ವಿಶೇಷ ಸಂಗಾತಿ
ಪದ್ಮಲತಾ ಮೋಹನ್
“ಮಿಲನ”


ಮಿಲನ.
ಮತ್ತೆ ಬರುವೆನೆಂದು ಮಾತು ಕೊಟ್ಟವನು
ಹೊತ್ತು ಮೀರಿದರು ಯಾಕೋ ಸುಳಿವಿಲ್ಲ
ಹೊಸಿಲೊಳಗೆ ಇಟ್ಟ ಹೂವಿನಲಿ ಕಂಪಿಲ್ಲ
ಹಗಲಿರುಳು ಬಯಕೆಯ ಕನವರಿಕೆ
ಕಾದು ಕಾವೇರಿದೆ ತನು, ಇಲ್ಲ ಚೇತರಿಕೆ.
ನೋಟ ನೆಟ್ಟಿದೆ ಆ ದಿಗಂತದೆಡೆಗೆ
ಶೂನ್ಯವೇ ಅಲ್ಲಿ ತೇಲಾಡಿದೆ,
ಬರೀ ಬೆಳಕು ಶಬ್ದಗಳ ಆರ್ಭಟವೋ
ಮರುಭೂಮಿಯಲಿ ಮರೀಚಿಕೆ ಕಂಡಂತೆ.
ದೇಹವಿಡೀ ವ್ಯಾಪಿಸಿದ ವಿರಹ ಜ್ವಾಲೆ
ಸುಡುತಿದೆ ಬೇಗೆ ತನ್ನೊಡಲನ್ನೇ!
ಬತ್ತಿರುವ ಬೆಂಗಾಡು, ಸುರಿಸಲಿಲ್ಲ ಹನಿ ಕಣ್ಣೀರು!
ಗುಡಿಗೋಪುರದಲ್ಲಿ, ನಡೆಯಿತು
ನಿತ್ಯ, ಪೂಜೆ ಪುನಸ್ಕಾರ, ಅವನಿಗಾಗಿ
ಅವಳ ಮೇಲಿನ ಕಾಳಜಿಗಾಗಿ
ಅವರಿಬ್ಬರ ಮಿಲನ, ಒಳಿತಿಗಾಗಿ.
ಉಂಗುರ ನೋಡಿ ದುಷ್ಯಂತನಿಗೆ ನೆನಪು ಬಂದಿತ್ತು
ಇವನಿಗೂ ಹಾಗೆ ಏನೋ ನೆನಪಾಯಿತು
ತಡವಾಗಿಯಾದರು ಕೊನೆಗೂ ಬಂದ
ಮೆತ್ತಗೆ ಹಿತವಾಗಿ ರಮಿಸುತ್ತಿದ್ದವನು
ಯಾಕೋ ಬದಲಾಗಿಬಿಟ್ಟಿದ್ದ
ರಭಸದಿ, ಸೆಳೆದು ಮುತ್ತುಗಳ ಮಳೆ
ಸುರಿಸಿದ್ದ.
ವಿರಹ ಬೇಗೆಗೆ ಮುತ್ತಿನ ಮಳೆಗೆ
ಭೂಮಿ(ಅವಳು) ಬಾಯಿ ತೆರೆದಿದ್ದು
ನಾಂದಿ ಹಾಡಿತು ಸರ್ವನಾಶಕ್ಕೆ.
ಮಸಣವಾಯಿತು ಬದುಕು
ಅವರಿಬ್ಬರ ಮಿಲನಕ್ಕೆ!
ಪದ್ಮಲತಾ ಮೋಹನ್.
.



