ಲಹರಿ ಸಂಗಾತಿ
“ಮಲ್ಲಿಗೆಗೊಂದು ಪತ್ರ”
ಶ್ರೀದೇವಿ. ಮ.ಗುಮ್ಮಗೋಳ


ನಾನಿದ್ದೆ ನಿನ್ನ ಬಳಿ
ಸಂಜೆಗತ್ತಲೆ
ನೀ ಸೂಸಿದೆ
ಸುಗಂಧವ ಮೆಲ್ಲಗೆ
ಬೆಳಗಾಗುತ ಹೊರಟೆ
ನೀ ಎಲ್ಲಗೆ|
ಓ ನನ್ನ ಹಿತ್ತಲ ಮಲ್ಲಿಗೆ||
ಹೌದು ನೆನಪಿದಿಯಾ ನಾ ಕಳೆದು ಕೊಂಡ ಹಿತ್ತಲ ದುಂಡು ಮಲ್ಲಿಗೆ…… ನನ್ನ ಶಾಲೆ ಕಾಲೇಜಿನ ದಿನಗಳಲ್ಲಿ, ನಿನ್ನ ನೋಡಿ ನಿನ್ನ ಅಂದಕೆ, ನಿನ್ನ ಕೊಮಲತೆಗೆ ಬೆರಗಾಗಿಯೆ ಬರೆದಿದ್ದೆನಲ್ಲ ಈ ಕವನ.
ನನಗಿನ್ನೂ ನೆನಪಿದೆ ನನ್ನ ಕಲಿಯವ ದಿನಗಳಲ್ಲಿ ಮನೆ ಎಷ್ಟು ದೊಡ್ಡದಾಗಿತ್ತು ಆದರೂ ಹಿತ್ತಲಲ್ಲಿ ನಿನ್ನ ಪಕ್ಕಗಳಲ್ಲಿ ಭೀಮನಂತೆ ಬೆಳೆದಿರುವ ಕಲ್ಪವೃಕ್ಷಗಳು ಬೀಸುವ ತಂಪಾದ ಗಾಳಿಯ ಕೆಳಗೆ ನಿನ್ನ ಪಕ್ಕದಲ್ಲಿಯೇ ಕುಳಿತು ಓದುವದೆ ಒಂದು ಹಿತ. ನೀ ಸೂಸವ ಕಂಪು ನನ್ನ ನಾಸಿಕವನ್ನು ದಾಟಿದಾಗ ಮೈಮನಗಳಿಗೆಲ್ಲ ಒಂದು ಊಹಿಸಲಾರದ ಹಿತ ಅನುಭವ. ಹುಣ್ಣಿಮೆ ರಾತ್ರಿಯಲಿ ಹಸಿರು ಸೀರೆಯಲಿ ಬಿಳಿ ಮುತ್ತಗಳಾಗಿ ಕಾಣುತ್ತಿದ್ದೆ. ಅಮವಾಸೆಯ ರಾತ್ರಿಯಲಿ ಆಕಾಶದ ನಕ್ಷತ್ರಗಳೆ ಕೆಳಗಿಳಿದು ಬಂದು ನರ್ತಿಸಿ, ನಕ್ಕಂತೆ ನೀ ತೋರುತ್ತಿದ್ದೆ. ಸೂಜು ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಏಳು ಸುತ್ತಿನ ಮಲ್ಲಿಗೆ, ಸಹಸ್ರ ಮಲ್ಲಿಗೆ ಇವರಲ್ಲ ನಿನ್ನ ಅಕ್ಕತಂಗಿಯರಂತೆ.
ಮಲ್ಲಿಗೆ ನಾನಷ್ಟೆ ಅಲ್ಲಾ ನಿನ್ನ ಈ ಸ್ನಿಗ್ಧ, ಬಿಳುಪಾದ ಬಣ್ಣಕ್ಕೆ ಬೆರಗಾದವರೆಷ್ಟು ಜನ. ನಿನ್ನ ಸುಗಂಧಕ್ಕೆ ತೆಲೆದೂಗಿದವರೆಷ್ಟು ಜನ. ಇನ್ನೂ ಹೇಳಬೇಕೆಂದರೆ ಸಾಹಿತ್ಯ ಪ್ರಪಂಚದಲ್ಲಿ “ಮೈಸೂರು ಮಲ್ಲಿಗೆ” ಕೃತಿಯಿಂದ ಪ್ರಖ್ಯಾತಿ ಪಡೆದ ಕವಿ ಕೆ. ಎಸ್. ನರಸಿಂಹಸ್ವಾಮಿ ಅವರು ನಿನ್ನ ಹೆಸರಿನಿಂದ “ಮೈಸೂರು ಮಲ್ಲಿಗೆ ಕವಿ”ಯೆಂದೆ ಪ್ರಸಿದ್ಧರಾಗಿದ್ದಾರೆ. ಅದೇ ನೆನಪಿಗಾಗಿ ಮಗಳ ಹೆಸರನ್ನು ಮಲ್ಲಿಗೆ ಎಂದು ಕರೆದಿರುವದು ಎಷ್ಟು ಮನೋಹರವಾಗಿದೆ. ಹೆಂಗಳೆಯರ ತೆಲೆಗೂದಲ್ಲಿ ಅಲಂಕಾರ ಭೂಷಿತೆ ನೀನು. ರಸಿಕರ ಕೈ ಹಾರ ನೀನು. ಅಷ್ಟೆ ಏಕೆ ಹೊಸ ದಾಂಪತ್ಯದ ಕಾಲಿಟ್ಟ ಜೋಡಿಗಳನ್ನು ಬಾಗಿಲಲಿ, ಮಂಚದಲಿ ನಾಚುತ ಸ್ವಾಗತಿಸುವಳು ನೀನಲ್ಲವೆ.
ಲಕ್ಷ್ಮಿಪ್ರೀಯಳಾದ ನೀನು ಸುಮಂಗಲೆಯರ ಶುಕ್ರಗೌರಿ, ಮಂಗಳಗೌರಿ, ಆಷಾಡ ಲಕ್ಷ್ಮಿ ವೃತ, ಮಹಾನವಮಿ, ದೀಪಾವಳಿ ಹೀಗೆ ಅನೇಕ ಶುಭಕಾರ್ಯಗಳಿಗೆ ನೀನರಲೇಬೇಕು.
ಅಲಂಕಾರ, ಸುಗಂಧಕ್ಕಷ್ಟೆ ಅಲ್ಲದೇ ನೀನು ಅನೇಕ ರೋಗ, ಖಾಯಿಲೆಗೆ ಔಷದಿಯು ಹೌದು. ದೃಷ್ಟಿ ಮಾಂದ್ಯರಿಗೆ, ಎದೆ ಹಾಲು ಹೆಪ್ಪು ಗಟ್ಟಿದ ಬಾಣಂತಿಯರಿಗೆ, ಗಾಯಕ್ಕೆ ನೀನೇ ಮನೆ ಮದ್ದು.
ಎಷ್ಟು ವರ್ಣಿಸಿದರೂ ಸಾಲದು ನಿನ್ನ ಬಣ್ಣ, ಕೊಮಲತೆ, ಸುಗಂಧ. ಇದಕ್ಕೆಲ್ಲ ಮಾರುಹೋದ ನಾನು ಎಷ್ಟೊ ವರ್ಷಗಳ ನಂತರ ನನ್ನೆದೆನ್ನುವ ಒಂದು ಪುಟ್ಟ ಮನೆ ಬಾಗಿಲ ಬಳಿ ಗಿಡವೊಂದನ್ನು ತಂದು ನೆಟ್ಟಿದ್ದೇನೆ ನಿನ್ನ ಬರುವಿಗಾಗಿ ಕಾಯುತ್ತಿದ್ದೇನೆ ಗೆಳತಿ ನಿನ್ನ ಪಕ್ಕದಲ್ಲಿ ಕುಳಿತು ಮತ್ತೆ ಕವನ ರಚಿಸಲು.
ಶ್ರೀದೇವಿ. ಮ.ಗುಮ್ಮಗೋಳ
ʼ




ಸುಮಧುರ ಭಾವನೆ