ಪುಸ್ತಕ ಸಂಗಾತಿ
,ಹೊಸ ಓದು:
ನಾಗರಾಜ್ ಹರಪನಹಳ್ಳಿ

“ಸೀಮೆ ಜಾಲಿ”
ಇತಿಹಾಸ ಬರೆದ ತೇಜಾವತಿ


ಸೀಮೆ ಜಾಲಿಯ* *ಇತಿಹಾಸ ಬರೆದ ತೇಜಾವತಿ
ಹೊಸ ಓದು: ನಾಗರಾಜ್ ಹರಪನಹಳ್ಳಿ
ಕನ್ನಡ ಕಾವ್ಯ ಜಗತ್ತಿನಲ್ಲಿ ಕವಯಿತ್ರಿ ತೇಜಾವತಿ ಹೆಚ್.ಡಿ. ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ . ಸೀಮೆ ಜಾಲಿ ಕವನ ಸಂಕಲನ 2026ರಲ್ಲಿ ಪ್ರಕಟವಾಗಿದೆ. 2025 ನೇ ಸಾಲಿನ ಸುಶೀಲಾ ಸೀತಾರಾಮಶೆಟ್ಟಿ ಸ್ಮಾರಕ ಕವಿತಾ ಪ್ರಶಸ್ತಿ ವಿಜೇತ ಕೃತಿಯಾಗಿ ಹೊರಹೊಮ್ಮಿದ ‘ಸೀಮೆ ಜಾಲಿ ‘ಯಲ್ಲಿ ಸ್ತ್ರೀ ಕೇಂದ್ರಿತ ಹೂರಣದ ಕವಿತೆಗಳನ್ನು ಹೆಚ್ಚಾಗಿ ಹೊಂದಿವೆ.
ತೇಜಾವತಿ ಅವರ ನಾಲ್ಕನೇ ಸಂಕಲನ ಇದು. ಮೊದಲ ಸಂಕಲನದಲ್ಲಿ ಮಗುವೊಂದು ಬೆರಗು ಕಣ್ಣಿನಿಂದ ಸಮಾಜವನ್ನು ನೋಡುವ ಅಚ್ಚರಿಗಳನ್ನು ದಾಟಿಕೊಂಡು ಭಾವ ಮತ್ತು ತಾರ್ಕಿಕ ಮನಸ್ಥಿತಿಯ ಮಿಶ್ರಣ ಇಲ್ಲಿದೆ. ಕವಿಯೊಳಗೆ ಒಬ್ಬ ಮಾನಸಿಕ ಅಂತರ ( ಸೈಕಿಕಲ್ ಡಿಸ್ಟೆನ್ಸ್ ) ಕಾಪಾಡಿಕೊಂಡು , ಹೊರ ಜಗತ್ತು ಗಮನಿಸುವ ಸೂಕ್ಷ್ಮತೆ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು.
ಕನ್ನಡ ಕಾವ್ಯ ಪರಂಪರೆಯನ್ನು ಅರ್ಥ ಮಾಡಿಕೊಂಡಿರುವ ತೇಜಾವತಿಯ ‘ಸೀಮೆ ಜಾಲಿ’ ಯನ್ನು ಓದುವಾಗ , ವಚನ ಸಾಹಿತ್ಯ ಕಾಲದ ಅಕ್ಕ ಮಹಾದೇವಿಯನ್ನು ಮಾತಾಡಿಸಿಕೊಂಡು ಬಂದಂತೆ ಕಾಣುತ್ತದೆ.
ಕನ್ನಡದಲ್ಲಿ ದೇವರನ್ನು ಪ್ರಶ್ನಿಸುವ ಪರಂಪರೆ ಇದೆ. ಅದನ್ನು ಈ ಸಂಕಲನದಲ್ಲಿ ಸಹ ಕಾಣಬಹುದು.
ಮಾಗಿದ ಮನಸ್ಸಿನ ಒಳ ನೋಟ ಇಲ್ಲಿನ ಕವಿತೆಗಳಲ್ಲಿದೆ.
ಹೆಣ್ಣಿನ ತೊಳಲಾಟ, ಒಳ ಬೇಗುದಿ ಹಾಗೂ ವಿವಿಧ ಸನ್ನಿವೇಶಗಳಲ್ಲಿ ಸ್ತ್ರೀ ಎದುರಿಸುವ ಪರಿಸ್ಥಿತಿಗಳನ್ನು ತೇಜಾವತಿ ಇಲ್ಲಿ ದಾಖಲಿಸಿದ್ದಾರೆ.
ಕವಯಿತ್ರಿ ಅನಿತಾ ಪಿ.ತಾಕೋಡೆ ಅಭಿಪ್ರಾಯಪಡುವಂತೆ ವಾಯಿದೆ ಮುಗಿದ ಬಳಿಕ ವಸ್ತುಗಳು ಮಾತ್ರವಲ್ಲ, ಸಂಬಂಧಗಳು ಕೂಡಾ ಚುಚ್ಚಲು ಶುರುವಿಡುತ್ತವೆ ಎನ್ನುವ ಕಟು ವಾಸ್ತವತೆಯನ್ನು ಚುಚ್ಚುವ ಸೀರೆ ಕವಿತೆ , ಸಹೃದಯರನ್ನು ಸದಾ ಕಾಡುವ ಕವಿತೆಯಾಗಿದೆ.
ಕನ್ನಡದ ಮತ್ತೊಬ್ಬ ಪ್ರಸಿದ್ಧ ಕವಯಿತ್ರಿ , ವಿಮರ್ಶಕಿ ಡಾ.ಎಚ್.ಎಲ್ .ಪುಷ್ಪಾ ಅವರು ತೇಜಾವತಿ ಅವರ “ಸೀಮೆ ಜಾಲಿ ” ಕವಿತೆಗಳ ಬಗ್ಗೆ ಬರೆಯುತ್ತಾ ಇಲ್ಲಿನ ಬಹುತೇಕ ಕವಿತೆಗಳು ವಿಷಯ ಸಂಬಂಧಗಳನ್ನು ನಿರ್ವಹಿಸುವಲ್ಲಿನ ತೊಡಕುಗಳನ್ನು ,ಸುಸ್ತಾದ ಮನಸ್ಥಿತಿಯೊಂದನ್ನು ವಿವರಿಸುತ್ತಾ ಹೋಗುತ್ತವೆ. ಅದು ಸಮಾಜ ದೊಂದಿಗಿನ ಕ್ರೌರ್ಯ ಎದುರಿಸುವಲ್ಲಿ, ಗುಂಡು – ಹೆಣ್ಣು, ಪತಿ-ಪತ್ನಿಯ ಸಂಬಂಧಗಳ ನಿರ್ವಹಣೆಯಲ್ಲಿ ಮತ್ತೆ ಮತ್ತೆ ತಲೆದೋರುತ್ತಾ ಹೋಗುತ್ತದೆ .
‘ವರ್ತಮಾನದಲ್ಲಿ ಸಂಬಂಧ ಗಳನ್ನು ನಿರ್ವಹಿಸುವಲ್ಲಿ ಬದಲಾದ ನಿಷ್ಠೆಗಳು, ಸಂಸಾರಿಕ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಕಳೆದುಕೊಂಡ ಹೆಣ್ಣಿನ ಅಸ್ತಿತ್ವ , ಗಂಡ ಗೆಳೆಯನಾಗದ ಅಘಾತ – ಹೀಗೆ ಹಲವು ತೊಡಕುಗಳನ್ನು ಕುರಿತು ತೇಜಾವತಿ ಕವಿತೆಗಳು ಮಾತಾಡುತ್ತವೆ’ ಎಂದು ಅಭಿಪ್ರಾಯಪಡುತ್ತಾರೆ.
ಹೇಳಲಾರದ ಅಸಹಾಯಕತೆಯನ್ನು ಕವಿತೆಗಳಲ್ಲಿ ಕಟ್ಟುವಲ್ಲಿ ತೇಜಾವತಿ ಗೆದ್ದಿದ್ದಾರೆ . ಹಾಗೆ ಹೆಣ್ಣಿನ ಸೋಲಿನಲ್ಲೂ ಆಕೆಗೆ ಚಲನಶೀಲತೆಯನ್ನು ಕವಿತೆಯ ಮೂಲಕ ಹಿಡಿದಿಡುತ್ತಾರೆ.
ಸೀಮೆ ಜಾಲಿ ಕವಿತೆ ಬದುಕಿನ ಕ್ರೌರ್ಯ ಹೇಳುತ್ತಲೇ ಅದರ ಕೊನೆಯಲ್ಲಿ ಆಶಾವಾದಾವನ್ನು ಕವಯಿತ್ರಿ ಕಟ್ಟುತ್ತಾಳೆ. ಕವಿಯ ಅಪ್ಟಿಮಿಸಜಂನ್ನು ಜೀವ ಸಂಕುಲಕ್ಕೆ , ಸುತ್ತಣ ಜಗತ್ತಿಗೆ ಬಿತ್ತುತ್ತಾರೆ.
*“ಕ್ಷಣಿಕ ಸಂಬಂಧಗಳೇ ಹೀಗೆ*
*ಆಕರ್ಷಕ ಸೀರೆಯ ಹಾಗೆ*
*ಸೀಮಿತ ಅವಧಿಯೊಳಗೆ ಕಂಫರ್ಟ ಝೋನ್* *ಸೃಷ್ಟಿಸುವ ಅವು*
*ವಾಯಿದೆ ಮುಗಿದ ಬಳಿಕ ಚುಚ್ಚಲು ಶುರುವಿಡುತ್ತವೆ”*
(ಚುಚ್ಚುವ ಸೀರೆ)
“ಚುಚ್ಚುವ ಸೀರೆ” ಕವಿತೆ ಹೆಣ್ಣಿನ ಬದುಕನ್ನು ತೆರೆದಿಡುತ್ತದೆ. ವಾಸ್ತವದ ಕಠೋರತೆಯನ್ನು ದಾಖಲಿಸುತ್ತದೆ.
*’ ಏನು ಮಾಡುವೆ? ‘* ಎಂಬ ಕವಿತೆಯಲ್ಲಿ ಪ್ರಕೃಯನ್ನು ಪ್ರಶ್ನಿಸುವ ಮೂಲಕ ಒಂದು ಚೆಂದದ ರೂಪಕದ ಮೂಲಕ ಕ್ರೂರ ವ್ಯವಸ್ಥೆ ನಡುವೆ ಬದುಕಿನ ಚೆಲುವು ಹುಡುಕುವ ಮನಸ್ಥಿತಿ ಕಾಣಿತ್ತದೆ.
ನಕ್ಷತ್ರಗಳು ಹೊಳೆಯುವಾಗ ಅವು ಕತ್ತಲನ್ನು ನುಂಗುವ ಅಚ್ಚರಿ, ನದಿಗಳು ನಿತ್ಯ ಶುಭ್ರತೆಗಾಗಿ ನಿತ್ಯ ನಿರಂತರವಾಗಿ ಹರಿಯುವ ಚಲನಶೀಲತೆ, ಗಿಡ ಮರಗಳು ಪ್ರವಾಹವನ್ನು ಎದುರಿಸಲು ಭೂಮಿಗೆ, ತಾಯಿಬೇರು ಬಿಟ್ಟು ನಿಲ್ಲುವ ಗಟ್ಟಿತನ, ನಿಸ್ವಾರ್ಥವಾಗಿ ಅರಳುವ ಹೂಗಳ ಹಿಂದಿನ ಕಾಯಕ, ನ್ಯಾಯಾ ದೇವತೆ ಅಧರ್ಮವನ್ನು ಕುಡಿಯುವ ಬಗೆಯ ಹಿಂದೆ ಒಂದು ಬಗೆಯ ತಾತ್ವಿಕ ನಿಲುವನ್ನು ಸಹೃದಯರ ಮುಂದೆ ಇಡುತ್ತಾರೆ ಕವಯಿತ್ರಿ.
ಒಳಗೆ ಅತ್ತು ಹೊರಗೆ ನಗುವ ಬುದ್ಧನ ಸ್ಥಿತಪ್ರಜ್ಞೆ, ಕೊನೆಗೆ ಬದುಕು ಭಾರ ಎನಿಸಿದಾಗ ತಾನೇ ಬುದ್ಧಳಾಗುವ ಕವಿ ಮಹೋನ್ನತ ಸ್ಥಿತಿಗೆ ಏರಬಲ್ಲ ಎಂಬ ಒಂದು ಸಂದೇಶವನ್ನು ‘ ಏನು ಮಾಡುವೆ ‘ ಕವಿತೆ ಹೊಮ್ಮಿಸುತ್ತದೆ.
*”ಮೂರು ದಿನದ ಬದುಕು*
*ನಾಲ್ಕು ಗೋಡೆಯೊಳಗೆ ಸೋರಿ*
*ಸಮಾಧಿಯಾಗುವಾಗಬೊಗಸೆ ತುಂಬಿದ್ದ*
*ಕನಸುಗಳೆಲ್ಲ ಬೆರಳ ಸಂಧಿಯಲ್ಲಿ ಖಾಲಿಯಾಗಿದ್ದವು*
*ಈಗೀಗ ಆ ಜೀವಕ್ಕೆ*
*ಹಗಲು ರಾತ್ರಿಗಳ ವ್ಯಾತ್ಯಾಸವಿಲ್ಲ*
*ಕಣ್ಣ ತುಂಬುವ ನಿದ್ದೆಯ ಸುಳಿವಿಲ್ಲ”*
(ವಲ್ಲಿಯ ಗಂಟು)
“ವಲ್ಲಿಯ ಗಂಟು” ಬಾಲ್ಯವನ್ನು , ಕೌಟುಂಬಿಕ ಪ್ರೀತಿ, ವಾತ್ಸಲ್ಯ ಮತ್ತು ಕೊನೆಯಲ್ಲಿ ಹಿರಿಯರು ಹೊರಟು ಹೋಗುವ ಅನಾಥ ಭಾವ ಕಥನವನ್ನು ಕಟ್ಟಿಕೊಡುತ್ತದೆ. ಈ ಕವಿತೆ ಓದುವಾಗಲೇ ಒಂದು ಲಹರಿ ಸಹೃದಯರಲ್ಲಿ ಸೃಷ್ಟಿಯಾಗುತ್ತದೆ.
ಅಪೂರ್ಣವಾದ ಕವಿತೆ ನಾನು ;
ಹೌದು
ನಿಮ್ಮ ಊಹೆಯೂ ನಿಜವಾಗಿದೆ
ಕವಿತೆಯಾಗಲು ಹೊರಟವಳ ಅರ್ಧ ಕವಿತೆ ಎಂಬ ಸಾಲುಗಳಲ್ಲಿ ಕವಯಿತ್ರಿಯ ವಿನಮ್ರತೆ ಎದ್ದು ಕಾಣುತ್ತದೆ.
ಪುಟದಲ್ಲಿನ ಕವಿತೆಗಳು
ತಾನು ಹುಟ್ಟಿ ಬೆಳೆದ
ಹೋರಾಟದ ಹಾದಿಯ ನೆನೆದು
ನೋವಿನ ನಗೆ ಬೀರುತ್ತವೆ;
ಕೊನೆಗೂ
ಕಾವ್ಯ ಪ್ರತಿಭೆ ಗೆದ್ದಿತಲ್ಲ ಎಂದು.
ನಾಗರಾಜ್ ಹರಪನಹಳ್ಳಿ




