ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ ಅವರ
ಗಜಲ್


ಬಾಲರವಿಯು ಕದ್ದನೇನು ಅವಳ ಅಧರದ ಕೆಂಪನು ಸಾಕಿ
ಗುಲಾಬಿ ಹೂವು ಬೇಡಿತೇ ನಲ್ಲೆಯ ಕೆನ್ನೆಯ ರಂಗನು ಸಾಕಿ
ಅದೇಕೆ ಬಾನು ನೀರಸಗೊಂಡಿದೆ ಮೇಘ ಮುಸುಕಿನಲಿ
ಚಂದ್ರಿಕೆಯು ಸೆಳೆಯಿತೇ ನನ್ನವಳ ಮೈಯ ಬಿಳುಪನು ಸಾಕಿ
ಹೂದೋಟವೆಲ್ಲವೂ ಘಮಘಮಿಸಿದೆ ಅರಳಿದರಳುಗಳ ಸೌಗಂಧದಿಂದ
ಭ್ರಮರ ಬೆರಗುಗೊಂಡಿತೇ ಕಂಡು ಚೆಲುವೆಯ ಕುರುಳನು ಸಾಕಿ
ಕಡಲ ಅಲೆಗಳು ನಗುತಿವೆ ಒಯ್ಯಾರದಲಿ ದಡವ ಚುಂಬಿಸುತಲಿ
ಕಾರ್ಮೋಡ ಚಕಿತಗೊಂಡಿತೇ ನೋಡಿ ಕಂಗಳ ಕಾಡಿಗೆಯನು ಸಾಕಿ
ಠೀವಿಯಲಿ ಗರಿಗೆದರಿ ಕುಣಿಯುತಿದೆ ನವಿಲೊಂದು ದೂರದಲಿ
ಹೃದಯ ಹಾಡುತಿಹುದೇ ರಾಗವಾಗಿ ಬೇಗಂ ಳ ಒಲವನು ಸಾಕಿ
ಹಮೀದಾಬೇಗಂ ದೇಸಾಯಿ.



