ಧಾರಾವಾಹಿ ಸಂಗಾತಿ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ

ಅರ್ಜುನ ಉವಾಚ
ಕೌಸಲ್ಯಾಸುತನನ್ನೇ
ಕರೆಸಿಕೊಂಡಿತು ಕದನಲತೆ;
ಲವಕುಶರ ಕುಶಲತೆ

ಭರತ ಮೂರ್ಛೆ ಹೊಂದಿದನೆಂಬ ಭಾರದ, ಸಂತಸವನ್ನು ತರದ ಸುದ್ದಿ ಶ್ರೀರಾಮನನ್ನು ಬಂದು ತಲುಪಿದಾಗ ಸಹಿಸದಂತಾಯಿತು ಅವನಿಗೆ. ಸಹೋದರರ ಸ್ಥಿತಿ ನೋವು ಮೂಡಿಸಿತು.
ಸುಗ್ರೀವ, ವಿಭೀಷಣರ ಜೊತೆಗೆ ಯುದ್ಧರಂಗಕ್ಕೆ ಬಂದ, ಕುಶ ಲವರನ್ನು ಕಾಣಲು. ಮಡಿದ ಸೇನೆಯದು ಬಿದ್ದಿತು ರಾಮದೃಷ್ಟಿಗೆ. ಬೇನೆಯದು ಎದ್ದಿತು ರಾಮಹೃದಯದಲ್ಲಿ, ಮೈಮರೆತಿದ್ದ ಸಹೋದರರನ್ನು ಕಂಡಾಗ. ಬಿಲ್ಲು ಬಾಣ ಹಿಡಿದು ನಿಂತ ಲವ ಕುಶರ ಪರಿ ಸೋಜಿಗ ಹುಟ್ಟಿಸಿತು ಅವನಲ್ಲಿ. ಪುಳಕ ಹುಟ್ಟಿಸುವ ಪೋರರ ವೀರ ನಿಲುವನ್ನು ಕಂಡೊಡನೆಯೇ ರಾಮಧ್ವನಿ ಮೊಳಗಿತು ಮನೋಹರವಾಗಿ.
“ಮಕ್ಕಳು ನೀವು. ನಿಮಗೆ ಬಿಲ್ವಿದ್ಯೆಯನ್ನು ಕಲಿಸಿದವರು ಯಾರು? ನಿಮ್ಮ ಮನೆಯದು ಇರುವುದೆಲ್ಲಿ? ತಂದೆ ಯಾರು? ಯಾರು ತಾಯಿ? ಕುದುರೆಯನ್ನು ಕಟ್ಟಿ ಕದನಕ್ಕಿಳಿಯುವ ಛಲವದು ನಿಮಗೇತಕೆ? ಸಂಪೂರ್ಣ ಸೇನೆಯನ್ನು ಜಯಿಸುವ ಶಕ್ತಿ ಬಂದದ್ದೆಲ್ಲಿಂದ?”
ರಾಮನ ಪ್ರಶ್ನೆ ಬಾಣಗಳು ಮೃದುವಾಗಿ ಸೋಕಿದವು ಅವಳಿಗಳ ಮುದ್ದು ದೇಹವನ್ನು. ಕುದುರೆಯನ್ನು ಬಿಡಿಸಿಕೊಳ್ಳುವುದಕ್ಕೆಂದು ಬಂದವನು ಕದನಕ್ಕಿಳಿಯದೆ ಇಲ್ಲಸಲ್ಲದ ಮಾತುಕತೆಯೆಡೆಗೆ ಆಸಕ್ತಿ ತೋರುತ್ತಿದ್ದಾನಲ್ಲಾ! ಎನಿಸಿತು ಅವರಿಗೆ. ಕ್ಷಾತ್ರಪೌರುಷ ತೋರದೆ ಬರಿದು ಮಾತಿನಲ್ಲಿ ಏನಾಗುತ್ತದೆ ಸಾಧನೆ! ಎಂಬ ಭಾವನೆ ಮೂಡಿತು ಅವರಲ್ಲಿ.
ಅದನ್ನೇ ಹೇಳಿದರು ರಘುಕುಲತಿಲಕನಿಗೆ; ತಮ್ಮ ಜನಕನಿಗೆ. “ಯುದ್ಧ ಮಾಡಿ ನೋಡು ನಮ್ಮ ಶೌರ್ಯವನ್ನು” ಎಂದರು ವೀರಭಾವದಿಂದ. ಶಿಶುಗಳಾಗಿರುವ ಅವರಲ್ಲಿ ಅದಾವ ಕದನ ಎಂದುಕೊಂಡ ಕೌಸಲ್ಯಾಸುತ. ಮತ್ತೆ ಕೇಳಿದ ಅವರ ಜನನಸ್ಥಿತಿಯನ್ನು.
“ಈ ತಪೋವನದಲ್ಲಿ ನಮ್ಮಿಬ್ಬರನ್ನೂ ಅವಳಿ ಮಕ್ಕಳಾಗಿ ಪಡೆದವಳು ಸೀತೆ. ನಮ್ಮ ಜನನದಿಂದ ತೊಡಗಿ ಬಗೆಬಗೆಯ ಸಂಸ್ಕಾರಗಳನ್ನು ಒದಗಿಸಿಕೊಟ್ಟು, ವಿದ್ಯಾಭ್ಯಾಸವನ್ನು ಮಾಡಿಸಿ, ಶಸ್ತಾçಭ್ಯಾಸವನ್ನು ಕೊಡಿಸಿ, ನಮ್ಮನ್ನು ಬಲಯುತರಾಗಿಸಿದವರು ವಾಲ್ಮೀಕಿ ಮುನಿಗಳು” ಎಂಬ ನುಡಿ ಹೊರಬಂತು ಅವಳಿಗಳಿಂದ.
ರಾಮನೊಡಲನ್ನು ಕೆಡಹುವ ಸಿಡಿನುಡಿಯಾಯಿತು ಕುಶಲವರಾಡಿದ ಆ ಸಹಜ ನುಡಿ. ‘ಸೀತೆ’ ಎಂಬ ಶಬ್ದವದು ರಾಮಕರ್ಣಗಳಿಗೆ ಕಠೋರವೆನಿಸಿತು. ರಾಮಹೃದಯವು ಸಹಿಸದಾಯಿತು ಭೂಮಿಜಾತೆಯ ಹೆಸರಿನ ಭಾರವನ್ನು. ರಾಮತ್ರಾಣವದು ಅಳಿದುಹೋಗಲು ‘ಸೀತೆ’ ಎಂಬ ನುಡಿಬಾಣವಷ್ಟೇ ಸಾಕಾಯಿತು. ಮೂರ್ಛೆಹೋದ ಶ್ರೀರಾಮ. ಮತ್ತೆ ಎಚ್ಚೆತ್ತ. ಕುಶಲವರ ಮಾತು ಅನುರಣಿಸಿತು ಕಿವಿಯಲ್ಲಿ. ಸೀತೆಯ ಮಕ್ಕಳು ತಾವು ಎಂಬ ಅವರ ಮಾತದು ನಿಜವೋ ಅಲ್ಲವೋ ಎಂಬ ಸಂಶಯ ಮೂಡಿತು. ತಾನು ತಪ್ಪಾಗಿ ಕೇಳಿಸಿಕೊಂಡೆನೇ ಎಂಬ ಸಂದೇಹ ಕಾಡಿತು. ಮತ್ತೊಮ್ಮೆ ಬಾಲಕರಲ್ಲಿ ಕೇಳುವಂತೆ ಹೇಳಿದ, ಬಳಿಯಿದ್ದ ಸುಗ್ರೀವನಲ್ಲಿ.
ಅದಕ್ಕೆ ಸುಗ್ರೀವ ನಸುನಗುತ್ತಾ, “ನಿನ್ನ ರೂಪವನ್ನೇ ಹೊತ್ತ ಇವರು ನಿನ್ನ ಮಕ್ಕಳಲ್ಲದೇ ಇರಲು ಸಾಧ್ಯವಿಲ್ಲ. ನಿನ್ನ ತನುಜರಲ್ಲದಿದ್ದರೆ ಈ ಬಗೆಯ ಸತ್ವ ಇವರಲ್ಲಿ ಇರುತ್ತಿತ್ತೇ?!” ಎಂದ.
ಆಗಲೇ ವಾನರ ಸೈನ್ಯವದು ಕುಶ ಲವರನ್ನು ಮುತ್ತಿತು. ಘೋರ ಕದನ ನಡೆಯಿತು. ಮಕ್ಕಳನ್ನು ಮತ್ತೆ ಮಾತನಾಡಿಸುವ ಪುರುಸೊತ್ತು ಸಿಗಲಿಲ್ಲ ಪುರುಷೋತ್ತಮನಿಗೆ. ಅವಳಿಗಳ ಬಾಣಾವಳಿಯ ಘಾತಕ್ಕೆ ತತ್ತರಿಸಿಹೋಯಿತು ರಾಮಸೈನ್ಯ.
ತನ್ನವರೆಲ್ಲರೂ ನೆಲವನ್ನಪ್ಪಿರುವ ಆ ಸಮಯದಲ್ಲಿ ಏಕಾಂಗಿತನದ ಭಾವ ರಾಮನನ್ನು ಆವರಿಸಿತು. ಸೀತಾಸುತರ ವಿರುದ್ಧದ ಕದನಕ್ಕೆ ಮನಸ್ಸು ಮಾಡಿದ ಕೌಸಲ್ಯಾಸುತ. ತಂದೆ ಮಕ್ಕಳ ಕದನ ನೋಡಲು ಕಣ್ದೆರೆಯಿತು ಕದನರಂಗ. ರಾಮಬಾಣವದು ಗಮ್ಯವನ್ನು ಅರಸಿ ಹೊರಟಿತು. ರಾವಣ ಕುಂಭಕರ್ಣರ ಶಿರಗಳನ್ನು ಕತ್ತರಿಸಿಹಾಕಿದ ಶರಗಳನ್ನೇ ಪ್ರಯೋಗಿಸಿದ್ದ ಶ್ರೀರಾಮ. ಎರಡು ಭಾಗವಾಗಿ ನೆಲದಲ್ಲಿ ಬಿದ್ದದ್ದನ್ನು ಕಂಡು ವಿಸ್ಮಿತನಾದ.
ಹಾಗೆ ಚಕಿತ ಭಾವದಲ್ಲಿ ರಾಮಚಿತ್ತ ಇದ್ದ ಸಮಯದಲ್ಲಿಯೇ ಕುಶ ಲವರ ಕರದಿಂದ ಸಿಡಿದೆದ್ದ ಬಾಣ ಬಂದಿತು ರಾಮನೆಡೆಗೆ. ಹೊಕ್ಕಿತು ಅವನ ದೇಹವನ್ನು. ಮಕ್ಕಳ ಬಗ್ಗೆ ಅಕ್ಕರೆ ಅವನಿಗಿದೆಯೋ ಇಲ್ಲವೋ ಎನ್ನುವುದನ್ನು ಒಳಹೊಕ್ಕು ನೋಡುವಂತೆ ರಾಮಶರೀರದ ಒಳಗೆ ಪ್ರವೇಶಿಸಿತ್ತು ಆ ಶರ. ರಾಮಪ್ರಜ್ಞೆ ರೂಪುಗಳೆದುಕೊಂಡಿತು. ಮೂರ್ಛೆತಪ್ಪಿದ ಶ್ರೀರಾಮ.
ಬಳಿಗೆ ಬಂದ ಲವ ಕುಶರು ಶ್ರೀರಾಮ, ಲಕ್ಷö್ಮಣ, ಭರತ, ಶತ್ರುಘ್ನರ ವಸ್ತç, ಆಭರಣಗಳನ್ನು ಗಂಟುಕಟ್ಟಿದರು ಬಟ್ಟೆಯೊಂದರಲ್ಲಿ. ಯುದ್ಧದಲ್ಲಿ ಹೋರಾಡಿಯೂ ಎಚ್ಚರ ಇದ್ದ ಹನುಮಂತ ಜಾಂಬವAತರ ತಲೆಗೂದಲನ್ನು ಹಿಡಿದೆಳೆದುಕೊಂಡು ತಾಯಿಯ ಬಳಿಗೆ ಹೊರಟರು.
ಭೀತಿ ಹುಟ್ಟಿಸುವ ರೀತಿಯಲ್ಲಿ ಬಂದುನಿAತ ಮಕ್ಕಳನ್ನು ಕಂಡು ಅಳುಕಿದಳು ಸೀತೆ. ಹನುಮಂತ ಜಾಂಬವAತರನ್ನು ಯುದ್ಧರಂಗದಲ್ಲಿಯೇ ಬಿಟ್ಟುಬರುವಂತೆ ಹೇಳಿದಳು. ಮಕ್ಕಳು ಅಂತೆಯೇ ಮಾಡಿ ಮರಳಿದರು.
ಅದೇ ಸಮಯಕ್ಕೆ, ನಾರದರಿಂದ ಸಂಪೂರ್ಣ ವಿಷಯ ತಿಳಿದುಕೊಂಡ ವಾಲ್ಮೀಕಿ ಮಹರ್ಷಿ ಮರಳಿದ್ದರು ಆಶ್ರಮಕ್ಕೆ. ರಣರಂಗಕ್ಕೆ ಹೋದರು. ರಾಮಚಂದ್ರಾದಿಗಳನ್ನು ಕಂಡರು. ಉಪಚರಿಸಿದರು. ತಪ್ಪಿದ್ದರೆ ಕ್ಷಮಿಸಬೇಕು ಎಂದರು.
ತನ್ನಿಂದ ಕಾಡುಪಾಲಾದ ಸೀತೆ ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಮಕ್ಕಳಿಗೆ ಜನ್ಮವಿತ್ತ ವಿಚಾರ ಪೂರ್ಣವಾಗಿ ತಿಳಿಯಿತು ರಾವಣಾಂತಕನಿಗೆ. ಮಕ್ಕಳನ್ನು ಅಪ್ಪಿಕೊಂಡ. ಅವರು ಶ್ರೀರಾಮನ ಕಾಲಿಗೆರಗಿ ಕ್ಷಮೆ ಕೇಳಿದರು. ರಾಮಾಯಣವನ್ನು ಹಾಡಿ ತೋರಿಸಿದರು ಶ್ರೀರಾಮನಿಗೆ. ಕುಶ ಲವರನ್ನು ರಘುಕುಲತಿಲಕನ ಜೊತೆಗೆ ಅಯೋಧ್ಯೆಗೆ ಕಳುಹಿಸಿಕೊಟ್ಟರು ವಾಲ್ಮೀಕಿ ಮಹರ್ಷಿ.
ಆಶ್ರಮಕ್ಕೆ ಮರಳಿದಾಗ ಅವರಿಗೆದುರಾದದ್ದು ಸೀತೆಯ ಸವಾಲು. “ಮಕ್ಕಳ ಒಡನಾಟದಲ್ಲಿ ಪತಿಯ ವಿರಹವನ್ನು ಮರೆತು ಬದುಕುತ್ತಿದ್ದವಳು ನಾನು. ಈಗ ಅವರನ್ನು ತೊರೆದು ಹೇಗಿರಲಿ?” ಎಂದು ಮುನಿಗಳ ಕಾಲಿಗೆ ಬಿದ್ದಳು.
ಕರುಣೆಯುಕ್ಕಿತು ಮುನಿಗಳಲ್ಲಿ. “ನಿನ್ನ ಮಕ್ಕಳನ್ನು ಕರೆದೊಯ್ದವನು ನಿನ್ನ ಪತಿ. ನಿನ್ನನ್ನೂ ಆ ಶ್ರೀರಾಮನ ಬಳಿಗೆ ಬಿಟ್ಟುಬರುತ್ತೇನೆ” ಎಂದವರು ಅವಳನ್ನು ಕರೆದೊಯ್ದರು ಅಯೋಧ್ಯೆಗೆ. ಸೀತೆಯ ಚಿತ್ತವದು ಕೂಡಿತು ಶ್ರೀರಾಮ ಹೃದಯವನ್ನು.
ಶ್ರೀರಾಮ ಕದನವದು ಕುಶ ಲವರ ಜೊತೆಗೆ ನಡೆದ ರಾಮ ಕಥಾನಕ ನನ್ನ ಮೆದುಳಿನಲ್ಲಿ ಮೆಲುದನಿಯನ್ನು ಎಬ್ಬಿಸುತ್ತಿದ್ದ ಆ ಸಮಯದಲ್ಲಿಯೇ ಕೇಳಿಬಂತದೋ ಯುದ್ಧನಾದ. ನನ್ನಿಂದ ಅವಮಾನಿತನಾಗಿ ಹೋಗಿದ್ದ ಆ ಬಭ್ರುವಾಹನ ಈಗ ಯುದ್ಧಸಿದ್ಧತೆಯನ್ನು ಪೂರೈಸಿಯಾಗಿತ್ತು.
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ




