ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ. ಸಂತಬಾ
ಗಜಲ್


ಬಾಳ ತಿರುಗುಣಿಯಲಿ ತಿರುಗಿ ತಿರುಗಿ ತಂದನು ತರಹೇವಾರಿ ಕನಸನು
ಸಂಸಾರದ ಸಂತೆಯಲಿ ತೂಗಿ ತೂಗಿ ತಂದನು ತರಹೇವಾರಿ ಬಣ್ಣವನು.ll
ರಾತ್ರಿ ಹಗಲೆನ್ನದೆ ಗಾಣದ ಎತ್ತಿನಂತೆ ದಣಿಯಲಾರದ ದಣಿಯಿವನು,
ದೋತರದಲಿ ಕಷ್ಟದ ಗಂಟು ಕಟ್ಟಿ ತಂದನು ತರಹೇವಾರಿ ಸುಖವನು.ll
ಬಿಸಿಲು ಮಳೆಯನ್ನದೆ ದುಡಿ ದುಡಿದು ಸಣ್ಣಗೇನೆ ನರಳಿದವನು,
ಮಮತೆಯಲಿ ಬಾನಷ್ಟು ಬಾಗಿ ತಂದನು ತರಹೇವಾರಿ ನಕ್ಷತ್ರವನು.ll
ಬೊಗಸೆಯಷ್ಟು ನಿದ್ರೆಯನು ಮಾಡಿ ಸಾಗರದಷ್ಟು ಎಚ್ಚರವಿದ್ದವನು.
ಗಂಧದಂತೆ ನುಣ್ಣಗೆ ತೇದು ತೇದು ತಂದನು ತರಹೇವಾರಿ ಸುಗಂಧವನು.ll
ತಾಯಿಗೆ ಕೈ ತುಂಬಾ ಪ್ರೀತಿಯ ಮಲ್ಲಿಗೆ ಕೊಟ್ಟು ಮೆಲ್ಲಗೆ ಸರಿದವನು,
ಅವ್ವನ ಸಿಡುಕಿಗೆ ನಕ್ಕು ಮರಳಿ ತಂದನು ತರಹೇವಾರಿ ಸಾಮಾನನು.ll
ಡಾ.ರೇಣುಕಾತಾಯಿ. ಸಂತಬಾ.



