ಅಂಕಣ ಸಂಗಾತಿ
ಮನದ ಮಾತುಗಳು
ಜ್ಯೋತಿ ಡಿ.ಬೊಮ್ಮಾ

ಸುಲಗ್ನ ಸಾವಧಾನ..

ಈ ವರ್ಷದ ಬ್ಯಾಸಗಿ ಧಗಿಗಿ ನಮ್ಮ ಉತ್ತರ ಕರ್ನಾಟಕ ದ ಮಂದಿ ಒಣಗಿದ ಹಪ್ಪಳಂಗ ಆಗಿಬಿಟ್ಟಿವಿ. ಸದಾ ಬಿಸಿಲು ಧಗಿದಾಗೆ ಇರೋ ನಮಗೂ ಈ ವರ್ಷ ಬಿಸಿಲಿನ ತಾಪ ಬಾಳ ಸಾಕಮಾಡ್ತು.ಮಳಿ ಬಂದ್ರೂ ನಮ್ಮ ಕಡಿ ಧಗಿ ಕಮ್ಮಿ ಆಗಲ್ಲ.ಇನ್ನೂ ಹೆಚ್ಚೆ ಆಗತದ.ಕಾದ ಹಂಚಿನ ಮ್ಯಾಲ್ ನೀರು ಸುರುದ ಮ್ಯಾಲ ಬರೋ ಉಗ ಹ್ಯಾಂಗ್ ಶಾಖ ಕೊಡತದ , ಆ ನಮೂನಿ ಮಳಿಗಾಲದ ಧಗಿ ಇರತದ. ಇದರೊಂದಿಗೆ ಬದುಕು ಸಾಗತಿರತದ.ಪ್ರಕೃತಿ ಅದರ ಕೆಲಸ ಮಾಡತಿರತದ.ಅದರೊಂದಿಗೆ ನಮ್ಮ ಬದುಕು ಸಾಗತಿರತದ.
ಈ ವರ್ಷ ಬ್ಯಾಸಗಿದಾಗ ಮದುವೆಗಳ ಭರಾಟಿ ಬಾಳ ಇತ್ತು.ವಯಸ್ಸಿಗಿ ಬಂದ ಮಕ್ಕಳಿಗಿ ಮದುವೆ ಮಾಡೊದು ಒಂದು ದೊಡ್ಡ ಜವಾಬ್ದಾರಿ ಹೆತ್ತವರಿಗಿ.ಮದುವಿ ಆದ ಮ್ಯಾಲ ಜವಾಬ್ದಾರಿ ಮುಗಿತು ಅಂದುಕೊಳ್ಳೊದೆ ತಪ್ಪು ಅನಸ್ತದ. ಮದುವೆ ಮಾಡ್ದ ಮ್ಯಾಲ್ ಜವಾಬ್ದಾರಿ ಹೆಚ್ಚಿಗೆ ಆಗ್ತಾವ ಹೊರತು ಕಮ್ಮಿ ಆಗಲ್ಲ. ನೌಕರಿ ಮಾಡೊ ಹೆಣ್ಣಮಕ್ಳು ಇದ್ರ ಅವರ ಮಕ್ಕಳಿಗೆ ನೊಡಕೊಂಡ್ರ ಅವರಿಗಿ ನೌಕರಿ ಮಾಡಲಕ್ಕ ಸಾದ್ಯ.ಇಲ್ಲಂದ್ರ ಮಕ್ಕಳು ಮನಿ ನೌಕರಿ ಇವೆಲ್ಲ ಹೊಂದಿಸಲಕ್ಕ ಬಡಿದಾಡಿ ಮಾನಸಿಕ ನೆಮ್ಮದಿ ಕಳಕೊಂಡು ಸಂಸಾರದಲ್ಲಿ ಜಗಳ ಸುರು ಆಗತವ. ಹಾಗಂತ ಹೆಣ್ಣುಮಕ್ಕಳು ಬರಿ ಮಕ್ಕಳು ಹಡ್ದು ಮಕ್ಕಳಿಗಿ ಆರೈಕೆ ಮಾಡಕ್ಕೊಂತ ಮನ್ಯಾಗೆ ಇರಬೆಕಂದ್ರೂ ಈಗಿನ ಕಾಲದಾಗ ಅದು ಸಮಂಜಸ ಅನಸಲ್ಲ.ಪ್ರತಿಯೊಬ್ಬ ಹೆಣ್ಣಮಗಳು ಸ್ವಾವಲಂಬಿ ಆಗಿರಬೇಕು.
ಹಿಂದಿನ ಕಾಲದಾಗ ಗಂಡು ಹೊರಗ ದುಡಿಬೇಕು ಹೆಂಗಸು ಮನ್ಯಾಗ ದುಡಿಬೇಕು ಎಂಬ ನಿಯಮ ಇತ್ತು.ಈಗಿನ ಕಾಲದಾಗ ಗಂಡನ ದುಡಮೆ ಒಂದೇ ಸಾಕಾಗಲ್ಲ.ಇಬ್ಬರೂ ದುಡಿದ್ರ ಮಾತ್ರ ಆರ್ಥಿಕ ಹೊರೆ ಕಮ್ಮಿ ಆಗತದ. ಅದಕ್ಕ ಈಗಿನ ಜನರೇಷನ್ ನವ್ರು ಮದುವೆನು ಬ್ಯಾಡ ಮಕ್ಳು ಬ್ಯಾಡ ಎಂಬ ನಿರ್ಣಯಕ್ಕ ಬರತಿದ್ದಾರ.
ಮದುವೆ ಮಾಡಿಕೊಂಡು ಅವರು ಗಂಡ ಹೆಂಡತಿಯಾಗಿ ಮಕ್ಳು ಹುಟ್ಟಿಸಿ ಅವರಿಗಿ ಬೇಕಾದ ಸವಲತ್ತುಗಳನ್ನು ಕೊಟ್ಟು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವದು ಈಗಿನ ತಲೆಮಾರುಗಳಿಗೆ ಅಷ್ಟು ಸುಲಭ ಅಲ್ಲ. ಗಂಡ ಹೆಂಡತಿ ಎಂಬ ಹೊಂದಾಣಿಕೆ ಕೊರತೆ ಬಾಳ ಅದ.ಇಬ್ಬರೂ ಸ್ವಾವಲಂಬಿ ಗಳು ಇದ್ದರಂತೂ ನಡುವೆ ಸ್ವಾಭಿಮಾನ ತುಸು ಹೆಚ್ಚೆ ಇರತದ. ಹೆತ್ತವರ ಬುದ್ದಿಮಾತು ಕೇಳದಷ್ಟು ಸ್ವನಿರ್ಧಾರ ಮಕ್ಕಳು ತಗೊಳತಾರ.
ಸಂಸಾರದಲ್ಲಿ ಎರುಪೇರು ಶುರುವಾದ್ರ ತಪ್ಪು ಯಾರ್ದುಎಂದು ನಿರ್ಣಯ ಕ್ಕ ಬರಲಾರದಂತ ನೆಪಗಳು ಇಬ್ಬರಲ್ಲೂ ಇರತಾವ.ಆಗ ಯಾರಿಗೆ ಬುದ್ದಿ ಹೇಳಬೇಕು..! ಇಂತಹ ಸಂದರ್ಭದಾಗ ಹೆಣ್ಣು ಮಕ್ಕಳಿಗೆ ಬುದ್ದಿ ಹೇಳೊದು ಸಹಜ.ಹೊಂದಿಕೊಂಡು ಹೋಗು , ತಾಳಕೊಂಡು ಹೋಗು , ಗಂಡ ಅಂದ್ರ ಅನಸ್ಕೋಬೇಕು..ಇವೆಲ್ಲವೂ ಹಿಂದಿನಿಂದ ಮಗಳಿಗಿ ಹೇಳೊ ಬುದ್ದಿವಾದಗಳು. ಅಂತಹ ಸಂದರ್ಭದಾಗ ಹೆಣ್ಣಮಗಳಿಗೆ ಬ್ಯಾರೆ ದಾರಿ ಇರಲ್ಲ.ಈ ಕಡಿ ಗಂಡನ ಮನ್ಯಾಗೂ ಇರಲಾರ್ಧ ತವರು ಮನಿಗೂ ಬರಲಾರ್ದ ಸಂದಿಗ್ಧ ಪರಿಸ್ಥಿತಿ ಯೊಳಗ ಆತ್ಮಹತ್ಯೆ ಅಂತಾ ನಿರ್ಧಾರಕ್ಕ ಬಂದು ಬಿಡತಾರ.

ಒಬ್ಬ ಹೈಕೋರ್ಟ್ ಜಡ್ಜ ಹೇಳಿದ್ರು ಸಾಯೋ ಮಗಳಿಗಿಂತ ವಿಚ್ಚೇದಿತ ಮಗಳು ಇರಲಿ ಅಂತ.ಕೌಟುಂಬಿಕ ಕಲಹದಿಂದ ಹೆಣ್ಣಮಕ್ಳು ಯಾರ ಸಪೋರ್ಟ್ ಮಾನಸಿಕವಾಗಿ ನೊಂದು ಸಾಯೊ ಅಂತಾ ನಿರ್ಧಾರ ತಗೊತಾರ.ಆ ನಿರ್ಧಾದ ಅವರ ಮನಸ್ಸಿನಾಗ ಗಟ್ಟಿ ಆಗಲಿಕ್ಕೆ ಬಿಡಲಾರ್ದೆ ತಂದೆ ತಾಯಿಗಳು ನಾವು ಇದ್ದೆವೆ ಎಂಬ ಧೈರ್ಯ ಆದ್ರು ಮಗಳಿಗಿ ಕೊಡಬೇಕು.ಕೊಟ್ಟ ಹೆಣ್ಣು ಕುಲಕ್ಕ ಹೊರಗ ಅಂತ ಅವಳಿಗಿ ಗಂಡನ ಆಸರೆ ಇಲ್ದೆ , ತವರಿನ ಆಸರೆ ಇಲ್ದೆ ಅವಳು ಸಾಯೋ ನಿರ್ಧಾರ ಮಾಡತಾಳ.
ಈಗಿನ ಮಕ್ಕಳಿಗೆ ಸಾಯೊ ನಿರ್ಧಾರಕ್ಕ ಬರೊದು ಎಷ್ಟು ಸುಲಭ ಆಗಿಬಿಟ್ಟದ..! ಜೀವನದ ಒಂದಿಷ್ಟು ಕಷ್ಟಗಳು ಸಹಿಸಲಕ್ಕ ಆಗಲ್ಲ ಎಂಬ ಮನಸ್ಥಿತಿ ಗಿ ಬಂದ ಬಿಟ್ಟಾರ. ಸ್ವಲ್ಪ ಕೂಡ ಜೀವನದಾಗ ಏರುಪೇರಾದ್ರೂ ಆತ್ಮಹತ್ಯೆ ಮಾಡ್ಕೋತಾರ.ಈಗಿನ ಮಕ್ಕಳ ಮನಸ್ಥಿತಿ ಅಷ್ಯಾಕ ದುರ್ಬಲ ಆಗಬಿಟ್ಟದ.
ಬರಿ ಹೆಣ್ಣಮಕ್ಖೆ ಅಲ್ಲ ಸಂಸಾರದ ಗಲಾಟೆದಾಗ ಗಂಡುಮಕ್ಳು ಕೂಡಾ ಆತ್ಮಹತ್ಯೆ ಮಾಡಕ್ಕೊಳ್ಳತಿದ್ದಾರ.ಹೆಂಡತಿ ಬಿಟ್ಟು ಹೋದ್ಳು ಅಂತಲೋ , ಮತ್ತೊಬ್ಬ್ರರ ಜೋತೆ ಸಂಭಂಧ ಅದ ಅಂತಲೋ , ಜಗಳ ಆಡ್ತಾಳೆ ಅಂತಲೋ , ಪದೆ ಪದೇ ತವರ ಮನಿಗಿ ಹೋಗತಾಳ ಅಂತಲೋ..ಕ್ಷುಲ್ಲಕ ಕಾರಣಗಳಿಗಿ ಆತ್ಮಹತ್ಯ ಮಾಡಿಕೊಳ್ಳುವ ಗಂಡಸರ ಬಗ್ಗೆ ಕೆಳತಿರತೀವಿ.
ಸಂಸಾರದಲ್ಲಿನ ಜಗಳ ಆತ್ಮಹತ್ಯೆ ಯಲ್ಲಿ ಕೊನೆಯಾಗಬೇಕಾ..! ಈಗಿನ ಮದುವೆಗಳು ಎಷ್ಟು ಜಲ್ದಿ ನಿರ್ಣಾಯಕ ಹಂತಕ್ಕ ಬರತಿದ್ದಾವ. ತಪ್ಪು ಯಾರದು ಎಂದು ನಿರ್ಧರಿಸೊದು ಹ್ಯಾಂಗ್. ಅವರವರ ಜಾಗಕ್ಕ ಅವರವರದೆ ಸರಿ .ಎಲ್ಲಿ ತಪ್ಪತಿದ್ದೆವೆ ಎಂದು ತಿಳಕೊಳ್ಳಕ್ಕ ಪ್ರಯತ್ನಿಸುವ ತಾಳ್ಮೆ ಇಬ್ಬರಿಗೂ ಇಬ್ಬರ ಕಡೆಯವರಿಗೂ ಇಲ್ಲ.ಸಾವು ಒಂದೇ ಪರಿಹಾರ ಎಂದು ನಿರ್ಣಯಿಸಿಕೊಂಡವರಿಗೆ ಯಾವ ಉಪದೇಶಗಳು ಕಿವಿಯೊಳಗ ಹೋಗಲ್ಲ.
ಇನ್ನೂ ಮದುವೆ ಎನ್ನುವದು ಈಗಿನ ತಲೆಮಾರಿನವರಿಗೆ ಅವಶ್ಯಕ ವಿಷಯ ಅಲ್ಲ.ಹೆತ್ತವ್ರು ಕೂಡ ಮಕ್ಕಳು ಸ್ವಾವಲಂಬಿ ಆಗಿ ದುಡುದು ತಮ್ಮ ತಾವು ನೋಡಕೊಳ್ಳತಾರ ಅನ್ನೊ ಭರವಸೆ ಬರುವವರೆಗೂ ಮಕ್ಕಳ ಮದುವೆಗೆ ಒತ್ತಾಯ ಮಾಡ್ಲೆಬಾರ್ದು.
ಹೆಣ್ಣು ಮಕ್ಕಳಿಗಂತೂ ಸ್ವಾವಲಂಬಿ ತನ ಇನ್ನೂ ಅಗತ್ಯ ಅದ. ಗಂಡ ಗಳಿಸಿ ತಂದು ತನ್ನ ಎಲ್ಲಾ ಆಸಿ ಆಕಾಂಕ್ಷೆ ಪೂರಾ ಮಾಡ್ಲಿ ಎಂದು ಬಯಸೋದು ನೀಚತನ.ತನ್ನ ಮತ್ತು ಮಕ್ಕಳ ಜವಾಬ್ದಾರಿ ಗಂಡ ಒಬ್ಬಂದೆ ಅಲ್ಲ.ಮಕ್ಕಳು ಹಡೆದು ಕೊಟ್ಟ ಮಾತ್ರಕ್ಜೆ ತಾನು ಮಹಾನ್ ಅಲ್ಲ ಎಂಬುದು ಪ್ರತಿಯೊಬ್ಬ ಹೆಣ್ಣಮಕ್ಳು ತಿಳಕೋಬೇಕು.

ಮದುವೆ ಅಂದ್ರ ಅವಲಂಬನೆ ಅಲ್ಲ.ಒಬ್ಬರಿಗೊಬ್ಬರು ಸಹಕಾರ ನಿಡೋದು.ವರದಕ್ಷಿಣೆ ಎಂಬುದು ಅಂದಿಗೂ ಇಂದಿಗೂ ಚಲಾವಣೆಯಲ್ಲಿ ಇರುವ ವಿಷಯ.ಹೆಣ್ಣು ಕಲತು ನೌಕರಿ ಮಾಡತಿದ್ದರೂ ತವರಿನಿಂದ ಏನಾದ್ರೂ ತರಲಿ ಎಂಬ ಹಂಬಲ ಗಂಡಿನ ಕಡೆಯವ್ರಿಗಿ ಇದ್ದೆ ಇರತದ.ಇದು ಪರೋಕ್ಷವಾಗಿ ಮಾತಿನ ಮುಖಾಂತರ ಬರತಾವ. ಗಂಡ ಅತ್ತೆ ಮಾವ ಈ ವಿಷಯಗಳು ಪದೇ ಪದೇ ಅನ್ನುವದು ಸೊಸೆಗೆ ಸಹಿಸದೆ ಜಗಳ ಶುರು ಆಗತಾವ.ವರದಕ್ಷಿಣೆ ಕಿರುಕುಳದ ಸಾವುಗಳು ಸಾಮಾಜಿಕ ಪಿಡುಗು. ಇದು ದುಡ್ಡಿದ್ದವರಲ್ಲೆ ಹೆಚ್ಚು . ಎಷ್ಟಿದ್ದರೂ ಇನ್ನೂ ಬೇಕು ಎಂಬ ಆಸೆ.
ಎಷ್ಟೊಂದು ಧುಮ್ ಧಾಮ್ ಖರ್ಚು ಮಾಡಿ ಮಕ್ಕಳ ಮದುವೆ ಮಾಡ್ತೆವೆ.ಮದುವಿ ಆದಮ್ಯಾಲ್ ಜವಾಬ್ದಾರಿ ಮುಗಿತು ಅಂದುಕೊಳ್ಳದೆ ಮಕ್ಕಳಿಗೆ ಒತ್ತಾಸೆಯಾಗಿ ಇರಬೇಕು.ನಿಮ್ಮ ಜೊತೆಗೆ ನಾವಿದ್ದೆವೆ , ಎಂತಾ ಸಂದರ್ಭದಾಗೂ ನಿಮ್ಮ ಹಿಂದ ನಾವಿದ್ದೆವೆ ಅಂತ ಗಂಡ ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ದೈರ್ಯ ತುಂಬಬೇಕು. ಈಗಿನ ಪಿಳಿಗೆ ಸ್ವತಂತ್ರ ವಾಗಿ ಇರಬೇಕು ಅಂತ ಅಪೇಕ್ಷೆ ಪಡತಾರ.ಇರಲಿ , ತಂದೆ ತಾಯಿ ಕೂಡ ಮಕ್ಕಳಿಗಿ ಒಜ್ಜಿ ಆಗಲಕ್ಕ ಇಷ್ಟ ಪಡಲ್ಲ. ಮನಿಯೊಳಗ ಅತ್ತಿ ನಾದನಿ ಮಾವ ಇದ್ರ ಅವರ ಜೋಡಿ ಹೊಂದಾಣಿಕಿ ಆಗ್ಧೆ ಜಗಳ ಬರತದ ಅಂದ್ರ ಒಂದು ಕಾರಣ ಅನ್ನಬಹುದು.ಇಷ್ಟ ಪಟ್ಟು ಒಪ್ಪಿ ಮದುವೆ ಮಾಡಿಕೊಂಡು ಗಂಡ ಹೆಂಡತಿ ಇಬ್ರೆ ಇದ್ರು ಜಗಳ ಆಡಿ ಡೈವೊರ್ಸ ಮಾಡ್ಕೋತಾರ..ಆತ್ಮಹತ್ಯೆ ಮಾಡ್ಕೋತಾರ ಅಂದ್ರ ಇದಕ್ಕೆ ಯಾವ ಕಾರಣ ಹುಡಕಬೇಕು..!
ಇಲ್ಲಿ ಸಮಸ್ಯೆ ಇರೊದು ಈಗಿನ ಯುವ ಜನರ ವಿಚಾರದಲ್ಲಿ.ತಾಳ್ಮೆಯ ಕೊರತೆ.ಮಕ್ಕಳಿಗಿ ಯಾವ ಕೊರತೆ ಇಲ್ದಂಗ ಬೆಳಸ್ತಿರೊ ತಂದೆ ತಾಯಿಗಳ್ದು ತಪ್ಪು. ಬಿಸಲು ಮಳಿ ಗಾಳಿಗಿ ಹೊಇಗಲಾರದಂಗ ಅವ್ರಿಗಿ ಕಾಪಾಡಿ ಒಂದು ಸರಿ ಅವ್ರು ಇವೆಲ್ಲ ಅನುಭವಿಸೊ ಪರಿಸ್ಥಿತಿ ಬಂದ್ರ ಸಹಿಸಲ್ಲ. ನಾವು ತಂದೆ ತಾಯಿಗಳು ಮಕ್ಕಳ ವಿಷಯವಾಗಿ ಅತೀ (possessive)ಸ್ವಾಮಿತ್ವ ಭಾವನೆ ಹೊಂದತಿದ್ದಿವಿ. ಅವರಿಗಿ ಯಾವ ನಿರ್ಧಾರ ತಗೊಳಕ್ಕ ಬಿಡಲಾರದಂಗ ಅವರಿಗಿ ಕಣ್ಣರೆಪ್ಪೆ ಹಾಂಗ ನೋಡಕೊಂಡು ಅವಲಂಬಿಸಿ ಇರೊಹಂಗ ಮಾಡ್ತಿರೋದು ಕೂಡ ಅವ್ರು ಬದುಕು ಎದುರಿಸಲಿಕ್ಕ ಆಗ್ದೆ ಇರೊದಕ್ಕ ಒಂದು ಕಾರಣ.
ಮಕ್ಕಳು ಅಂದ್ರ ನಮ್ಮ ಮೂಲಕ ಈ ಭೂಮಿಗೆ ಬಂದ ಮುಂದಿನ ಪಳೆಯುಳಿಕೆ ಗಳು.
ಅವ್ರೆ ನಮ್ಮ ಇಡೀ ಜಗತ್ತು ಅನ್ನೊಹಂಗ ಅವ್ರನ್ನ ಬೆಳೆಸೋದು ಒಂದು ರೀತಿ ಮಕ್ಕಳನ್ನು ದುರ್ಬಲ ಮಾಡ್ಲಿಕ್ಕೆ ಕಾರಣ ಆಗತದ. ಎಷ್ಟೋ ಮಕ್ಳು ತಂದೆ ತಾಯಿಗಿ ಹೊರೆ ಆಗತಾರ.ತಮಗ ಆಸರೆ ಆಗಬೇಕಾದ ಮಕ್ಕಳಗಿ ಜೀವನ ಪರ್ಯಂತ ತಾವೆ ಆಸರೆ ಆಗಬೇಕಾದ ಸಂದರ್ಭಗಳು ಇದ್ದಾವ. ವ್ಯಸನಕ್ಕ ಅಂಟಿಕೊಂಡ ಮಕ್ಕಳಿಗಿ , ಬೇಜವಾಬ್ದಾರಿ ಹೊಂದಿರುವ ಮಕ್ಕಳಿಗಿ ಮದುವೆ ಮಾಡಿದ್ರ ಹಾದಿಗಿ ಬರತಾನ ಅಂತ ಒಂದು ಹೆಣ್ಣು ತಂದು ಕಟ್ಟಿದ್ರ ಒಬ್ಬರ ಜೊತೆ ಮತ್ತೊಬ್ರ ಬದುಕು ಹಾಳು ಮಾಡಿದಂಗ.
ಮದುವೆ ಅನ್ನುವದು ಕೇವಲ ಹೊಂದಾಣಿಕೆ ಅಲ್ಲ.ಸಾಂಗತ್ಯ.ಇಬ್ಬರು ಒಬ್ಬರಿಗೊಬ್ಬರು ಆಸರೆ ಆಗಿ ಇರಬೇಕಾದ ಸಂಭಂಧ.ಇದನ್ನು ವಿಜೃಂಭಣೆಯಿಂದ ಹಣ ಖರ್ಚು ಮಾಡಿ ಮಾಡುವದು ಬಿಡುವದು ಅವರವರ ಆಸಕ್ತಿ ಗೆ ಮತ್ತು ಆರ್ಥಿಕ ಸ್ಥಿತಿ ಮ್ಯಾಲ ಅವಲಂಬಿಸ್ತದ. ಅಷ್ಟು ಖರ್ಚು ಮಾಡಿ ಮಾಡಿದ ಮದುವೆ ಗಳ ಜೋಡಿಗಳು ಎಷ್ಟು ಸುಖ ಸಂತೋಷ ದಿಂದ ಜೀವನ ಮಾಡತಿದ್ದಾರ ಅನ್ನೊದು ಇವತ್ತಿನ ಚಿಂತನೆ ವಿಷಯ.
ಹಾಗಂತ ಮದುವೆ ಮಾಡೋಧ ಬ್ಯಾಡ ಅಂತಲ್ಲ.ಮೊದಲು ನಮ್ಮ ಮಕ್ಕಳ ಸ್ವಾವಲಂಬಿ ತನ ಮತ್ತು ಅವರು ಸಂಬಂಧಗಳನ್ನು ನಿಭಾಯಿಸುವ ರೀತಿಗಳನ್ನು ನಾವು ಪರಿಕ್ಷಿಸಬೇಕು.ಅದಕ್ಕಾಗಿ ತಯ್ಯಾರಿಸಬೇಕು.ಎಲ್ಲಕ್ಕಿಂತ ಮುಖ್ಯ ಇಬ್ಬರೂ ಆರ್ಥಿಕ ವಾಗಿ ಸ್ವಾವಲಂಬಿ ಗಳಾಗಿರಬೇಕು.ಇದು ಎಲ್ಲಕ್ಕಿಂತ ಮುಖ್ಯ. ಮಕ್ಕಳು ಹರೆಯಕ್ಕ ಬರುತ್ತಲೆ ಮದುವೆ ಮಾಡಲಕ್ಕ ಇಲ್ಲ ಮದುವೆ ಆಗಲಿಕ್ಕ ಒತ್ತಾಯಿಸುವ ಹೆತ್ತವರು ಮೊದಲು ಅರ್ಥ ಮಾಡಕೊಬೇಕು..ನಮ್ಮ ಮಕ್ಕಳು ಮದುವೆ ಅನ್ನೊ ಸಂಭಂಧ ನಿಭಾಯಿಸಲಕ್ಕ ಎಷ್ಟು ತಯ್ಯಾರಿದ್ದಾರ ಅನ್ನುವ ವಿಷಯ.ನಮ್ಮ ದೇಶದಲ್ಲಿ ಮದುವೆಗೆ ಇದ್ದಷ್ಟು ಪ್ರಾಮುಖ್ಯತೆ , ಮದುವೆ ನಂತರ ಬರುವ ಸಮಸ್ಯೆ ಗಳಿಗೆ ಇಲ್ಲ. ಗಂಡ ಹೆಂಡತಿ ಅಂದ ಮ್ಯಾಲ ಇವೆಲ್ಲ ಸಾಮಾನ್ಯ. ಮಕ್ಕಳು ಆದ ಮ್ಯಾಲ್ ಇನ್ನೆಂತ ಜಗಳ , ಅಂತ ಸಮಸ್ಯೆ ಗಳನ್ನು ದೂರ ಮಾಡಲು ನೊಇಡತೀವಿ.ಇವುಗಳನ್ನು ಚಿಕ್ಕ ಸಮಸ್ಯೆ ಅಂತ ನೋಡ್ದೆ ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಆಸರೆ ಆಗಿ ನಿಲ್ಲಬೆಕಾದ್ದು ಹೆತ್ತವರ ಕರ್ತವ್ಯ.
pic:AIcreated

ಜ್ಯೋತಿ ಡಿ ಬೊಮ್ಮಾ ಅವರುಕಲಬುರ್ಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು ಎರಡು ಪ್ರಬಂಧ ಸಂಕಲನಗಳನ್ನುಪ್ರಕಟಿಸಿದ್ದಾರೆ. ಸಂಗಾತಿಪತ್ರಿಕೆಗಾಗಿಯೇ ಇವರು ದೇಸಿ ನುಡಿಗಟ್ಟಿನಲ್ಲಿ ವಿಶಿಷ್ಠ, ವಿಶೇಷ ವಿಷಯಗಳ ಬಗ್ಗೆ ಪ್ರತಿ ತಿಂಗಳೂ ಬರೆಯುತ್ತಿದ್ದಾರೆ



