ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇನಿತು ಮುನಿಯದೆ
ಎನಿತು ದಣಿಯದೆ
ನಗುತಲಿಹನು ನೇಸರ
ಹೊನ್ನ ಬೆಳಕು
ಅರುಣ ಕಿರಣ
ಚೆಲ್ಲುತಿಹನು ದಿನಕರ||

ಮತಿಹೀನ ಮನುಜ
ಭೂಮಾತೆಯ ತನುಜ
ಅಮ್ಮನೆಂಬುದ ನೋಡದೇ
ಹೊನ್ನ ಮಣ್ಣನು ಅಗೆಯುತಲಿರುವೆ
ಹಸಿರು ವನಸಿರಿಯ ಬಗೆಯುತಲಿರುವೆ
ಬೆತ್ತಲಾಗುತಿಹಳು ಅಮ್ಮ ನಿನಗಿನ್ನು ಕಾಣದೆ||

ಜಗವ ಬೆಳಗುವ
ಅವನ ಕಣ್ಣಿಗೇ ಮಣ್ಣಂತೆ
ಕಾಣಲೊಲ್ಲದು ತಿಳಿಯಲೊಲ್ಲದು
ನಿಮ್ಮಗಳ ಕಪ್ಪು ರಂಗಿನಾಟ
ಕೊಂಚ ತಾಳಿ
ಪಾಪದ ಫಲ ಉಣ್ಣುವಿರಂತೆ||

ನೇಸರನೊಬ್ಬ
ಮಹಾ ಮರೆಗುಳಿ
ನಿತ್ಯ ಬರುವನು
ಎಲ್ಲವ ಮರೆತು
ಮತ್ತೆ ಮುಳುಗುವನು
ಬೇಸರದಿ ಮುನಿದು||

ಜಗದೊಡೆಯ ಮುನಿದರೆ
ಉಳಿಗಾಲ ನಮಗಿಲ್ಲ
ಯೋಚಿಸಿ ಮುಂದಡಿ ಇಡಿ
ಮಿಂಚಿ ಹೋದರೆ ಕಾಲ
ಚಿಂತಿಸಿಯೂ ಫಲವಿಲ್ಲ||

ಇಂದಿದೆಯೋ
ಮುಂದಿದೆಯೋ
ಎಂದಿದೆಯೋ
ಮನುಕುಲದ ಮಾರಿಹೋಮ
ತಿಳಿದೇಳು ಸಿಡಿದೇಳು ಕೂಗೇಳು
ತಡೆಯೋಣ ಭೂರಮೆಯ ನಾಶವನ್ನ||


About The Author

Leave a Reply

You cannot copy content of this page

Scroll to Top