ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜನ ಸೇವೆಯೇ ಜೀವನದ ಧ್ಯೇಯವಾಗಿದ್ದ ಜಯದೇವಿ ತಾಯವರ ಜೀವನವು ತ್ಯಾಗ, ಸೇವೆ ಮತ್ತು ಮಾತೃತ್ವದ ಅದ್ಭುತ ಸಂಗಮ.
ಅವರು ತಮ್ಮ ವೈಯಕ್ತಿಕ ಸುಖದುಃಖಗಳನ್ನು ಮರೆತು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ….. ಬಡವರು, ನಿರ್ಗತಿಕರು ಹಾಗೂ ಸಹಾಯದ ನಿರೀಕ್ಷೆಯಲ್ಲಿದ್ದ ಜನರಿಗೆ ಆಶಾಕಿರಣವಾಗಿದ್ದರು.

ಪತಿಯ ವಿಯೋಗದ ನಂತರ ಜೀವನದ ಭಾರ ಇನ್ನಷ್ಟು ಹೆಚ್ಚಾದರೂ ಅವರು ಎಂದಿಗೂ ಕುಗ್ಗಲಿಲ್ಲ…ಐದು ಮಕ್ಕಳನ್ನು ಬೆಳೆಸಿ ಅವರಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಮಕ್ಕಳ  ಮನಸ್ಸುಗಳಲಿ ಪ್ರೀತಿ, ಕರುಣೆ ಮತ್ತು ಮಾನವೀಯತೆಯತೆ ತುಂಬಿಸಿದರು.

ತಾಯಿಯವರ ಮನೆ ಎಂದರೆ…. ನೆರವು ಕೇಳಿ ಬರುವವರಿಗೆ ಸದಾ ತೆರೆದ ಬಾಗಿಲಾಗಿತ್ತು. ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಧೈರ್ಯ, ನಿರಾಶೆಯಲ್ಲಿರುವವರಿಗೆ ಆಶ್ವಾಸನೆ ನೀಡುವುದು ಅವರ ಸಹಜ ಗುಣವಾಗಿತ್ತು. ಊರಿನಲ್ಲಿ ಯಾರಿಗಾದರೂ ಕಷ್ಟ ಬಂದರೆ ಮೊದಲು ನೆನಪಾಗುತ್ತಿದ್ದ ಹೆಸರು ಜಯದೇವಿ ತಾಯಿಯವರದ್ದೇ.
ತಮ್ಮ ಮಕ್ಕಳಿಗೆ  ತಮ್ಮ ಜೀವನದ ಮೂಲಕವೇ ಪಾಠ ಕಲಿಸಿದರು. “ಮನುಷ್ಯನ ಬದುಕಿನ ನಿಜವಾದ ಅರ್ಥ ಇನ್ನೊಬ್ಬರ ಕಣ್ಣೀರು ಒರೆಸುವುದರಲ್ಲಿ ಇದೆ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ತೋರಿಸಿದರು. ಮಕ್ಕಳಲ್ಲು ಕೂಡ ಸೇವಾಭಾವವನ್ನು ಜೀವನದ ಮೌಲ್ಯವಾಗಿ ಅಳವಡಿಸಿದರು.

ಅವರ ಜೀವನ  ಶಕ್ತಿಯ, ಸಹನೆಯ ಮತ್ತು ನಿಸ್ವಾರ್ಥ ಪ್ರೀತಿಯ ಮಹಾಕಾವ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಅರ್ಪಿಸಿದ ಅವರು ನಿಜಕ್ಕೂ “ತಾಯಿ” ಎಂಬ ಪದಕ್ಕೆ ಅರ್ಥ ತುಂಬಿದ ಮಹನೀಯರು.

*ಬೇಡಿಲ್ಲ ಫಲ ಪದವಿ |ಬೇಡಿಲ್ಲ ಸ್ಥಾನಮಾನ
ಬೇಡಿಲ್ಲ ಮಂತ್ರಿ ತಂತ್ರಿಯಾಗಲು -ಜಯದೇವಿ
ತಾಯಿ ಆದಳು ಕನ್ನಡದ* ||

ಎನ್ನುವಂತೆ ಕನ್ನಡದ ತಾಯಿಯಾಗಿ ನಿಸ್ಸಹಾಯಕರ ಬಂಧುವಾಗಿ,ತಮ್ಮ ಮಕ್ಕಳಿಗೆ ನೆರಳಾಗಿ ನಿಂತ ತಾಯಿ, ಸಮಾಜದ ನೋವಿಗೆ ಮದ್ದಾಗಿ ಬದುಕಿದ ತಾಯಿ!!!!,

 ಇನ್ನೂ ಜಯದೇವಿ ತಾಯಿಯವರ ಮೂರನೇ ಮಗ *ಬಸವರಾಜ* ಚಿಕ್ಕಂದಿನಿಂದಲೇ ಎಲ್ಲರಲ್ಲೂ ವಿಭಿನ್ನವಾಗಿದ್ದರು. ಮನೆಯಲ್ಲಿದ್ದ ಇತರ ಮಕ್ಕಳಂತಲ್ಲ…..ಮಗುವಾಗಿದ್ದಾಗ ಶಾಂತವಾಗಿ ಮಲಗಿರುತ್ತಿದ್ದರು ಹಸಿವೆ ಆದಾಗ ಮಾತ್ರ ಅಳುತ್ತಿದ್ದರು ಹೀಗಾಗಿ ತಾಯಿಯವರಿಗೆ ಹೆಚ್ಚಾಗಿ ಮಗನ ಕಾಳಜಿ ಮಾಡದು ಬೇಕಾಗಿ ಬರಲಿಲ್ಲ ಅಂತ ಹೇಳುತಿದ್ದರು.

ಡಾ. ಬಸವರಾಜ್ ಲಿಗಾಡಿ ಮಧ್ಯದಲ್ಲಿ ಲಲ್ಲೇಶ್ವರಿ ತಾಯಿ, ಬಸವರಾಜರ ಧರ್ಮಪತ್ನಿ ಡಾ. ಮಧುಮಾಲ

ಇತರರಂತೆ ಗಲಾಟೆ, ಹಠ, ಆಟ-ಪಾಟಗಳಲ್ಲಿ ಮುಳುಗದೆ ಶಾಂತವಾಗಿದ್ದರು. ಅವರ ಕಣ್ಣುಗಳಲ್ಲಿ ಒಂದು ವಿಚಿತ್ರ ಶಾಂತಿ ಇತ್ತು. ಮುಖದಲ್ಲಿ ಸದಾ ಮೃದುವಾದ ನಗು. ತಾಯಿಯವರು ಎಷ್ಟೇ ದುಃಖದಲ್ಲಿದ್ದರೂ ಬಸವರಾಜನ ಆ ಶಾಂತ ವದನವನ್ನು ನೋಡಿದ ಕ್ಷಣ ಮನಸ್ಸಿಗೆ ಒಂದು ನೆಮ್ಮದಿಗೆ ಇಳಿಯುತ್ತಿದ್ದರು.
 ಮನೆಯಲ್ಲಿ ಯಾರಿಗಾದರೂ ನೋವಾದರೆ ಮೊದಲಿಗೆ ಓಡಿ ಹೋಗಿ “ಏನಾಯ್ತು?” ಎಂದು ಕೇಳುವ ಕರುಣೆ ಅವರೋಳಗೆ ಬೆಳೆದಿತ್ತು.  ಚಿಕ್ಕವರಿದ್ದಾಗಲೇ “ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಬೇಕು… ನೋವಿನಲ್ಲಿರುವ ಮಕ್ಕಳನ್ನು ಉಳಿಸಬೇಕು…” ಎಂದು ತಾಯಿಯವರ ಬಳಿ ಹೇಳುತ್ತಿದ್ದ. ಅವರ ಆಟಿಕೆಯ ಸಾಮಾನುಗಳೆಂದರೆ ಇಂಜೆಕ್ಷನ್ ತೆತಸ್ಕೋಪ್ಗಳೇ ಆಗಿದ್ದವು ಅಂತ ತಾಯಿಯವರು ಹೇಳುತ್ತಿದ್ದರು.
ನಾವು ಬಯಸಿದ್ದನ್ನೇ ಮುಂದೆ ಆಗುತ್ತೇವೆ ಅನ್ನುವದು‌ ಬಲು ಸತ್ಯ ಎನ್ನುವರು!!…..ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕತೆಯಿಂದಾಗಲಿ ನಾವು ಏನನ್ನು ಬಯಸುತ್ತೇವೋ ಜೀವನದಲ್ಲಿ ಅದೇ ಆಗುವದು ಅನ್ನುವ ಸ್ಥಿತಿ ಗತಿಗಳ ‌ಬಗ್ಗೆ ಹೇಳುಲು.. ಈ ಉದಾಹರಣೆಯನ್ನು ಹೇಳುತ್ತಿದ್ದರು.

ಬಸವರಾಜರು ಬೆಳೆದಂತೆ , ವೈದ್ಯಕೀಯ ಶಿಕ್ಷಣಕ್ಕೆ ಸೇರಿದರು..ಆ ದಿನ ತಾಯಿಯವರು ಸಂತೋಷದಿಂದ  “ನನ್ನ ಮಗ ಇನ್ನು ಜೀವ ಉಳಿಸುವ ದೇವರ ಕೈ ಆಗ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಡಾ. ಬಸವರಾಜರ ಇನ್ನೋರ್ವ ಪತ್ನಿ ಮಧ್ಯದಲ್ಲಿ ಶೈಲಜಾ

 ಮುಂದೆ ಬಸವರಾಜ ಮಕ್ಕಳು ಆಗದವರಿಗೆ ಉಪಚಾರವನ್ನು ಮಾಡಲಾರಂಭಿಸಿದರು. ಬಂಜೆತನ ನಿವಾರಣೆ ತಜ್ಞರಾದರು.

*ನುಡಿಗಳ ಸ್ಮರಿಸುವೆ| ನಡೆಯಲಿ ಅಳವಡಿಸಿ ಎಡವಿದರೆ ಕೈಹಿಡಿದೆತ್ತು – ಹಡೆದವ್ವ
ದಡೆಗೆ ಕರೆದೊಯ್ಯೇ ಮಗುವಿಗೆ*||ಎನ್ನುವ

 ಮನೋಭಾವವನ್ನು ಬಸವರಾಜರು ಹೊಂದಿದ್ದರು
ಅಂತೇಯೇ ಜಯದೇವಿ ತಾಯಿಯವರ ವೃದ್ಧಾಪ್ಯದಲ್ಲಿ ಬಸವರಾಜರು ನೆರಳಾಗಿ ನಿಂತರು. ತಾಯಿಯವರಿಗೆ ನೋವಾಗದಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಕಾಳಜಿ ವಹಿಸಿದರು. ರಾತ್ರಿ ಎಷ್ಟೇ ಕೆಲಸ ಇದ್ದರೂ ತಾಯಿಯ ಕೋಣೆಗೆ ಹೋಗಿ “ಅಮ್ಮ ಆರೋಗ್ಯ ಹೇಗಿದೆ?” ಎಂದು ಕೇಳದೇ ನಿದ್ರೆ ಮಾಡುತ್ತಿರಲಿಲ್ಲ.

*ಹೊತ್ತು ಇಳಿಯುತಿದ್ದಂತೆ |ಗೊತ್ತು ಗುರಿ
ಕಾಣು ಮತ್ತೆ ಹುಟ್ಟಿ ಬರದು- ಜನುಮ
ಹೆತ್ತವ್ವನ ಬಿಡದೆ ಜಪಿಸು* ||ಎನ್ನುವಂತೆ

ತಾಯಿಯವರ ಕೊನೆಯ ದಿನಗಳಲ್ಲಿಯೂ ಬಸವರಾಜ ಅವರ ಕೈ ಹಿಡಿದುಕೊಂಡೇ ಇದ್ದರು. ಮಗನ ಆ ಮಮತೆಯ ಸ್ಪರ್ಶದಲ್ಲಿ ಜಯದೇವಿ ತಾಯಿಯವರು ತಮ್ಮ ಜೀವನದ ಎಲ್ಲಾ ಹೋರಾಟಗಳಿಗೂ ಅರ್ಥ ಸಿಕ್ಕಂತಾಗಿತ್ತು.

*ತಾಯಿಯೇ ದೇವರು| ತಾಯಿಯೇ ಗುರಿ
ತಾಯಿ ಕಲಸಿದರು ನಡೆ ನುಡಿ -ಚೆನ್ನ
ಆಯಿತು ಅದು ಮುಕ್ತಿಯ ಧಾಮ *||

ಎನ್ನುವಂತೆ ಬದುಕಿದವರು ಲಲ್ಲೇಶ್ವರಿ ತಾಯಿಯವರು (ನನ್ನ ತಾಯಿ) ತಾಯಿಯವರ ನೆರಳಲಿ ಬದುಕಿದ ಬಾಳಿದ ಮಗಳ ಮಹಾ ಸೇವೆಯ ಬಗ್ಗೆ ಜಯದೇವಿ ತಾಯಿಯವರು ಎಲ್ಲರೆದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
 ಅವರ ಉಸಿರಾಗಿ, ಅವರ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಬದುಕಿದವರು ಕೊನೆಯ ಮಗಳು ಲಲ್ಲೇಶ್ವರಿ ತಾಯಿ. ತಾಯಿಯಲ್ಲಿಯೇ ತಮ್ಮ ಲೋಕವನ್ನು ಕಂಡವರು.

*ಅಂದಾಜು ಮೃದ ನುಡಿ |ಚಂದಾದ ಮುಖ
ಮಂದಿರ ಮಂದಮತಿಗೆ -ಲಭಿಸಿ ಸೇವೆ
ಮಾತಾಯಿ ಎಂದೆಂದೂ ಬಿಡೇನು ಪಾದ*||

ಎನ್ನುತ ಲಲ್ಲೇಶ್ವರಿಯವರಿಗೆ ತಾಯಿಯ ಒಂದು ಕಣ್ಣೋಟ ಸಾಕು, ಅವರ ಮನದ ಮಾತನ್ನು ಅರಿಯುತ್ತಿದ್ದರು.  ಏನನ್ನೂ ಕೇಳುವ ಮುನ್ನವೇ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ತಾಯಿಯವರ ನಗು ಅವರ ಸಂತೋಷವಾಗಿತ್ತು; ಅವರ ನೋವು ಅವರ ಹೃದಯದ ನೋವಾಗಿತ್ತು. ಹಗಲು ರಾತ್ರಿ ಎನ್ನದೆ, ಸುಖ ದುಃಖ ಎನ್ನದೆ, ತಮ್ಮ ಬದುಕನ್ನೇ ತಾಯಿಯ ಸೇವೆಗೆ ಅರ್ಪಿಸಿಕೊಂಡಿದ್ದರು.

*ತನು ಮನದ ಸೇವೆ| ಉಸಿರಿರುವ ತನಕ
ಬೇಸರವಿಲ್ಲ ಕಿಂಚಿತ್ತ -ಹಡೆದವ್ವ
ಉಸಿರು ಹಾಕಲಾರೆ ಕಡೆ ತನಕ* ||

ಎನ್ನುತ್ತಿದ್ದರು ನನ್ನ  ತಾಯಿ ಲಲ್ಲೇಶ್ವರಿಯವರು
ತಾಯಿಯವರು. ಪ್ರತಿ ಘಳಿಗೆಯಲ್ಲೂ ಅವರ ಕೈ ಹಿಡಿದು ನಡೆಸುತ್ತಿದ್ದರು. ತಾಯಿಯವರು ಆಯಾಸಗೊಂಡಾಗ ತಮ್ಮ ಮಡಿಲನ್ನೇ ಆಸರೆಯನ್ನಾಗಿ ಮಾಡುತ್ತಿದ್ದರು. ತಾಯಿಯವರ ಆರೋಗ್ಯದಲ್ಲಿ ಏರಿಳಿತಗಳು ಬಂದಾಗ, ಅವರ ಕಣ್ಣಲ್ಲಿ ನಿದ್ರೆ ಇರುತ್ತಿರಲಿಲ್ಲ… ಒಂದೇ ಸಮನೆ ದೇವರಲ್ಲಿ ತಾಯಿಗೆ ನೋವು ಕೊಡಬೇಡವೆಂದು  ಬೇಡಿಕೊಳ್ಳುತ್ತಿದ್ದರು.

*ಅರೆ ನಿಮಿಷ ಬಿಟ್ಟಿಲ್ಲ |ನೆರಳಾಗಿ ಬೆಳೆದೆವು
ಬೇರೆ ಸ್ವತಂತ್ರ ಪಡೆದಿಲ್ಲ -ತಾಯಿಯ
ಹರಣ ಒಂದು ದೇಹವೆರಡು*||

ಎನ್ನುವಂತೆ ಲಲ್ಲೇಶ್ವರಿಯವರು ತಾಯಿ ಇಲ್ಲದೆ ಒಂದು ಕ್ಷಣವೂ ಬದುಕಿರಲಾರಿ ಅನ್ನುವ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರು.
ತಾಯಿಯವರ ಕೊನೆಯ ದಿನಗಳಲ್ಲಿ ಲಲ್ಲೇಶ್ವರಿ ತಾಯಿಯವರ ಸೇವೆ ಇನ್ನಷ್ಟು ಅಪೂರ್ವವಾಯಿತು. ಅವರು ಮಗಳಾಗಿ , ತಾಯಿಗೆ ತಾಯಿಯಾಗಿ ಮಗುವನ್ನು ನೋಡಿಕೊಳ್ಳುವಂತೆ ಮಮತೆಯಿಂದ ಜಯದೇವಿ ತಾಯಿಯವರನ್ನು ನೋಡಿಕೊಂಡರು. ಔಷಧಿ ನೀಡುವುದರಿಂದ ಹಿಡಿದು, ಊಟ ಮಾಡಿಸುವವರೆಗೂ, ರಾತ್ರಿ ನಿದ್ರೆಯಲ್ಲೂ ಎಚ್ಚರವಿದ್ದು ಅವರ ಆರೋಗ್ಯವನ್ನು ಗಮನಿಸುತ್ತಿದ್ದರು.

*ಅಹೋರಾತ್ರಿ ನೆನೆದೆ| ಮಹಾತಾಯಿ ಸೇವೆ
ಇಹಪರವ ಗೆಲಿದೆ ಕಟಾಕ್ಷ -ಸೇವೆಯಲಿ
ಗೆಲಿದೆ ಜನನ ಮರಣವನು* ||
ಎನ್ನುತ್ತಿದ್ದರು ಲಲ್ಲೇಶ್ವರಿಯವರು.

ಇಲ್ಲಿ ಜಯದೇವಿ ತಾಯಿಯವರು ಒಂದು ಘಟನೆಯನ್ನು ಯಾವಾಗಲೂ ನೆನಪಿಸುತ್ತಿದ್ದರು .
 ಆಗ ಲಲ್ಲೇಶ್ವರಿ ಅವರಿಗೆ ಕೇವಲ ಮೂರು ಅಥವಾ ನಾಲ್ಕು ವರ್ಷಗಳಿರಬಹುದು…..
ಜಯದೇವಿ ತಾಯಿಯವರ ಆರೋಗ್ಯ ಹುಷಾರಿಲ್ಲದೆ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆದ  ದಿನಗಳಲ್ಲಿ ನಡೆದ ಈ ಘಟನೆ ಕೇಳಿದರೆ ಹೃದಯವೂ ಕರಗುತ್ತದೆ.
ಆಸ್ಪತ್ರೆಯ ಹಾಸಿಗೆಯ ಮೇಲೆ ಜಯದೇವಿ ತಾಯಿಯವರು ಅಸಹನೀಯ ನೋವಿನಿಂದ ನರಳುತ್ತಿದ್ದರು. ದೇಹದ ಯಾತನೆ ಹೆಚ್ಚಾದಾಗ  ಆ ಕ್ಷಣದಲ್ಲಿ  ತಮ್ಮನ್ನು ತಾವು ಮರೆತು, ಪುಟ್ಟ ಮಗುವಿನಂತೆ,
“ಅವ್ವಾ… ಅವ್ವಾ…”ಎಂದು ತಮ್ಮ ಜನ್ಮದಾತೆಯನ್ನು ಕರೆಯುತ್ತಿದ್ದರು. ಆ ಕರೆಯಲ್ಲಿ ನೋವಿತ್ತು, ಹಂಬಲವಿತ್ತು, ತಾಯಿಯ ಮಡಿಲಿಗಾಗಿ ಹಾತೊರೆಯುವ ಮಗುವಿನ ಹೃದಯವಿತ್ತು.

ಆ ದೃಶ್ಯವನ್ನು ಕಂಡ ಲಲ್ಲೇಶ್ವರಿಯವರ ಹೃದಯ ಕರಗಿತು. ಆ ಕ್ಷಣದಲ್ಲಿ  ತಾಯಿಯಾಗಿ ನಿಂತರು..ತನ್ನ ತಾಯಿಯ ಕಣ್ಣೀರನ್ನು ಒರೆಸುತ್ತಾ, ತಲೆಯನ್ನು ಮೃದುವಾಗಿ ಸವರುತ್ತಾ, ಮೂರು ವರ್ಷದ ಮಗುವೊಂದು ತನ್ನ ತಾಯಿಯನ್ನು ಸಮಾಧಾನಪಡಿಸಲು ಮುಗ್ಧತೆಯಿಂದ,
“ಅವ್ವಾ, ಅಳಬೇಡ. ನಿನ್ನ ತಾಯಿ ಬರುವವರೆಗೂ ನಾನೇ ನಿನ್ನ ತಾಯಿಯಾಗಿರುತ್ತೇನೆ. ಏನು ಬೇಕಾದರೂ ನನಗೆ ಹೇಳು…”
ಎಂದು ಹೇಳಿದರು.
ಆ ಮಾತು ಕೇಳಿದಾಗ ಅಲ್ಲಿ ಇದ್ದವರ ಕಣ್ಣುಗಳಲ್ಲೂ ನೀರು ತುಂಬಿತು…. ಸಂಬಂಧಗಳೆಲ್ಲ ತಲೆಕೆಳಗಾಗಿದ್ದವು. ತಾಯಿ ಮಗುವಾಗಿದ್ದರು,ಮಗಳು ತಾಯಿಯಾಗಿದ್ದರು.
ಲಲ್ಲೇಶ್ವರಿ ತಾಯಿಯವರು ತಮ್ಮ ಕೈಯಿಂದ ನೀರು ಕುಡಿಸಿದರು. ನೋವಿನಿಂದ ನಲುಗಿದ್ದ ತಾಯಿಯ ಬೆವರನ್ನು ಒರೆಸಿದ್ದರು. ಅಂದಿನ‌ದಿನದಿಂದ ಕೊನೆಯ ದಿನ ವರೆಗೂ ತಾಯಿಯಾಗಿಯೇ ಅವರು ಜಯದೇವಿ ತಾಯಿಯವರಿಗೆ ಆಸರೆಯಾದರು.
ಅವರ ಪ್ರತಿಯೊಂದು ಸ್ಪರ್ಶದಲ್ಲೂ ಮಮತೆಯಿರುತಿತ್ತು.ಪ್ರತಿಯೊಂದು ಮಾತಿನಲ್ಲೂ ಧೈರ್ಯವಿತ್ತು,  ಸೇವೆಯಲ್ಲೂ ಭಕ್ತಿಯಿತ್ತು.ಒಂದು ಸಮಯದಲಿ ಜಯದೇವಿ ತಾಯಿಯವರು ಲಲ್ಲೇಶ್ವರಿಯನ್ನು ಮಡಿಲಲ್ಲಿ ಹೊತ್ತು ಬೆಳೆಸಿದ್ದರು. ಈಗ ಕಾಲಚಕ್ರ ತಿರುಗಿ, ಲಲ್ಲೇಶ್ವರಿಯವರೇ ಜಯದೇವಿ ತಾಯಿಯವರನ್ನು ಮಮತೆಯ ಮಡಿಲಲ್ಲಿ ಹೊತ್ತುಕೊಂಡಿದ್ದರು.

*ತನು ಸವಿಸಿ ಸೇವೆಯಲ್ಲಿ| ಮನನಿಲಿಸಿ ಧ್ಯಾನದಿ ತನುಮನ ಒಂದಾಗಿ ದುಡಿಸಿದೆ -ನನ್ನವ್ವ
ನಾನೆಂಬುದು ಅಳಿದು ನೀನಾದೆ*||

ತಾಯಿಯ ನೋವನ್ನು ತಮ್ಮ ನೋವನ್ನಾಗಿ, ತಾಯಿಯ ಕಣ್ಣೀರನ್ನು ತಮ್ಮ ಕಣ್ಣೀರನ್ನಾಗಿ, ಪ್ರತಿ ಉಸಿರಿನ  ಪ್ರಾರ್ಥನೆಯಾದರು.

*ಕಡೆತನ ಭಂಗ |ಬರದೇ ಅಡಿಗಡಿಗೆ ಎಚ್ಚರ
ಬಿಡದಂತೆ ತವ ಸೇವೆ -ನನ್ನವ್ವ
ಮೂಡಿಗೆ ಧರಿಸಿರಿ ತವ ಪಾದ*||

ಜನ್ಮ ನೀಡಿದ ತಾಯಿಗೆ ಮರಳಿ ತಾಯಿಯಾಗುವ ಭಾಗ್ಯ ಕೆಲವೇ ಆತ್ಮಗಳಿಗೆ ಸಿಗುತ್ತದೆ.  ಅಪರೂಪದ ಭಾಗ್ಯವನ್ನು ಲಲ್ಲೇಶ್ವರಿ ತಾಯಿಯವರು ತಮ್ಮ ಪ್ರೀತಿ, ಸೇವೆ ಮತ್ತು ತ್ಯಾಗದ ಮೂಲಕ ಸಾರ್ಥಕಗೊಳಿಸಿದರು. ಜಯದೇವಿ ತಾಯಿಯವರ ಕೊನೆಯ ದಿನಗಳಲ್ಲಿ ಮಮತೆಯ ಮೂರ್ತಿ, ಸೇವೆಯ ಮಗಳಾಗಿ,  ತಾಯಿಯ ಬದುಕಿನ  ಆಶ್ರಯವಾಗಿದ್ದರು.

ಅವರ ಜೀವನವನ್ನು ನೋಡಿದಾಗ, “ಮಗಳು ಎಂದರೆ ಕೇವಲ ಜನ್ಮ ನೀಡಿದ ಸಂತಾನವಲ್ಲ….ತಾಯಿಯ ಹೃದಯದ ತುಂಡು” ಎಂಬ ಮಾತು ನೆನಪಾಗುತ್ತದೆ.
ತಾಯಿಯವರ ಜೀವನದ ಕೊನೆಯ ಕ್ಷಣಗಳಲ್ಲೂ ಲಲ್ಲೇಶ್ವರಿ ತಾಯಿಯವರ ಕಾಳಜಿ ಮತ್ತು ಸೇವೆ ಗಂಗೆಯಂತೆ ನಿರಂತರವಾಗಿ ಹರಿಯುತ್ತಿತ್ತು… ಅಪಾರ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯಿಂದ ಮೂಡಿದ ಅಮೃತಧಾರೆ.
*ನೀನಿಲ್ಲದ ತಾಣ |ಇಲ್ಲ ಇನ್ನೆಲ್ಲಿ
ನೀನೆ ತುಳುಕಿರುವೆ ಒಳ ಹೊರಗೆ -ತಾಯವ್ವ
ನಾನು ನೀನು ಬೆರೆತು ಒಂದಾಗಿ*||

ಎನ್ನುವಂತೆ ಜಯದೇವಿ ತಾಯಿಯವರು  ಮತ್ತು ಲಲ್ಲೇಶ್ವರಿ ತಾಯಿಯವರ ನಡುವಿನ ಬಾಂಧವ್ಯ ಸಾಮಾನ್ಯ ತಾಯಿಮಗಳ ಸಂಬಂಧವಾಗಿರಲಿಲ್ಲ. ಅದು ಎರಡು ದೇಹಗಳಲ್ಲಿ ನೆಲೆಸಿದ್ದ ಒಂದೇ ಆತ್ಮದ ಪ್ರೀತಿಯಾಗಿತ್ತು.

ಕೊನೆಯ ದಿನಗಳಲ್ಲಿ ಜಯದೇವಿ ತಾಯಿಯವರ ಆರೋಗ್ಯ ಹದಗೆಟ್ಟ ದಿನಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಅವರ ಹತ್ತಿರದವರು ಒಂದು ವಿಷಯವನ್ನು ಗಮನಿಸಿದ್ದರು. ಲಲ್ಲೇಶ್ವರಿ ತಾಯಿಯವರ ಜೀವನವೇ ಜಯದೇವಿ ತಾಯಿಯವರ ಸುತ್ತ ಸುತ್ತುತ್ತಿತ್ತು. .
ಆ ಕಾರಣದಿಂದಲೇ ತಾಯಿಯವರ ಸ್ಥಿತಿಯನ್ನು ಕಂಡ ವೈದ್ಯರು ಕೂಡ ಒಂದು ತುರ್ತು ಸಭೆ ಕರೆದು
“ತಾಯಿಯವರ ಬಗ್ಗೆ ನಮ್ಮ ಕಾಳಜಿ ಎಷ್ಟಿದೆಯೋ, ಅಷ್ಟೇ ಕಾಳಜಿ ಲಲ್ಲೇಶ್ವರಿ ತಾಯಿಯವರ ಬಗ್ಗೆಯೂ ಇದೆ. ಇವರಿಬ್ಬರ ಪ್ರೀತಿ ಎಷ್ಟು ಆಳವಾಗಿದೆ ಎಂದರೆ, ತಾಯಿಯವರ ಅಗಲಿಕೆಯ ಆಘಾತವನ್ನು ಅವರು ಹೇಗೆ ತಡೆದುಕೊಳ್ಳುತ್ತಾರೆ ಎಂಬ ಚಿಂತೆ ನಮಗಿದೆ. ಅವರನ್ನು ಸ್ವಲ್ಪವಾದರೂ ಮಾನಸಿಕವಾಗಿ ಸಿದ್ಧಗೊಳಿಸಬೇಕು…”
ಎಂದು ಮಾತನಾಡಿದ್ದರೆಂದು ಕೇಳಿದಾಗ ಅನೇಕರಿಗೆ ಆಶ್ಚರ್ಯವಾಗುತ್ತಿತ್ತು.
ಅದು ಸಾಮಾನ್ಯ ಪ್ರೀತಿಯಲ್ಲ…ಅದು ಉಸಿರಿಗೂ ಉಸಿರಿನ ಸಂಬಂಧವಾಗಿತ್ತು.
ಜಯದೇವಿ ತಾಯಿಯವರು ಕೂಡ ಈ ವಿಷಯವನ್ನು ಅರಿತಿದ್ದರು. ಆದ್ದರಿಂದ ಅವರು ಆಗಾಗ ಲಲ್ಲೇಶ್ವರಿ ತಾಯಿಯವರನ್ನು ಕರೆದು ಪ್ರೀತಿಯಿಂದ,
“ಮಗಳೇ, ನಾನು ಯಾವಾಗಲೂ ದೇಹದಲ್ಲಿ ಇರಲಾರೆ. ನಾನು ಹೋದ ಮೇಲೂ ನೀನು ಕುಗ್ಗಬಾರದು. ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಪರಂಪರೆಯನ್ನು, ನಮ್ಮ ಮೌಲ್ಯಗಳನ್ನು, ನಮ್ಮ ಸೇವೆಯ ಮಾರ್ಗವನ್ನು ಮುಂದುವರಿಸಬೇಕು…”
ಎಂದು ಹೇಳುತ್ತಿದ್ದರು.
ಆದರೆ ಆ ಮಾತು ಕೇಳಿದ ಕೂಡಲೇ ಲಲ್ಲೇಶ್ವರಿ ತಾಯಿಯವರ ಮನಸ್ಸು ತಲ್ಲಣಗೊಳ್ಳುತ್ತಿತ್ತು.
“ಅವ್ವಾ, ಆ ಮಾತು ಹೇಳಬೇಡ! ನೀನು ಇಲ್ಲದಿರುವುದನ್ನು ನಾನು ಊಹಿಸಲೂ ಸಾಧ್ಯವಿಲ್ಲ. ನೀನು ಮರೆಯಾಗುವೆ ಎನ್ನುವ ಶಬ್ದವೂ ನನ್ನ ಕಿವಿಗೆ ಬೀಳಬಾರದು…”
ಎಂದು ಚಡಪಡಿಸುತ್ತಿದ್ದರು.
ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು. ಅವರ ಮುಖದಲ್ಲಿ ಭಯ, ನೋವು, ಬೇಸರ ಎಲ್ಲವೂ ಒಟ್ಟಿಗೆ ಕಾಣಿಸುತ್ತಿತ್ತು.
ತಾಯಿಯವರ ಅಗಲಿಕೆಯ ಕಲ್ಪನೆಯೇ ಅವರಿಗೆ ಅಸಹನೀಯವಾಗಿತ್ತು.ಜಯದೇವಿ ತಾಯಿಯವರು ಸಮಾಧಾನದಿಂದ ಅವರ ತಲೆಯ ಮೇಲೆ ಕೈಯಿಟ್ಟು,
“ಮಗಳೇ, ದೇಹ ಮಾತ್ರ ಹೋಗುತ್ತದೆ. ಪ್ರೀತಿ ಎಲ್ಲಿಗೂ ಹೋಗುವುದಿಲ್ಲ. ನಾನು ನಿನ್ನೊಳಗೆ ಇರುತ್ತೇನೆ…”
ಎಂದು ಹೇಳಿದರು, ಲಲ್ಲೇಶ್ವರಿ ತಾಯಿಯವರ ಹೃದಯ ಅದನ್ನು ಒಪ್ಪಿಕೊಳ್ಳಲು ಸಿದ್ಧವಾಗುತ್ತಿರಲಿಲ್ಲ.

ಏಕೆಂದರೆ ಅವರಿಗೆ ಜಯದೇವಿ ತಾಯಿಯವರೇ ಅವರ ಪ್ರಪಂಚ, ಅವರ ಧೈರ್ಯ, ಅವರ ಗುರು, ಅವರ ದೇವರು, ಅವರ ಉಸಿರು ಎಲ್ಲವೂ ಆಗಿದ್ದರು.
ಆದ್ದರಿಂದಲೇ ತಾಯಿಯವರ ಅಗಲಿಕೆಯ ವಿಷಯ ಬಂದಾಗ ಅವರ ಕಣ್ಣುಗಳು ತೇವವಾಗುತ್ತಿದ್ದವು. ಹೃದಯ ನಡುಗುತ್ತಿತ್ತು. ಆ ಮಾತನ್ನು ಕೇಳುವುದಕ್ಕೂ ಅವರು ಸಿದ್ಧರಿರಲಿಲ್ಲ.
ಒಬ್ಬ ಮಗಳು ತನ್ನ ತಾಯಿಯನ್ನು ಎಷ್ಟು ಪ್ರೀತಿಸಬಹುದು ಎಂಬುದಕ್ಕೆ ಲಲ್ಲೇಶ್ವರಿ ತಾಯಿಯವರು ಜೀವಂತ ಉದಾಹರಣೆ. ಮತ್ತು ಒಬ್ಬ ತಾಯಿ ತನ್ನ ಮಗಳನ್ನು ಭವಿಷ್ಯಕ್ಕಾಗಿ ಎಷ್ಟು ಗಟ್ಟಿಗೊಳಿಸಲು ಬಯಸಬಹುದು ಎಂಬುದಕ್ಕೆ ಜಯದೇವಿ ತಾಯಿಯವರು ಅಮರ ಉದಾಹರಣೆ. ಅವರಿಬ್ಬರ ಪ್ರೀತಿ ಎಷ್ಟೋ ಆಳವಾಗಿತ್ತೆಂದರೆ, ಅದನ್ನು ಕಂಡ ವೈದ್ಯರೂ ಆಶ್ಚರ್ಯಪಟ್ಟರು…ಅದನ್ನು ಕೇಳಿದವರ ಕಣ್ಣಲ್ಲೂ ಕಣ್ಣೀರು ತುಂಬಿತು.

ಲಲ್ಲೇಶ್ವರಿ ತಾಯಿಯವರ ಅಪಾರ ಪ್ರೀತಿಯನ್ನು ಕಂಡ ಜಯದೇವಿ ತಾಯಿಯವರಿಗೆ ಒಂದು ಕಾಳಜಿ ಸದಾ ಇತ್ತು. “ನನ್ನ ಅಗಲಿಕೆಯ ನಂತರ ಈ ಮಗಳ ಮನಸ್ಸು ಹೇಗೆ ತಡೆದುಕೊಳ್ಳುವುದು?” ಎಂಬ ಚಿಂತೆಯು ಅವರ ಅಂತರಂಗದಲ್ಲಿ ಮೂಡುತ್ತಿತ್ತು.
ಆದರೆ ಜಯದೇವಿ ತಾಯಿಯವರು ಸಾಮಾನ್ಯ ತಾಯಿಯಾಗಿರಲಿಲ್ಲ.

ಅವರು ಶರಣರ ತತ್ವವನ್ನು ಬದುಕಿದ ಮಹಾನ ಸಾಧ್ವಿಯಾಗಿದ್ದರು. ಆದ್ದರಿಂದ ಒಂದು ದಿನ ಲಲ್ಲೇಶ್ವರಿ ತಾಯಿಯವರನ್ನು ತಮ್ಮ ಬಳಿಗೆ ಕರೆದು ಅತ್ಯಂತ ಶಾಂತವಾಗಿ ಹೇಳಿದರು”ಮಗಳೇ, ಈ ದೇಹ ಶಾಶ್ವತವಲ್ಲ. ಹುಟ್ಟಿದವರೆಲ್ಲ ಒಂದು ದಿನ ಈ ಭೂಲೋಕದ ಪಯಣ ಮುಗಿಸಲೇಬೇಕು. ಶರಣರು ಮರಣವನ್ನು ಅಂತ್ಯವೆಂದು ಕಾಣುವುದಿಲ್ಲ….ಅದನ್ನು ಮಹಾನವಮಿಯೆಂದು ಕಾಣುತ್ತಾರೆ. ಬದುಕಿರುವಾಗ ಮಾಡುವ ಸೇವೆಯೇ ಸತ್ಯ. ದೇಹ ಹೋಗುತ್ತದೆ, ಆದರೆ ಧರ್ಮ, ಪ್ರೀತಿ, ಸೇವೆ ಮತ್ತು ಆದರ್ಶಗಳು ಶಾಶ್ವತವಾಗಿ ಉಳಿಯುತ್ತವೆ.”
ಈ ಮಾತುಗಳು ಕೇವಲ ಉಪದೇಶವಾಗಿರಲಿಲ್ಲ… ಒಂದು ಆತ್ಮವನ್ನು ವೈರಾಗ್ಯದತ್ತ ಕರೆದೊಯ್ಯುವ ಗುರುಮಾತುಗಳಾಗಿದ್ದವು.
ಆ ಮಾತುಗಳನ್ನು ಕೇಳಿದ ಲಲ್ಲೇಶ್ವರಿ ತಾಯಿಯವರ ಮನಸ್ಸಿನಲ್ಲಿ ಭಾರೀ ಸಂಚಲನವಾಯಿತು. ಹಲವು ವರ್ಷಗಳಿಂದ ತಾಯಿಯ ಮೇಲಿನ ಪ್ರೀತಿಯಿಂದ ನಡುಗುತ್ತಿದ್ದ ಹೃದಯದೊಳಗೆ ಆ ದಿನ ಹೊಸ ಬೆಳಕು ಮೂಡಿತು. ತಾಯಿಯವರ ಮಾತುಗಳು ನಿಧಾನವಾಗಿ ಅವರ ಮನಸ್ಸಿನ ಆಳಕ್ಕೆ ಇಳಿಯತೊಡಗಿದವು.
ಅನಂತರ ಅವರು ಜಯದೇವಿ ತಾಯಿಯವರ ಪಾದಗಳ ಬಳಿ ಬಂದು ಕುಳಿತರು. ಭಕ್ತಿಯಿಂದ ತಲೆಬಾಗಿ ಅವರ ಪಾದಗಳಿಗೆ ಹಣೆ ಹಚ್ಚಿದರು. ಆ ಸ್ಪರ್ಶದಲ್ಲಿ ಮಗಳ ಪ್ರೀತಿಯಿತ್ತು, ಶಿಷ್ಯೆಯ ಭಕ್ತಿಯಿತ್ತು, ಆತ್ಮದ ಸಮರ್ಪಣೆಯಿತ್ತು.
ಆ ಕ್ಷಣದಲ್ಲಿ ಅವರ ಅಂತರಂಗದಲ್ಲಿ ಒಂದು ಮಹತ್ತರ ಪರಿವರ್ತನೆ ಸಂಭವಿಸಿತು.

ಒಂದು ಕಳೆದುಕೊಂಡೆ |ಒಂದು ಪಡೆದುಕೊಂಡೇನು ಒಂದರ ಗಳಿಗೆ ಬಿಡದ ತಾಯಿ ಮಗಳ -ಮೋಹ ಸಿದ್ದರಾಮನ ಕೂಡಿದ ಗಳಿಗೆ ಕಳಚಿತ್ತ||

ಇಲ್ಲಿಯವರೆಗೆ ತಾಯಿಯವರ ಅಗಲಿಕೆಯ ಕಲ್ಪನೆಯೇ ಕಣ್ಣೀರು ತರಿಸುತ್ತಿತ್ತು. ಆದರೆ ಈಗ ಶರಣರ ತತ್ವದ ಬೆಳಕಿನಲ್ಲಿ ಅವರು ಮರಣವನ್ನು ನೋಡಲು ಪ್ರಾರಂಭಿಸಿದರು.
ಅದ್ಭುತವೆಂದರೆ, ಆ ಸಂದರ್ಭದಲ್ಲಿ ಅವರ ಕಣ್ಣಲ್ಲಿ ಒಂದು ಹನಿ ಕಣ್ಣೀರೂ ಬರಲಿಲ್ಲ. ಹೃದಯದೊಳಗೆ ದುಃಖ ಇರಲಿಲ್ಲವೆಂದಲ್ಲ….ಆದರೆ ಆ ದುಃಖವನ್ನು ಮೀರಿ ನಿಂತ ವೈರಾಗ್ಯ ಮತ್ತು ಜ್ಞಾನದ ಬೆಳಕು ಮೂಡಿತ್ತು.
ಜಯದೇವಿ ತಾಯಿಯವರ ಲಿಂಗೈಕ್ಯದ ಸಮಯದಲ್ಲಿ ಲಲ್ಲೇಶ್ವರಿ ತಾಯಿಯವರು ಶರಣರ ಮಾರ್ಗವನ್ನು ಅನುಸರಿಸಿದರು. ಸಾಮಾನ್ಯ ಜನರು ನೋಡುವಂತೆ ಅದನ್ನು ಕೇವಲ ವಿಯೋಗವಾಗಿ ಕಾಣದೆ, ಶರಣರು ಹೇಳುವ *”ಮರಣ ಮಹಾನವಮಿ”*ಯ ಭಾವದಿಂದ ಸ್ವೀಕರಿಸಿದರು.
ಹೃದಯದಲ್ಲಿ ತಾಯಿಯ ಮೇಲಿನ ಅಪಾರ ಪ್ರೀತಿಯ ಸಾಗರ ಇದ್ದರೂ, ಹೊರಗೆ ಅವರು ಧೈರ್ಯದ ಪರ್ವತದಂತೆ ನಿಂತರು. ಕಣ್ಣೀರು ಹರಿಯಬೇಕಾದ ಸ್ಥಳದಲ್ಲಿ ಪ್ರಾರ್ಥನೆ ಹರಿಯಿತು. ಅಳುವಿನ ಜಾಗದಲ್ಲಿ ಶರಣ ತತ್ವದ ಸ್ಮರಣೆ ಮೂಡಿತು. ವಿಯೋಗದ ಜಾಗದಲ್ಲಿ ತಾಯಿಯ ಆದರ್ಶಗಳನ್ನು ಮುಂದುವರಿಸುವ ಸಂಕಲ್ಪ ಅರಳಿತು.
ಅದು ಕಣ್ಣೀರು ಇಲ್ಲದ ಪ್ರೀತಿಯಾಗಿರಲಿಲ್ಲ…… ಕಣ್ಣೀರನ್ನೇ ಮೀರಿ ಹೋದ ಪ್ರೀತಿಯಾಗಿತ್ತು. ಅದು ದುಃಖವಿಲ್ಲದ ವಿಯೋಗವಾಗಿರಲಿಲ…. ದುಃಖವನ್ನು ಜ್ಞಾನದಲ್ಲಿ ಕರಗಿಸಿದ ಶರಣ ಸಂಸ್ಕೃತಿಯ ಮಹೋನ್ನತ ಅನುಭವವಾಗಿತ್ತು.
ಆ ದಿನ ಲಲ್ಲೇಶ್ವರಿ ತಾಯಿಯವರು ಕೇವಲ ತಮ್ಮ ತಾಯಿಗೆ ವಿದಾಯ ಹೇಳಲಿಲ್ಲ…..ಜಯದೇವಿ ತಾಯಿಯವರು ಬೋಧಿಸಿದ ಶರಣ ತತ್ವವನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡು, ಅವರ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ನಿಂತರು.
ಅಲ್ಲಿ ಮಹಾನವಮಿ ಇತ್ತು. ಅಲ್ಲಿ ಅಳುವಿಲ್ಲದ ಆತ್ಮಜ್ಯೋತಿಯ ಉತ್ಸವ ಇತ್ತು. ಅಲ್ಲಿ ವಿಯೋಗದಲಿ ಗುರುವಾಗಿ ತಾಯಿ ತೋರಿಸಿದ ಮಾರ್ಗದಲ್ಲಿ ಶಾಶ್ವತಶರಣ ಸಂಗಮವಿತ್ತು.

*ಮಮತೆಯ ದಾರಿಯಲ್ಲಿ ಮಿಂದು ತಣಿದೆ
ತಾಯೇ ಮಮ ಪ್ರೀತಿ ವಾತ್ಸಲ್ಯ  -ನಿನಗೆರೆದೆ
ನನ್ನವ್ವ, ಅವ್ವ ಮಗಳೆಂಬುದು  ಒಂದಾಗಿ*||

( ಈ ಅಂಕಣದಲ್ಲಿ ಬಂದ ಎಲ್ಲ ತ್ರಿಪದಿಗಳು ಲಲ್ಲೇಶ್ವರಿ ತಾಯಿಯವರು ಬರೆದದ್ದು)

(ಮುಂದುವರೆಯುವುದು)


About The Author

Leave a Reply

You cannot copy content of this page

Scroll to Top