ಮಕ್ಕಳ ಸಂಗಾತಿ
ಡಾ. ಮಮತ, ಶಿಕ್ಷಕರು,
ಅನೇಕಮ್ ಬೆಂಗಳೂರು


“ಅನೇಕಮ್ ಶಾಲೆಯ ಮಕ್ಕಳು
ಬರೆದ ಕನ್ನಡ ಬರಹಗಳು”

ಮರದ ಮಹತ್ವ

ಒಂದು ಹಳ್ಳಿಯಲ್ಲಿ ಅನಿಕೇತ್ ಎಂಬ ಬಾಲಕನಿದ್ದನು. ಅವನು ಪ್ರತಿದಿನ ಶಾಲೆಗೆ ಹೋಗುವಾಗ ಒಂದು ದೊಡ್ಡ ಮಾವಿನ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಒಂದು ದಿನ ಆ ಮರದ ಕೆಳಗೆ ಒಂದು ಚಿಕ್ಕ ಗಿಡ ಒಣಗುತ್ತಿರುವುದನ್ನು ಅವನು ಗಮನಿಸಿದನು. ಅದನ್ನು ಕಂಡ ಅನಿಕೇತ್ಗೆ ತುಂಬಾ ಬೇಸರವಾಯಿತು.
ಆ ದಿನದಿಂದ ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಹಿಂದಿರುಗುವಾಗ ಆ ಗಿಡಕ್ಕೆ ನೀರು ಹಾಕಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದನು. ಕೆಲವು ವಾರಗಳ ನಂತರ ಆ ಗಿಡ ಹಸಿರಾಗಿ ಬೆಳೆದು ದೊಡ್ಡ ಮರವಾಯಿತು. ಅದರ ನೆರಳಿನಲ್ಲಿ ಪಕ್ಷಿಗಳು ಗೂಡು ಕಟ್ಟಿದವು. ದಾರಿಹೋಕರು ಅದರ ತಂಪಾದ ನೆರಳಿನಲ್ಲಿ ವಿಶ್ರಾಂತಿ ಪಡೆಯತೊಡಗಿದರು.
ಒಂದು ದಿನ ಪಂಚಾಯಿತಿಯವರು ರಸ್ತೆ ವಿಸ್ತರಣೆಗಾಗಿ ಆ ಮರವನ್ನು ಕಡಿಯಲು ಬಂದರು. ಆಗ ಊರಿನ ಜನರು ಆ ಮರದ ಮಹತ್ವವನ್ನು ತಿಳಿಸಿ, ಅದನ್ನು ಕಡಿಯಬಾರದೆಂದು ಮನವಿ ಮಾಡಿದರು. ಜನರ ಮನವಿಯನ್ನು ಗೌರವಿಸಿದ ಪಂಚಾಯಿತಿಯವರು ಮರವನ್ನು ಉಳಿಸಲು ನಿರ್ಧರಿಸಿದರು.
ಈ ವಿಷಯವನ್ನು ತಿಳಿದ ಅನಿಕೇತ್ ತುಂಬಾ ಸಂತೋಷಪಟ್ಟನು. ತಾನು ಪ್ರೀತಿಯಿಂದ ಬೆಳೆಸಿದ ಗಿಡ ಇಂದು ದೊಡ್ಡ ಮರವಾಗಿ ಅನೇಕರಿಗೆ ನೆರಳು, ಆಶ್ರಯ ಮತ್ತು ಸಂತೋಷ ನೀಡುತ್ತಿರುವುದನ್ನು ಕಂಡು ಹೆಮ್ಮೆಪಟ್ಟನು. ಆಗಿನಿಂದ ಅವನು ಇನ್ನೂ ಹೆಚ್ಚು ಮರಗಳನ್ನು ನೆಡುವ ಸಂಕಲ್ಪ ಮಾಡಿದರು.
ನೀತಿ: ಒಂದು ಮರ ನೂರಾರು ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ಮರಗಳನ್ನು ನೆಟ್ಟು, ಬೆಳೆಸಿ, ಕಾಪಾಡೋಣ

.
ಮೋನಿಶ್
7 ನೇ ತರಗತಿ
ಅನೇಕಮ್ ಶಾಲೆ
ಬೆಂಗಳೂರು
ಹಸಿರು ಲೋಕದ ಸಿರಿ

ನನಗೆ ಪ್ರಕೃತಿ ತುಂಬಾ ಇಷ್ಟ. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಹಸಿರು ಮರಗಳು, ಬಣ್ಣ ಬಣ್ಣದ ಹೂಗಳು ಮತ್ತು ತಂಪಾದ ಗಾಳಿ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮರಗಳು ನಮಗೆ ಶುದ್ಧ ಗಾಳಿಯನ್ನು ನೀಡುತ್ತವೆ. ನದಿಗಳು, ಕೆರೆಗಳು ಮತ್ತು ಮಳೆಯ ನೀರು ನಮ್ಮ ಜೀವನಕ್ಕೆ ಆಧಾರವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಔಷಧೀಯ ಸಸ್ಯಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ.
ಪ್ರಕೃತಿ ನಮಗೆ ಶುದ್ಧ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನೂ ಮರಗಳನ್ನು ನೆಡುತ್ತೇನೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುತ್ತೇನೆ. ನನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇತರರಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತೇನೆ.
ಪ್ರಕೃತಿಯನ್ನು ಪ್ರೀತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ಚೆನ್ನಾಗಿದ್ದರೆ ನಮ್ಮ ಜೀವನವೂ ಆರೋಗ್ಯಕರ, ಸುಂದರ ಮತ್ತು ಸಂತೋಷಕರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸಬೇಕು.
ನೀತಿ: ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ.

ಜೀವಿತ
8 ನೇ ತರಗತಿ
ಅನೇಕಮ್ ಶಾಲೆ
ಬೆಂಗಳೂರು
ಜವಾಬ್ದಾರಿಯ ಮಹತ್ವ

ಶಾಂತಿನಗರ ಎಂಬ ಊರಿನಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಒಬ್ಬ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು. ಆ ಇಬ್ಬರು ಮಕ್ಕಳ ಹೆಸರು ಪ್ರಿಯಾ ಮತ್ತು ಶ್ವೇತ. ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ಮನೆ ಕೆಲಸದ ಜೊತೆಗೆ ಕೈತೋಟದ ಕೆಲಸವನ್ನೂ ಮಾಡುತ್ತಿದ್ದರು.
ಒಂದು ದಿನ ಅಜ್ಜಿ ತಾನು ಸಂಪಾದಿಸಿದ ಹಣದಿಂದ ಮಕ್ಕಳೊಂದಿಗೆ ಸಂತೆಗೆ ಹೋದರು. ಅಜ್ಜಿ ಇಬ್ಬರಿಗೂ ತಲಾ ೫೦೦ ರೂಪಾಯಿ ನೀಡಿ, ಮನೆಯ ದಿನಸಿ ಸಾಮಾನುಗಳನ್ನು ತಂದುಕೊಡಲು ಹೇಳಿದರು. ಪ್ರಿಯಾ ಅಜ್ಜಿ ಹೇಳಿದಂತೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ತಂದಳು. ಆದರೆ ಶ್ವೇತ ಅಜ್ಜಿ ಹೇಳಿದ ವಸ್ತುಗಳನ್ನು ತರದೆ, ತನ್ನ ಇಷ್ಟದ ವಸ್ತುಗಳನ್ನು ಖರೀದಿಸಿಕೊಂಡು ಬಂದಳು.
ಇದನ್ನು ಕಂಡ ಅಜ್ಜಿಗೆ ತುಂಬಾ ದುಃಖವಾಯಿತು. ಆ ರಾತ್ರಿ ಅಜ್ಜಿ ಮತ್ತು ಪ್ರಿಯಾ ಸೇರಿ ಶ್ವೇತಳಿಗೆ ಹಣದ ಮೌಲ್ಯ ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ಬುದ್ಧಿ ಹೇಳಿದರು.
ಮುಂದಿನ ಬಾರಿ ಸಂತೆಗೆ ಹೋದಾಗ ಅಜ್ಜಿ ಶ್ವೇತಳಿಗೆ ಸ್ವಲ್ಪ ಹಣ ನೀಡಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಹೇಳಿದರು. ಆಗ ಶ್ವೇತ ತನ್ನ ತಪ್ಪನ್ನು ಅರಿತುಕೊಂಡಳು. ಅಜ್ಜಿಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಹಣವನ್ನು ಜಾಗರೂಕತೆಯಿಂದ ಬಳಸುವುದಾಗಿ ಮಾತು ಕೊಟ್ಟಳು.
ನೀತಿ: ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಹಿರಿಯರ ಮಾತನ್ನು ಗೌರವಿಸಬೇಕು.

ಕವನ
7 ನೇ ತರಗತಿ
ಅನೇಕಮ್ ಶಾಲೆ
ಬೆಂಗಳೂರು
ನಮ್ಮೂರ ಕೆರೆ

ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ.
ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ – ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು – ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ.
ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು.
ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು.
ನೀತಿ:
ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ.

ತೇಜಸ್
7ನೇ ತರಗತಿ
ಅನೇಕಾಮ್ ಶಾಲೆ
ಬೆಂಗಳೂರು.
ಸ್ನೇಹದ ಪಯಣ

ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು.
ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು.
ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.
ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು.
ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲು—ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು.
ನೀತಿ:
ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು.

ಅರ್ಷಿಯಾ
8ನೇ ತರಗತಿ
ಅನೇಕಾಮ್ ಶಾಲೆ
ಬೆಂಗಳೂರು

ಅನೇಕಮ್ ಶಾಲೆ



