ವಿಶೇಷ ಸಂಗಾತಿ
ಕವಿತಾ ಶ್ರೀನಿವಾಸ್ ನಾಯಕ್
“ಬೂದಿ ಮುಚ್ಚಿದ ಕೆಂಡ”


ನಿಮ್ಮೊಳಗಿನ ಸುಪ್ತ ಚೈತನ್ಯದ ಅನ್ವೇಷಣೆ
”ಬೂದಿ ಮುಚ್ಚಿದ ಕೆಂಡ” ಎಂಬುದು ಕೇವಲ ಒಂದು ಗಾದೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಆಳವನ್ನು ಅಳೆಯುವ ಒಂದು ಸುಂದರ ರೂಪಕ.
ಕೆಂಡವು ಬೂದಿಯ ಅಡಿಯಲ್ಲಿ ಅಡಗಿದ್ದರೂ ತನ್ನ ಶಾಖವನ್ನು ಕಳೆದುಕೊಂಡಿರುವುದಿಲ್ಲ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಜನ್ಮಜಾತವಾದ ಒಂದು ಪ್ರತಿಭೆ ಅಥವಾ ಕೌಶಲ ಇರುತ್ತದೆ. ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿ ಅಥವಾ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪ್ರತಿಭೆಯ ಮೇಲೆ ‘ಬೂದಿ’ ಮುಚ್ಚಿರುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ಆ ಕೆಂಡವನ್ನು ಮತ್ತೆ ಪ್ರಜ್ವಲಿಸಲು ಸಾಧ್ಯ.
ವ್ಯಕ್ತಿತ್ವ ವಿಕಸನದಲ್ಲಿ ‘ಮೌನ’ಕ್ಕೆ ದೊಡ್ಡ ಸ್ಥಾನವಿದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ವ್ಯಕ್ತಿ ಅತಿ ಹೆಚ್ಚು ಪ್ರಚಾರ ಬಯಸುವುದಿಲ್ಲ.ಅವರು ಸದ್ದಿಲ್ಲದೆ ತಮ್ಮ ಗುರಿಯತ್ತ ಕೆಲಸ ಮಾಡುತ್ತಾರೆ.ಅತಿಯಾಗಿ ಮಾತನಾಡಿ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಆ ಶಕ್ತಿಯನ್ನು ಒಳಗಡೆ ಶೇಖರಿಸಿಟ್ಟುಕೊಂಡು ಸರಿಯಾದ ಸಮಯ ಬಂದಾಗ ತಮ್ಮ ಸಾಧನೆಯ ಮೂಲಕ ಉತ್ತರ ನೀಡುತ್ತಾರೆ.
ಪರಿಸ್ಥಿತಿಗಳೇ ಬೂದಿಯಿದ್ದಂತೆ
ಜೀವನದಲ್ಲಿ ಬರುವ ಸೋಲುಗಳು, ಅವಮಾನಗಳು ಅಥವಾ ಟೀಕೆಗಳು ನಮ್ಮ ವ್ಯಕ್ತಿತ್ವದ ಮೇಲೆ ಬೂದಿಯಂತೆ ಬಂದು ಬೀಳುತ್ತವೆ. ಆಗ ನಾವು ನಿಸ್ತೇಜರಾದಂತೆ ಕಾಣಬಹುದು.ಆದರೆ ನೆನಪಿಡಿ, ಬೂದಿ ಕೆಂಡವನ್ನು ತಾತ್ಕಾಲಿಕವಾಗಿ ಮುಚ್ಚಬಹುದೇ ಹೊರತು ಆರಿಸಲು ಸಾಧ್ಯವಿಲ್ಲ. ಒಳಗೆ ಹಂಬಲದ ಕಿಚ್ಚು ಜೀವಂತವಾಗಿದ್ದರೆ,ಎಂತಹ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಮತ್ತೆ ಪುಟಿದೇಳಬಹುದು.
ಕೆಂಡ ಹೊರಬರಬೇಕಾದರೆ ಗಾಳಿಯ ಅವಶ್ಯಕತೆ ಇದೆ.ವ್ಯಕ್ತಿತ್ವ ವಿಕಸನದಲ್ಲಿ ಆ ಗಾಳಿಯೇ ‘ನಿರಂತರ ಪ್ರಯತ್ನ’.
ನಿಮ್ಮ ಒಳಗೆ ಸಾಧನೆಯ ಕಿಚ್ಚಿದೆ. ಸಂದರ್ಭಗಳು ಅದನ್ನು ಮುಚ್ಚಿರಬಹುದು.ಆದರೆ ನಿಮ್ಮ ಪ್ರತಿಭೆಯನ್ನು ನೀವು ನಂಬಿ,ಶ್ರಮದ ಗಾಳಿಯನ್ನು ಬೀಸಿದರೆ ಖಂಡಿತವಾಗಿಯೂ ನೀವು ಜಗತ್ತು ಬೆರಗಾಗುವಂತೆ ಪ್ರಕಾಶಿಸುತ್ತೀರಿ. ನಿಮ್ಮ ಅಸ್ತಿತ್ವ ಬೂದಿಯಂತಿರಲಿ, ಆದರೆ ನಿಮ್ಮ ವ್ಯಕ್ತಿತ್ವ ಕೆಂಡದಂತೆ ಪ್ರಖರವಾಗಿರಲಿ
ಕವಿತಾ ಶ್ರೀನಿವಾಸ್ ನಾಯಕ್
ಕಾರ್ಕಳ,ಉಡುಪಿ ಜಿಲ್ಲೆ




Excellent