ಅನುವಾದ ಸಂಗಾತಿ
೧೯೩೦೦ ರ ಹೆಣ
ಹಿಂದಿ ಮೂಲ : ಸುದೀರ್ ಧಾವಳೆ
ಕನ್ನಡಕ್ಕೆ : ಕಾ.ಹು.ಚಾನ್‌ಪಾಷ



ಬ್ಯಾಂಕಿನ ಹೊಸ್ತಿಲಿಗೆ
ಇವತ್ತು ಯಾವ ಗ್ರಾಹಕನೂ ಬಂದಿಲ್ಲ
ಬAದಿರುವುದು ಒಂದು ಪ್ರಶ್ನೆ
ಅವನ ಕೈಯಲ್ಲಿ ಪಾಸ್‌ಬುಕ್ ಇಲ್ಲ
ಒಂದು ಅಸ್ಥಿಪಂಜರವಿದೆ
ಅವನು ಅರ್ಜಿ ತುಂಬಲಾರ
ಸಹಿ ಹಾಕಲಾರ
ಆದರೆ ಅವನು ಇತಿಹಾಸದ ಪುಟಗಳಲ್ಲಿ
ಮೂಳೆಗಳಿಂದಲೇ ಒಂದು ಹೆಗ್ಗುರುತು ಮಾಡಿದ್ದಾನೆ
ಸಮಾಧಿಯ ಮಣ್ಣು ಇನ್ನು ಹಸಿಯಾಗಿಯೇ ಇದೆ
ತಂಗಿಯ ಕೊನೆಯ ಉಸಿರು
ನೆಲದಲ್ಲಿ ಸಿಲುಕಿಕೊಂಡಿವೆಯೇನೋ ಎಂಬಂತ್ತಿದೆ
ಆ ಅಣ್ಣ ತನ್ನದೇ ರಕ್ತದ ಮೂಳೆಗಳನ್ನು ಅಗೆಯುತ್ತ
ವ್ಯವಸ್ಥೆಯ ಬಾಗಿಲು ತಟ್ಟುತ್ತಿದ್ದಾನೆ
“ಪುರಾವೆ ತನ್ನಿ; ಬದುಕಿರುವಳೋ ಅಥವಾ ಸತ್ತಿರುವಳೋ”
ಕಾಗದಗಳ ಕಾಡನಲ್ಲಿ ಕುಳಿತ
ಬಾಯಲ್ಲಿ ನಿಯಮಗಳ ಮೊಳೆ ಹೊಡೆದ ಅಧಿಕಾರಿಗಳು ಹೇಳಿದರು
ಹೇಳುತ್ತಾರೆ
ಇದು ವ್ಯವಸ್ಥೆ, ಇದು ನಿಯಮ,
ಇದು ಪ್ರಕ್ರಿಯೆ, ಇದು ಕಾನೂನು…
ಆದರೆ ಇವತ್ತು
ಒಬ್ಬ ಬಡ ಆದಿವಾಸಿ
ನಿಮ್ಮ ನಿಯಮಗಳನ್ನು
ತನ್ನ ತಂಗಿಯ ಮೂಳೆಗಳಲ್ಲಿ ಸುತ್ತಿ
ನಿಮ್ಮ ಮುಂದೆ ಎಸೆದಿದ್ದಾನೆ
ನೀವು ಹೇಳುತ್ತೀರಿ
“ಖಾತೆದಾರ ಬಂದರೆ ಮಾತ್ರ ಹಣ ಸಿಗುವುದು”
ಅವನು ಕೇಳುತ್ತಾನೆ
“ಸತ್ತ ನಂತರ ಯಾರು ಬರುತ್ತಾರೆ?”
ನಿಮ್ಮ ಬಳಿ ಯಾವ ಉತ್ತರವೂ ಇಲ್ಲ
ಬರೀ ಮೌನ
ಅದೂ ಸಹ ಎಸಿ ಕೋಣೆಯಲ್ಲಿ ಕುಳಿತ ಮೌನ
ಎರಡು ತಿಂಗಳ ಕಾಲ
ಅವನು ನಿಮ್ಮ ಬಾಗಿಲಿಗೆ ಮನುಷ್ಯನಾಗಿ ಬರುತ್ತಿದ್ದ
ನೀವು ಅವನನ್ನು ಅಟ್ಟಿಸಿದಿರಿ
ಇವತ್ತು ಅವನು ಅಸ್ಥಿಪಂಜರವಾಗಿ ಬಂದಿದ್ದಾನೆ
ನೀವು ಬೆಚ್ಚಿಬಿದ್ದಿದ್ದೀರಿ
ಕೇಳಿ
ಇದು ನೀವೇ ಹುಟ್ಟಿಸಿದ ಭಯ
ಈ ಅಸ್ಥಿಪಂಜರ
ಕೇವಲ ಆ ತಂಗಿಯದ್ದಲ್ಲ
ಎಂದೋ ಸತ್ತ ನಿಮ್ಮ ಮನುಷ್ಯತ್ವದ್ದು
ಊರಿನವರು ಹುಚ್ಚ ಎಂದರು
ಬ್ಯಾಂಕಿನವರು ನಿಯಮ ಹೇಳಿದರು
ಪೊಲೀಸರು ಪ್ರಕರಣ ದಾಖಲಿಸಿದರು
ಆದರೆ ಯಾರಿಗೂ ಕಾಣಲಿಲ್ಲ
ಇವನೇ ಎಲ್ಲರಿಗಿಂತ ಬುದ್ಧಿವಂತನೆಂದು
ಏಕೆಂದರೆ ಇವನು ಅರ್ಥಮಾಡಿಕೊಂಡಿದ್ದಾನೆ
ಈ ದೇಶದಲ್ಲಿ
ಬದುಕಿರುವ ಮನುಷ್ಯನಿಗೆ ಯಾವ ಅಸ್ತಿತ್ವವೂ ಇಲ್ಲ
ಆದರೆ ಸತ್ತ ದೇಹಕ್ಕೆ ಪೋಸ್ಟ್ಮರ‍್ಟಂ ಮಾಡಲಾಗುವುದು
ಇಲ್ಲಿ ಮನುಷ್ಯರಿಗಿಂತ ಹೆಣಗಳೇ ಅಧಿಕೃತ ದಾಖಲೆಗಳು
ಇವನು ಕೇವಲ ಒಬ್ಬ ಅಣ್ಣನಲ್ಲ
ಇಡೀ ಸಮಾಜದ ಹರಿದಹೋದ ನರನಾಡಿ
ಇದರಿಂದ ರಕ್ತವಲ್ಲ
ವ್ಯವಸ್ಥೆಯ ಕೊಳೆತ ವಾಸನೆ ಸೋರುತ್ತಿದೆ
ಸಮಾದಿಯಿಂದ ತೆಗೆದ ಅಸ್ಥಿಪಂಜರ
ಈಗ ಕೇವಲ ತಂಗಿಯದ್ದಾಗಿ ಉಳಿದಿಲ್ಲ
ಅದು ಈ ಪ್ರಜಾಪ್ರಭುತ್ವದ
ಎಂದೋ ಮುರಿದುಹೋದ ಬೆನ್ನೆಲುಬು
ಇವತ್ತು ಅವನು ನಿಂತಿದ್ದಾನೆ
ಜನರ ನಡುವೆ
ಹಾಸ್ಯ ಮತ್ತು ಭಯದ ನಡುವೆ
ಒಂದು ಪ್ರಶ್ನೆಯಾಗಿ
“ಈಗಲಾದರೂ ನಂಬುವಿರಾ?”
ಈ ಅಧಿಕಾರ?
ಅದು ತಲೆ ತಗ್ಗಿಸಿ ಫೈಲ್ ತಿರುವುತ್ತಿದೆ…
ಯಾಕೆಂದರೆ
ಅದರ ಬಳಿ ಪ್ರತಿ ಸಾವಿನ ದಾಖಲೆಯಿದೆ
ಆದರೆ ಪ್ರತಿ ಅನ್ಯಾಯಗಳದ್ದು ಇಲ್ಲ
ಇದು ಕವಿತೆಯಲ್ಲ ಇದೊಂದು ಚಾರ್ಜ್ಶೀಟ್
ಇದರಲ್ಲಿ ಆರೋಪಿಗಳು:
ನಿಮ್ಮ ವ್ಯವಸ್ಥೆ
ನಿಮ್ಮ ಕಾನೂನು
ಮತ್ತು ಆ ಇಡೀ ಚೌಕಟ್ಟು
ಯಾವುದು ಬಡವರಿಗೆ ಹೇಳುತ್ತದೆಯೋ ಅದು
“ಮೊದಲು ಸತ್ತಿದ್ದಕ್ಕೆ ಪುರಾವೆ ತನ್ನಿ
ನಂತರ ಬದುಕುವ ಹಕ್ಕು ಸಿಗುತ್ತದೆ”
ಸುಧೀರ್ ಧಾವಳೆ : ಸುಧೀರ್ ಧಾವಳೆ ಅವರು ಮಹಾರಾಷ್ಟçದ ಪ್ರಸಿದ್ಧ ಸಾಹಿತಿ, ಸಾಮಾಜಿಕ ಕಾರ್ಯಕರ್ತರು. ‘ವಿದ್ರೋಹಿ’ ಎಂಬ ಮರಾಠಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು. ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇವರು ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು. ಇವರ ಕವಿತೆಗಳು ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಅಸ್ತ್ರಗಳಾಗಿವೆ.
ಹಿಂದಿ ಮೂಲ : ಸುದೀರ್ ಧಾವಳೆ
ಕನ್ನಡಕ್ಕೆ : ಕಾ.ಹು.ಚಾನ್‌ಪಾಷ



