ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಪುಸ್ತಕ : ಕಾಡುವ ಕವಿತೆ
ಲೇಖಕರು : ನಾಗೇಶ್ ಜೆ. ನಾಯಕ
ಪ್ರಕಾಶಕರು : ಸಹೃದಯ ಸಾಹಿತ್ಯ ಪ್ರತಿಷ್ಠಾನ, ಸವದತ್ತಿ.
ಪುಟಗಳು : 223
ಬೆಲೆ: 250 ₹

ಎಲ್ಲರೆದೆಯನ್ನೂ ಕಾಡಿದ ಕವಿತೆಗಳನ್ನು ಅನಾವರಣಗೊಳಿಸಿದ : ಜೆ ನಾಗೇಶ ನಾಯಕ

ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಹಲವಾರು ಕವಿಗಳು,  ಹಲವಾರು ಕವಿತೆಗಳನ್ನು ಬರೆದರೂ ಕೆಲವೇ ಕೆಲವು ಕವಿತೆಗಳು ಎಲ್ಲರ ಮನಸ್ಸನ್ನು, ಹೃದಯವನ್ನು ತಟ್ಟಿಬಿಡುತ್ತವೆ.  ಆ ಕವಿತೆ ಕೇಳಿದ ತಕ್ಷಣ  ಸದಾ ಮನದೊಳಗೆ ಕಾಡುತ್ತಿರುತ್ತದೆ.  ಅಂತಹ ಕಾಡುವ ಹತ್ತು ಹಲವಾರು ಕವಿತೆಗಳ ಭಾವ, ಅರ್ಥ, ಸನ್ನಿವೇಶ, ಭಾವ ತೀವ್ರತೆ, ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.  

ಎಲ್ಲಿ ಹೋದರೂ ಆ ಕವಿತೆಯ ಗುಂಗಿನಿಂದ ಕೆಲವು ಸಲ ಹೊರಬರಲು ಸಾಧ್ಯವಾಗುವುದಿಲ್ಲ. ಅಂತಹ ಕವಿತೆಗಳನ್ನು ಒಂದು ಕಡೆ ಸೇರಿಸಿ ಅವುಗಳ ಆಳವಾದ ಅರ್ಥ, ಭಾವತೀವ್ರತೆಯನ್ನು ತಮ್ಮದೇ ಆದ ಅಭಿಪ್ರಾಯದೊಂದಿಗೆ ಮಂಡಿಸುವುದಿದೆಯಲ್ಲ ಅದು ಸುಲಭದ ಮಾತಲ್ಲ. ಒಬ್ಬ ಕವಿಯ ಭಾವನೆಗಳನ್ನು ಇನ್ನೊಬ್ಬ ಕವಿಭಾವದವರೇ ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಕವಿಯ ಕವಿತೆಗಳ ಸಹೃದಯತೆಯನ್ನು ಇನ್ನೊಬ್ಬ ಸಹೃದಯ ಓದಗನ್ನು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ.  ಅಂತಹ ಸಹೃದಯ ಕವಿ, ಸಾಹಿತಿ, ಅಂಕಣಕಾರ ನಮ್ಮ ನಡುವಿನ ಕ್ರಿಯಾಶೀಲ ಬರಹಗಾರರಾದ ಸವದತ್ತಿಯ ಜೆ. ನಾಗೇಶ್ ನಾಯಕರವರು. ಪ್ರತಿ ವಾರ ಅವರು ಬರೆಯುವ “ಕಾಡುವ ಕವಿತೆ” ಯ ಅಂಕಣ ಬರಗಳನ್ನು ಒಟ್ಟುಗೂಡಿಸಿ, ಸಂಕಲನ ರೂಪದಲ್ಲಿ ತಂದಿರುವುದು ಅಭಿನಂದನಾರ್ಹ.

“ಕಾಡುವ ಕವಿತೆ” ಪುಸ್ತಕದಲ್ಲಿ 50 ನಾಡಿನ ಪ್ರಮುಖ ಕವಿಗಳ  ಜೊತೆಗೆ ಇತ್ತೀಚಿನ ಕವಿಗಳ ಕವಿತೆಗಳನ್ನು ಕುರಿತು, ಕವಿತೆಯೊಂದಿಗೆ ಅದರ ಭಾವವನ್ನು ಅರ್ಥಪೂರ್ಣವಾದ ಟಿಪ್ಪಣಿಯನ್ನು ಬರೆದಿದ್ದಾರೆ. ಕನ್ನಡದ ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿಯವರಿಂದ ಪ್ರಾರಂಭವಾಗಿ ನಮ್ಮ ನಡುವಿನ ಈಗಿನ ಕವಿಗಳ ಕವಿತೆಯನ್ನೂ ಗುರುತಿಸಿದ್ದಾರೆ.  ವಿವಿಧ ಕವಿಗಳ  ಕಾವ್ಯವನ್ನು ಅವಲೋಕನ ಮಾಡಿ, ಅದರಲ್ಲಿ ಯಾವ ಕವಿತೆ ಹೃದಯವನ್ನು ತಟ್ಟುತ್ತದೆ…?  ಮನಸ್ಸನ್ನು ಆರ್ದ್ರಗೊಳಿಸುತ್ತದೆ…? ಭಾವತೀವ್ರತೆಯನ್ನು ಬಡಿದೆಬ್ಬಿಸುತ್ತದೆ..? ಎನ್ನುವುದನ್ನು ಗುರುತಿಸಿ, ಕವಿ ಜೆ ನಾಗೇಶ್ ನಾಯಕರವರು ತುಂಬಾ ಅರ್ಥಪೂರ್ಣವಾದ ಮತ್ತು ಸಂಶೋಧನಾತ್ಮಕ ಹುಡುಕಾಟವನ್ನು ಮಾಡಿದ್ದಾರೆ.

 ಕವಿತೆಯ ಓದು ಎಂದರೆ ಕೇವಲ ಶಬ್ದಗಳ ಓದು ಅಲ್ಲ. ಕವಿತೆಯನ್ನು ಓದುವುದು ಎಂದರೆ ಅದನ್ನು ತನ್ನೊಳಗೆ ಆವರಿಸಿಕೊಳ್ಳುವುದು. ಕವಿತೆಯೊಳಗೆ ಓದುಗ ಮುಳುಗಿ ಹೋಗುವುದು. ಓದುಗನೊಳಗೂ ಕವಿತೆ ಆಳಕ್ಕಿಳಿದು ಅವನ ಮನಸ್ಸು ಮತ್ತು ಹೃದಯವನ್ನು ಸದಾ ಕಾಡುತ್ತಲೇ ಹೋಗುತ್ತದೆ. ಅಂತಹ ಕವಿತೆಗಳು ಹಲವು ವಿಭಿನ್ನ ನೋಟಗಳೊಂದಿಗೆ ಹೊಸ ಆಶಯಗಳನ್ನು ತೆರೆದಿಡುತ್ತವೆ.

ಈ ಸಂಕಲನದಲ್ಲಿ ಪ್ರೀತಮೆಯನ್ನು ಪ್ರೀತಿಸುವ ತೀವ್ರತೆ, ಬದುಕಿನ ಹೋರಾಟದ ಅನಿವಾರ್ಯತೆ, ಚರಿತ್ರೆಯ ನೆನಪುಗಳು, ಹಂಗಿಲ್ಲದ ಬದುಕು,  ನೆನಪುಗಳು, ದ್ವೇಷ, ಅಸೂಯೆ, ದೇಶಾಭಿಮಾನ ಬೀರುವ ಸಾಲುಗಳು, ಮಹಿಳೆಯ ತಲ್ಲಣಗಳು, ಆಷಾಡತನಗಳು, ಅಭಿಮಾನವಿಲ್ಲದ ಮಾತುಗಳು, ಭಾವೈಕ್ಯತೆಯ ಬೀರುವ ಕವಿತೆಯ ಸಾಲುಗಳು, ದುರಾಡಳಿತವನ್ನು  ಪ್ರಶ್ನಿಸುವ,  ಪ್ರಿಯತಮೆಯೊಂದಿಗಿನ ಸಲ್ಲಾಪ,  ನಾವು ಮನುಷ್ಯರಾಗಬೇಕೆನ್ನುವ ಚಿಂತನೆಗಳು,  ಮರೆಯುವ ನೆಪಗಳು, ಗಂಡಸರ ಗಡಸುತನ, ಕಾರಣವಿಲ್ಲದೆ ಹೇಳಿ ಹೋಗುವ ಕ್ಷಣಗಳು, ಹಿರಿಯ ಕವಿಗಳನ್ನು ಮತ್ತು ಅವರ ವ್ಯಕ್ತಿತ್ವವನ್ನು ಕುರಿತ ಕವಿತೆಗಳ ಸಾಲುಗಳು, ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸುವ ಆಶಯಗಳು,  ಮನುಷ್ಯನನ್ನು ಪ್ರೀತಿಯಿಂದ ಕಾಣಬೇಕಾದ ಇಂದಿನ ಅಗತ್ಯತೆ,  ಯಾಂತ್ರಿಕ ಯುಗದಲ್ಲಿ ಮನುಷ್ಯ ಸಂಬಂಧಗಳನ್ನು ಬೇಸೆಯಬೇಕಾದ ಅನಿವಾರ್ಯತೆ, ಮನುಷ್ಯನ ಆಸೆಗಳು ಪ್ರಕೃತಿಯ ಮೇಲೆ ಅವನ ದಬ್ಬಾಳಿಕೆಯ ನೋಟ,  ಕೌಟುಂಬಿಕ ಸಂಬಂಧಗಳ ಸಡಿಲಿಕೆ… ಹೀಗೆ ಹತ್ತು ಹಲವಾರು ಆಶಯಗಳನ್ನು ಒಳಗೊಂಡಿರುವ ಕವಿಗಳ ಒಂದೊಂದು ಕವಿತೆಯನ್ನು ಪ್ರಸ್ತುತಪಡಿಸುತ್ತಾ, ಆ ಕವಿತೆಯ ಒಳನೋಟವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

 ಸಿದ್ದಲಿಂಗಪಟ್ಟಣಶೆಟ್ಟಿಯವರು ಎಷ್ಟೇ ಕಷ್ಟ ಬಂದರೂ ಪ್ರಿಯತಮೆಯನ್ನು ಮರೆಯಲಾರೆ ಎಂದು ವಾಗ್ದಾನ ನೀಡುವ, ತೀವ್ರತೆಯ ಭಾವ ಹೇಳಿದರೇ,  ಮನುಷ್ಯನ ಭಾವನೆಗಳ ದ್ವಂದ್ವಗಳನ್ನು ಹೇಳುವ ಕೆ. ಎಸ್. ನರಸಿಂಹಸ್ವಾಮಿಯವರ ‘ಇಕ್ಕಳ’ ಕವಿತೆ ಮನಸ್ಸನ್ನು ಕಲಕದೆ ಇರದು. 70 ರ ದಶಕದಿಂದಲೂ ಹೋರಾಟದ ಹಾಡುಗಳಿಗೆ ತಾಯಿಯಾಗಿ, ಮೊದಲ ಹಾಡನ್ನು ಬರೆದ  ಹಾವೇರಿಯ ಹಿರಿಯ ಸಾಹಿತಿಗಳಾದ ಸತೀಶ್ ಕುಲಕರ್ಣಿಯವರ ‘ಕಟ್ಟತೇವ ನಾವು’  ಎನ್ನುವ ಹಾಡಿನ ವಿಶ್ಲೇಷಣೆ ಚೆನ್ನಾಗಿದೆ.  ಹನಿಗವಿತೆಯ ಕವಿ ಎಚ್. ಡುಂಡಿರಾಜರು ‘ಚರಿತ್ರೆಯೇ ಹಾಗೆ…’ಎನ್ನುವ ತಂದೆ ಮಗನ ಸಂವಾದದ ರೂಪವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ.

ನಮ್ಮ ಸೀಮೆಯ, ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ  ಅವರ ‘ಹಂಗಿಲ್ಲದ ಅಂಗಳ’ ಎನ್ನುವ ಕವಿತೆ ಶ್ರಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ  ಕಲ್ಲು ಹೊಡೆಯುವ ಸಮುದಾಯದ ನೋವು ನಲಿವುಗಳನ್ನು ಹೇಳುತ್ತಾ ಹೇಳುತ್ತಾ “ನಾವು ಗುಡಿ ಕಟ್ಟಿದರೂ ಹೊರಗೆ ನಿಲ್ಲುತ್ತೇವೆ” ಎಂದು ಸೂಚ್ಯವಾಗಿ ಗುರುತಿಸಿದ್ದಾರೆ.  ನಮ್ಮ ಜಿಲ್ಲೆಯ ಕವಿ ಅಲ್ಲಗಿರಿರಾಜ್ ರವರ ‘ನೀವು ಎದೆಗೆ ಗುಂಡು ಹೊಡೆದರೆ.’  ಎನ್ನುವ ಕವಿತೆ ಪ್ರಸ್ತುತ ಸನ್ನಿವೇಶದ   ರೈತ ಹೋರಾಟದ ಮಗ್ಗಲುಗಳನ್ನು ಹಾಗೂ ಆಡಳಿತ ವರ್ಗದ ಆಲಸ್ಯತನವನ್ನು ಅತ್ಯಂತ ಸೊಗಸಾಗಿ, ಕಾವ್ಯವನ್ನು ಪ್ರಸ್ತಾಪಿಸುತ್ತ ವಿವರಿಸಿದ್ದಾರೆ.  ಡಾ. ಕೆ ಶರೀಫಾ ಅವರ ‘ದ್ವೇಷದ ಅಗ್ನಿಗೆ ದೇಶ ಬಲಿಯಾಯಿತು’ ಎನ್ನುವ ಕವಿತೆಯನ್ನು ಉಲ್ಲೇಖಿಸುತ್ತಾ,

 “ದ್ವೇಷದ ಅಗ್ನಿಗೆ ದೇಶ ಉರಿಯುತ್ತಿದೆ
ಬಾಂಬು …”

ಈ ಸಾಲುಗಳು ದೇಶವಾಸಿಗಳಿಗೆ ಯುದ್ಧದಿಂದ ದೇಶ ಉದ್ಧಾರವಾಗುವದಿಲ್ಲ. ದೇಶ ಬಲಿಯಾಗುತ್ತದೆ” ಎನ್ನುವುದನ್ನು ಕಾವ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ.  ಕನ್ನಡ ಮಹಿಳಾ ಕವಿಗಳಲ್ಲಿ ಪ್ರತಿಭಾನಂದಕುಮಾರ್ ಅವರ ಹೆಸರು ಉಲ್ಲೇಖನೀಯ.
 ‘ನಾವು ಹುಡುಗಿಯರೇ ಹೀಗೆ..’ ಎನ್ನುವ ಅವರ ಕವಿತೆಯು ನಮ್ಮ ಹೃದಯವನ್ನು ತಟ್ಟದೇ ಬಿಡದು. ಮಹಿಳೆಯರು ಏನೆಲ್ಲ ನೋವುಗಳನ್ನು ನುಂಗಿಕೊಂಡು ಬದುಕುತ್ತಾರೆ. ಅವರು ಎಂದಿಗೂ ಯಾರ ಮೇಲೂ ದೂರುವುದಿಲ್ಲ. ತಮ್ಮೊಳಗಿನ ಪ್ರೀತಿ ವಾತ್ಸಲ್ಯ ಪ್ರೇಮವನ್ನು,  ಒಳಗೊಳಗೆ ವಿರಹವನ್ನು ಅನುಭವಿಸುತ್ತಾರೆ. ಇಂತಹ ತೀವ್ರತರವಾದ ಭಾವದ ಕವಿತೆಯನ್ನು ಕವಿ ಜೆ. ನಾಗೇಶವರು ಗುರುತಿಸಿದ್ದಾರೆ.

ಮನಸ್ಸನ್ನು ಸೆಳೆಯುವ ಇನ್ನೂ ಹಲವಾರು ಕವಿತೆಗಳನ್ನು ಈ ಸಂಕಲನದಲ್ಲಿ ವಿವರವಾಗಿ ಬರೆದಿದ್ದಾರೆ. ವಿದ್ಯಾ ರಶ್ಮಿ ಅವರ ಮೇಕಪ್,  ಟಿ. ಯಲ್ಲಪ್ಪನವರ ‘ನನ್ನ ಕವಿತೆ’ ಬಿ. ಟಿ. ಲಲಿತಾನಾಯಕರವರ ‘ಒಂದೇ ಒಂದು ಬಾರಿ ಹೊರಬನ್ನಿ..’ ಎನ್ನುವ ಕವಿತೆ ಎಲ್ಲರನ್ನೂ ಕಾಡದೇ ಬಿಡಲಾರವು.  

ಹೀಗೆ ನವ್ಯದಿಂದ ನವೋದಯ, ಬಂಡಾಯ, ಬಂಡಾಯೋತ್ತರ ಎಲ್ಲ ಬಗೆಯ ಕವಿತೆಗಳನ್ನು ಗುರುತಿಸಿ, ಅಂಕಣ ರೂಪದಲ್ಲಿ ನಮಗೆ ನೀಡಿರುವುದು ಸಾಹಿತ್ಯಾಸಕ್ತರ  ಮತ್ತು ಕಾವ್ಯ ಅಭ್ಯಾಸಗಳಿಗೆ ‘ಕಾಡುವ ಕವಿತೆ’ ಪುಸ್ತಕ ಮಾರ್ಗದರ್ಶಿಯಾಗಬಲ್ಲದು

ಡಾ. ಬೆಸಗರಹಳ್ಳಿ ರಾಮಣ್ಣನವರ ‘ಅಪ್ಪಣ್ಣ’ ಕವಿತೆಯ ವಿಶ್ಲೇಷಣೆ, ಸಿದ್ದರಾಮಯ್ಯನವರ ‘ಭಯವಾಗುತ್ತಿದೆ’ ಕವಿತೆಯ ಸಾಲುಗಳು ಗಮನಾರ್ಹ. “ಮುಳ್ಳು ಹಾಸುವವರಿಗೂ ಹೂವು ಬಯಸೋಣ” ಎನ್ನುವ ಆಶಯದ ಕವಿತೆ ‘ಬೊಗಳೆ ಬಿಡುವವರ ರಗಳೆ’ ನಮಗೆ ಪೂರಕವಾದ ಆಶಯ ನೀಡಬಲ್ಲದು. ಮಕನದಾರರ ‘ಅಪ್ಪಣ್ಣನಿಗೊಂದು ಮನವಿ’ ಕಾಯಕ ಜೀವಿಗಳ ಕಾಯಕ,  ಸಮಾನತೆ ಅಪ್ಪಣ್ಣನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರೆ, ಆರತಿ ಎಚ್ ಎಸ್ ರವರ ‘ಸೆಲ್ಫಿ’ ಕವಿತೆ ನಮ್ಮೊಳಗಿನ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಎಂದು ಅಂಕಣಕಾರರು ತಿಳಿಸಿದ್ದಾರೆ.
ಭಾರತ ವೈವಿಧ್ಯಮಯ ನಾಡು. ಬಹುತ್ವದಲ್ಲಿ ಏಕತೆಯನ್ನು ಬಯಸುವ ನಾಡು. ಇಂತಹ ನಾಡಿನಲ್ಲಿ ನಾನು ಪರಕೀಯ ಎನ್ನುವ ಆತಂಕವನ್ನು ವ್ಯಕ್ತಪಡಿಸುವ, “ಅಕ್ಕ ಸೀತಾ ನಿನ್ನಂತೆ ನಾನು ಶಂಕಿತ”  ಎನ್ನುವ ಕಾವ್ಯದ ಮೂಲಕ ಬಿ.ಪೀರಬಾಷಾ ಅವರು ತಲ್ಲಣಗಳನ್ನು ತಿಳಿಸಿದ್ದಾರೆ.

ಅದೇ ಜಾಡಿನಲ್ಲಿರುವುದನ್ನು ಮೆಹಬೂಬ್ ಮಠದರವರ ಕವಿತೆ. ಡಾ. ಬಸು ಬೇವಿನಗಿಡದವರ “ಹೇಗೆ ಸಾಯುವನು ಮೋಹನದಾಸ” ಎನ್ನುವ ಕವಿತೆಯು ಗಾಂಧೀಜಿಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರೆ, ದೀಪಹಿರೇಗುತ್ತಿಯವರ “ನತದೃಷ್ಟರ ಸ್ವಗತ” ಕಾವ್ಯ ಮಹಿಳಾ ಶೋಷಣೆಯನ್ನು ವ್ಯಕ್ತಪಡಿಸುತ್ತದೆ. ಆರಿಫ್ ರಾಜರ “ಮಂತ್ರವೊಂದು ನನ್ನ ಬಳಿ..” ಇದ್ದಿದ್ದರೆ ನಾನು ಏನೆಲ್ಲಾ ಪ್ರಗತಿಪರ ಕೆಲಸಗಳನ್ನು ಮಾಡುತ್ತಿದ್ದೇನೆಂದು ಕವಿ ತವಕಿಸುತ್ತಾನೆಂದು ಲೇಖಕರು ಗುರುತಿಸಿದ್ದಾರೆ.

ಒಲವಿಗಾಗಿ ಹಂಬಲಿಸುವ ಮಮತಾ ಅರಸೀಕೆರೆಯವರ ಕವಿತೆ,
“ನೀನೇಕೆ ಬಳಿ ಬರುತ್ತಿಲ್ಲ ಯಾವಾಗಲೂ
ನಿನ್ನ ಕೈಗಳನ್ನು ಹಿಡಿದು ಕೇಳಬೇಕು
ಅಷ್ಟು ಸಲಿಗೆಯಂದ ಮೇಲೆ ನೀನೇಕೆ ಹಕ್ಕು ಸಾಧಿಸಲಿಲ್ಲ…”  

ಎನ್ನುವ ಸಾಲುಗಳು ತವಕ ತಲ್ಲಣಗಳನ್ನು ತೆರೆದಿಟ್ಟಿದ್ದಾರೆಂದು  ನಾಗೇಶ್ ರವರು ಉಲ್ಲೇಖಿಸಿದ್ದಾರೆ.

 “ಮನುಷ್ಯರಾದ ದಿನ” ಅಡುಗೆ ಮನೆಗೆ ಬದಲಾಗಿದೆ ಎನ್ನುವ ಅನಿತಾರವರ ಕಿವಿಗೆ ಕನ್ನಡದ ಕನಸುಗಳು ಎನ್ನುವ ಕವಿತೆ, ಮಲ್ಲಿಕಾರ್ಜುನ ಚಬ್ಬಿ ಅವರ ಹಾಗೂ ಮಾರುತಿ ದಾಸಣ್ಣವರ “ಹೆಜ್ಜೆ ಕೂತಾವು”  ಎನ್ನುವ ಕವಿತೆಗಳು ಅನೇಕ ಮನುಷ್ಯ ಮನೋವ್ಯಾಪಾರವನ್ನು ವ್ಯಕ್ತಪಡಿಸುತ್ತಿವೆ ಎನ್ನುವುದನ್ನು ಲೇಖಕರು ಗುರುತಿಸಿದ್ದಾರೆ.

 ನಾಗರಾಜ್ ಹರಪನಹಳ್ಳಿಯವರ “ಯಾರದೋ ಕಣ್ಣೀರಿಗೆ..” “ಇಲ್ಲಿ ಬುದ್ಧನು ಇಲ್ಲ ಬಸವನು ಇಲ್ಲ ಗೆಳೆಯ..”  ಎನ್ನುವ ಸಾಂತ್ವಾನದ ಮಾತುಗಳ ಮೂಲಕ ಆಪ್ತತೆಯನ್ನು ಎತ್ತಿ ಕೊಟ್ಟಿದ್ದಾರೆ ಎಂದರೆ ತಪ್ಪಲ್ಲ. “ಡಾ. ಅಂಬೇಡ್ಕರ್ ಹುಟ್ಟಿದ..” ಸುಬ್ಬು ಹೊಲೆಯರವರು ಮಾರ್ಮಿಕವಾಗಿ ಅಂಬೇಡ್ಕರ್ ಸಿದ್ಧಾಂತವನ್ನು ನಾವು ಅನುಕರಿಸಬೇಕಾದ ಆಶಯಗಳನ್ನು ವ್ಯಕ್ತಪಡಿಸಿದ್ದಾರೆಂದು ಲೇಖಕರು ತಿಳಿಸಿದ್ದಾರೆ. ನಮ್ಮ ನಡುವಿನ ಕ್ರೀಯಾಶೀಲ ಕವಿ  ಫೈಜ್ನಾಟರಾಜ್ ಅವರ ಕವಿತೆ  “ಅವ್ವ ಬಡಿದ ರೊಟ್ಟಿ..” ಮಮತೆಯ ಆಶಯವನ್ನು ಕವಿ ಕವಿತೆಯಲ್ಲಿ ವ್ಯಕ್ತಪಡಿಸಿದ್ದಾರೆ ಇಂತಹ ಆಶಯಗಳ ಗುರುತಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆಂದರೆ ತಪ್ಪಲ್ಲ.

ಉದಯ್ ಕುಮಾರ್ ಹುಬ್ಬು ಅವರ, “ಒಲುಮೆಯ ಹಾಡಿನಲ್ಲಿ..” ಮನುಷ್ಯನ ಬದುಕು ಮತ್ತು ಪ್ರಕೃತಿಯನ್ನು ವರ್ಣಿಸಿದರೆ, ನದೀಂ ಸನದಿಯವರ “ಬಯಕೆ” ಕವಿತೆ ಮನುಷ್ಯನ ಪ್ರಕೃತಿಯ ಅದೇ ಆಶಯವನ್ನು ವ್ಯಕ್ತಪಡಿಸುತ್ತದೆ.  ಇನ್ನು ವಿಜಯಕಾಂತ್ ಪಾಟೀಲ್ರು “ಹೂವು ಮುಗುಳು ಹಬೆಯಾಗಲಿ..” ಕವಿತೆಯಲ್ಲಿ ತಮ್ಮ ಮನದ ಆಶಯಗಳನ್ನು ವ್ಯಕ್ತಪಡಿಸುತ್ತಾ,
 ಜಗದ ನೋವಿಗೆ ಮಿಡಿಯುವ ಮನಸ್ಸು ಮಾಡಿದ್ದಾರೆಂದು ಲೇಖಕರು ಗುರುತಿಸಿದ್ದಾರೆ ನಾಗೇಶ್ ನಾಯಕರು.  ಕಾವ್ಯವನ್ನ ಓದುವುದರ ಜೊತೆಗೆ ಕಾವ್ಯವನ್ನು ಆರಗಿಸಿಕೊಂಡು ಓದುಗರ ಎದುರು ಅದನ್ನು ಪ್ರಸ್ತುತಪಡಿಸುವ ರೀತಿ ಅನನ್ಯವೆಂದೆ ಹೇಳಬಹುದು.  

ಶ್ರೀದೇವಿ ಕೆರೆಮನೆಯವರು “ಚಿತ್ತಾರ” ಕವಿತೆಯ ಮೂಲಕ ಮಹಿಳೆಯ ತವರು ಮನೆ ಮತ್ತು ತನ್ನ ಅಂತರಂಗವನ್ನು ತೆರೆದಿಡುತ್ತಾ, ಕಾವ್ಯವನ್ನು ಕಟ್ಟಿದ್ದಾರೆ. ಸರ್ ಎಸ್ ಕೆ ಮಂಜುನಾಥ್ ರವರು “ಬರೆಯುತ್ತೇನೆ..” ಎನ್ನುವುದರ ಮೂಲಕ ವಿಮೋಚನಾ ಹಂತದ ಹೆಜ್ಜೆ ಗುರುತುಗಳನ್ನು ದಾಖಲಿಸಿದ್ದಾರೆ.
ಹಂದಿಕೂಂಟೆ ನಾಗರಾಜ್ ಅವರು ತಮ್ಮ ಮನದ ನೋವುಗಳನ್ನು ತೊಡಿಕೊಂಡಿದ್ದಾರೆ. ಫಾತಿಮಾ ರಲ್ಲಿಯಾ ಅವರು “ನನ್ನೂರಿಗೆ ಮನುಷ್ಯರನ್ನು ಹುಟ್ಟಿಸಿ ಕಳಿಸು..” ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ಇಂದಿನ ಸಮಾಜ ಕನಿಷ್ಠ ಪಕ್ಷ “ನೆತ್ತರಿನ ಕಮಟು ಬಣ್ಣ ಮೂಗು ಕಣ್ಣೊಳಗೆ ಮಾಡು ಉಸಿರಿರುವಷ್ಟು ಕಾಲ ತಣ್ಣಗೆ ಬದುಕುತ್ತೇನೆಂದು…” ಅಪಾದಿಸುತ್ತಾರೆಂದು ಲೇಖಕರು ತಿಳಿಸಿದ್ದಾರೆ.

ರೈತರ ನೋವುಗಳನ್ನು ಅನಾವರಣಗೊಳಿಸುವ ಹಸನ್ಮುಖಿ ಬಡಗನೂರು ಅವರ ಕವಿತೆ,  ಭಿನ್ನ ನೋಟಗಳನ್ನು ನಮಗೆ ತೋರಿಸುತ್ತದೆ. ಅನುಸೂಯ ಜಾಗೀರ್ದಾರ್ ಶೋಭಾ ನಾಯಕ್ ಅವರ ಕವಿತೆಗಳು ಮಹಿಳಾ ತಲ್ಲಣಗಳನ್ನು ತೆರೆದಿಡುತ್ತವೆ ಎಂದು ಗುರುತಿಸಿದರೆ, ಡಾ. ಅಜಿತ್ ಹರೀಶ್ ರವರ “ನಾವು ಗಂಡಸರೇ ಹೀಗೆ..” ಎಂದು ನಮ್ಮ ಧಿಮಾಕನ್ನು ತೋರಿಸುವ ಆಶಯವನ್ನು ಕವಿತೆ ವ್ಯಕ್ತಪಡಿಸುತ್ತದೆ. ಇನ್ನು ದೀಪಕ್ ಶಿಂಧೆ ಅವರ “ಹೇಳಿ ಅವಳು ಯಾರನ್ನು ನಂಬುವುದು…” ಎಂದು ಹೆಣ್ಣಿನ ಬಗ್ಗೆ ಇವತ್ತಿನ ಶೋಷಣೆ ಕುರಿತು ಹಲವು ವಿಭಿನ್ನ ನೋಟಗಳನ್ನು ತಮ್ಮ ಕವಿತೆಯಲ್ಲಿ ವ್ಯಕ್ತಪಡಿಸಿರುವುದನ್ನು ಲೇಖಕರು ತಮ್ಮ ಲೇಖನದಲ್ಲಿ ತೋರಿಸಿದ್ದಾರೆ.

 ಸದಾಶಿವ ಸೊರಟೂರ ಅವರು ನಮ್ಮ ನಡುವಿನ ಶೋಷಿತ ಮತ್ತು ಧಮನಿತ ಜನರ ಬದುಕಿನ ನೋವುಗಳನ್ನು “ಇರುವುದು ಒಂದೇ ರೊಟ್ಟಿ..” ಎನ್ನುವ ಕವಿತೆಯ ಮೂಲಕ ಬದುಕಿನ ಸಂಕಟಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಲೇಖಕರು ಹಲವು ಭಿನ್ನ ನೋಟುಗಳೊಂದಿಗೆ ತೋರಿಸಿಕೊಟ್ಟಿದ್ದಾರೆ. ಮಾರುತಿ ಗೋಪಿಕುಂಟೆ ಇದೆ ಮಾದರಿಯಲ್ಲಿ “ಕಾರಣವಿಲ್ಲದೆ ನಾವು ಯಾವುದನ್ನು ಪ್ರೀತಿಸುವುದಿಲ್ಲ”ವೆಂದು ಹೇಳಿದರೆ,  “ಅಪ್ಪ ನೆನಪಾಗುತ್ತಿಲ್ಲ ..” ಎನ್ನುವ ಕವಿತೆಯ ಮೂಲಕ ವಿಠ್ಠಲ್ ದಳವಾಯಿ ಅವರು ರೈತನ ಬದುಕನ್ನು ಕುರಿತು ಮಾರ್ಮಿಕವಾಗಿ ಬರೆದಿದ್ದಾರೆಂದು ನಾಗೇಶ್ ನಾಯಕರವರು ಕವಿತೆಯ ಅನೇಕ ಒಳಸುಳಿಗಳನ್ನು, ಸೂಕ್ಷ್ಮ ಸಂವೇದನೆಗಳನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ.  ಅನೇಕ ಕವಿಗಳ ಜವಾಬ್ದಾರಿಯನ್ನು ಈ ಮೂಲಕ ಹೆಚ್ಚಿಸಿದ್ದಾರೆ. ರೇಣುಕಾ ರಾಮಾನಂದರ “ಹೊಂದಿಕೆ ಎಂಬುವುದು..” ಕವಿತೆ ಬಾಳಿನ ತಲ್ಲಣಗಳನ್ನು ವ್ಯಕ್ತಪಡಿಸಿದರೆ, ದೇಶಾಭಿಮಾನ ಮತ್ತು ಸೌಹಾರ್ದತೆಯನ್ನು ಕುರಿತು ರಾಯಸಾಬ್ ದರ್ಗಾದವರ ಕವಿತೆ “ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ”. ಸೋಮಲಿಂಗ ಬೇಡರವರ ಬೇಂದ್ರೆ ಅಜ್ಜನನ್ನು ನೆನೆದರೆ, ಪ್ರಕಾಶ್ ಕಡಮೆಯವರು ಬದುಕಿನ ಜೀವಪರ ಕಾರುಣ್ಯದ ಆಶಯವನ್ನು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ನಾಗೇಶ್ ರವರು ಬಹಳ ಸೊಗಸಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ.

ಸ್ವತಃ ಕವಿಯಾಗಿರುವ ವಿಮರ್ಶಕ, ಜೆ ನಾಗೇಶ್ ನಾಯಕ್ ರವರ ‘ಕಾಡುವ ಕವಿತೆ’. ಪುಸ್ತಕವನ್ನು ಪೂರ್ಣ ಪ್ರಮಾಣವಾಗಿ ಓದಿ ಅರಗಿಸಿಕೊಳ್ಳುವುದಿದೆಯಲ್ಲ ಅದು ಒಬ್ಬ ಸಾಹಿತಿ ಅಥವಾ ಸಾಹಿತ್ಯಾಕ್ತರಿಗೆ ಮಾತ್ರ ದಕ್ಕಬಲ್ಲದು.  ಇನ್ನು ಕಾವ್ಯವನ್ನು ಪ್ರೀತಿಸುವ ಪ್ರತಿಯೊಬ್ಬರೂ ಈ ಕವಿತೆಗಳನ್ನು ಮತ್ತು ಅದರ ವಿಶ್ಲೇಷಣೆಗಳನ್ನು ಓದಿದಾಗ ಪ್ರತಿ ಕವಿತೆಯು ತನ್ನದೇ ಆದ ವಿಭಿನ್ನ ಒಳನೋಟಗಳನ್ನು ಹೊಂದಿರುವುದನ್ನು ಲೇಖಕರು ಗುರುತಿಸುತ್ತಾ, ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ಶೋಷಣೆ, ರೈತರ ಬದುಕಿನ ನೋವು ನಲಿವುಗಳು, ಮೂಢನಂಬಿಕೆ, ಸಾಮಾಜಿಕ ವೈರುಧ್ಯಗಳ ಅನಾವರಣ, ಮನುಷ್ಯ ಮನೋವ್ಯಾಪಾರಿಕರಣದ ಮನೋಭೂಮಿಕೆಯ ಘಟನೆಗಳು, ಮನಕಲಕುವ ಅಂತಃಕರಣದ ಘಟನೆಗಳು ಇಲ್ಲಿ ಕಾವ್ಯವಾಗಿ ಮೂಡಿಬಂದಿವೆ. ಬಹುತೇಕವಾಗಿ ಇಲ್ಲಿಯ ಕವಿಗಳ ಕವಿತೆಗಳು ಮಾಗಿದ ಕವಿತೆಗಳನ್ನು ಆಯ್ಕೆ ಮಾಡಿದ್ದಾರೆ ನಾಗೇಶ್ ನಾಯಕರವರು.

 ಹಾಗಾಗಿ ಈ ಕೃತಿ ತುಂಬಾ ಮಹತ್ವಪೂರ್ಣತೆಯಿಂದ ಕೂಡಿದೆ. ಈ ಕೃತಿಯು ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟವಾದ ಹೆಜ್ಜೆ ಗುರುತುಗಳನ್ನು ಉಳಿಸಬಲ್ಲದು ಎನ್ನುವ ಆಸೆಯ ನನ್ನದು.


Leave a Reply

Back To Top