ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇ
ನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ
ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇ
ಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ
ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇ
ರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ
ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇ
ನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ
ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇ
ಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ
ಎಮ್ಮಾರ್ಕೆ



