ಲೇಖನ ಸಂಗಾತಿ
ಕವಿತಾ ಶ್ರೀನಿವಾಸ್ ನಾಯಕ್
“ಲೇ ಇರುವೆ.. ನಿನ್ನನ್ನ ಕಚ್ಚಲಾ?!”


(ಇರುವೆ ಕಡಿತ ಮತ್ತು ಸಂಸ್ಕಾರದ ಕಲಿಕೆ…)
“ಒಂದು ಚಿಕ್ಕ ಇರುವೆ ನಮಗೆ ಕಚ್ಚಬಹುದು… ಆದರೆ ನಾವು ಇರುವೆಗೆ ಮರಳಿ ಕಚ್ಚಲು ಸಾಧ್ಯವೇ?”
ಬೆಳಗಿನ ಜಾವ ಚಹಾ ಕುಡಿಯುತ್ತಾ ಕುಳಿತಾಗಲೋ ಅಥವಾ ದಿನದ ಯಾವುದೋ ಬಿಡುವಿನ ವೇಳೆಯಲ್ಲೋ ಈ ಮಾತು ಕಿವಿಗೆ ಬಿದ್ದರೆ, ಮೊದಲು ಮುಖದಲ್ಲಿ ಒಂದು ಸಣ್ಣ ನಗು ಮೂಡುವುದು ಸಹಜ. ಮೇಲ್ನೋಟಕ್ಕೆ ಇದು ಕೇವಲ ಒಂದು ತಮಾಷೆಯ ಸಾಲಿನಂತೆ ಕಂಡರೂ, ಇದರ ಆಳಕ್ಕೆ ಇಳಿದು ಯೋಚಿಸಿದರೆ ನಮ್ಮ ಜೀವನದಲ್ಲಿ ನಡೆಯುವ ದೊಡ್ಡದೊಂದು ಜೀವನ ಸತ್ಯ ಮತ್ತು ತತ್ವಜ್ಞಾನ ನಮಗೆ ಅರಿವಾಗುತ್ತದೆ.
ಜಗತ್ತಿನಲ್ಲಿ ನಾವೆಷ್ಟೇ ದೊಡ್ಡವರಾಗಿದ್ದರೂ, ಎಷ್ಟೇ ಅಧಿಕಾರ, ಅಂತಸ್ತು ಅಥವಾ ಹಣ ಸಂಪಾದಿಸಿದ್ದರೂ ಪ್ರಕೃತಿಯ ಒಂದು ಸಣ್ಣ ಜೀವಿ ನಮ್ಮನ್ನು ಅಲುಗಾಡಿಸಿಬಿಡಬಹುದು. ನಮಗಿಂತ ಕೋಟಿ ಪಟ್ಟು ಸಣ್ಣದಾಗಿರುವ ಒಂದು ಪುಟ್ಟ ಇರುವೆ ಕಚ್ಚಿದರೆ ನಮಗೆ ನೋವಾಗುತ್ತದೆ, ನಾವು ನಲುಗಿ ಹೋಗುತ್ತೇವೆ. ನಮ್ಮ ಅಹಂಕಾರಕ್ಕೆ ಪ್ರಕೃತಿ ನೀಡುವ ಅತ್ಯಂತ ಸರಳವಾದ ಎಚ್ಚರಿಕೆ ಇದು.
ಆದರೆ, ಕಚ್ಚಿದ ಇರುವೆಗೆ ನಾವು ಮರಳಿ ಕಚ್ಚಲು ಹೋದರೆ ಏನಾಗುತ್ತದೆ? ಅದು ಹಾಸ್ಯಾಸ್ಪದ ಮತ್ತು ಮೂರ್ಖತನ ಎನಿಸಿಕೊಳ್ಳುತ್ತದೆ. ಏಕೆಂದರೆ, ಇರುವೆಗೆ ಕಚ್ಚುವುದು ಅದರ ಸ್ವಭಾವ. ಆದರೆ ನಮಗೆ ಭಗವಂತ ವಿವೇಕವನ್ನು ಕೊಟ್ಟಿದ್ದಾನೆ.
ನಮ್ಮ ಇಂದಿನ ಬದುಕಿನ ಪರಿಸ್ಥಿತಿಯೂ ಹೌದು. ಸಮಾಜದಲ್ಲಿ, ನಮ್ಮ ಸುತ್ತಮುತ್ತ ಇರುವೆಗಳಂತಹ ಸಣ್ಣ ಮನಸ್ಥಿತಿಯ ಜನರು ಇರುತ್ತಾರೆ. ಅವರು ತಮ್ಮ ಮಾತಿನಿಂದಲೋ, ನಡವಳಿಕೆಯಿಂದಲೋ ನಮಗೆ ನೋವು ಕೊಡಬಹುದು ಅಥವಾ ಕೀಳಾಗಿ ನಡೆಸಿಕೊಳ್ಳಬಹುದು. ಆದರೆ ಅವರು ಮಾಡಿದ ಕೀಳು ಕೆಲಸವನ್ನೇ ನಾವು ಅವರಿಗೆ ಮರಳಿ ಮಾಡಲು ಹೋದರೆ, ನಮ್ಮ ಸಂಸ್ಕಾರಕ್ಕೂ ಅವರ ಅಜ್ಞಾನಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಕೆಟ್ಟದ್ದಕ್ಕೆ ಕೆಟ್ಟದ್ದೇ ಎಂದಿಗೂ ಸರಿಯಾದ ಉತ್ತರವಾಗಲು ಸಾಧ್ಯವಿಲ್ಲ. ರಸ್ತೆಯಲ್ಲಿ ಹೋಗುವಾಗ ನಾಯಿ ಬೊಗಳಿದರೆ, ನಾವು ಮರಳಿ ಬೊಗಳುವುದಿಲ್ಲ ಅಲ್ಲವೇ?
ಇರುವೆ ಕಚ್ಚಿದರೆ ನೋವಾಗುತ್ತದೆ ನಿಜ,
ಆದರೆ ಮರಳಿ ಕಚ್ಚಲು ಹೋಗುವುದು ಮೂರ್ಖತನ!
ಜೀವನದಲ್ಲೂ ಅಷ್ಟೇ… ನೋವು ಕೊಟ್ಟವರೆಲ್ಲರಿಗೂ
ಮರಳಿ ನೋವು ಕೊಡುತ್ತಾ ಕೂತರೆ,
ನಮ್ಮ ವ್ಯಕ್ತಿತ್ವವೇ ಮಣ್ಣು ಪಾಲಾಗುತ್ತದೆ.
ಕೆಲವೊಮ್ಮೆ ಮೌನ ಮತ್ತು ನಿರ್ಲಕ್ಷ್ಯವೇ ಅತ್ಯುತ್ತಮ ಪ್ರತಿಕಾರ.
ನಮಗೆ ನೋವು ಕೊಟ್ಟವರ ಮಟ್ಟಕ್ಕೆ ನಾವು ಇಳಿಯಬೇಕಾಗಿಲ್ಲ. ಇರುವೆಗೆ ಕಚ್ಚುವುದು ಸ್ವಭಾವವಾದರೆ, ಅದನ್ನು ನಿರ್ಲಕ್ಷಿಸಿ ನಮ್ಮ ಹಾದಿಯಲ್ಲಿ ನಾವು ಪ್ರೀತಿಯಿಂದ ಮುನ್ನಡೆಯುವುದೇ ನಿಜವಾದ ಬುದ್ಧಿವಂತಿಕೆ. ನಮ್ಮ ಶಕ್ತಿಯನ್ನು ನಾವು ಯಾರ ಮೇಲೆ, ಹೇಗೆ ಬಳಸಬೇಕು ಎಂಬ ವಿವೇಕವೇ ನಮ್ಮ ಶ್ರೀರಕ್ಷೆ ̤
ಕವಿತಾ ಶ್ರೀನಿವಾಸ್ ನಾಯಕ್




ಅರ್ಥಪೂರ್ಣ ಹಾಗೂ ಅಳವಡಿಕೆ ಲೇಖನ ಸೂಪರ್ ಮೇಡಂ