ಕಾವ್ಯ ಸಂಗಾತಿ
ಎಮ್.ಎಚ್.ಹಾಲ್ಯಾಳ
ಗಜಲ್


ನೋಡಲ್ಲಿ ಚೆಲುವೆ ಕಾಮನ ಬಿಲ್ಲು, ನಿನಗಾಗಿ ತಂದು ಕೊಡಲೆ,
ನಕ್ಷತ್ರ ಲೋಕ ಕಯ್ಯಾರ ಹಿಡಿದು, ಮುಡಿಗಾಗಿ ತಂದು ಕೊಡಲೆ..
ಮುಂಜಾನೆ ವೇಳೆ ಮೊಗ್ಗೆಲ್ಲ ಅರಳಿ, ಮಲ್ಲಿಗೆಯ ಘಮವು ನೋಡು,
ಆ ಹೂವನಿಳಿಸಿ ನಿನ್ನ ಮುಡಿಗೆ ಏರಿಸಲು, ಪ್ರೀತಿಗಾಗಿ ತಂದು ಕೊಡಲೆ..
ಮಕರಂದ ಕದ್ದ ಮರಿ ದುಂಬಿ ಹಿಡಿದು, ಆ ಜೇನು ಕಸಿದು ತರಲೆ,
ಸುಳಿ ಸುಳಿದು ಬರುವ ತಂಗಾಳಿ ಕರೆದು, ಒಲವಾಗಿ ತಂದು ಕೊಡಲೆ..
ಮರದೆಲೆಯ ಹರಿದು ತುತ್ತೂರಿ ಮಾಡಿ, ನಿನ್ನ ಮುಂದೆ ನಾನು ಊದಿ,
ಮಾಮರದ ತುಂಬ ಇಳಿ ಬಿದ್ದ ಹಣ್ಣು, ಸವಿಗಾಗಿ ತಂದು ಕೊಡಲೆ..
ಜುಳು ಜುಳನೆ ಹರಿವ ನೀರಲೆಯ ಮೇಲೆ, ಹಾಯಾಗಿ ನಾನು ಮಲಗಿ,
ನಾ *ಶಾಂತಿದೂತ* ಶಾಂತತೆಯ ಶಬ್ದ, ನಿನಗಾಗಿ ತಂದು ಕೊಡಲೆ..
ಎಮ್.ಎಚ್.ಹಾಲ್ಯಾಳ. ಕೋಳೂರು



