ಧಾರಾವಾಹಿ ಸಂಗಾತಿ -28
ಅರ್ಜುನ ಉವಾಚ
ಡಾ.ವಿಶ್ವನಾಥ್ ಎನ್ ನೇರಳಕಟ್ಟೆ
ಶಾಪದ ಕಥೆಗಳನ್ನು ತಿಳಿದು
ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ


ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ.
ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ.
ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ.
ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು.
ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ.
ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ.
ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು.
ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ.
ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು.
ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು.
ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ.
ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




