ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನಾನೋ ಗೋಡೆಯ ಮೇಲೆ ನೇತು ಹಾಕಿದ
ಸಾಮಾನ್ಯವಾದ ಗಾಜಿನ ಕನ್ನಡಿಯಾಗಿದ್ದೆ
ಯಾರ ಮುಖವನ್ನೂ
ಸುಂದರವೆಂದು ಕುರೂಪವೆಂದು ಹೇಳಿರಲಿಲ್ಲ
ಕಾಣಿಸಿದ್ದಷ್ಟೇ ಸತ್ಯವೆಂದುಕೊಂಡಿದ್ದೆ
ಅದಷ್ಟನ್ನೇ ತೋರುತ್ತಿದ್ದೆ!

ಅದೊಂದು ದಿನ
ಈ ಅಂಗಡಿಯವನು ಬಂದು ಖರೀದಿಸಿದ
ಹಸೆ ಹಾಕಿದ್ದ ಅವನ ಗೋಡೆಗೆ
ಅಂದವಾದ ಕನ್ನಡಿಯಾದೆ
ತಮ್ಮನ್ನ ನೋಡಿಕೊಳ್ಳುವ ಬಣ್ಣದವರಿಗೆ
ಬೆಲೆಪಟ್ಟಿಯು ತಗುಲಿತು
ನನ್ನ ಸತ್ಯಕ್ಕೂ
ಒಂದಷ್ಟು ದರ ನಿಗದಿಯಾಯಿತು!

ನನ್ನ ಮುಂದೆ ನಿಂತವರು
ತಮ್ಮ ಮುಖ ನೋಡಿಕೊಳ್ಳಲಿಲ್ಲ
ತಮಗೆ ಬೇಕಾದ ಮುಖವನ್ನೇ
ನನ್ನ ಮೇಲೆಲ್ಲಾ ಹುಡುಕಿದರು!

ತಮ್ಮ ಮುಖದ ಮೇಲಿದ್ದ
ಕಲೆ ಕಂಡರೆ
ನನ್ನನ್ನೇ ದೂಷಿಸಿದರು!
ತಮ್ಮ ಮುಖದ ಮೇಲಿದ್ದ
ಅಂದ ಕಂಡರೆ
ತಮ್ಮದೇ ಸೌಂದರ್ಯವೆಂದರು!
ನನ್ನ ಬೆಲೆಯೇನೂ ಕಡಿಮೆಯಾಗಲಿಲ್ಲ!
ನೆಲೆಯೂ ಬದಲಾಗಲಿಲ್ಲ!

ಒಬ್ಬನೋ ಆಯ ತಪ್ಪಿ
ನನ್ನ ಮೇಲೆ ಬಿದ್ದು ಒಡೆದುಹಾಕಿದ
ತನ್ನ ಮುಖದ ನಗ್ನ ಸತ್ಯ
ತನಗೇ ಇಷ್ಟವಾಗಲಿಲ್ಲವೆಂದು!

ಮತ್ತೊಬ್ಬನು ತನ್ನ ಬಳಸಿದ ಬಟ್ಟೆಯಿಂದ
ನನ್ನನ್ನು ಮುಚ್ಚಿಟ್ಟ
ತನ್ನೆಲ್ಲಾ ಕುರೂಪ
ಹೊರಗೆ ಕಾಣಬಾರದೆಂದು!

ಕೆಲಸವಿರದ ಮಾತಿಗರು ಕೂತುಣ್ಣುವ ಬುದ್ಧಿಗರು
ನನ್ನ ಮುಂದೆ ನಿಂತು
ಆಗಾಗ ಉಪದೇಶಿಸುತ್ತಾರೆ
ಸತ್ಯವನ್ನೇ ತೋರಿಸು ಎಂದು!
ಸತ್ಯ ತೋರಿಸಿದ ಕ್ಷಣ
ನನ್ನ ಮೇಲೆ ತಮ್ಮದೇ ಬಟ್ಟೆ ಹೊದಿಸುತ್ತಾರೆ!

ನಾನೀಗ ಕನ್ನಡಿಯಲ್ಲ
ಕಾಲದ ಸಾಕ್ಷಿ!
ಜೀವಗಳ ಕಾಣಿಸೊ ನಿರ್ಜೀವ ಅಕ್ಷಿ!

ಮುಖಗಳು ಬದಲಾಗುತ್ತಿವೆ
ಮುಖವಾಡಗಳು ಬದಲಾಗುತ್ತಿವೆ
ತಮ್ಮನ್ನೇ ನೋಡಿಕೊಳ್ಳುವ ಧೈರ್ಯ ಮಾತ್ರ
ಮೆಚ್ಚಿಕೊಳ್ಳುವ ಅಭಿಮಾನ ಮಾತ್ರ ಯಾರಲ್ಲು ಇಲ್ಲ!

ಕನ್ನಡಿ
ಇಹದ ಬದುಕುಗಳ ಮುನ್ನುಡಿ
ಸುಳ್ಳು ಹೇಳಲು ಕಲಿತಿಲ್ಲ!
ಸತ್ಯ ತೋರಲು ಮರೆತಿಲ್ಲ!


About The Author

Leave a Reply

You cannot copy content of this page

Scroll to Top