ಧಾರಾವಾಹಿ ಸಂಗಾತಿ-31
ಅರ್ಜುನ ಉವಾಚ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ


ಅಸುರಾಂತಕ ಮಿತ್ರ ನಾನು ಅಸುರಪಟ್ಟಣವ ಸೇರಿದೆ
ಆಲಿಸಿದೆ ಅಶರೀರವಾಣಿಯನ್ನು ಪರಿಪೂರ್ಣವಾಗಿ. “ಬಾಣವನ್ನು ಪ್ರಯೋಗಿಸದಿರು ಪಾರ್ಥ. ಆ ವನಿತೆಯ ಕೊಲೆಗೆ ಹೇಸದೆ ಶರವನ್ನು ತೊಡುವುದು ತರವಲ್ಲ. ಕೋಪವನ್ನು ಬಿಡು. ಪ್ರಮೀಳೆಯನ್ನು ವರಿಸು. ಮುಂದೆ ನಿನಗೆ ಒಳ್ಳೆಯದಾಗಲಿದೆ” ಎಂಬ ಧ್ವನಿಯದು ಕೇಳಿಬಂತು. ನನ್ನೊಬ್ಬನಿಗೇ ಕೇಳಿದ ಸ್ವರವಲ್ಲ. ಅಲ್ಲಿದ್ದ ಪ್ರತಿಯೊಬ್ಬರಿಗೂ ಕೇಳಿಸಿತು.
ಪ್ರಯೋಗಿಸಲೆಂದು ಎತ್ತಿಹಿಡಿದಿದ್ದ ಬಾಣವನ್ನು ಇಳಿಸಿದೆ. ನನ್ನ ಜೊತೆಗಿದ್ದ ಆಪ್ತರಲ್ಲಿ ಇದರ ಬಗೆಗೆ ಚರ್ಚಿಸಿದೆ. ನಿರ್ಣಯವನ್ನು ಮಾಡಿದೆ. ಪ್ರಮೀಳೆಯನ್ನು ನನ್ನ ಬಳಿಗೆ ಕರೆಸಿಕೊಂಡೆ. ಒಪ್ಪಂದವೊAದಕ್ಕೆ ಒಳಪಡುವಂತೆ ಅವಳ ಕರಗಳನ್ನು ಹಿಡಿದುಕೊಂಡೆ. ಮನದಿಂಗಿತವನ್ನು ಹೇಳಿದೆ.
“ಮರುಳುಗೊಳಿಸುವ ಮಾತು ನನ್ನದೆಂದು ಭಾವಿಸದಿರು. ಈಗ ನಾನು ನಿನ್ನನ್ನು ವರಿಸಲು ಸಾಧ್ಯವಿಲ್ಲ. ಯಾಗ ಮುಗಿಯುವವರೆಗೂ ಹೆಣ್ಣಿನ ಸಹವಾಸವನ್ನು ತೊರೆದಿರುವ ವ್ರತವನ್ನು ಪಾಲಿಸುತ್ತಿದ್ದಾನೆ ನನ್ನಣ್ಣ ಧರ್ಮಜ. ನಾನೂ ಅದೇ ವ್ರತದ ಆಚರಣೆಯಲ್ಲಿದ್ದೇನೆ. ಈಗ ನಾನು ನಿನ್ನೆಡೆಗೆ ಮನಸ್ಸು ಮಾಡಲು ಸಾಧ್ಯವಿಲ್ಲ. ಆದರೆ ಮುಂದೆ ಅಶ್ವಮೇಧ ಯಾಗ ನಡೆಯುವ ಕಾಲದಲ್ಲಿ ನಾನು ನಿನ್ನನ್ನು ಬಂದು ಸೇರುತ್ತೇನೆ. ನೀನು ಯಾಗಕ್ಕೆ ಬಂದು, ಅಲ್ಲಿ ಕೃಷ್ಣನನ್ನು ಕಂಡು, ನಿನ್ನ ದೇಹದ ವಿಷವನ್ನು ನೀಗಿಕೊಳ್ಳಬೇಕು. ಆ ಬಳಿಕ ನಾನು ನಿನ್ನ ಜೊತೆ ಸೇರಿ ಬಾಳುವುದಕ್ಕೆ ತೊಂದರೆಯಿಲ್ಲ” ಎಂದೆ, ಒಲವಿನಿಂದ.
ನನ್ನ ಮಾತಿನಲ್ಲಿ ಕಪಟವಿಲ್ಲದ್ದನ್ನು ಅರ್ಥೈಸಿಕೊಂಡಳು ಪ್ರಮೀಳೆ. ನನ್ನ ಮಾತಿಗೆ ಒಪ್ಪಿಕೊಂಡಳು. ಕಟ್ಟಿಹಾಕಿದ್ದ ನಮ್ಮ ಕುದುರೆಯನ್ನು ತರಿಸಿಕೊಟ್ಟಳು. ಅವಳಿಗೆ ಆದರದ ವಿದಾಯ ಹೇಳಿ, ಸೇನೆಸಹಿತನಾಗಿ ಅಲ್ಲಿಂದ ಹೊರಟೆ. ಅವಳು ಸಂಪತ್ತನ್ನು ಜೊತೆಗಿರಿಸಿಕೊಂಡು, ವನಿತಾ ಸೈನ್ಯದ ಜೊತೆಗೆ ಹಸ್ತಿನಾವತಿಯನ್ನು ಸೇರಿಕೊಂಡಳು.
ಮುಂದೆ ಹೋದಂತೆ ಹಲವು ದೇಶಗಳು ಕಂಡವು ನಮ್ಮ ಕಣ್ಣಿಗೆ. ಆನೆ, ಕುದುರೆ, ಗೋವು, ಮಹಿಷ ಮೊದಲಾದ ಪ್ರಾಣಿಸಮೂಹಗಳನ್ನು ಕಂಡೆವು. ಸೂರ್ಯ ಉದಯಿಸಿದೊಡನೆ ಜನಿಸಿ, ಮಧ್ಯಾಹ್ನದ ವೇಳೆಗೆ ಯೌವ್ವನಾವಸ್ಥೆಯನ್ನು ಪಡೆದು, ಸೂರ್ಯಾಸ್ತ ಸಮಯಕೆ ಮರಣವನ್ನಪ್ಪುವ ಅತಿಸೂಕ್ಷö್ಮ ಜೀವಿಗಳನ್ನು ನೋಡಿದೆವು, ಗಿಡಗಳ ಪೊದರುಗಳಲ್ಲಿ.
ಕುದುರೆ ಮುಂದಕ್ಕೆ ಚಲಿಸಿತು. ವಿಚಿತ್ರವಾಗಿ ತೋರುತ್ತಿದ್ದ ಮನುಷ್ಯರನ್ನು ಕಂಡು ಅಚ್ಚರಿಗೊಳ್ಳುವಂತಾಯಿತು. ಚರ್ಮವನ್ನೇ ಉಡುಗೆಯಾಗಿ ಹೊಂದಿದ್ದರು ಅವರು. ಶರೀರವೆಲ್ಲಾ ವಕ್ರವಕ್ರವಾಗಿತ್ತು. ಅವರಿಗಿದ್ದದ್ದು ಒಂದೇ ಕೈ; ಒಂದೇ ಕಾಲು; ಒಂದೇ ಕಣ್ಣು. ಅವರಲ್ಲಿ ಕೆಲವರಿಗೆ ಮೂರು ಮೂರು ಕಣ್ಣುಗಳು. ಕುಬ್ಜರಾಗಿದ್ದರು. ಮೂರಡಿಯನ್ನು ಮೀರಿದ ಶರೀರವಲ್ಲ ಅವರದ್ದು. ತೀರಾ ಉದ್ದವಾದ ಮೂಗು. ನೆತ್ತಿಯ ಮೇಲೆ ಎರಡು ಕೋಡುಗಳಿದ್ದವು. ಕೆಲವರ ಮುಖ ಕತ್ತೆಯನ್ನು ಹೋಲುವಂತಿತ್ತು. ಇನ್ನೂ ಕೆಲವರು ಕುದುರೆಮುಖಿಗಳು.
ವಿಚಿತ್ರವಾದ ದೇಶವಿದು ಎನಿಸಿತು ನನಗೆ. ಅಸಹ್ಯ ಭಾವ ಮೂಡಿತು. ಮರುಕ್ಷಣವೇ ಬಾಹ್ಯ ರೂಪ ಹೀಗಾದದ್ದರಲ್ಲಿ ಇವರ ತಪ್ಪೇನಿದೆ ಎನಿಸಿತು. ಎದುರಾದವರ ಚೆಲುವನ್ನು ಕಂಡು ಅವರನ್ನು ಆದರಿಸುವ, ಕುರೂಪವನ್ನು ಮೂದಲಿಸುವ ಲೋಕರೂಢಿಯ ಕ್ರಮವೊಂದಿದೆ. ಆದರೆ ಮನುಷ್ಯರೆನಿಸಿಕೊಂಡವರು ಒಳ್ಳೆಯ ಮನಸ್ಸನ್ನು ಹೊಂದಲು, ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳಲು ಮಾತ್ರ ಶಕ್ತರು. ಒಳ್ಳೆಯ ರೂಪವದು ಪ್ರಕೃತಿ ನಿರ್ಧರಿತವಾದದ್ದು. ಚೆಲುವೆನ್ನುವುದು ಶಾಶ್ವತವಲ್ಲ. ಹಾಗಿರುವಾಗ ಅದನ್ನು ಮುಂದಿಟ್ಟುಕೊAಡು ಸಹ್ಯ ಭಾವ ತಾಳುವುದಾಗಲೀ, ಅಸಹ್ಯವನ್ನು ಹೊಂದುವುದಾಗಲೀ ತಕ್ಕುದಲ್ಲ ಎನಿಸಿತು.
ಹಾಗೆಯೇ ಮುಂದೆ ಹೋದೆವು. ಈಗ ನಮ್ಮ ಕುದುರೆ ಕಾಲಿಟ್ಟದ್ದು ಭೀಷಣ ಎನ್ನುವ ರಾಕ್ಷಸನ ಪಟ್ಟಣಕ್ಕೆ. ಮೂರು ಕೋಟಿ ಅಸುರರಿದ್ದರು ಅಲ್ಲಿ. ಅತಿಭಯಂಕರ ರೂಪ ಅವರದ್ದು. ಕ್ಷಣಕ್ಷಣವೂ ಆರ್ಭಟ. ಸಲ್ಲದ ಕೃತ್ಯಗಳೇ ಅಲ್ಲಿ ಎಲ್ಲ. ನೀಳವಾದ ದೈತ್ಯ ದೇಹವಿತ್ತು. ಶೀಘ್ರವೇ ಕೋಪಗೊಳ್ಳುತ್ತಿದ್ದರು. ಗಂಡೆದೆಯವರನ್ನೂ ಅಳುಕಿಸುವ ಘೋರ ಮುಖ ಅವರಿಗಿತ್ತು. ಮಾಯಾವಿಗಳಾಗಿದ್ದರು. ದಯೆಗೆ ಅವರೆದೆಯಲ್ಲಿ ಕಿಂಚಿತ್ ಸ್ಥಾನವೂ ಇರಲಿಲ್ಲ. ಸಂಹಾರದಲ್ಲಿಯೇ ಸಂತಸ ಕಾಣುವವರು. ಸಮರಕ್ಕೆ ಇಳಿದರೆ ಸಮಯ ಸಂದರ್ಭ ನೋಡದೆ ಹೋರಾಡುವವರು.
ಹೀಗಿದ್ದ ಅಸುರರ ಪುರವನ್ನು ಆಳುತ್ತಿದ್ದ ಭೀಷಣನಿಗೆ ನಮ್ಮ ಪ್ರವೇಶದ ಸುದ್ದಿಯನ್ನು ಮುಟ್ಟಿಸಿದ್ದು ರಾಕ್ಷಸ ಪುರೋಹಿತನೆನಿಸಿದ್ದ ಮೇದೋಹೋತ. ಅವನು ಆಹಾರ ಹುಡುಕಿಕೊಂಡು ಕಾಡಿಗೆ ಬಂದಿದ್ದ. ಆ ಸಮಯದಲ್ಲಿ ನಾನು ನನ್ನ ಸೇನೆಸಹಿತ ಅದೇ ಅರಣ್ಯದಲ್ಲಿದ್ದೆ. ಅವನು ನನ್ನನ್ನು ಕಂಡ. ಕುದುರೆಯನ್ನು ನೋಡಿದ. ಸೈನಿಕರೆಡೆಗೆ ದೃಷ್ಟಿ ಹರಿಸಿದ. ಯಜ್ಞದ ಕುದುರೆಯಿದು ಅರ್ಜುನನ ರಕ್ಷೆಯಲಿ ಸೇನೆಸಹಿತವಾಗಿ ಬಂದಿದೆ ಇಲ್ಲಿಗೆ ಎನ್ನುವುದನ್ನು ಊಹಿಸಿದ. ಅವನು ನನ್ನನ್ನು ನೋಡಿದ್ದು ನನ್ನ ಅರಿವಿಗೆ ನಿಲುಕಿರಲಿಲ್ಲ ಆ ಕ್ಷಣಕ್ಕೆ.
ಅವನು ತಕ್ಷಣವೇ ಹೋದದ್ದು ಭೀಷಣನ ಬಳಿಗೆ. ವಿಚಾರವನ್ನು ಅರುಹಿದ. “ಅರ್ಜುನ ಇಲ್ಲಿಗೆ ಬಂದಿದ್ದಾನೆ, ಯಾಗದ ಕುದುರೆಯನ್ನು ಜೊತೆಮಾಡಿಕೊಂಡು. ಅವನನ್ನು ಹಿಡಿದು ತಂದು ನರಮೇಧ ಯಾಗವನ್ನು ನಡೆಸು. ಅವನನ್ನು ಬಲಿಗೊಡು” ಎಂಬ ಸಲಹೆಯಿತ್ತ ಮೇದೋಹೋತ.
ಭೀಷಣ ನಡೆಸುವ ನರಮೇಧ ಯಾಗಕ್ಕೆ ಪುರೋಹಿತ ತಾನಾಗಿ ಸಕಲ ಗೌರವವನ್ನೂ, ಸಮಸ್ತ ಸಂಪದವನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಆಕಾಂಕ್ಷೆಯಿತ್ತು ಆ ಅಸುರ ಪುರೋಹಿತನಲ್ಲಿ.
ಭೀಷಣ ಅವನ ಮಾತಿಗೆ ಒಪ್ಪಿಕೊಂಡ. “ನರಮೇಧ ಯಾಗಕ್ಕಾಗಿ ಈಗಲೇ ಮಂಟಪವನ್ನು ನಿರ್ಮಿಸು. ನಾನೀಗಲೇ ಹೋಗಿ ಆ ಅರ್ಜುನನನ್ನು ಎಳೆದುಕೊಂಡು ಬರುತ್ತೇನೆ” ಎಂದು ಬೊಬ್ಬೆ ಹೊಡೆದ, ಮೇದೋಹೋತನಲ್ಲಿ.
ಹೀಗೆ ಭೀಷಣ ಮೇದೋಹೋತನ ಮಾತಿಗೆ ತಕ್ಷಣವೇ ಒಪ್ಪಿಕೊಳ್ಳುವುದರ ಹಿಂದೆ ಬಲವಾದ ಕಾರಣವಿತ್ತು. ಅವನು ಬಕಾಸುರನ ಮಗನಾಗಿದ್ದ. ಹಿಂದೆ ಭೀಮನಿಂದ ಮಡಿದಿದ್ದ ತಂದೆಯ ಸಾವಿನ ಸೇಡನ್ನು ಭೀಷಣ ತೀರಿಸಿಕೊಳ್ಳಬಯಸಿದ್ದು ಭೀಮ ಸೋದರನಾದ ನನ್ನನ್ನು ಕೊಲ್ಲುವುದರ ಮೂಲಕ. ಮುಕ್ಕೋಟಿ ರಾಕ್ಷಸರು ಸೇರಿಕೊಂಡರು ಅವನ ಜೊತೆಗೆ…
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ



