲ್ಲಿ ಮೂಡಿದ್ದ ಭರವಸೆ ಮತ್ತು ನೆಮ್ಮದಿಯ ಭಾವ ಈಗಲೂ ನಮ್ಮ ಮನವನ್ನು ತಲ್ಲಣಗೊಳಿಸುತ್ತಿದೆ…. ಏನು ಮಾಡಲಿ ದೇವರೇ!? ತಾಯಿಯ ಚಿಕಿತ್ಸೆಗಾಗಿ ಹಣವನ್ನು ಎಲ್ಲಿಂದ ಹೊಂದಿಸಲಿ?… ಚಿಕಿತ್ಸೆಯ ದುಬಾರಿ ಖರ್ಚಿಲ್ಲದೇ ಇಲ್ಲಿ ಬೆಂಗಳೂರಿನಲ್ಲಿ ದಿನವೂ ಓಡಾಡಲು, ಊಟದ ಖರ್ಚು ಮತ್ತು ಇನ್ನಿತರೆ ವೆಚ್ಚಕ್ಕೆ ಹಣದ ಅಗತ್ಯ ಇರುತ್ತದೆ….ನಾನು ಏನೇ ಪ್ರಯತ್ನ ಮಾಡಿದರೂ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಿಲ್ಲ”…. ಎಂದು ಸ್ವಗತ ಹೇಳಿಕೊಂಡ ಹುಡುಗಿ ಸ್ವಲ್ಪ ಹೊತ್ತು ಮೌನವಾಗಿ ಕುಳಿತಳು. ಒಂದೊಂದೇ ಆಲೋಚನೆಗಳು ಮನದಲ್ಲಿ ಹಾದು ಹೋದಾಗ ಅವಳಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ. ಮಂಡಿ ಮೇಲೆ ತಲೆಯೂರಿ ತಮ್ಮೆಲ್ಲರ ಹತಾಶ ಸ್ಥಿತಿಯನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಳು. ಅಳುವುದಲ್ಲದೆ ಅನ್ಯಮಾರ್ಗ ಅವಳಿಗೆ ಆ ನಿಮಿಷ ತೋಚಲಿಲ್ಲ. ನಾದಿನಿ ಅಳುತ್ತಿರುವುದನ್ನು ಕಂಡು ಬಾವನಿಗೆ ಕಸಿವಿಸಿಯಾಯಿತು. ಏನು ಹೇಳಿ ಆಕೆಯನ್ನು ಸಮಾಧಾನ ಪಡಿಸುವುದು ಎಂದು ಆತನಿಗೆ ತಿಳಿಯಲಿಲ್ಲ. ಅತ್ತು ಸಾಕಾಗಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಂತೆ ಸೀರೆಯ ಸೆರಗಿನಿಂದ ಕಣ್ಣುಗಳು ಹಾಗೂ ಮುಖವನ್ನು ಒರೆಸಿ ಕುಳಿತಲ್ಲಿಂದ ಎದ್ದಳು.


About The Author

Leave a Reply

You cannot copy content of this page

Scroll to Top