ಅಂಕಣ ಸಂಗಾತಿ-40
ಸುಜಾತಾ ರವೀಶ್

ವೃತ್ತಿ ವೃತ್ತಾಂತ

ಪಾಲಿಸಿಯ ಮೇಲೆ ಸಾಲ ಕೊಡುವುದು ಮತ್ತು ಅದರ ನಿರ್ವಹಣೆ ಜೀವವಿಮಾ ನಿಗಮದಲ್ಲಿ ಒಂದು ಪ್ರಮುಖ ಕೆಲಸ. ಫೀಪ್ ಅಂದರೆ ಸಂಪೂರ್ಣ ಡಿಜಿಟೀಕರಣ ಆಗುವ ಮೊದಲು ಸಾಲ ಲೆಕ್ಕಾಚಾರ ಅದಕ್ಕೆ ಬಡ್ಡಿಯ ಲೆಕ್ಕಾಚಾರ ಎಲ್ಲವೂ ಸಂಪೂರ್ಣ ಮಾನ್ಯುಯಲ್ ಆಗಿಯೇ ನಡೆಯುತ್ತಿತ್ತು. ದಾವಾ ಸಮಯದಲ್ಲಿ ಸಹ ಈ ಎಲ್ಲ ಲೆಕ್ಕಾಚಾರಗಳನ್ನು ಹಾಕಿ ಅದನ್ನು ಪರಿಶೀಲನೆ ಮಾಡಬೇಕಿತ್ತು.ಎಲ್.ಐ.ಸಿ. (LIC) ಯಲ್ಲಿ ಕಂಪ್ಯೂಟರೀಕರಣ ಅಥವಾ ಸಾಫ್ಟ್ವೇರ್ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬರುವ ಮೊದಲು, ಪಾಲಿಸಿ ಲೋನ್ ಷೆಡ್ಯೂಲ್ ರಿಕನ್ಸಿಲಿಯೇಷನ್ (Loan Schedule Reconciliation) ಅಥವಾ ಸಾಲದ ಲೆಕ್ಕಾಚಾರದ ಪರಿಶೀಲನೆ ಸಂಪೂರ್ಣವಾಗಿ ಮಾನವ ಶ್ರಮ, ಮ್ಯಾನುಯಲ್ ಲೆಕ್ಕಾಚಾರ ಮತ್ತು ರಿಜಿಸ್ಟರ್ಗಳ (Registers) ಆಧಾರದ ಮೇಲೆಯೇ ನಡೆಯುತ್ತಿತ್ತು.
ಕಂಪ್ಯೂಟರೀಕರಣ ಜಾರಿಗೆ ಬಂದ ನಂತರ ಈ ಸಂಪೂರ್ಣ ಪ್ರಕ್ರಿಯೆ ಆಟೋಮ್ಯಾಟಿಕ್ ಆಗಿ ಬದಲಾಯಿತಾದರೂ, ಅದಕ್ಕೂ ಮೊದಲು ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ನಿಖರತೆ, ಗಣಿತದ ನೈಪುಣ್ಯ ಮತ್ತು ಲೆಡ್ಜರ್ ನಿರ್ವಹಣೆಯ ಶ್ರಮ ಅತ್ಯಂತ ಪ್ರಶಂಸನೀಯವಾಗಿತ್ತು.ಇ ಫೀಪ್
ಜಾರಿಯಾದ ನಂತರ ಲೋನ್ ಷೆಡ್ಯೂಲ್ ರಿಕನ್ಸಿಲಿಯೇಷನ್ ಎಂಬುದು “ಲೆಡ್ಜರ್ ಪುಟಗಳನ್ನು ಹುಡುಕುವ ಸುದೀರ್ಘ ಕೆಲಸ” ದಿಂದ “ಸಿಸ್ಟಮ್ ರಿಪೋರ್ಟ್ಗಳನ್ನು ಕ್ರಾಸ್-ವೆರಿಫೈ ಮಾಡುವ ಸರಳ ಕೆಲಸ” ವಾಗಿ ಪರಿವರ್ತನೆಯಾಯಿತು.

ನಾನು ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವಧಿ ಒಂದು ರೀತಿ ಮಧ್ಯಂತರ ಅವಧಿ. ಪೂರ್ಣ ಮಾನವ ಶ್ರಮವೂ ಅಲ್ಲ ಪೂರ್ಣ ಕಂಪ್ಯೂಟರಿಕರಣವೂ ಅಲ್ಲ .ಹಾಗಾಗಿ ಅಲ್ಲಿ ಸಾಲ ರೀ ಕನ್ಸೀಲಿಯೇಷನ್ ಎನ್ನುವುದು ಒಂದು ಮುಖ್ಯ ಕೆಲಸವಾಗಿದ್ದು ಹೆಚ್ಚಿನ ಶ್ರಮ ಬೇಡುತ್ತಿತ್ತು. ಸಾಲಗಳ ಮರುಪಾವತಿ ನಗದು ಕೌಂಟರ್ನಲ್ಲಿ ನಗದು ಅಥವಾ ಚೆಕ್ ಗಳ ಮೂಲಕ ಹಾಗೂ ದಾವಾ ವಿಭಾಗದಲ್ಲಿ ಸರ್ವೈವಲ್ ಬೆನಿಫಿಟ್, ಪಾಲಿಸಿ ಪಕ್ವವಾದ ಸಂದರ್ಭ ಹಾಗೂ ಪಾಲಿಸಿದಾರರ ಸಾವಿನ ಸಂದರ್ಭ ಈ ಮೂರು ಸಮಯಗಳಲ್ಲಿ ಆಗುತ್ತಿತ್ತು. ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ಆ ತಿಂಗಳು ವಿತರಿಸಿದ ಸಾಲ ಹಾಗೂ ನಮ್ಮ ಶಾಖೆಯಿಂದ ಬೇರೆ ಶಾಖೆಗೆ ವರ್ಗವಾಗಿ ಹೋದ ಪಾಲಿಸಿಗಳ ಮೇಲಿನ ಸಾಲ ಮತ್ತು ನಮ್ಮ ಶಾಖೆಗೆ ವರ್ಗವಾಗಿ ಬಂದ ಪಾಲಿಸಿಗಳ ಮೇಲಿನ ಸಾಲ ಇವೆಲ್ಲವನ್ನು ಗಣನೆಗೆ ತೆಗೆದುಕೊಂಡು ತಿಂಗಳ ಮೊದಲಿನ ಮೊತ್ತ ಹಾಗೂ ತಿಂಗಳ ಕೊನೆಯಲ್ಲಿ ಸಾಲದ ಷಡ್ಯುಲಿನ ಮೊತ್ತ ಇವುಗಳನ್ನು ತಾಳೆ ಮಾಡಬೇಕಿತ್ತು. ನಮ್ಮ ಶಾಖೆ ಐದು ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಿಗಳ ಪಾಲಿಸಿಗಳನ್ನು ಹೊಂದಿದ್ದ ಶಾಖೆಯಾಗಿದ್ರಿಂದ ವರ್ಗಾವಣೆಗಳ ಸಂಖ್ಯೆ ವಿಪರೀತ ಹೆಚ್ಚು . ಆಗಿನ್ನೂ ಹೊಸದಾದುದರಿಂದ ಕೆಲವೊಂದು ಸಮಸ್ಯೆಗಳು ಉದ್ಭವವಾಗುತ್ತಿತ್ತು .ಆದರೆ ಅವುಗಳನ್ನು ಸರಿಪಡಿಸಿಕೊಳ್ಳುವ ವಿಧಾನಗಳನ್ನು ಅಧಿಕಾರವನ್ನು ಶಾಖೆಗಳಿಗೆ ಕೊಟ್ಟಿದ್ದರು. ಆರ್ ಎಫ್ ಎಮ್ ಅಂದರೆ ರಿಕ್ವೆಸ್ಟಡ್ ಫೈಲ್ ಮೆಂಟೇನೆನ್ಸ್ ವಿಧಾನದ ಮೂಲಕ ಏನಾದರೂ ತಪ್ಪುಗಳಾಗಿ ಸಮಸ್ಯೆ ಯಾಗಿದ್ದರೆ ಒಂದು ಆಫೀಸ್ ನೋಟ್ ಹಾಕಿ ಅದಕ್ಕೆ ಅನುಮೋದನೆ ಪಡೆದು ಮೊತ್ತಗಳನ್ನು ಸರಿಪಡಿಸಬಹುದಿತ್ತು.ಹಾಗಾಗಿ ಬಹಳಷ್ಟು ಸಮಸ್ಯೆಗಳು ಇದ್ದರೂ ಅವುಗಳ ಮೂಲವನ್ನು ಸರಿಯಾಗಿ ಶೋಧಿಸಿ ಸರಿಯಾದ ಆಫೀಸ್ ನೋಟ್ ಹಾಕಿ ಅನುಮೋದನೆ ಪಡೆದು ಸರಿಪಡಿಸಿದ್ದೆವು. ಬಹಳಷ್ಟು ಪರಿಶ್ರಮದ ಕೆಲಸ. ತಿಂಗಳಿಗೆ ಮೂರು ಅಥವಾ ನಾಲ್ಕು ದಿನ ಅದಕ್ಕೆ ಹಿಡಿಯುತ್ತಿತ್ತು . ಆದರೂ ಸಂಪೂರ್ಣ ತೃಪ್ತಿ ಕೊಡುತ್ತಿದ್ದ ಕೆಲಸ.
ಈ ಮೊದಲೇ ಹೇಳಿದಂತೆ ನನ್ನ ತಂಗಿ ಛಾಯ ಹಾವೇರಿ ಶಾಖೆಯಲ್ಲಿ ಸಾಲದ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದಳು. ಅದು ಬಹಳಷ್ಟು ದೊಡ್ಡ ಶಾಖೆ ಆದುದರಿಂದ ಪ್ರತಿದಿನ 100 ಕ್ಕಿಂತ ಹೆಚ್ಚು ಸಾಲ ನಗದು ಸಾಲಗಳನ್ನೇ ಕೊಡುತ್ತಿದ್ದರು. ಹಾಗೂ ಕರ್ನಾಟಕದಲ್ಲಿಯೇ ವಿಶಿಷ್ಟವಾಗಿ ಆ ಶಾಖೆಯಲ್ಲಿ ಟೋಕನ್ ಗಳನ್ನು ವಿತರಿಸಿ ಆ ಮೂಲಕ ನಗದು ಸಾಲವನ್ನು ವಿತರಿಸಲಾಗುತ್ತಿತ್ತು. ಅಲ್ಲಿ ಅವಳು ಸಹ ಈ ಲೋನ್ ರಿಕಂಸಿಲಿಯೇಷನ್ ಕೆಲಸ ಮಾಡುತ್ತಿದ್ದರಿಂದ ನಾವಿಬ್ಬರು ಬಹಳಷ್ಟು ಚರ್ಚೆ ಫೋನ್ ಮೂಲಕ ಮಾಡಿ ಪರಸ್ಪರ ಸಮಸ್ಯೆಗಳನ್ನು ಮಾತನಾಡಿ ಪರಿಹರಿಸಿಕೊಳ್ಳುತ್ತಿದ್ದೆವು. ಆಗ ಯುವ ಅಧಿಕಾರಿಗಳಿಗೆ ಪೂನಾದ ಎಸ್ ಟಿ ಸಿ ನಲ್ಲಿ 15 ದಿನದ ತರಬೇತಿ ಕಾರ್ಯಕ್ರಮ ಇರುತ್ತಿತ್ತು. ನನ್ನ ತಂಗಿಯು ಅದಕ್ಕೆ ಆಯ್ಕೆಯಾಗಿದ್ದಳು. ಅಲ್ಲಿ ಯಾವುದಾದರೂ ಒಂದು ಕೆಲಸದ ಬಗ್ಗೆ ಫ್ಲೋ ಚಾರ್ಟ್ ಮಾಡಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಬೇಕಿತ್ತು. ಛಾಯ ಅದಕ್ಕೆ ಈ ಸಾಲ ರಿಕಂಸಿಲಿಯೇಷನ್ ಕೆಲಸವನ್ನು ಆಯ್ಕೆ ಮಾಡಿಕೊಂಡು ತುಂಬಾ ಸಮರ್ಥವಾಗಿ ಪ್ರೆಸೆಂಟ್ ಮಾಡಿದ್ದಳು. ಆನಂತರ ಅವುಗಳಲ್ಲಿ ಕೆಲವನ್ನು ಅಳವಡಿಸಿ ಪ್ರೋಗ್ರಾಮ್ ಮಾಡಿಕೊಟ್ಟಿದ್ದರು. ಆನಂತರ ರಿಕನ್ ಸಿಲೇಷನ್ ಕೆಲಸ ಬಹಳವೇ ಸುಲಭ ಆಗಿತ್ತು. ಈಗಂತೂ ಈ ಸಾಲ ರಿಕನ್ಸಿಲಿಯೇಷನ್ ಕೆಲಸ ಒಂದು ಗಂಟೆ ಮಾತ್ರ ಹಿಡಿಯುತ್ತದೆ. ಅಂದರೆ ಎಷ್ಟೊಂದು ಮಾನವ ಗಂಟೆಗಳು ಮಿಕ್ಕಿದವು ನೋಡಿ. ಹಾಗಾಗಿಯೇ ಈಗ ಸಿಬ್ಬಂದಿ ನೇಮಕಾತಿ ನಿಲುಗಡೆಯೇ ಆಗುವಷ್ಟು ಕಡಿಮೆ ಆಗಿರುವುದು ಸಹ.

ಈ ಮಧ್ಯೆ ನನ್ನ ತಂಗಿಯ ಪತಿ ಪ್ರಸನ್ನ ಅವರಿಗೆ ಶಾಖಾಧಿಕಾರಿಗಳಾಗಿ ಪದೋನ್ನತಿಯಾಗಿ ಮೈಸೂರು ವಿಭಾಗದ ಕುಶಾಲನಗರ ಶಾಖೆಗೆ ಪೋಸ್ಟಿಂಗ್ ಆಗಿತ್ತು.
ಛಾಯಾ ಸಹ ಮೈಸೂರು ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಳು. ಚಾಮರಾಜನಗರದಲ್ಲಿ ಮಾತ್ರ ಜಾಗ ಖಾಲಿ ಇದ್ದುದರಿಂದ ಅವಳಿಗೆ ಅಲ್ಲಿಗೆ ವರ್ಗಾವಣೆ ಆಗಿತ್ತು. ಕುಶಾಲನಗರದಿಂದ ದಿನವೂ ಓಡಾಡಲು ಕಷ್ಟ ಆಗಿದ್ದರಿಂದ ಅವಳು ಮೈಸೂರಿನಲ್ಲಿಗೆ ನಮ್ಮ ಮನೆ ಹಾಗೂ ನನ್ನ ತಂಗಿ ವೈಶಾಲಿ ಇವರ ಮನೆಗಳಲ್ಲಿ ಇದ್ದು ವಾರಕ್ಕೊಮ್ಮೆ ಕುಶಾಲನಗರಕ್ಕೆ ಹೋಗುತ್ತಿದ್ದಳು.
ನಮ್ಮ ಶಾಖೆಯಲ್ಲಿ ಇದ್ದ ನನ್ನ ಗೆಳತಿ ಶೈಲಜ ತುಂಬಾ ಒಳ್ಳೆಯ ಹಾಡುಗಾತಿ. ನಾವೆಲ್ಲ ಕೆಲವಾದರೂ ದೇವರ ನಾಮಗಳನ್ನು ಅವಳ ಮೂಲಕ ಕಲಿಯೋಣವೆಂದು ಹೇಳಿ ಎಲ್ಲರಿಗೂ ಅನುಕೂಲವಾಗುವಂತೆ ಮಧ್ಯದಲ್ಲಿ ಇದ್ದ ಗೆಳತಿ ಮಂಗಳಾಳ ಮನೆಯಲ್ಲಿ ಅದಕ್ಕಾಗಿ ಏರ್ಪಾಡು ಮಾಡಿದೆವು. ದಿನಾ ಸಂಜೆ ಆಫೀಸು ಮುಗಿದ ನಂತರ ಅಲ್ಲಿ ಹೋಗಿ ದೇವರನಾಮ ಕಲಿತು ವಾಪಸ್ ಆಗುತ್ತಿದ್ದೆವು. ಒಂದೊಂದು ದಿನ ಒಬ್ಬೊಬ್ಬರ ಆತಿಥ್ಯ. ಹಾಡಿನ ಜೊತೆ ಜೊತೆಗೆ ತಿಂಡಿ ತಿನಿಸುಗಳ ವಿತರಣೆ. ಯಾವುದು ಹೆಚ್ಚು ಆಕರ್ಷಣೆ ಪ್ರೇರಣೆ ಗೊತ್ತಾಗ್ತಿರಲಿಲ್ಲ. ೧೦ _ ೧೫ ದಿನ ಈ ರೀತಿ ತರಬೇತಿ ಆದ ನಂತರ ಒಂದು ಶನಿವಾರ ಸಂಜೆ ಅವರ ಮನೆಯಲ್ಲಿಯೇ ಈ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನೂ ಸಹ ಮಾಡಿ ನಾವು ಕಲಿತದ್ದನ್ನು ಅಲ್ಲಿ ಹಾಡಿ ಬೇರೆ ಬಂದ ಅತಿಥಿಗಳ ಎದುರಿಗೆ ನಮ್ಮ ಪ್ರತಿಭೆಯನ್ನು ತೋರಿಸಿದ್ದೂ ಆಯಿತು. ಅದರ ನಂತರ ಹೊಟ್ಟೆ ಪೂಜೆಯು ಆಯಿತು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಇನ್ನು ಮುಂದೆ ವರಷಕ್ಕೊಮ್ಮೆಯಾದರೂ ಈ ರೀತಿ ದೇವರನಾಮಗಳ ಕಾರ್ಯಾಗಾರ ಮಾಡಿ ಒಂದಿಷ್ಟು ಹಾಡು ಕಲಿಯೋಣ ಅಂತ ಅಂದುಕೊಂಡಿದ್ದು ಅಷ್ಟೇ. 20 ವರ್ಷಗಳಾದರೂ ಮತ್ತೆ ಆ ರೀತಿ ಮಾಡಲು ಆಗೇ ಇಲ್ಲ ಈಗಂತೂ ಎಲ್ಲರೂ ನಿವೃತ್ತಿಯಾಗಿ ಒಟ್ಟಿಗೆ ಸೇರುವುದೇ ಅಪರೂಪ ಆಗಿಹೋಗಿದೆ.
ಈ ಸಮಯದಲ್ಲಿ ಒಂದು ಮುಖ್ಯ ಘಟನೆ ಅಂದರೆ ಆಗ ಹೆಚ್ಚು ವ್ಯಾಪಕವಾಗಿದ್ದ ಚಿಕನ್ ಗುನ್ಯಾ ರೋಗ ನನಗೂ ಆಟ ಕಾಯಿಸಿಕೊಂಡಿತು. ನನಗಂತೂ ಆಸ್ಪತ್ರೆಗಳೆಂದರೆ ಅಲರ್ಜಿ. ಭಗವಂತನು ಕರುಣಾಮಯಿ ಅಂತಹ ಸಂದರ್ಭ ಇದುವರೆಗೆ ತಂದಿಲ್ಲ (touchwood). ಓರಗೆಯವರು ಅಸೂಯೆ ಪಡುವಷ್ಟು ಎನರ್ಜಿ ಲೆವೆಲ್ .ಕೆಲಸದವಳು ಸಹಾ ಇರದೆ ವೃತ್ತಿ ಪ್ರವೃತ್ತಿ ತೂಗಿಸುತ್ತಿರುವ ನನ್ನನ್ನು ಕಾಡಿದ ಕಾಡುತ್ತಿರುವ ಮಾರಿ ಎಂದರೆ ಚಿಕನ್ ಗುನ್ಯಾ .ಅದರ ಹೆಸರು ಗೊತ್ತಾಗಿ ಪ್ರಸಿದ್ಧವಾಗುವ ಮೊದಲೇ ನನಗೆ ಆಟಕಾಯಿಸಿ ಕೊಂಡಿತ್ತು.
ಅಂದು ಜೂನ್ ಮೊದಲ ವಾರ. ಮಂಗಳವಾರದ ದಿನ ಮಾಮೂಲಿನಂತೆ ಕಚೇರಿಗೆ ಹೋಗಿ ಬಂದೆ.ಸಂಜೆ ಟಿವಿ ನೋಡುತ್ತಿದ್ದಂತೆ ಸುಸ್ತೆನಿಸಿ ಜ್ವರ ಬರುವ ಹಾಗಾಯಿತು. ಮಾಮೂಲಿ ಜ್ವರ ಎಂದು ಮಲಗಿದರೆ ಮಧ್ಯರಾತ್ರಿಗೆ ಸಿಕ್ಕಾಪಟ್ಟೆ temperature.ನಾನು ಕನವರಿಸಿ ಕೊಳ್ಳುತ್ತಿದ್ದುದು ಕಂಡು ನನ್ನವರಿಗೆ ಗಾಬರಿ .ಮಾರನೆಯ ದಿನ ಡಾಕ್ಟರ್ ಶಾಪ್ ತೆಗೆದ ಕೂಡಲೇ ಹೋಗಿ ಔಷಧಿ ತಂದಾಯ್ತು. ಮೂರು ದಿನದ ಡೋಸ್ ಮುಗಿದರೂ ಜಪ್ಪಯ್ಯ ಅನ್ನದ ಜ್ವರಕ್ಕೆ ಆಂಟಿಬಯಾಟಿಕ್ ಉಪಚಾರವೂ ಆಯ್ತು. ಕ್ಯಾರೇ ಅನ್ನದಾಗ ಡಾಕ್ಟರ್ ಬ್ಲಡ್ ಟೆಸ್ಟ್ ಮಾಡಲು ಹೇಳಿದರು. ಅಷ್ಟರಲ್ಲಾಗಲೇ ಒಂದು ವಾರ ಕಳೆದಿದ್ದು ಊಟ ತಿಂಡಿ ಸೇರದೆ ನಿತ್ರಾಣವಾಗಿದ್ದೆ.ಎಷ್ಟೇ ಹುಷಾರು ಇರದಿದ್ದರೂ ಉಪ್ಪಿಟ್ಟು ಮಾತ್ರ ಗುಳುಂ ಸ್ವಾಹ ಮಾಡುತ್ತಿದ್ದ ನನಗೆ ಏನು ಸೇರದೆ ಹೋದಾಗ ನನ್ನ ಮೇಲೆ ನನಗೆ ಮರುಕ ಉಕ್ಕುಕ್ಕಿ ಬರುತ್ತಿತ್ತು .ಸರಿ ರಿಪೋರ್ಟ್ ಬಂತು .ಚಿಕನ್ ಗುನ್ಯಾ ಎಂದು ಗುರುತಿಸಿ ಅದಕ್ಕೆ ಸೇವೆ ಸಲ್ಲಿಸಿ ಜ್ವರವಂತೂ ಬಿಡ್ತು .ಆದರೆ ಕಾಲು ನೋವು ಬಂತು ನೋಡ್ರಿ !ಎಂದೂ ಏನೂ ನೋವು ಕಂಡಿರಲಿಲ್ಲ .ಇಡೀ ಜನ್ಮದ ನೋವು ಅನುಭವಿಸಿದೆ. 15 ದಿನ ರಜಾ ಹಾಕಿದ್ದೆ ಎಂದು ಹೇಳಿ ಶಾಖಾಧಿಕಾರಿಗಳಾದ ಅನುರಾಧ ನಮ್ಮದೇ ಕಚೇರಿಯ ಶಿವಶಂಕರ್ ಅವರ ಜೊತೆ ಬಂದು ನನ್ನ ಯೋಗ ಕ್ಷೇಮ ವಿಚಾರಿಸಿಕೊಂಡು ಹೋದರು.
ಲಿಫ್ಟ್ ಇರದಿದ್ದರೆ ಎರಡನೇ ಮಹಡಿಯ ಮೇಲಿನ ಆಫೀಸಿಗೆ ಸಹ ಹೋಗಲಾಗುತ್ತಿರಲಿಲ್ಲ . ಒಂದು ಮೆಟ್ಟಲು ಹತ್ತಲು ಒಂದು ನಿಮಿಷ ತೆಗೆದುಕೊಂಡು ಹಹತ್ತಬೇಕಿತ್ತು.ಹದಿನೈದು ದಿನ ಪೂರ್ತಿ ರಜಾ ಮತ್ತೆ ಹದಿನೈದು ದಿನ ಬೆಳಿಗ್ಗೆ ಮಾತ್ರ ಹೋಗಿ ಮಧ್ಯಾಹ್ನ ರಜಾ. ಆಗ ಜೂನ್ ತಿಂಗಳ ಕೊನೆ ಆದುದರಿಂದ ಉಳಿದ ಸಂದರ್ಭ ರಜೆ ತೆಗೆದು ಕೊಂಡು ಮುಗಿದಿದ್ದು. ಹೇಗೋ ಎಲ್ಲ ಸರಿ ಹೋದರೂ ಈಗಲೂ ಕಾಲುನೋವು ಒಮ್ಮೊಮ್ಮೆ ದಾಳಿ ಇಡುತ್ತೆ .ಕೆಲಸ ಹೆಚ್ಚಾದಾಗ, ಮೈಯಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾದಾಗ ಕಾಲೇ ಮೊದಲ ಬಲಿಪಶು. ನನ್ನ ಈ
walk ಸ್ವಾತಂತ್ರ್ಯವನ್ನು ಕಿತ್ತುಕೊಂಡ ಮಾರಿಗೆ ನನ್ನ ಧಿಕ್ಕಾರ .
ಯಾರೋ ಅಂದರು. ಚಿಕನ್ಗುನ್ಯಾ ವೈರಸ್ ಹತ್ತು ವರ್ಷ ಮಾತ್ರ ದೇಹದಲ್ಲಿ ಪ್ರಬಲ ಮತ್ತು ಅಸ್ತಿತ್ವ ಅಂತ. ಇನ್ನೇನು ೧೫ ವರ್ಷ ಆಗ್ತಿದೆ ಸರಿ ಹೋಗಬಹುದು ಅಲ್ವಾ? ಹಾಗಂತ ನಾನೇನು ಒಲಿಂಪಿಕ್ಸ್ ಗೆ ಹೋಗೋ ತಯಾರಿ ಮಾಡ್ತಿಲ್ಲ . ಆದರೂ ಚಂಗ್ ಅಂತ ಓಡಾಡಬಹುದಲ್ವಾ?(ಮುಂದುವರೆಯುವುದು)
ಸುಜಾತಾ ರವೀಶ್




