ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ರೀತಿ, ರಿವಾಜು ಎಂದೆಲ್ಲಾ ಸಂತಸಕೆ ಒಡ್ಡು ಕಟ್ಟಿದವಳು ನಾನು
ಕನಸುಗಳಿಗೆ ಪರದೆ ಹಾಕಿ ಇರುಳು ಕಳೆದವಳು ನಾನು
ಬದುಕಿನ ಇಳಿ ಸಮಯದಿ ನೀ ಅತಿಥಿಯಂತೆ ಬಂದಿರುವಿ ಏನು
ಸಂಜೆಯ ಸೊಬಗಿಗೆ ಮರುಳಾಗದಿರಲು ಕಿಟಕಿ ಮುಚ್ಚಿದವಳು ನಾನು
ಯಾರು ಎಷ್ಟು ಕರೆದರೂ,ತಿರುಗಿ ನೋಡದೆನ್ನ ಜೀವ
ಎದೆಯ ಕದಕೆ ಅಗುಳಿ ಹಾಕಿ , ಬೀಗ ಜಡಿದವಳು ನಾನು
ನೀ ಒಲವಿನ ಓಲೆ ಬರೆದು, ಓಲೈಸಿಕೊಳ್ಳುವೆ ಹೇಗೆ ನನ್ನನು
ಮೊಹಬ್ಬತ್ತಿನ ಶಹರಿನಲಿ ವಿಳಾಸ ಇಲ್ಲದವಳು ನಾನು
ಬಂಡೆಯಂತಹ ವಾಣಿಯನು ಕರಗಿಸುವ ಹಠವು ವ್ಯರ್ಥ
ಯಾವ ಪ್ರೇಮ ಶಿಲ್ಪಿ ಕಟೆದರೂ ಪ್ರೇಯಸಿ ಆಗದವಳು ನಾನು
ವಾಣಿ ಯಡಹಳ್ಳಿಮಠ



