ಕಾವ್ಯ ಸಂಗಾತಿ
ಗಾಯತ್ರಿ ರವಿ. ಹುಬ್ಬಳ್ಳಿ
“ಗಾಂಧಿ ನೋಟು”


ಕಚೇರಿಯ ಖಜಾನೆಯಲ್ಲಿ
ಗಾಂಧಿ ನೋಟಿನದೇ
ದರ್ಬಾರು
ಹೊಸ ನೋಟುಗಳು
ಬಂದರೆ
ನೋಟವೆಲ್ಲ ಅವನೆಡೆಗೆ
ಸೂಸುವ
ನೋಟಿನ ಸುವಾಸನೆ
ಒಂದೇ ದಾರದಲ್ಲಿ
ನೂರರ ಕಟ್ಟು
ಈಗಷ್ಟೇ ಜನ್ಮತಳೆದ
ಎದ್ದೇಳಲು ಓಲಾಡುವ
ಎಳೆಗರುವಿನ ನೊಸಲು
ಲೆಕ್ಕ ಒಪ್ಪಿಸುವಾಗ
ಹೆಚ್ಚಿಗೆ ಬಂದರೆ
ತಪ್ಪಿದೆ ಅಂತಲೇ ಅರ್ಥ
ಕಡಿಮೆಯಾದರೆ
ಮತ್ತೆ ಮತ್ತೆ ಎಣಿಸುವ
ಯಂತ್ರದ ಬಾಯಿಂದ
ಹೊರಗೆ ಬರುವ
ಅಲ್ಲಿಯೂ ಸರಿಯಾಗಲಿಲ್ಲವೆಂದರೆ
ಕೈಯಿಂದ ಒಂದೊಂದೇ ನೋಟನ್ನು
ಎತ್ತಿ ಎತ್ತಿ ಹಾಕುವುದು
ಒಂದೊಮ್ಮೆ
ಹರಿದ ನೋಟಿಗೆ
ಹಾಳೆಯ ತುಂಡರಿಸಿ
ಹದವಾಗಿ ಹಚ್ಚಿ
ಆಪರೇಷನ್
ಮಾಡಿದ್ದುಉಂಟು
ಎಂದೂ ಕಳೆಗುಂದದ
ನಗು ಅವನದು
ಮಾಸಿದ ಕಪ್ಪಾದ
ಇಟ್ಟಲ್ಲೇ ಇಟ್ಟು
ಧೂಳು ತಿಂದ
ಕಮಟು ವಾಸನೆಯ
ಮಳೆಯಲ್ಲಿ
ತೋಯಿದ
ಬಣ್ಣ ವಾಡಿದ
ಬೆವರಲಿ ಬೆಂದ
ಬರಿ ಮೈ ಕುಬೇರ
ಕೌಂಟರಿನಿಂದ
ಖಜಾನೆಗೆ
ಬರುವಷ್ಟರಲ್ಲಿ
ನಾಲ್ಕಾರು ಬಾರಿ
ಎಣಿಸಿಕೊಳ್ಳುವ
ಸ್ಥಿರವಾಗಿ ನಿಲ್ಲದ
ಪಾದರಸ
ಗಾಂಧಿ ನೋಟುಗಳೆಂದರೆ
ಬರಿ ಸಂಖ್ಯೆಗಳಲ್ಲ
ನೋಟಿನ ನೋಟದಲ್ಲೂ
ಗಾಂಧಿಯ ಸತ್ಯಾನ್ವೇಷಣೆ.
ಗಾಯತ್ರಿ ರವಿ. ಹುಬ್ಬಳ್ಳಿ




