ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಹೂವು
ಕಂಡಾಗ ನದಿಯ ನೀರಿನೊಡನೆ
ಈಜಾಡಿದ ಹಾಗೆ
ಕದನ
ಕಂಡಾಗ ಬೆಂಕಿಯೊಡನೆ
ಕಾದಾಡಿದ ಹಾಗೆ
ಪರಿಹಾರ ಕಾಣದ ತಂಪು – ಬಿಸಿ
ಕದನವಿದು ಖಾಲಿ ಖಾಲಿ ಇದ್ದಂತೆ
ಇಬ್ಬರಲ್ಲೂ ….
ಗೆದ್ದವರು ಸೋತ ಹಾಗೆ!
ಸೋತವರು ಸತ್ತ ಹಾಗೆ!

ಹೂವಿನಂತಹ ಬದುಕಿನೊಡನೆ
ಇರುವಷ್ಟು ಹೊತ್ತು ಬಾಗಿಕೊಂಡ ಹಾಗೆ
ಬದುಕಿದರೆ.. ಹೀಗೆ
ಆಹಾ! ಎನುವ ವಿಸ್ಮಯದ ಹೂವು
ಕೊಲುವವನ ಕೈಯಲ್ಲಿ
ಇಬ್ಬರೂ
ತಮ್ಮ ಕ್ರೂರತೆಯನ್ನು
ಮರೆತು
ನೋಡುವ ಚುಂಬಕದ ರೇವು

ಆದಾಗ್ಯೂ
ಗುಂಡುಗಳ ಸುರಿಮಳೆಯಲ್ಲಿ
ನೆತ್ತರಿನ ಮಡುವಲ್ಲಿ
ಲಾಭ – ನಷ್ಟಗಳ ಲೆಕ್ಕಾಚಾರವೆಲ್ಲಿ?
ಗೊತ್ತುಂಟೆ….
ಕ್ಷಣಕ್ಷಣಕ್ಕೂ ವಿಸ್ತರಿಸುವ ವಿಶ್ವದ
ನಿತ್ಯ ಅನಂತ ಅವಿರ್ಭಾವದ
ಚಿರನೂತನತೆಯ ಬ್ರಹ್ಮಾಂಡದ ಕೊನೆಯತನಕ
ಬದುಕುವ
ಹಂಬಲದಿಂದ ನಡೆಯುವ ನವನವೀನ ಕದನಗಳು
ಗಂಭೀರ ವಿಚಾರಗಳು
ವಾದವಿವಾದಗಳು ತರ್ಕ ವಿತರ್ಕಗಳು
ಹೂವು, ನೋವು, ನಲಿವುಗಳ ಶಿಲಾಶಾಸನ
ಕಾಲ ವಿಶ್ರಮಿಸಿಕೊಳ್ಳಲು ಉಳಿಸಿದ
ಒಂದು ಹಳೆಯ ಆಸನ

ಈ ಕದನಗಳು
ಯುಗ ಯುಗಗಳ ಬಯಲಾಟ
ಕೃತದಿಂದ ಕಲಿಯವರೆಗೆ
ಜೀವದ ಹೂವುಗಳು ಪಾಠ ಕಲಿಯುವವರೆಗೆ..!!
ನಡೆಯುತ್ತಲೇ ಇರುತ್ತವೆಯೇ…?!


About The Author

1 thought on “ಅನ್ನಪೂರ್ಣ ಪದ್ಮಸಾಲಿ ಅವರ ಕವಿತೆ “ಹೂವು ಮತ್ತು ಕದನ””

Leave a Reply

You cannot copy content of this page

Scroll to Top