ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ಲೋಕಕ್ಕೆ ಯಾವ ಸಂಕಟವಿಲ್ಲ”


ಮಾತು ಭಾಷೆಯದ್ದಿರಲಿ ಮೌನದ್ದಿರಲಿ
ಅಕ್ಷರ ಕಲಿಕೆಯದ್ದಿರಲಿ
ಅನ್ನದ ದುಡಿಮೆಯದ್ದಿರಲಿ
ನಾವು ಮೊದಲು ಹುಡುಕುವುದು
ಬದುಕಿನ ಅರ್ಥವನ್ನಲ್ಲ ಧರ್ಮ ಜಾತಿ ಕುಲ ಗೋತ್ರಗಳನ್ನು!
ಮಗುವಿನ ಕೈಯಲ್ಲಿ ಪುಸ್ತಕಗಳಿದ್ದರೂ
ಅದರ ಪುಟಗಳಲ್ಲಿ
ಪಾಠಗಳು ಕಾಣುವುದಿಲ್ಲ ನಮಗೆ!
ಯಾವ ಧರ್ಮದ ನೆರಳು
ಬಿದ್ದಿದೆ ಎಂದು ಹುಡುಕುತ್ತೇವೆ!
ಮನೆಯ ಗೋಡೆ ಬಾಗಿಲಿಗೆ ಬಣ್ಣ ಬಳಿದರು
ಅದು ಸೌಂದರ್ಯವಲ್ಲ!
ಯಾವ ಜಾತಿ ಧರ್ಮದ ಗುರುತಿನ ಬಣ್ಣವೆಂದು
ಕಣ್ಣಲ್ಲಿ ಅಳೆಯುತ್ತೇವೆ!
ಒಬ್ಬನಲ್ಲಿ ಒಳ್ಳೆಯ ಕೆಲಸ ಮಾಡಿದರೆ
ಮಾನವೀಯತೆ ಎಂದು ಹೇಳದೆ
ಅವನು ಯಾರವನು? ಯಾರ ಕಡೆಯವನು?
ಎಂದು ಮೊದಲು ಕೇಳುತ್ತೇವೆ!
ಒಬ್ಬಳಿಲ್ಲಿ ತಪ್ಪು ಮಾಡಿದರೆ
ತಪ್ಪು ಎಂದೆನ್ನದೆ
ಅವಳು ಯಾವ ಊರಿನ ಸಮುದಾಯದವಳು?
ಎಂದು ವಿಚಾರಣೆ ಆರಂಭಿಸುತ್ತೇವೆ!
ಮರವನ್ನು ನೋಡಿದಾಗ ನೆರಳು ಕಾಣುವುದಿಲ್ಲ!
ಅದು ಯಾವ ಯಾರ ದೇವರ ಮರ
ಎಂದು ಹುಡುಕುತ್ತೇವೆ!
ನದಿಯನ್ನು ನೋಡಿದಾಗ ನೀರು ಕಾಣುವುದಿಲ್ಲ!
ಯಾವ ನಂಬಿಕೆಯ ಗಡಿಯೊಳಗೆ
ಹರಿಯುತ್ತಿದೆ ಎಂದು ಇಣುಕುತ್ತೇವೆ!
ಶಾಲೆ ನೋಡಿದಾಗ ಮಕ್ಕಳ ಭವಿಷ್ಯ ಕಾಣುವುದಿಲ್ಲ!
ಯಾರ ಯಾರ ಮಕ್ಕಳಿದ್ದಾರೆ
ಎಂದು ತಲೆನೋಡಿ ಎಣಿಸುತ್ತೇವೆ!
ಸಂವಿಧಾನ ಓದಿದಾಗ ಸಮಾನತೆ ಕಾಣುವುದಿಲ್ಲ!
ತನ್ನ ಪರವಾದ ಸಾಲು
ಎಲ್ಲಿದೆ ಎಷ್ಟಿದೆ ಎಂದು ಹುಡುಕುತ್ತೇವೆ!
ಧರ್ಮಗಳ ಜಾತಿಗಳ ಬಣ್ಣದ ಕನ್ನಡಕವನ್ನು
ಈಗಿಂದಲೇ ತೆಗೆದಿಡೋಣ
ಮಗುವಿನಲ್ಲಿ ಮೊದಲು ಮಗು ಕಾಣಬಹುದು!
ಮನುಷ್ಯನಲ್ಲಿ ಮೊದಲು ಮನುಷ್ಯತ್ವ ಕಾಣಬಹುದು!
ಹಸಿವಿನಲ್ಲಿ ಮೊದಲು ಅನ್ನದ ಅಗತ್ಯ ಕಾಣಬಹುದು!
ಕಣ್ಣೀರಿನಲ್ಲಿ ಮೊದಲು ನೋವು ಕಾಣಬಹುದು!
ಮಾತಿನಲ್ಲಿ ಮೊದಲು ಅರ್ಥ ಕಾಣಬಹುದು!
ಭಾಷೆಯಲ್ಲಿ ಮೊದಲು ಭಾವನೆ ಕಾಣಬಹುದು!
ಕೆಲಸದಲ್ಲಿ ಮೊದಲು ಶ್ರಮ ಕಾಣಬಹುದು!
ಪ್ರಕೃತಿಯಲ್ಲಿ ಮೊದಲು ಬದುಕು ಕಾಣಬಹುದು!
ಧರ್ಮಕ್ಕೆ ಯಾವ ಸಂಕಟವಿಲ್ಲ!
ಸಂಕಟದಲ್ಲಿರುವುದು
ಧರ್ಮದ ಹೆಸರಿನಲ್ಲಿ ಮನುಷ್ಯನನ್ನು ಮನುಷ್ಯನಿಂದ
ಬೇರ್ಪಡಿಸುವ ನಮ್ಮ ದೃಷ್ಟಿಯಲ್ಲಿ!
ಜಾತಿಗೆ ಯಾವ ಸಂಕಟವಿಲ್ಲ!
ಸಂಕಟದಲ್ಲಿರುವುದು
ಜಾತಿಯ ಕನ್ನಡಕದೊಳಗೆ ಸಿಕ್ಕಿಹಾಕಿಕೊಂಡಿರುವ
ನಮ್ಮ ಮೈಮನಸುಗಳಲ್ಲಿ!
ಲೋಕಕ್ಕೆ ಯಾವ ಸಂಕಟವಿಲ್ಲ!
ಸಂಕಟದಲ್ಲಿರುವುದು
ಮೇಲು ಕೀಳುಗಳಾಗಿ ಲೋಕವನ್ನು ನೋಡುವ
ನಮ್ಮ ಕಣ್ಣುಳಲ್ಲಿ!
ಮನುಷ್ಯನಿಗಿಂತ ಹಿರಿದಾದ
ಯಾವ ಗುರುತು ಇಲ್ಲ!
ಮನುಷ್ಯತ್ವಕ್ಕಿಂತ ಘನವಾದ
ಯಾವ ಧರ್ಮವು ಇಲ್ಲ!
ಟಿ.ಪಿ.ಉಮೇಶ್



